ಅಪ್ಪಾ ಅಂದು ನಿನ್ನ ಕಷ್ಟಗಳು ಗೊತ್ತೇ ಆಗಲಿಲ್ಲ…

ವಿಶ್ವ ತಂದೆಯ ದಿನಾಚರಣೆಯ ಪ್ರಯುಕ್ತ...

ನೆನಪಿದೆ ಇನ್ನು
ವಿಪರೀತ ಆಫಿಸ್ಸಿನ ಒತ್ತಡದ ದಿನಗಳಲ್ಲಿ
ರಾತ್ರಿ ನೀ ತಡವಾಗಿ ಬರುತ್ತಿದ್ದದ್ದು.
ನೀ ಬರುವ ಮೊದಲೆ ನಾನು ಮತ್ತು ತಮ್ಮ
ಅರೆ ನಿದ್ರೆಗೆ ಜಾರುತಿದ್ದದ್ದು.
ಮಕ್ಕಳ ಊಟವಾಯಿತೆ ಎಂದು ನೀ
ತಲೆ ಸವರಿದ್ದು.
ಮತ್ತೆಲ್ಲಿ ಎಚ್ಚರವಾದರೆ ನೀನೆಲ್ಲಿ ಬಯ್ಯುತ್ತಿಯೋ
ಎಂದು ನಾನು ಹೆದರಿದ್ದು.

ನೆನಪಿದೆ ಅಪ್ಪ,
ಅದೇನೋ ಕೆಟ್ಟ ಕನಸಿಗೆ
ನಿದ್ದೆಯಲ್ಲಿ ನಾ ಹೆದರುತಿದ್ದದ್ದು.
ತಕ್ಷಣ ಎಚ್ಚರಗೊಂಡು ನೀ
ಸಂತೈಸಿ ಮಲಗಿಸುತಿದ್ದದು.
ಜ್ವರ ಬಂದ ರಾತ್ರಿಗಳಲಲಿ ನಾ ನಡಗುತ್ತಿದ್ದದ್ದು
ನನ್ನ ಪಕ್ಕದಲೆ ಕುಳಿತು ನೀ ರಾತ್ರಿ ಕಳದದ್ದು.

ಗೊತ್ತಾಗುವ ವಯಸ್ಸಲ್ಲ ನೋಡು ಅಂದು ಅದು
ಗ್ರಹಿಸಿರಲಿಲ್ಲ ನಿನ್ನ ಇಷ್ಟ ಕಷ್ಟಗಳು.
ಹೊಸ ಬಟ್ಟೆಗಳನ್ನು ನಮಗುಡಿಸಿ ನೀ ಸಂಭ್ರಮಿಸುತಿದದ್ದು,
ನಮಗಷ್ಟೆ ಕೊಡಿಸಿ ನೀ ಮಾತ್ರ
“ನನಗೇಕೆ ಈಗ ” ಎಂದು ನಿರಾಕರಿಸುತಿದ್ದದ್ದು‌.

ನೆನಪಿದೆ ಇನ್ನೂ
ಕಾಲೇಜು ದಿನಗಳಲ್ಲಿ ಮಗನೆಲ್ಲಿ
ತಪ್ಪು ದಾರಿ ಹಿಡಿಯುತ್ತಾನೊ ಎಂದು
ಒಳಗೊಳಗೆ ನೀ ಹೆದರಿದ್ದು.
ಕೇಳಿದಾಗೆಲ್ಲ ಕೇಳಿದಷ್ಟು ದುಡ್ಡು ಯಾಕೆಂದು ಕೇಳದೇ ನೀ ಕೊಟ್ಟಿದ್ದು‌.

ಗೊತ್ತೇ ಆಗಲಿಲ್ಲ ನೋಡು ನಿನ್ನ ಕಷ್ಟ
ಕಾರಣ ನಾ ಬಯಸಿದ್ದೆಲ್ಲ ಅರಗಳಿಗೆಯಲ್ಲೇ ಸಿಕ್ಕಿದ್ದು
ನೆನಪಿದೆ ಇನ್ನೂ
ಅದಕ್ಕೆಲ್ಲ ಕಾರಣ ನೀನೆ ಎಂಬುವುದು.

ಈಗೀಗ ಸಣ್ಣದಕ್ಕೂ ಕೋಪ ಬರಿಸುವ
ನನ್ನ ಕೆಲಸ ನೆನಪಿಸುತ್ತದೆ ಒಮ್ಮೊಮ್ಮೆ
ನೆನಪಾಗುತ್ತಿ ನೀನು,
ಅದೇನಿತ್ತೊ ನಿನ್ನ ಕೆಲಸದಲ್ಲಿ ನೂರು ತಾಪತ್ರಯಗಳು, ಕೇಳಲೆ ಇಲ್ಲ ನಾನು
ಕೇಳಿದರೂ ಹೇಳುತ್ತಿರಲ್ಲವೆನೋ ನೀನು.

ಯಾವ ಜನ್ಮದ ಮೈತ್ರಿಯೊ
ದೈವವಿತ್ತ ವಿಶಾಲ ವೃಕ್ಷವು ನೀನು
ಅನುಗ್ರಹಿಸು ನನ್ನ
ನಿನ್ನ ಮಡಲಲಿ ಬಿಡುವ ಪುಟ್ಟ ಫಲವು

ಸೌರಭ್ ಜಿ. ನಾಯಕ, ವಾಸರೆ, ಅಂಕೋಲಾ
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*