ಪತ್ರಿಕೆಗಳು; ರೂಪಾಂತರಗಳು ಮತ್ತು ಆವಾಂತರಗಳು

ಇಂದು ವಿಶ್ವವೆಲ್ಲ ‘ಪತ್ರಿಕೆ’ಗಳ ಕುರಿತೇ ‘ದಿನಾಚರಣೆ’ ಆಚರಿಸುತ್ತಿದೆ. ಇಂದು ಕೇವಲ ‘ಪತ್ರಿಕೆ’ ಮಾತ್ರವಲ್ಲದೇ, ಇಂದೇ “ವಿಶ್ವ ವೈದ್ಯ ದಿನಾಚರಣೆ”, ವಿಶ್ವ ಸನದು ಲೆಕ್ಕಿಗರ (ಚಾರ್ಟರ್ಡ ಅಕೌಂಟಟ್ಸ) ದಿನಾಚರಣೆ’ ಹಾಗೂ ‘ಅಂಚೆ ಕಾರ್ಮಿಕರ ದಿನಾಚರಣೆಯೂ ಇದೆ. ಇವೆಲ್ಲವುಗಳಿಗಿಂತ ಮೋಜಿನ ವಿಷಯವೆಂದರೆ ಇಂದು ‘ವಿಶ್ವ ನಗೆಯ ದಿನವೂ ಹೌದು!! ಈ ಎಲ್ಲ ಸಮುದಾಯಗಳ ಹಿನ್ನೆಲೆಯಲ್ಲಿ ಸಮಾಜದಲ್ಲಿ ಹೆಚ್ಚಿನ ಪ್ರಚಾರದಲ್ಲಿರುವದು ‘ಪತ್ರಿಕಾ ದಿನ” ಮಾತ್ರ.

ಮಹಾಭಾರತದ ಯುದ್ಧದ ಸಂದರ್ಭದಲ್ಲಿ ‘ಸಂಜಯ’ನಿಗೆ ಇದ್ದ ನಿರ್ಲಿಪ್ತವಾದ ಮನೋಧರ್ಮದಂತೆ ‘ಪತ್ರಿಕೆ’ಗಳು ಇರಬೇಕಾದುದು ಜನತೆಯ ಆಶಯ. ಇದನ್ನು ‘ಪತ್ರಿಕಾ ವಲಯ’ವೂ ಗಮನಿಸಲೇಬೇಕಾಗಿದೆ. ಘಟಿಸುತ್ತಿರುವ ಘಟನೆಗಳ ಬಗೆಗೆ ‘ವರದಿ’ ಕೊಡುತ್ತಿರುವ ಕಾಯಕದಲ್ಲಿ, ನಿರ್ಲಿಪ್ತ ಮನೋಭಾವ ಇಲ್ಲದಿದ್ದರೆ ಏನಾಗಬಹುದು ಎನ್ನುವದನ್ನು ಇಂದಿನ ದಿನಮಾನಗಳಲ್ಲಿ ‘ಪತ್ರಿಕಾ’ ವಲಯದಲ್ಲಿಯೇ ಕಾಣುತ್ತಿದ್ದೇವೆ. ಘಟನೆಗಳ ವರದಿಯಲ್ಲಿ ವೈಯಕ್ತಿಕ ನಿಲುವನ್ನು, ಅದೇ ಪರಮ ಸತ್ಯವೆನ್ನುವಂತೆ ಹೇರದೇ, ಜನಸಮುದಾಯಕ್ಕೆ ಅದರ ಬಗೆಗೆ ದೃಷ್ಟಿಕೋನವನ್ನು ಸೂಕ್ತಗೊಳಿಸಿಕೊಳ್ಳುವಂತೆ ಮಾರ್ಗದರ್ಶನದ ಸೂತ್ರಗಳನ್ನು ಕೊಡಬೇಕಾಗಿದೆ. ಇದೇ ‘ಪತ್ರಿಕಾ ದಿನಾಚರಣೆ’ಯ ಧರ್ಮವಾಗಬೇಕಿದೆ.

ಪತ್ರಿಕಾ ಧರ್ಮ;

