ಗುರುವಿನ ಮಹಿಮೆಯ ಬಗ್ಗೆ ಪಿ.ಆರ್.‌ ನಾಯ್ಕರು ಏನಂತಾರೆ…!!

ಗುರು ಪೂರ್ಣಿಮೆ ನಿಮಿತ್ತ ಈ ಲೇಖನ...

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ, ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ.
ಗುರುವಿನ ಮಹತ್ವವನ್ನು ಸಾರುವ ದಿನ.

ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ.ಆಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”. ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವು ಗುರುವಿನ ಮುಖಾಂತರವೇ ಪರಮಾತ್ಮನ ಅರಿವು ಅರಿಯಬೇಕಾಗಿರುವುದರಿಂದ, ನಾವು ಆಷಾಡದ ಪೌರ್ಣಮಿಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ಅಂತರಂಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲವೆಂಬ ಭಾವ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು, ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ.

ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ.ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ಗುರು ಎಂದು ಅರ್ಥೈಸಬಹುದೇನೋ.

ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಿಲಾಗಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ |

ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ |

ಆದಿಗುರು ಶ್ರೀ ಶಂಕರಾಚಾರ್ಯರು ಗುರು ಸ್ತೋತ್ರವನ್ನು ಹೀಗೆ ಹೇಳುತ್ತಾರೆ :

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |

ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||

ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ, ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.

ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ
ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ |
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ ||
ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಬೇರೆ ಯಾವುದೂ ಇಲ್ಲ. ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ.

ಶಾಶ್ವತವಾದ ಆನಂದವನ್ನು ಹೊಂದುವುದು ಸದ್ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವೆಂದು ಶ್ರೀ ಶಂಕರಾಚಾರ್ಯರು ತಮ್ಮ ಗುರ್ವಷ್ಟಕಮ್ ನಲ್ಲಿ ಕೂಡ ಹೀಗೆ ಹೇಳಿದ್ದಾರೆ :

ಶರೀರಂ ಸುರೂಪಂ ತಥಾ ವಾ ಕಲತ್ರಂ

ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ||೧||

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ

ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ ||೨||

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ.

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ

ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ||೩||

ವೇದ, ಶಾಸ್ತ್ರ ಪಾರಂಗತನಾಗಿ ಅನೇಕ ವಿದ್ಯೆಗಳನ್ನು ತಿಳಿದವನಾಗಿದ್ದರೂ ಕೂಡ ಸದ್ಗುರುವಿನ ಚರಣಗಳಲ್ಲಿ ನಿಷ್ಠೆ ಇಡದಿದ್ದರೆ ಮುಕ್ತಿಯಿಲ್ಲ.

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ

ಸದಾಚಾರವೃತ್ತೇಷು ಮತ್ತೋ ನಾ ಚಾನ್ಯಃ ||೪||

ವಿದೇಶಗಳಲ್ಲಿ ತುಂಬಾ ಹೆಸರು ಮಾಡಿ, ಸ್ವದೇಶದಲ್ಲಿ ಆಚಾರ ಪಾಲಿಸಿ, ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿ ಎಂಬ ಹೆಸರು ಪಡೆದಿದ್ದರೂ ಸಹ ಗುರುಚರಣಗಳಲ್ಲಿ ಭಕ್ತಿ ಇಲ್ಲದವನ ಜೀವನ ನಿರರ್ಥಕ.

ಕ್ಷಮಾಮಂಡಲೇ ಭೂಪಭೂಪಾಲಬೃಂದೈ:

ಸದಾ ಸೇವಿತಂ ಯಸ್ಯ ಪಾದಾರವಿಂದಮ್ ||೫||

ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ವ್ಯರ್ಥವೇ.

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್

ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ||೬||

ಅನೇಕ ದಾನ ಧರ್ಮಗಳನ್ನು ಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡಾಗಲೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ.

ನ ಭೋಗೇ ನ ಯೋಗೇ ನ ವಾ ವಾಜಿರಾಜೌ

ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ ||೭||

ಲೌಕಿಕದ ಎಲ್ಲಾ ವ್ಯಾಪಾರಗಳಲ್ಲಿ ಆಸಕ್ತಿ ತೊರೆದಿದ್ದರೂ ಕೂಡ ಆ ವ್ಯಕ್ತಿಯ ಮನಸ್ಸು ಅಚಲವಾಗಿ ಗುರು ಚರಣಗಳಲ್ಲಿ ಶ್ರದ್ಧೆ ಹೊಂದಿರದಿದ್ದರೆ ಅವನ ವೈರಾಗ್ಯ ಉಪಯೋಗವಿಲ್ಲದ್ದು, ಮೋಕ್ಷವನ್ನು ಹೊಂದಲಾರ.

