ಪರಮೇಶಿಯ ಪ್ರೇಮಪ್ರಸಂಗ ಸಿನೇಮಾದ ಉಪ್ಪಿಲ್ಲ, ಮೆಣಸಿಲ್ಲ, ತರಕಾರಿ ಏನಿಲ್ಲ. ತೆಂಗಿಲ್ಲ, ಬೆಣ್ಣಿಲ್ಲ, ಕಾಯನ್ನು ತಂದಿಲ್ಲ ಏನು ಮಾಡಲಿ, ನಾನು ಏನು ಮಾಡಲೀ, ಹೇಳಮ್ಮ ಏನ ಮಾಡಲೀ ಸುತ್ತೂರ ಸುರಸುಂದರಿ ಹಾಡನ್ನು ಬಹುತೇಕ ಎಲ್ಲ ಕನ್ನಡದ ಮನಗಳು ಕೇಳಿರಬೇಕು. ಬಹುಶಃ ನಮ್ಮ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಆಗಾಗ ಈ ಹಾಡು ರೇಡಿಯೋದಲ್ಲಿ ಬರುತ್ತಿತ್ತು. ಮನೆಗೆ ಟಿ.ವ್ಹಿ ಆಗಮನವಾದ ಮೇಲೆ ಆ ಚಲನಚಿತ್ರವನ್ನು ನೋಡಿದ್ದಾಯಿತು. ನಾಲ್ಕನೇ ಸಾಲಲ್ಲಿ ಜೀರಿಗೆ ತುಪ್ಪ, ಮೂರನೇ ಸಾಲಲ್ಲಿ ಸಾಸ್ವೆ ಡಬ್ಬ. ಅಲ್ಲಿ ನೋಡಪ್ಪ ಬೇಗ ಬೇಳೆ ಹಾಕಪ್ಪ. ಅಂತಾ ಅರುಂಧತಿ ಭಟ್ ಹೇಳುತ್ತಿದ್ದರೆ ನಾಯಕ ರಮೇಶ ಭಟ್ೆ ಕೈಗೆ ಸಿಗದಿರುವ ಡಬ್ಬಗಳ ಹುಡುಕುತ್ತಾ ಬೆಪ್ಪನಾದ ಮೋಹಕ ಅಭಿನಯ ಮನ ಸೆಳೆಯುವಂತಿತ್ತು. ಬೇಗ ಬೇಳೆ ಹಾಕ್ರೀ, ನೀರು ಕುದಿತಾ ಇದೆ. ಹಾಗೇ ಒಗ್ಗರಣೆನೂ ಹಾಕಿ ಎಂದೂ ಮೋಹಕವಾಗಿ ಉಲಿಯುತ್ತಾ ಹಾಡು ಮುಂದುವರೆಯುತ್ತದೆ.
ನನಗೋ ಈ ಹಾಡಿನ ಮೇಲೆ ಯಾಕೋ ಏನೋ ಒಂಥರಾ ಕ್ರಷ್. ಹೆಂಡತಿಯ ಪಾತ್ರದ ಬಗ್ಗೆ ಒಂದಿಷ್ಟು ಸಣ್ಣ ಸಣ್ಣ ಕನಸುಗಳು ಮೂಡುವ ಹೊತ್ತದು. ಅಡುಗೆ ಮಾಡುವ ಒಗ್ಗರಣೆ ಹಾಕುವ ಗಂಡ ನನಗೂ ಸಿಕ್ಕರೇ ಎಷ್ಟು ಚೆನ್ನ ಎನಿಸಿದ್ದು, ಈ ಗಂಡಸರಿಗೂ ಒಗ್ಗರಣೆ ಹಾಕಲು ಬರುತ್ತೆ ಅಂತಾ ತಿಳಿದದ್ದು. ಒಗ್ಗರಣೆ ಹಾಕಲು ನಾನೂ ಕಲಿಯಬೇಕು ಎನಿಸಿದ್ದು, ಹಾಗಾಗೇ ಈ ಹಾಡನ್ನು ನನಗೆ ಆಗಾಗ ಗುಣುಗುವ ಚಟವೂ ಬಿದ್ದಿತ್ತು.