ಕನ್ನಡದ ಪತ್ರಿಕಾ ವಿಷಯವಾಗಿ ಗಮನಿಸಿದರೆ, ಇಲ್ಲಿ ಮೂರು ಹಂತಗಳಲ್ಲಿ ರೂಪಾಂತರಗೊಂಡದ್ದನ್ನು ಕಾಣಬಹುದು. ಮಂಗಳೂರಿನಿಂದ –ಅದರಲ್ಲೂ ಕ್ರೈಸ್ತ ಧರ್ಮದ ಪ್ರಚಾರವನ್ನೇ ಮೂಲೋದ್ದೇಶ ಹೊಂದಿದ ‘ ಪ್ರಪ್ರಥಮ ಪತ್ರಿಕೆ’ ತನ್ನ ಉದ್ದೇಶಕ್ಕೆ ಅನುಗುಣವಾಗಿಯೇ ಪ್ರಕಟಿಸಲ್ಪಡುತ್ತಿತ್ತು. ತದನಂತರದಲ್ಲಿ, ಸರ್ವರಿಗೂ ಶಿಕ್ಷಣದ ವ್ಯವಸ್ಥೆಯ ನಂತರದಲ್ಲಿ, ಓದುಗ ವರ್ಗ ಹೆಚ್ಚಾದ ಹಿನ್ನೆಯಲ್ಲಿ, ಬೇರೆ ಬೇರೆ ಪತ್ರಿಕೆಗಳು ಪ್ರಾರಂಭಗೊಂಡರೂ, “ಧರ್ಮದ ನಿಯಮದಿಂದ’ ತಮ್ಮನ್ನು ದೂರ ಮಾಡಿಕೊಂಡಿರಲಿಲ್ಲ. ಪತ್ರಿಕಾ ಜಗತ್ತಿನ ಪಿತಾಮಹ ಪಿತಾಮಹ ಎಂದೇ ಕರೆಯಲ್ಪಡುತ್ತಿರುವ ಡಿವಿಜಿ ಯವರು, ತಮ್ಮ ವೃತ್ತಿಯನ್ನು ‘ಪತ್ರಿಕಾ ಧರ್ಮ’ವೆಂದೇ ಕರೆದು, ಪ್ರವೃತ್ತಿ ಹಾಗೂ ವೃತ್ತಿಯ ಮಧ್ಯೆ ವ್ಯತ್ಯಾಸ ಬರದ ಹಾಗೇ ನಿಭಾಯಿಸುತ್ತಿದ್ದರು. ಈ ಶತಮಾನದ ಪ್ರಾರಂಭದಲ್ಲಿ, ಇಡೀ ಭಾರತದಲ್ಲಿ ಬಂದ ಭಾರತೀಯ ಮನೋಧರ್ಮದ ಪತ್ರಿಕೆಗಳೆಲ್ಲವೂ, ಇದೇ ನಿಯಮವನ್ನೇ ಅನುಸರಿಸಿಕೊಂಡು ಬಂದದ್ದು ಇತಿಹಾಸ. ಇದನ್ನು ‘ಪತ್ರಿಕಾ ವಲಯವೇ” ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ.
ಈ ಹಂತದಲ್ಲಿಯೇ ‘ಸ್ವಾತಂತ್ರ್ಯ ಹೋರಾಟವೂ” ಸೇರಿ, ದೇಶಪ್ರೇಮವೂ ಸಹಿತ ಧರ್ಮದ ರೀತಿಯಲ್ಲಿಯೇ ಪ್ರಚುರಗೊಂಡು, ಅದೇ ಧ್ಯೇಯವನ್ನು ಹೊಂದಿದ ‘ಪತ್ರಿಕಾ ವಾತಾವರಣ’ ಇದ್ದದ್ದು ಎಲ್ಲರಿಗೂ ತಿಳಿದ ವಿಷಯ. ತಂತ್ರಜ್ಞಾನದ ಬಗೆಗೆ ಏನೂ ಕಲ್ಪನೆಗಳು ಇರದ, ಸೂಕ್ತವಾದ ಸಂಪರ್ಕ ವ್ಯವಸ್ಥೆಯಿರದ, ಪ್ರಸ್ಪರ ಸಂವಹನಕ್ಕೆ ಸೂಕ್ತ ಫೋನ್ ಕೂಡ ಇರದ ಆ ಸಂದರ್ಭದಲ್ಲಿ ಅವರು ಪತ್ರಿಕೆಗಳನ್ನು ತಮ್ಮ ‘ಜೀವ-ಜೀವನ’ದಂತೆ ಗೌರವಿಸುತ್ತಿದ್ದರು.

ಪತ್ರಿಕಾ ರಂಗ;

