ಜತನದೋತ್ಸವ…

ಶಿವಲೀಲಾ ಹುಣಸಗಿಯವರ ಕವಿತೆ

ಪಕ್ಷಿಯಂತೆ
ನೀ ಸುರಿಸುವ ಪ್ರೇಮಾಮೃತವ

ಸವಿಯಲು ನಿನ್ನದೇ ಜಪಮಾಲೆ
ನಿನ್ನನುರಾಗದ ಪ್ರೇಮ ಪಲ್ಲವಿಗೆ

ಕಂಗಳು ಸುರಿಸಿವೆ ಮುತ್ತಿನ ಹನಿಗಳ
ಕವಿಗಿಂಪು ಮೆಲ್ಲುಸಿರ ಗಾನಗಳು.

ಎದೆಯಲಿ ಬಚ್ಚಿಟ್ಟ ಕ್ಷೀರಸಾಗರವ
ಹೀರಲನುವಾದ ಮಾದಕತೆಗಳು

ಹೃದಯ ಬಂಧನದ ಕಂಪನವು
ನಿನ್ನ ಆಗಮನವ ಬಯಸುತಿದೆ

ಮಲ್ಲಿಗೆಯ ಸುಗಂಧದ ತಂಗಾಳಿ
ಮೆಲ್ಲಗೆ ತನುವ ತೀಡುತಿಲಿ

ಮನದಿಂಗಿತವ ಅರುಹುತಿದೆ
ಮತ್ತೆ ಬಿಸಿಗಾಳಿಯ ಬೆಸುಗೆಯಲಿ

ಕನಸೆಲ್ಲ ನನಸಾಗೋ ಹುರುಪು
ಕಾಮನಬಿಲ್ಲಲಿ ಅವಿತ ಬಣ್ಣಗಳು

ಕಾನನದಿ ಮರೆಮಾಚಿದ ತರುಲತೆ
ನಿತ್ಯ ಬಯಲಾದ ಬಹಿರಂಗಕೆ ಸೋತಿದೆ

ಮುಚ್ಚುಮರೆಯಿಲ್ಲ ನಲ್ಲಾ..ಜಗದಲಿ
ಹೊಚ್ಚಹೊಸ ಆಲಾಪ ಗುನುಗುತಿದೆ

ಕೋಗಿಲೆಯ ಕಂಠದೈಸಿರಿಯಲಿ
ಬೇರಿಗೊಂದು ಉಸಿರಾಗೋ ತವಕ

ಕಾದಗಳಿಗೆಗಳು ಜೇನಸುರಿಸಲಿ
ವಸಂತ ಗರಿಗೆದರಿ ನಗುವಂತಾಗಲು

ಇಳೆಯತ್ತ ಇಳಿಯಬೇಕು ನೀನು
ಬಾಗುತಲಿ ಅಪ್ಪಬೇಕು ಬಾನು..

ಸಂಗಮದ ಸಂಘರ್ಷದ ಹೊಳೆಯ
ಜತನದೋತ್ಸವದಲ್ಲಿ ಮೀಯಬೇಕು..

ಶಿವಲೀಲಾ ಹುಣಸಗಿ, ಯಲ್ಲಾಪುರ

ಲೇಖಕರ ಪರಿಚಯ: ವೃತ್ತಿಯಲ್ಲಿ ಪ್ರಯೋಗಶೀಲ ಶಿಕ್ಷಕಿಯಾಗಿರುವ ಯಲ್ಲಾಪುರದ ಶಿವಲೀಲಾ ಹುಣಸಿಗಿಯವರು, ಪೃವೃತ್ತಿಯಲ್ಲಿ ಪ್ರಬುದ್ದ ಬರಹಗಾರರು, ತಮ್ಮ ಕವಿತೆ ಹಾಗೂ ಇತರೆ ಬರಹಗಳ ಮೂಲಕ ಅಕ್ಷರ ಪ್ರಪಂಚದಲ್ಲಿ ಪರಿಚಿತರಾದವರು. ಉತ್ತಮ ವಾಗ್ಮಿಗಳೂ.
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

9 Comments

  1. ಒಂದು ಹೆಣ್ಣಿನ ಮನಸ್ಸಿನ ಬಯಕೇಗಳನ್ನ ಹೇಳುವುದು ಅಷ್ಟು ಸುಲಭವಲ್ಲ, ಆದರೆ ನೀವು ಈ ಕವಿತೆಯ ಮೂಲಕ ತುಂಬ ಚೆನ್ನಾಗಿ ಹೇಳಿದ್ದೀರಿ. ಉತ್ತಮವಾಗಿದೆ. ಪ್ರಯತ್ನ ಹೀಗೆ ಸಾಗಲಿ.

Leave a Reply

Your email address will not be published.


*