ಒಗ್ಗರಣೆ ಹಾಕುವುದೂ ಒಂದು ಕಲೆ. ಹೆಂಗಸರಿಗೆ ಒಗ್ಗರಣೆ ಹಾಕುವುದು ಅಡುಗೆ ಮಾಡುವ ಕಸುಬಿನೊಂದಿಗೆ ಕರತಲಾಮಲಕ. ಹಾಗಂತ ಪಾಕಶಾಸ್ತ್ರದಲ್ಲಿ ಪರಿಣಿತರಾದ ನಳ ಭೀಮರಂತಹ ಗಂಡಸರು ಇರುವರೆನ್ನಿ. ಅವರೆಲ್ಲ ಒಗ್ಗರಣೆ ಹಾಕುವುದರಲ್ಲೂ ನಿಸ್ಸಿಮರೇ! ಅವರುಗಳು ಹಾಕುವ ಒಗ್ಗರಣೆ ಪದಾರ್ಥಕ್ಕೆ ರುಚಿಯನ್ನು ಹೆಣ್ಣುಮಕ್ಕಳ ಒಗ್ಗರಣೆಗಿಂತ ಎರಡು ಪಟ್ಟು ಹೆಚ್ಚೇ ಒದಗಿಸುತ್ತದೆ. ಹಾಗಂತ ಇವರೇನೂ ಬರೀ ಅಡುಗೆಗೆ ಮಾತ್ರ ಒಗ್ಗರಣೆ ಹಾಕಲು ಪ್ರವೀಣರು. ಮಾತಿನ ಒಗ್ಗರಣೆಗೆ ಇವರು ಅಂತಹ ನಿಸ್ಸಿಮರಲ್ಲ, ಅದಕ್ಕೆ ಹೆಣ್ಣು ಮಕ್ಕಳೇ ಸೈ ಎನ್ನುವವರಿಗೆ ನನ್ನ ಆಕ್ಷೇಪವಿದೆ. ಇದು ಶುದ್ಧ ತಪ್ಪು ವ್ಯಾಖ್ಯಾನವೇ ಸರಿ. ಹೆಣ್ಣು ಮಕ್ಕಳಿದ್ದ ಅಡುಗೆ ಕೋಣೆಯಲ್ಲಿ ಕೆಲಸಕ್ಕಿಂತ ಮಾತೇ ಹೆಚ್ಚಾಗಿ ಅಡುಗೆ ಕೂಡಾ ಅಡಿಹತ್ತಿ ಹೋಗುವುದು ಎಂಬ ಮಾತಿದೆ. ಆದರೆ ಕೊಂಚ ನೀವು ಪಕ್ಷಾತೀತರಾಗಿ ನೋಡಿ, ಹೆಂಗಸರ ಮಾತಿನಿಂತ ಗಂಡಸರ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿ, ಆಲಿಸಿ ನೋಡಿ, ಆಗ ನಿಮಗೇ ಅದರ ತಥ್ಯ ತಿಳಿಯುವುದು. ನಾಲ್ಕೈದು ಜನ ಪುರುಷರು ಸೇರಿದ ಕಡೆಗಳಲ್ಲಿ, ಲಹರಿಯಲ್ಲಿ ನಡೆಯುವ ಅವರ ಮಾತಿನ ಅಡ್ಡಾದಲ್ಲಿ ಅದೆಷ್ಟು ಚಿತ್ರ ವಿಚಿತ್ರ ಒಗ್ಗರಣೆಗಳನ್ನು ಅವರು ಹಾಕಬಲ್ಲರು ಎಂಬುದು ನಿಮಗೇ ತಿಳಿಯುತ್ತೆ. ಈ ವಾಟ್ಸಪ್ಪು ಫೇಸಬುಕ್ಗಳಲ್ಲಿ ಹೆಂಗಸರ ನಡೆನುಡಿ, ವರ್ತನೆ, ಇತ್ಯಾದಿಗಳ ಮೇಲೆ ಬರೆಯಲ್ಪಡುವ ಜೋಕುಗಳೋ ಅಥವಾ ತಯಾರಿಸಲ್ಪಡುವ ವಿಡಿಯೋ ಕ್ಲೀಪ್ಗಳನ್ನೋ ನೋಡಿ. ಬಹಳಷ್ಟು ಇಂತಹ ರಚನೆಗಳು ಹೆಂಗಸರ ಮೇಲೆಯೇ ಇರುತ್ತವೆ. ಅಲ್ಲಿ ಅವರು ಕೊಟ್ಟ ವಿವರಣೆಗಳು ಗಂಡಿನ ಒಗ್ಗರಣೆ ಹಾಕಬಲ್ಲ ತಾಕತ್ತನ್ನು ಎಷ್ಟು ಚೆನ್ನಾಗಿ ನಿರೂಪಿಸುತ್ತವೆ ಎಂಬುದು ನಿಮ್ಮ ಗಮನಕ್ಕೆ ಬರದಿರದು. ಆ ಮಾತುಗಳ ದ್ವಂದಾರ್ಥಭರಿತ ಶೈಲಿ ಎಂಥವರನ್ನು ಆಕಷರ್ಿಸಬಲ್ಲದು. ಅದೆಷ್ಟೋ ಸಂಗತಿಗಳು ಹೆಣ್ಣಿನ ಕುರಿತದ್ದಾಗಿರಬಹುದು. ಸ್ವತಃ ಹೆಣ್ಣಿಗೆ ಅರ್ಥವಾಗದಷ್ಟು ಗಾಢ ನಿಗೂಢವಾಗಿ ಮಾತಿನ ಬಲೆಯನ್ನು ಹೆಣೆಯಬಲ್ಲರು ಗೊತ್ತೇ! ಹಾಗಾಗಿ ಮಾತಿನ ಕಟಕಟೆಯಲ್ಲಿ ಇವರ ಮಾತಿನ ಒಗ್ಗರಣೆಗೆ ಹೆಚ್ಚು ರುಚಿ.
ಮಹಾಭಾರತ ಒಂದೊಂದು ಪಾತ್ರಗಳು ತಮ್ಮ ವಿಶಿಷ್ಟ ಸಾಮಥ್ರ್ಯಕ್ಕೆ ಹೆಸರಾದದ್ದು ನಿಮಗೆಲ್ಲ ಗೊತ್ತೇ ಇದೆ. ಅದರಲ್ಲೂ ಪರಾಕ್ರಮಿಗಳಾದ ಪಾಂಡವರಲ್ಲಿ ಪ್ರತಿಯೊಬ್ಬನೂ ತನ್ನದೇ ಆದ ಈ ವಿಶಿಷ್ಟ ಕೌಶಲ್ಯಗಳಿಂದಲೇ ಅಜ್ಞಾತವಾಸದಲ್ಲಿ ಯಾರಿಗೂ ಸಂಶಯಬರದಂತೆ ಇರಲು ಸಾಧ್ಯವಾಯಿತು. ಭೀಮನಾದರೂ ಇದೇ ಅಡುಗೆ ಭಟ್ಟನಾಗಿ ಒಗ್ಗರಣೆ ಕೊಡುವಲ್ಲಿ ಬ್ಯೂಸಿಯಾಗಿದ್ದನಂತೆ. ಮಹಾಭಾರತದ ಸಾರಥಿ ಎಲ್ಲರ ಮನಗೆಲ್ಲುವ ಕಪಟನಾಟಕ ಸೂತ್ರಧಾರಿ, ಕಷ್ಟದಲ್ಲಿ ಕರೆದರೆ ಕೈ ಬಿಡದ ಗೋವರ್ಧನಗಿರಿಧಾರಿ ಶ್ರೀ ಕೃಷ್ಣನೊಬ್ಬನೇ ಸಾಕು. ಕೃಷ್ಣ ಪರಮಾತ್ಮನ ಮಾತಿನ ಒಗ್ಗರಣೆ ಜಗತ್ಪ್ರಸಿದ್ಧವಲ್ಲವೇ? ಹುಳಿ ಉಪ್ಪು ಖಾರ ಎಲ್ಲ ಸೇರಿಸಿದ ಮಾತಿನ ಪದಾರ್ಥವನ್ನು ಅರೆದು ತನ್ನೆದುರಿಗಿನ ವ್ಯಕ್ತಿಯ ಮತಿ ಜಿಹ್ವೆಯನ್ನು ಪಕ್ಕಾಗಿಸಿ, ಅದಕ್ಕೆ ತಕ್ಕ ರುಚಿ ಹೆಚ್ಚಿಸುವಂತೆ, ಆ ಸಂದರ್ಭಕ್ಕೆ ಯಾವುದು ಬೇಕೋ ದ್ವೇಷವೋ. ಅಸೂಯೆಯೋ, ಪ್ರೀತಿಯೋ, ನಿಷ್ಟೆಯೋ, ಯಾವುದು ಬೇಕೋ ಅದನ್ನು ಕೊನೆಯಲ್ಲಿ ಒಂದು ಚಿಟಿಕೆಯಷ್ಟು ಬೆರೆಸಿ ಒಗ್ಗರಣೆ ಕೊಟ್ಟು ಬಂದುಬಿಟ್ಟಂತೆ, ಕರ್ಣನ ಶಸ್ತ್ರತ್ಯಾಗ ಮಾಡಲೂ, ಅಜರ್ುನ ಶಸ್ತ್ರಧಾರಿಯಾಗಲೂ, ದ್ರೋಣ ಯುದ್ಧ ವಿಮುಖನಾಗಲೂ ಕಾರಣವಾಗಿತ್ತಲ್ಲ! ಹೀಗೇ ಇಂತಹ ಪಟ್ಟಿಗಳೇ ಬೆಳೆಯುತ್ತವೆ ಅಲ್ಲವೇ?
ಇನ್ನು ನಮ್ಮಂತ ಸಾಮಾನ್ಯರು, ಅದೂ ಹೆಂಗಳೆಯರಿಗೆ ಒಗ್ಗರಣೆ ಕೊಡುವುದು ಸರಿಯಾಗಿ ಬರದಿದ್ದರೂ ಹುಟ್ಟುತ್ತಾ ಬಂದ ಕಸುಬು ಎಂಬಂತೆ ಅಡುಗೆ ಮಾಡು, ಒಗ್ಗರಣೆ ಕೊಡು,ಇವೆಲ್ಲ ನಿತ್ಯದ ಕರ್ಮಗಳು. ಈಗಂತೂ ಈ ಕೊರೊನಾ ವೈರಸ್ ಪರಿಣಾಮ ಹೆಚ್ಚುತ್ತಾ, ಹೊರಗೆ ಹೋಗಿ ದುಡಿಯುವುದು ತಪ್ಪಿ ಹೋಯಿತಲ್ಲ. ಮನೆ ಕೆಲಸ ಬಿಟ್ಟರೆ ಬೇರೆ ಕೆಲಸ ಇಲ್ಲದಂತಾಗಿದೆ. ಮೂರ್ಹೊತ್ತು ಅಡುಗೆ ಧ್ಯಾನವೇ ಆಗ್ಹೋಗಿದೆ. ನಮ್ಮ ಕರಾವಳಿಯ ಕಡೆ ಎಲ್ಲ ಚದುರಿದ ಹಳ್ಳಿಗಳು. ಅಂದರೆ ಅಲ್ಲೊಂದು ಇಲ್ಲೊಂದು, ಊರಿಗೊಂದು ಕೊಪ್ಪ ಅಥವಾ ಕೇರಿ ಇದ್ದರೂ ಜನ ತಮ್ಮ ಮನೆ, ಅದರ ಸುತ್ತ ಅವರದೇ ಭಾಗಾಯತು, ತೋಟ, ಗದ್ದೆ ಹೀಗೆ ಇದ್ದು ಬೆಳಿಗ್ಗೆಯಿಂದ ಮನೆಯಲ್ಲಿ ಅದೂ ಇದೂ ಕೆಲಸ ಹಚ್ಚಿಕೊಳ್ಳುವ ಹೆಂಗಸರು ಸಂಜೆಯಾಗುತ್ತಲೇ ಆ ಮನೆಯ ಈ ಮನೆಯ ಸುದ್ದಿಗಳ ಹಿಡಿದು ಗದ್ದೆ ಬಯಲಿನ ಕಡೆಯೋ, ಇಲ್ಲ ರಸ್ತೆ ಗುಂಟವೋ ಅಥವಾ ಯಾರದೋ ಮನೆಗೆ ಅಕ್ಕಾ ಆರಾಂ ಇಂವೆ ಎಂದು ಕುಶಲೋಪರಿಗೆ ಬಂದಂತೆ ಆಡಿ ತಮ್ಮ ಮಾತಿನ ಪೆಟಾರಿ ಬಿಚ್ಚುತ್ತಿದ್ದೆವು. ನಮಗೆ ಬೇಕಾದಂತೆ ಒಗ್ಗರಣೆ ಕೊಟ್ಟು ಮಾತಾಡಿಕೊಳುತ್ತಿದ್ದೆವು. ನಮ್ಮಿಬ್ಬರ ಸುದ್ದಿ ಬಿಟ್ಟು ನಮ್ಮ ಮನೆ ಮಂದಿಯ ಜೊತೆಗೆ ಉಳಿದವರೆಲ್ಲರ ಮನೆಯ ಸುದ್ದಿಗಳು ಬಂದು ಹೋಗುತ್ತಿದ್ದವು. ಯಾರಿಗೆ ಹೆಚ್ಚು ಇಂಗು ಹಾಕಿ ಒಗ್ಗರಣೆ ಕೊಡಬೇಕು, ಯಾವ ಜನಕ್ಕೆ ಕಮ್ಮಿ ಸಾಸಿವೆ ಬಳಸಬೇಕು ಎಂಬುದೆಲ್ಲ ಯಾರೂ ಹೇಳಿಕೊಡಬೇಕಾಗಿಲ್ಲ. ಆದರೆ ದುರಾದೃಷ್ಟಕ್ಕೆ ಈಗ ಹಾಗೇ ಒಂದೆರಡು ಮನೆಗಳಿಗೆ ಹೋಗಿ ಒಗ್ಗರಣೆ ಹಾಕಿ ಬರೋಣವೆಂದರೂ ಯಾರಿಗೂ ಆಗುತ್ತಿಲ್ಲ. ಈಗ ಕ್ವಾರಂಟೈನ್ ಕಾಲ.
ನಿಮಗೆ ಗೊತ್ತಾ ಈ ಒಗ್ಗರಣೆ ಡಬ್ಬದ್ದು ಒಂದು ಅದೃಷ್ಟವೆ ಸರಿ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಪಾತ್ರೆಯಂಗಡಿಯಲ್ಲಿ ಏನಾದರೂ ಕೊಂಡು ಕೊಳ್ಳುವುದಿದ್ದರೆ ಮೊದಲು ಹುಡುಕುವುದು ಈ ಒಗ್ಗರಣೆ ಡಬ್ಬಿ. ನಾನೂ ಹಾಗೇ ಮೊದಲೂ ಈ ಡಬ್ಬವನ್ನೇ ಖರೀದಿಸಿದ್ದೆ. ಅದು ಸ್ಟೀಲ್ ಡಬ್ಬ. ಒಳಗೆಲ್ಲ ಸಣ್ಣ ಸಣ್ಣಪಾತ್ರೆಗಳು. ನೋಡೋದೆ ಖುಷಿಯಾಗಿತ್ತು. ನನ್ನಮ್ಮನ ಬಳಿಯೂ ಅಲ್ಯೂಮಿನಿಯಮ್ ಪಾತ್ರೆಯ ಒಂದು ಮಸಾಲೆ ಪದಾರ್ಥಗಳ ಇಡುವ ಡಬ್ಬ ಇತ್ತು. ಅದಕ್ಕೆ ಅಮ್ಮ ಒಗ್ಗರಣೆ ಡಬ್ಬಿ ಎಂತಲೇ ಕರೆಯುತ್ತಿದ್ದರು. ಅದರಲ್ಲಿ ಇಂಗು, ಜೀರಿಗೆ, ಮೆಂತ್ಯ, ಸಾಸಿವೆ. ಬಡೆಸೊಪ್ಪು, ಮತ್ತು ಕೊತ್ತಂಬರಿ ಕಾಳುಗಳ ಇಡುವ ಡಬ್ಬಿ. ಉದ್ದಕ್ಕೆ ಇರುವ ಆರು ಸಪೂರ ಗಾತ್ರದ ಚಿಕ್ಕಚಿಕ್ಕ ವಾಟಗಗಳು ಅದರಲ್ಲಿ ಇದ್ದವು. ಅಕ್ಕನ ಮದುವೆಯಾಗಿ ಹೋಗುವಾಗ ಅಮ್ಮ ಅಂತಹದ್ದೇ ಇದ್ದ ಇನ್ನೊಂದು ಡಬ್ಬವನ್ನ ಅಕ್ಕನಿಗೆ ಬಳುವಳಿಯಾಗಿ ಕೊಟ್ಟಿದ್ದರು. ನಾನು ಮದುವೆಯಾಗಿ ಹೋಗುವಾಗ ನನಗೂ ಕೊಡುವರು ಎಂಬ ಭ್ರಮೆಯಲ್ಲಿದ್ದೆ ನಾನು. ಆದರೆ ನನ್ನ ಮದುವೆ ಹೊತ್ತಿಗೆ ಇದೆಲ್ಲ ಪಾತ್ರೆ ಪಗಡ ಕೊಡುವ ಸಂಪ್ರದಾಯವೇ ಹೊರಟು ಹೋಗಿತ್ತು. ನನಗೆ ತವರು ಮನೆಯ ಒಗ್ಗರಣೆ ಡಬ್ಬ ಸಿಗದ ಕಾರಣ ನಾನೇ ಖರೀದಿಸಬೇಕಾಯ್ತು.
ಗಂಡಸರು ಒಗ್ಗರಣೆ ಹಾಕಲು ಬಂದರೂ ಕೂಡಾ ಆ ಕೆಲಸವನ್ನ ಹೆಣ್ಣಿನ ಕುತ್ತಿಗೆಗೆ ಕಟ್ಟಿ ನಿರುಮ್ಮಳರಾಗಿದ್ದಾರೆ. ಹೆಂಗಸರು ಪಾಪ ಅದೆಷ್ಟು ಮುತುವಜರ್ಿಯಿಂದ ಇರಬೇಕಲ್ಲವೇ? ಮೊಸರಲ್ಲಿ ಕಲ್ಲು ಹುಡುಕುವ ಗಂಡಂದಿರು ಇರುವುದು ಬರೀ ಗಾದೆ ಮಾತಲ್ಲ. ಅದು ಜೀವನಾನುಭವದ ನುಡಿ ಕಣ್ರೀ.. ಅಡುಗೆ ಮಾಡೋದು ಒಂದು ಕಲೆ. ಇನ್ನು ಒಗ್ಗರಣೆ ಹಾಕೋದು ವಿಶಿಷ್ಟ ಕಲೆ. ಕಲೆ ಎಂದರೆ ತಪ್ಪಾಗಿ ತಿಳಿದಿರಿ ಮತ್ತೆ, ಗುರುತಿನ ಕಲೆಯಲ್ಲ ಅದು. ಒಂದು ಕೌಶಲ್ಯ. ಯಾವುದೇ ಪದಾರ್ಥಕ್ಕೆ ಒಗ್ಗರಣೆ ಎಷ್ಟು