ಸ್ವಾತಂತ್ರ್ಯೋತ್ತರದಲ್ಲಿ, ಅದರಲ್ಲೂ 70 ರ ದಶಕದ ನಂತರದಲ್ಲಿ , ಸಂಪರ್ಕ ವ್ಯವಸ್ಥೆಯಲ್ಲಿ ನಡೆ ಕ್ರಾಂತಿಕಾರಕ ಬೆಳವಣಿಗೆ, ಹಾಗೂ ಸಾಕ್ಷರತೆಯ ಪ್ರಮಾಣದಲ್ಲಿ ಏರಿಕೆಗಳಿಂದಾಗಿ, ಪತ್ರಿಕೆಗಳ ಸಂಖ್ಯೆಯೂ ಏರಿತು. ಅದರಲ್ಲೂ ‘ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ’ ರಾಜಕಾರಣದ ಜಾಲಕ್ಕೆ’ ಈ ಪತ್ರಿಕಾ ವಲಯ ಸಿಲುಕಿಕೊಂಡಿತು. ಜನಸಮುದಾಯಕ್ಕೆ ಭ್ರಮೆಗಳನ್ನು ತುಂಬಲು ಇರುವ ಅತ್ಯಂತ ಸುಲಭವಾದ ಉಪಾಯವಾಗಿ ಈ ಪತ್ರಿಕಾ ವಲಯ ರೂಪಾಂತರಗೊಳ್ಳಲ್ಪಟ್ಟಿತು. ತನ್ನನ್ನು ತಾನೇ ದಾಸನ್ನಾಗಿಸಿಕೊಂಡ ಪತ್ರಿಕಾ ವಲಯವನ್ನು ‘ಪತ್ರಿಕಾ ಧರ್ಮದಿಂದ, “ಪತ್ರಿಕಾ ರಂಗ”ವೆಂದು ಪರಿವರ್ತಿಸಿಕೊಳ್ಳಲಾಯಿತು. ಜ್ಞಾನಮಾರ್ಗಕ್ಕಿಂತ ಪ್ರಚಾರಪ್ರೀಯತೆಯೇ ಅಧಿಕವಾಗಿ, ರಂಗು-ರಂಗಿನ ರೂಪಗಳನ್ನು ತುಂಬುತ್ತ, ವೇಷಗಳನ್ನು ತೋರತೊಡಗಿತು. ಇದನ್ನು ಖಾದ್ರಿ ಶಾಮಣ್ಣನವರುನಿಖರವಾಗಿ ಗುರ್ತಿಸಿದ್ದೂ ಅಲ್ಲದೇ , ಈಗಿರುವದು ಪತ್ರಿಕಾ ಧರ್ಮ ಅಲ್ಲವೇ ಅಲ್ಲ; ಇದು ಪತ್ರಿಕಾ ರಂಗ ಮಾತ್ರ. ಹೀಗಾಗಿ ಇಲ್ಲಿ ಎಲ್ಲರೂ ನಟನೆ ಮಾಡುವವರೇ ಆಗಿದ್ದಾರೆ.ವೃತ್ತಿಗೂ ಮತ್ತು ಜೀವನಧರ್ಮಕ್ಕೂ ಏನಕೇನೂ ಸಂಬಂಧವಿರಬೇಕಾಗಿಲ್ಲ ಎನ್ನುವದೇ ‘ಪತ್ರಿಕಾ ರಂಗ’ದ ಧ್ಯೇಯ’ವಾಗಿತ್ತು. ನಿಜ ಜೀವನದಲ್ಲಿ ಯಾವುದೇ ಸ್ವಭಾವವನ್ನು ಹೊಂದಿದ್ದರೂ, ನಾಟಕದಲ್ಲಿ ಹೇಗೆ ‘ಸತ್ಯ ಹರಿಶ್ಚಂದ್ರ’ನ ಪಾತ್ರವನ್ನು ನಿಭಾಯಿಸಿಂತೆ ನಟಿಸುವವರೇ ಈ ಅವಧಿಯಲ್ಲಿ ತುಂಬಿಕೊಂಡದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಪತ್ರಿಕೋದ್ಯಮ!

