ದಾಂಡೇಲಿಯ ಮಂಗಳಮುಖಿಗೀಗ ಮಂಗಳೂರಲ್ಲಿ “ಟ್ರಾನ್ಸ್‌ ಕ್ವೀನ್‌” ಸೌಂದರ್ಯ ಕಿರೀಟ

ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ...

ಪ್ರತಿಭೆ ಯಾರ ಸ್ವತ್ತಲ್ಲ. ಸಮಾಜದಲ್ಲಿ ನಿರ್ಲಕ್ಷಕ್ಕೆ, ನಿಕೃಷ್ಠಕ್ಕೆ ಒಳಗಾದವರೂ ಕೂಡಾ ಅಚಲವಾದ ಗುರಿಯಿಟ್ಟುಕೊಂಡರೆ ಸಾಧನೆಯ ಮೆಟ್ಟಿಲೇರಿ ಮತ್ತದೇ ಸಮಾಜದೆದುರು ತಮ್ಮ ಗೆಲುವಿನ ನಗೆ ಬೀರಲು ಸಾದ್ಯವಿದೆ. ಹಾಗೆ ಮಾಡಿ ತೋರಿಸಿದವರೂ ಹಲವರಿದ್ದಾರೆ. ಅಂತಹವರ ಸಾಲಿನಲ್ಲಿ ದಾಂಡೇಲಿಯ ಕೋಗಿಲಬನದ ಮಂಗಳಮುಖಿ ಸಂಜನಾ ಚಲವಾದಿ ಒಬ್ಬರಾಗುತ್ತಾರೆ. ಮಂಗಳಮುಖಿಯರು ಎಂದರೆ ಜನ ತಮ್ಮವರು ಅಂದುಕೊಳ್ಳುವುದೇ ಕಡಿಮೆ. ಆದಷ್ಟು ಅವರಿಂದ ದೂರವಿರಲು ಪ್ರಯತ್ನಿಸುತ್ತಾರೆ. ಆದರೆ ಅವರ ಕಷ್ಟ, ನಷ್ಟಗಳು, ಅದರ ಸಾಮಾಜಿಕ ಅಸಹಾಯಕತೆಗಳು ಅವರಿಗೇ ಗೊತ್ತು. ಇಂತಹ ಕಾಲದಲ್ಲಿ ಮಂಗಳಮುಖಿಯೋರ್ವಳು ಸೌಂದರ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ಸಮಾಜದೆದುರು ಒಂದು ಪ್ರತಿಭೆಯಾಗಿ ನಿಲ್ಲುತ್ತಾಳೆಂದರೆ ನಿಜಕ್ಕೂ ಒಂದು ಗೌರವದ ಮಾತೇ ಆಗುತ್ತದೆ.

ಮಂಗಳೂರಿನಲ್ಲಿ ನಡೆದ ಮಂಗಳಮುಖಿಯರ ಸೌಂದರ್ಯ ಸ್ಪರ್ದೆಯಲ್ಲಿ ಭಾಗವಹಿಸಿದ ಸಂಜನಾ ಚಲವಾದಿ ಪ್ರಥಮ ಸ್ತಾನ ಪಡೆದು ‘ಟ್ರಾನ್ಸ್‍ಕ್ವೀನ್’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಇದು ಕರ್ನಾಟಕದಲ್ಲಿಯ ಮೊಟ್ಟ ಮೊದಲ ಬಾರಿಗೆ ನಡೆದ ಮಂಗಳಮುಖಿಯರ ಸೌಂದರ್ಯ ಸ್ಪರ್ದೆ ಎನ್ನಲಾಗಿದೆ. ಈ ಸ್ಪರ್ದೆಯಲ್ಲಿ ಕರ್ನಾಟಕದಿಂದ 41 ಮಂಗಳಮುಖಿಯರು ಭಾಗವಹಿಸಿದ್ದರು. ಅಂತಿಮ ಸುತ್ತಿನಲ್ಲಿ 11 ಜನರು ಆಯ್ಕೆಯಾಗಿದ್ದರು. ಅವರಲ್ಲಿ ಅಂತಿಮವಾಗಿ ಪ್ರಥಮ ಸ್ತಾನದ ಜೊತೆಗೆ ‘ಟ್ರಾನ್ಸ್‍ಕ್ವೀನ್’ ಪ್ರಶಸ್ತಿಯ ಕಿರೀಟ ಧರಿಸಿದ್ದು ಮಾತ್ರ ದಾಂಡೇಲಿಯ ಸಂಜನಾ.

ಸಂಜನಾ ಚಲವಾದಿ

ಈಕೆಯ ಮೊದಲ ಹೆಸರು ಗಣೇಶ ಎಂದಾಗಿತ್ತು. ಆತನ ವರ್ತನೆಯ ಬಗ್ಗೆ ಮನೆಯಲ್ಲಿ ಬೇಸರವಿತ್ತು. ಅಕ್ಕ ಪಕ್ಕದವರ ನೋಡುವವ ದೃಷ್ಠಿಯಿಂದ ನೊಂದುಕೊಂಡು ಮನೆಬಿಟ್ಟು ಬೆಂಗಳೂರು ಸೇರಿಕೊಂಡ ಗಣೇಶ ನಂತರ ಸಂಜನಾ ಆಗಿ ಬದಲಾದ. ಕೆಲ ವರ್ಷ ಬೆಂಗಳೂರಲ್ಲಿದ್ದ ಈಕೆ ಮಂಗಳೂರು ಸೇರಿಕೊಂಡಳು. ಈಗ ಅಲ್ಲಿ ಬ್ಯೂಟಿಶಿಯನ್ ಕೋರ್ಸ ಮುಗಿಸಿದ್ದಾಳೆ. ಹೊಟೆಲ್ ಒಂದರಲ್ಲಿ ಕ್ಯಾಶರ್ ಆಗಿಯೂ ಕಾರ್ಯ ನಿವಹಿಸುತ್ತಿದ್ದಾಳೆ. ಜೊತೆಗೆ ಸಾರಂಗ ಎಂಬ ರೇಡಿಯೋದಲ್ಲಿ ಆರ್.ಜೆ. ಯಾಗಿಯೂ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾಳೆ. ತುಳು ನಾಟಕದಲ್ಲಿಯೂ ಅಭಿನಯಿಸಿರವ ಸಂಜನಾ ಯೋಗರಾಜ್ ಭಟ್ಟರ ಗಾಳಿಪಠ-2 ಚಲನ ಚಿತ್ರದಲ್ಲಿ ಅವಕಾಶ ಪಡೆದಿದ್ದೂ. ಆದರೆ ಅದು ಕೊರೊನಾ ಕಾರಣಕ್ಕೆ ಮುಂದೂಡಿದೆ. ಇಷ್ಟೇ ಅಲ್ಲ ಮಂಗಳೂರು ಸೌಂದರ್ಯ ಸ್ಪದೆಯಲ್ಲಿ ಗೆದ್ದಿರುವ ಈಕೆ ಕೊಲೊಂಬೊದಲ್ಲಿ ನಡೆಯಲಿರುವ ವಿಶ್ವ ಮಂಗಳಮುಖಿಯರ ಸೌಂದರ್ಯ ಸ್ಪರ್ದೆಯಲ್ಲಿ ಭಾಗವಹಿಸುವ ಅವಕಶ ದೊರೆತಿತ್ತು. ಆದರೆ ಕೊವಿಡ್ 19 ಕಾರಣಕ್ಕೆ ಆಸ್ಪರ್ದೆ ಮುಂದೂಡುವಂತಾಗಿದೆ. ಮುಂದೆ ನಡೆಯಲಿರುವ ಆಸ್ಪದೆಯಲ್ಲಿಯೂ ಈಕೆ ಭಾಗವಹಿಸಲಿದ್ದಾಳೆ. ಮಂಗಳ ಮುಖಿಯಾದರೂ ಬಹುಮುಖಿ ಪ್ರತಿಭೆಯಾಗಿರುವ ಈಕೆ ಜೀವನವನ್ನು ಸಾರ್ಥಕವಾಗಿ ಎದುರಿಸುತ್ತಿದ್ದಾಳೆ.

ತನಗೆ ಪ್ರಶಸ್ತಿ ಬಂದ ಬಗ್ಗೆ ಸಂತಸ ಹಂಚಿಕೊಂಡಿರುವ ಸಂಜನಾ ಹಲವರ ಬೆಂಬಲದಿಂದಾಗಿ ಈ ಗೆಲುವು ಸಾದ್ಯವಾಗಿದೆ. ನಿಜಕ್ಕೂ ಖೂಶಿ ತಂದಿದೆ. ಕೆಲವರು ನಮ್ಮ ಬಗ್ಗೆ ಕನಿಷ್ಠವಾಗಿ ಮಾತನಾಡುತ್ತಾರೆ. ಒಂದೇ ಕೆಲಸಕ್ಕೆ ಸೀಮಿತಗೊಳಿಸಿ ವಯಂಗ್ಯವಾಡುತ್ತಾರೆ. ಆದರೆ ಇವರು ಮಗಳೂರಲ್ಲಿ ನಮ್ಮನ್ನು ಗುರುತಿಸಿ, ನಮ್ಮ ಸೌಂದರ್ಯ ಸ್ಪರ್ದೆಯನ್ನೂ ನಡೆಸಿರುವರಲ್ಲಾ ಎಂಬ ಅಭಿಮಾನವಾಗುತ್ತಿದೆ. ನನಗೆ ನನ್ನೂರು ದಾಂಡೇಲಿಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು. ಆ ಮೂಲಕ ಆಡಿಕೊಂಡವರ ಎದರು ನಾನೊಂದು ಪ್ರತಿಭೆಯಾಗಿ ನಿಲ್ಲಬೇಕು ಎಂಬ ಆಶೆಯಿದೆ ಎನ್ನುತ್ತಾಳೆ. ಅವಳ ಆಶೆ ನೆರವೇರಲಿ. ಜೊತೆಗೆ ಮಂಗಳ ಮುಖಿಯರಿಗೊಂದು ಸ್ಪರ್ದೆ ನಡೆಸಿದ ಆಯೋಜಕರಿಗೂ, ಹಾಗೂ ಪ್ರಶಸ್ತಿ ಗೆದ್ದ ದಾಂಡೇಲಿಯ ಸಂಜನಾ ಚಲವಾದಿಗೂ ಒಂದು ಅಭಿಮಾನದ ಅಭಿನಂದನೆ.

  • ಬಿ.ಎನ್.‌ ವಾಸರೆ
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*