ರುಚಿ ಕೊಡಬಹುದು ಎಂಬುದು ಅದಕ್ಕೆ ಬಳಸುವ ಇಂಗು, ಅರಸಿನ, , ಬೆಳ್ಳುಳ್ಳಿ, ಇರುಳ್ಳಿ, ಮೆಣಸು, ಜೀರಿಗೆ, ಕರಿಬೇವಿನ ಎಲೆ ಇತ್ಯಾದಿಗಳನ್ನು ಬಳಸುವುದರ ಮೇಲೆ ನಿಧರ್ಾರ. ಯಾವುದಕ್ಕೆ ಯಾವ ಒಗ್ಗರಣೆ ಉಚಿತ ಎಂದು ತಿಳಿದೇ ಮಾಡಬೇಕು. ಒಗ್ಗರಣೆ ಕೊಡುವುದೆಂದು ಎಲ್ಲ ಅಡುಗೆಗೂ ಒಗ್ಗರಣೆ ಕೊಡಲೂ ಬಾರದು. ಆದರೆ ನನಗೆ ಇಂದಿಗೂ ಬಗೆಹರಿಯದ ಸಂಗತಿ ಎಂದರೆ ದಿನವೂ ಅಡುಗೆ ಮಾಡದೇ ಇದ್ದರೂ ಈ ಗಂಡಸರಿಗೆ ಅದು ಹೇಗೇ ಸಾರಿಗೆ ಕೊತ್ತಂಬರಿ ಹೆಚ್ಚಾದ್ದು, ಜೀರಿಗೆ ಕಡಿಮೆ ಆದದ್ದು, ಒಗ್ಗರಣೆ ಅಡ್ಡ ವಾಸನೆ ಹೊಡೆಯುವುದು ತಿಳಿಯುತ್ತೆ.
ಅದೇ ಮದುವೆಯಾದ ಮೊದಲ ಬಾರಿ. ಚಿಕ್ಕಂದಿನಲ್ಲೇ ಅಡುಗೆ ಮಾಡಿ ಅಷ್ಟೇನೂ ಅಭ್ಯಾಸವಿರಲಿಲ್ಲ. ಅಮ್ಮ ಬೇಳೆ ಸಾರಿಗಷ್ಟೇ ಒಗ್ಗರಣೆ ಹಾಕುತ್ತಿದ್ದರು. ಮಾಂಸಾಹಾರದ ಅಡುಗೆಗೆ ಒಗ್ಗರಣೆ ಹಾಕುವುದು ಆಗೆಲ್ಲ ಇರಲಿಲ್ಲ. ಈಗೀಗ ಎಲ್ಲಕ್ಕೂ ಒಗ್ಗರಣೆ ಸುರಿತಾರೆ ಬಿಡಿ. ಅದು ಬೇರೆ ಮಾತು. ಅತ್ತೆಯೆಲ್ಲೋ ಹೊರಹೋದ ದಿನವಾಗಿತ್ತದು. ಚಂದದ ಸಾಂಬಾರ ಮಾಡಬೇಕೆಂದು ನಾನು ಬೇಳೆಯೊಂದಿಗೆ ತರಕಾರಿ ಬೆರೆಸಿ ಬೇಯಲಿಟ್ಟೆ. ಮಸಾಲೆ ಅರೆದು ಸೇರಿಸಿ, ಇನ್ನೆನು ಒಗ್ಗರಣೆ ಕೊಡಬೇಕು ಎನ್ನುವಷ್ಟರಲ್ಲಿ ನನ್ನವರ ಅಕ್ಕಂದಿರ ಮಕ್ಕಳು ಅಡುಗೆ ಕೋಣೆಗೆ ಹಾಜರಾಗಿದ್ದರು. ಒಗ್ಗರಣೆ ಹಾಕುವುದಕ್ಕೆ ಇಂಗ್ಲೀಷನಲ್ಲಿ ಏನೆನ್ನುತ್ತಾರೆ? ಈ ಪ್ರಶ್ನೆ ಬಂದಿತು.