‘ರಂಗದ ವೇಷ ತಾತ್ಕಾಲಿಕವಾಗಿರುತ್ತದೆ. 1980 ರ ನಂತರದಲ್ಲಂತೂ, ಕ್ರಾಂತಿಕಾರಕ ಬದಲಾವಣೆಯ ಮೂಲಕ ರೂಪಾಂತರಗೊಂಡ ಸಂಪರ್ಕ ಸಾಧನಗಳ ಲಭ್ಯತೆಯಿಂದಾಗಿ, ಹಾಗೂ ಅಪಾರ ಓದುಗರನ್ನು ಕೊಳ್ಳುಬಾಕರನ್ನಾಗಿಸಲು ಸದಾ ಹುನ್ನಾರು ರೂಪಿಸುತ್ತಿದ್ದ ವ್ಯಾಪಾರೀ ಜಗತ್ತು ಇದಕ್ಕೊಂದು “ಉದ್ಯಮದ’ ಸ್ವರೂಪವನ್ನು ಕೊಟ್ಟವು. ಬೃಹತ್-ಪ್ರಮಾಣದಲ್ಲು ಅತ್ಯಂತ ಶೀಘ್ರವಾಗಿ, ವರ್ಣಮಯವಾಗಿ ಮುದ್ರಿಸಲು ಸಾಧ್ಯವಿದ್ದ ಈ ಸಂದರ್ಭದಲ್ಲಿ, ಇದನ್ನು ‘ಪತ್ರಿಕೋದ್ಯಮ”ವಾಗಿ ರೂಪಾಂತರಿಸಿಬಿಟ್ಟಿತು. ಉದ್ಯಮದಲ್ಲಿ ಮೊದಲ ಗುರಿ ಲಾಭ; ಅದು ನೀತಿಗನುಗುಣವಾಗಿ ಇರಲೇಬೇಕೆಂದೂ ಇಲ್ಲ. ವ್ಯಾಪಾರಂ ದ್ರೋಹ ಚಿಂತನಂ’ ಎನ್ನುವ ರೋಗ ಪತ್ರಿಕಾ ವಲಯಕ್ಕೂ ಸಾಂಕ್ರಾಮಿಕ ರೋಗದಂತೆ ಹರಡಿತ್ತು. ಈಗಲೂ ‘ಪತ್ರಿಕೋದ್ಯಮ’ವೆಂದೇ ತಮ್ಮನ್ನು ತಾವೇ ಕರೆದುಕೊಳ್ಳುತ್ತಿರುವ ಏಕೈಕ ರಂಗವಾಗಿದೆ.
ಪತ್ರಿಕೆಗಳು ‘ದೇಶದ ನಾಲ್ಕನೇ ರಂಗ’ ವೆಂದು ಸ್ವಯಂ-ಮರ್ಯಾದಾ ಪ್ರಭಾವಳಿಗೆ ಸಿಲುಕಿಕೊಂಡದ್ದು ಇದನ್ನು ತೋರಿಸುತ್ತದೆ. ಏಕೆಂದರೆ , ಯಾವ ದೇಶದಲ್ಲಿಯೂ ಪತ್ರಿಕಾ ರಂಗವನ್ನು , ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಜೊತೆಯಲ್ಲಿ ಗುರುತಿಸಿ ಸಂವಿಧಾನಾತ್ಮಕವಾದ ಸ್ಥಾನವನ್ನು ಕೊಟ್ಟೇ ಇಲ್ಲ.
ಹೀಗಾಗಿ ‘ಸಂಜಯನ ಮನೋಧರ್ಮ’ವನ್ನು ತರುವದು ಸಹಿತ ಒಂದು ದೊಡ್ಡ ಸವಾಲಾಗಿದೆ. ಇಂದಿನ ಹತ್ತು-ಹಲವು ದಿನಾಚರಣೆಗಳ ಹಿನ್ನೆಲೆಯಲ್ಲಿ, ಸ್ವತಃ ಪತ್ರಿಕಾ ವಲಯ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಾಗಿದೆ.

ಪುಟ್ಟು ಕುಲಕರ್ಣಿ
ಸಂಪಾದಕರು
ಅಖಿಲ ಭಾರತ ಪತ್ರಿಕೆ (ಮಾಸಿಕ)
ಪಾಂಡೀಚೇರಿ-ಬೆಂಗಳೂರು

ಲೇಖಕರ ಪರಿಚಯ:
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ವಾಸವಾಗಿರುವ ಹಿರಿಯ ಸಾಹಿತಿ ಪುಟ್ಟು ಕುಲಕರ್ಣಿಯವರು ತಮ್ಮದೇ ಆದ ಚಿಂತನಶೀಲ ಬರಹಗಳ ಮೂಲಕ ನಾಡಿನ ಗಮನ ಸೆಳೆದವರು. ಕುಸುಮ ಸೊರಬರ ಸಾರಥ್ಯದಲ್ಲಿ ಈ ಜಿಲ್ಲೆಯ ಪರಿಸರ ಚಳುವಳಿ ಹಾಗೂ ಅಕ್ಷರ ಚಳುವಳಿಯಲ್ಲಿ ತೊಡಗಿಸಿಕೊಂಡವರು. ಹಲವಾರು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವ ಇವರು ಇದೀಗ ರಾಷ್ಟ್ರೀಯ ಮಾಸಿಕದ ಸಂಪಾದಕರಾಗಿಯೂ ಕಾಯನಿರ್ವಹಿಸುತ್ತಿದ್ದಾರೆ
.
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಮಾರ್ಮಿಕವಾಗಿ,ವಾಸ್ತವವಾಗಿ ಮೂಡಿಬಂದಿದೆ.ಪತ್ರಿಕೆಗಳ ನೈತಿಕತೆ ಜನಸಮುದಾಯದ ಆಶೋತ್ತರಗಳನ್ನು ಪೋಷಿಸುವದಾಗಿರಬೇಕೆ ಹೊರತು ಹೇರಿಕೆಯಲ್ಲ..ಪತ್ರಿಕಾ ಧರ್ಮ ಅವಲೋಕನಕ್ಕೆ ಒಳಪಡಬೇಕೆನ್ನುವ ಸಾಹಿತಿಗಳ ಮಾತು ಕಟು ಸತ್ಯ…

Leave a Reply

Your email address will not be published.


*