ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಈ ಲೇಖನ
ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ *ವಿಶ್ವ ಪರಿಸರ ದಿನಾಚರಣೆ*. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ ದಿನ.
ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.
*1972 ರಲ್ಲಿ ವಿಶ್ವಸಂಸ್ಥೆಯ ಘೋಷಣೆಯ* ನಂತರ, 1973 ಜೂನ್ 5 ರಿಂದ ಪ್ರತಿವರ್ಷ ಈ ದಿನವನ್ನು *ವಿಶ್ವ ಪರಿಸರ ದಿನವನ್ನಾಗಿ* ಆಚರಿಸಿಕೊಂಡು ಬರಲಾಗುತ್ತಿದೆ.
ಈ ದಿನದ ವಿಶೇಷವೇನೆಂದರೆ ಎಲ್ಲರಿಗೂ ಪರಿಸರ ಸಂಬಂಧಿತ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಯಬೇಕೆಂಬುದೇ ಆಗಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರದ ಸ್ಥಿತಿ ಗತಿ ತಿಳಿಯುವುದು, ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಹಾಗೂ ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜಾಗತಿಕ ಮಟ್ಟದಲ್ಲಿ ಮೂಡಿಸುವಂತಹ ಘನೋದ್ದೇಶಗಳು ಪರಿಸರ ಆಚರಣೆಯಲ್ಲಿ ಸೇರಿವೆ.
ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗಿದ್ದು, ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದು, ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶ ಕೂಡಾ ಈ ಪರಿಸರ ದಿನಾಚರಣೆಯಲ್ಲಿ ಅಡಗಿದೆ.
ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ಪರಿಸರದ ಶಿಶುಗಳೆನಿಸಿದ ನಮ್ಮ ಮೇಲೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಇಂದಿನ ಪರಿಸರ ಮಾಲಿನ್ಯದ ಗೂಡಾಗಿದ್ದು , ನಮ್ಮ ಇರುವಿಕೆಗೆ ಅರ್ಥ ನೀಡಿದ ಪರಿಸರ ಮಾತೆಯನ್ನು ನಾವು , ನಮ್ಮ ಕಾರ್ಯಗಳಿಂದ ಕಲುಷಿತಗೊಳಿಸಿ, ಅದರ ದುಷ್ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಅಧಿಕ ಉಷ್ಣಾಂಶ, ಮಣ್ಣಿನ ಮಾಲಿನ್ಯ , ಅರಣ್ಯ ನಾಶ ಹೀಗೆ ಒಂದೇ, ಎರಡೇ ಪರಿಸರದಲ್ಲಿ ಇಂದು ಉಂಟಾಗಿರುವ ಏರುಪೇರುಗಳು. ಈ ಏರುಪೇರುಗಳಿಗೆ ಕಾರಣ, ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರದ ಮೇಲೆ ಮಾಡಿರುವ ದೌರ್ಜನ್ಯದ ಫಲವಾಗಿದ್ದು, ಅದರ ಪರಿಣಾಮವಾಗಿ ಹೃದಯ ಸಂಬಂಧಿ, ಉಸಿರಾಟ ಸಂಬಂಧಿ, ಅಪೌಷ್ಟಿಕತೆಯಂತಹ ಅನೇಕ ದುಷ್ಪರಿಣಾಮ ನಾವು ಎದುರಿಸುತ್ತಿದ್ದೇವೆ.
ಈ ಎಲ್ಲದಕ್ಕೂ ಕಾರಣ ಪರಿಸರದ ಬಗ್ಗೆ , ಅದರ ಪ್ರಾಮುಖ್ಯತೆ ಬಗ್ಗೆ ನಮಗೆ ಸರಿಯಾದ ಅರಿವು ಇಲ್ಲದಿರುವುದೇ ಆಗಿದೆ. ಆದ್ದರಿಂದಲೇ ನಮ್ಮೆಲ್ಲರಲ್ಲೂ ಜಾಗೃತಿ ಮೂಡಿಸಲು, ಪರಿಸರದ ಪರ ನಮ್ಮ ಕರ್ತವ್ಯ ಪಾಲಿಸಲು, ನಮ್ಮ ಉತ್ತಮ ಭವಿಷ್ಯಕ್ಕಾಗಿ, ನಮ್ಮ ಮುಂದಿನ ಪೀಳಿಗೆಯ ಉಜ್ವಲವಾದ ನಾಳೆಗಳಿಗಾಗಿ ನಾವು ಇಂದು ಇಂದಿನ ಮಕ್ಕಳಿಗೆ, ಯುವ ಜನರಿಗೆ ಪರಿಸರದ ಕಾಳಜಿ ಮೂಡಿಸಲು ಆಚರಿಸುವ ದಿನವೇ *ವಿಶ್ವ ಪರಿಸರ ದಿನ*. ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಜೂನ್ ಐದನ್ನು ಪರಿಸರ ದಿನವನ್ನಾಗಿ ಆಚರಿಸುವುದರಿಂದಲೇ ಇದು ವಿಶ್ವ ಪರಿಸರ ದಿನಾಚರಣೆ ಎನಿಸಿಕೊಂಡಿದೆ.
ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಅಡಿಯಿಡೋಣ
ಮನೆ ಮುಂದೆ ಕನಿಷ್ಠ ಒಂದು ಸಸಿ ನೆಟ್ಟು ಈ ದಿನದ ಮಹತ್ವ ಸಾರೋಣ….
ಸಂಗ್ರಹ
-ಪಿ.ಆರ್ . ನಾಯ್ಕ .ಹೊಳೆಗದ್ದೆ.
Be the first to comment