ಅತ್ತೆ, ಒಗ್ಗರಣೆ ಇಂಗ್ಲೀಷನವರು ಹಾಕಲ್ಲ. ಅದಕ್ಕೆ ಆ ಶಬ್ದವೇ ಇಲ್ಲ ಎಂದಳು ಇನ್ನೊಬ್ಬಳು.
ಆದರೆ ನಾವು ಹಾಕ್ತಿವಲ್ಲ, ಹಾಗಿದ್ದ ಮೇಲೆ ದೋಸೆಗೆ ದೋಸಾ ಅಂತ ಹೇಳಿದಂತೆ,ಇದಕ್ಕೂ ಏನಾದರೊಂದು ಅಲ್ಟರನೇಟ್ ವರ್ಡ ಶುಡ್ ಬಿ ದ್ಹೇರ್ ಎಂದಳು ಮತ್ತೊಬ್ಬಳು.
ಇವಳು ಇಂಗ್ಲೀಷ ಮಾಧ್ಯಮದವಳು. ಅದಕ್ಕೆ ಕನ್ನಡ ಮಾಧ್ಯಮದ ಇನ್ನೊಬ್ಬ ಅಕ್ಕನ ಮಗ ತಟ್ಟನೇ ಹೇಳಿದ. ‘ಇದನ್ನೇ ನೋಡು ಇಂಗ್ಲೀಷನಲ್ಲಿ ಒಗ್ಗರಣೆ ಹಾಕೋದು ಅಂದ್ರೆ’ ಅನ್ನುತ್ತಲೇ ಆಕೆಯ ಮುಖ ದುಮುಗುಡುತೊಡಗಿತು.
ಆ ತುಂಟ ಹುಡುಗ ಅಷ್ಟಕ್ಕೆ ಸುಮ್ಮನಾಗದೇ ಹೀಗೆ ಮುಖ ಮಾಡಿಕೊಳ್ಳುವುದಕ್ಕೆ ಇಂಗು ತಿಂದ ಮಂಗ ಅಂತ ನಮ್ಮ ಕನ್ನಡ ಮೇಷ್ಟರು ಹೇಳ್ತಾರೆ. ಒಗ್ಗರಣೆಗೆ ಇಂಗು ಮುಖ್ಯ ಅಲ್ಲವಾ ಅತ್ತೆ ಅಂದ.
ಇನ್ನೂ ಆ ಮನೆಗೆ ಹೊಸಬಳಾದ ನಾನು ಅಡುಗೆ ಮಾಡಲೂ ಬರದೇ, ಇತ್ತ ಈ ಮಕ್ಕಳ ಕಿರಿಕಿರಿ ಕಿತಾಪತಿಗೆ ಬೆದರಿ ಮುಖದಲ್ಲಿ ಕೃತಕ ಮುಗುಳ್ನಗೆಯ ಒಗ್ಗರಣೆ ಹಾಕಿಕೊಂಡಿದ್ದರೂ, ಒಳಗೊಳಗೆ ಸಾಂಬಾರು ಹೇಗಾಗಿದೆಯೋ ಎಂದು ನಡುಗಿದ್ದೆ. ಕೊನೆಗೂ ರುಚಿಕರ ಸಾಂಬಾರು ಮಾಡಿ ಮುಗಿಸಿದ್ದೆ.ಈಗ ಒಗ್ಗರಣೆ ಹಾಕುವುದರಲ್ಲಿ ನಾನೂ ಕೂಡಾ ಚುರುಕಾಗಿರಿವೆ. ಅನುಭವವೇ ಅಡುಗೆಗೂ, ಮಾತಿಗೂ ಒಗ್ಗರಣೆ ಹಾಕುವುದ ಕಲಿಸಿದೆ. ನೀವೂ ಕಲಿತಿರಬೇಕಲ್ಲ!
ಇದ್ದೇ ಇದೆ ಪುಟ್ಟೇಗೌಡನ ಒಗ್ಗರಣೆ
ಈ ಗಾದೆ ಅರ್ಥ ಏನು?
ಗೊತ್ತಿದ್ದರೆ ತಿಳಿಸಿ.