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ

ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ||೮||

ಸಮಸ್ತವನ್ನೂ ತ್ಯಜಿಸಿ, ಅರಣ್ಯದಲ್ಲಿ ವಾಸಿಸಿದರೂ ಕೂಡ, ಗುರುಚರಣಗಳಿಗೆ ಶರಣಾಗತನಾಗದಿದ್ದರೆ ಆತ ಸಂಸಾರ ಬಂಧನದಿಂದ ಮುಕ್ತನಾಗುವುದು ಸುಳ್ಳು.

ಹೀಗೆ ಮೇಲಿನ ಶ್ಲೋಕಗಳಲ್ಲಿ ನಾವು ಬದುಕಿನಲ್ಲಿ ಏನೆಲ್ಲಾ ಸಾಧಿಸಿದ್ದರೂ, ತ್ಯಜಿಸಿದ್ದರೂ, ಗುರುವಿನ ಕರುಣೆ ಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಸುತ್ತಾಪ್ರತಿಯೊಂದು ಶ್ಲೋಕದ ಕೊನೆಗೂ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ | ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ಎಂಬ ಮಾತನ್ನು ಪದೇ ಪದೇ ಪುನಶ್ಚರಣ ಮಾಡುತ್ತಾ ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾಧ್ಯ ಎನ್ನುತ್ತಾ ಗುರುವಿನ ಮಹತ್ವವನ್ನು ವಿವರಿಸುತ್ತಾರೆ.

ಆದಿ ಗುರು ಶ್ರೀ ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ನಂತರ ಬಂದವರು ಶ್ರೀ ರಾಮಾನುಜಾಚಾರ್ಯರು ಮತ್ತು ಇವರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಬ್ಬರ ನಂತರ ಬಂದವರು ಶ್ರೀ ಮಧ್ವಾಚಾರ್ಯರು. ಆಚಾರ್ಯ ತ್ರಯರೆಂದೇ ಗುರುತಿಸಲ್ಪಡುವರು ನಮ್ಮ ಈ ಮೂವರು ಶ್ರೇಷ್ಠ ಗುರುಗಳು. ಅದ್ವೈತ, ವಿಶಿಷ್ಟಾದ್ವೈತ ಹಾಗೂ ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರು ಪರಂಪರೆಯೇ ಬೆಳೆಯಿತು ಮತ್ತು ಈಗಲೂ ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ, ಪರಂಪರೆ ಮುಂದುವರೆದಿದೆ. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು ಎಂದೂ, ಪರಮ ಗುರುವಿನ ಗುರುವನ್ನು ಪರಾಪರ ಗುರು ಎಂದೂ, ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ ಯಂದುಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ.

ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನು ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜೊತೆಗೇ “ಗುರು ಪೂರ್ಣಿಮೆ” ಯಂದು ಪೂಜಿಸುತ್ತೇವೆ.ಲೋಕಗುರು ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜೊತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು.ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ.

“ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆ ಯಾವಾಗಲೂ ಶಿಷ್ಯನ

ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ.ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ.

ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ :

ಬ್ರಹ್ಮರುದ್ರುಲಕೈನ – ಭಾವಿಂಪ ಶಕ್ಯಮಾ

ಆಧ್ಯಾತ್ಮವಿದ್ಯ ಗುರುಕೀಲು ಮಹಿಮ

ಆಧ್ಯಾತ್ಮ ವಿದ್ಯೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು ; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಆಧ್ಯಾತ್ಮವಿದ್ಯ “ಗುರುಕೀಲು ಮಹಿಮೆ” – ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. ಭ್ರಮೆಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. “ಗುರುಕೀಲು” ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥವಾಗುತ್ತದೆ. ತಾತಯ್ಯನವರು ಗುರುವಿಗೆ ‘ಮಾತೃಸ್ಥಾನ’ ಕೊಟ್ಟಿದ್ದಾರೆ. ಯೋಗ್ಯ ಹಾಗೂ ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಕುರಿಮರಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು. ಮನಸ್ಸನ್ನು ನಿಲ್ಲಿಸಲು ಜ್ಞಾನಬೋಧೆ ಮಾಡಿ ಗುರುವು ಸಾಧನಮಾರ್ಗ ತೋರಿಸುತ್ತಾನೆ.

ಗುರು ಪರಂಪರೆ ಹಾಗೂ ಗುರು-ಶಿಷ್ಯರ ಅತ್ಯಂತ ನಿಕಟ ಸಂಬಂಧವು ಮುಂದುವರೆದು ನಮ್ಮ ದಾಸಸಾಹಿತ್ಯದಲ್ಲೂ ಗಾಢವಾಗಿ ಕಾಣಬಹುದಾಗಿದೆ……

–ಪಿ.ಆರ್ .ನಾಯ್ಕ .ಹೊಳೆಗದ್ದೆ . ಕುಮಟಾ

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*