ವಚನ-ವಿಚಾರ ಶರಣ ಮೆರೆಮಿಂಡಯ್ಯ

ನೀರೊಳಗಣ ಕಿಚ್ಚಿಗೆ ನೀರೆ ತಾಯಿ.

ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ.

ಮರದೊಳಗಣ ಕಿಚ್ಚಿಗೆ ಮರನೆ ತಾಯಿ.

ಅವು ಹೊರಹೊಮ್ಮಿದಾಗ

ತಾಯ ತಿಂದು, ತಾವು ತಲೆದೋರುವಂತೆ,

ಕುರುಹಿಂದ ಅರಿವನರಿತು ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೆ, ಐಘಟದೂರ ರಾಮೇಶ್ವರಲಿಂಗ, ಅಂಗವ ಅರಿತು ನಿಂದ ನಿಲವು.

      – ಶರಣ ಮೆರೆಮಿಂಡಯ್ಯ

————————————————

       *ವಚನ ಅನುಸಂಧಾನ*

ಶರಣ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿ ಸುವ ವಚನಗಳನ್ನು ಕುರಿತಂತೆ ಚಿಂತನೆ ಯನ್ನು ಮಾಡುವ ಮೊದಲು ವಚನವನ್ನು ಲಕ್ಷ್ಯ ಗೊಟ್ಟು ಓದುವ ಮೂಲಕ ವಚನಾಧ್ಯಯನ ಮಾಡಬೇಕು. ತನ್ಮೂಲಕವಾಗಿ ವಚನದ ಒಳಹೊಕ್ಕು ದಕ್ಕುವ ತನಕ ಅನುಭವಿಸಿ, ಆಮೇಲೆ ವಚನದ ಒಳ ಹೊರಗನ್ನು ಪರಿಭಾವಿಸಿಕೊಂಡು ಅನುಭಾವ ಮಾಡಬೇಕು. ನಂತರದಲ್ಲಿ,

ದೊರಕೊಂಡ ಅನುಭಾವವನ್ನು ವಾಗ ರ್ಥದ ಸೂಕ್ತ ಪದ ಪುಂಜಗಳ ಸಾಂಗತ್ಯ ದಲ್ಲಿ ಅಭಿವ್ಯಕ್ತಿಯನ್ನು ಸಾಧಿಸಬೇಕು. ಈ ಪರಿಕ್ರಮದ ದಾರಿಯಲ್ಲಿ ಸಾಗುತ್ತಲೇ  ಪ್ರಸ್ತುತ ಮೇಲಿನ ವಚನದ ಚಿಂತನೆಯ ಮಾಡಿ ನೋಡೋಣ.

ನೀರೊಳಗಣ ಕಿಚ್ಚಿಗೆ ನೀರೆ ತಾಯಿ.

ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ.

ಮರದೊಳಗಣ ಕಿಚ್ಚಿಗೆ ಮರನೆ ತಾಯಿ.

ಇಂದು, ವಿಜ್ಞಾನವು ಜಲವಿದ್ಯುತ್ ಬಗೆಗೆ ಬಹಳಷ್ಟು ಮಾತನಾಡುತ್ತದೆ, ಆದರೆ ಎಂಟ್ನೂರು ವರ್ಷಗಳಷ್ಟು ಹಿಂದೆಯೇ ನಮ್ಮ ಶರಣರು ಈ ವಿಷಯದ ಕುರಿತು ಅರಿವು ಹೊಂದಿರುವ ಬಗ್ಗೆ ಹೆಮ್ಮೆ ಎನಿ ಸುತ್ತದೆ.ಇಲ್ಲಿ,ವಚನದ ಮೂರೂ ಸಾಲಿ ನಲ್ಲಿ ಬರುವ ನೀರು, ಕಲ್ಲು, ಮತ್ತು ಮರ ದ ಒಳಗಿನ ಕಿಚ್ಚಿಗೆ ಕ್ರಮವಾಗಿ ಬರುವ ಅವು ಅವುಗಳೇ ‘ತಾಯಿ’ ಎಂದು ಚಂದ ರೂಪಕ ಭಾಷೆಯಲ್ಲಿ ಹೇಳಿ, ತನ್ಮೂಲಕ ‘ತನು’ವಿನೊಳಗಿನ ‘ಮನ’ದ ಕಿಚ್ಚಿನ ಬಗ್ಗೆ ಹೇಳುವ ಪ್ರಸ್ತಾರ ಹಾಕುತ್ತಾರೆ. ವಚನದ ಮುಂದಿನ ಸಾಲಿನಲ್ಲಿ;

ಅವು ಹೊರಹೊಮ್ಮಿದಾಗ

ತಾಯ ತಿಂದು, ತಾವು ತಲೆದೋರುವಂತೆ,

ನೀರು, ಕಲ್ಲು, ಮರ ದಲ್ಲಿರುವ ‘ಕಿಚ್ಚು’ ಹೊರಹೊಮ್ಮಿದಾಗ, ಆ ‘ಕಿಚ್ಚು’ ತಾಯಿ ಯನ್ನೇ ತಿಂದು ತಲೆ ಎತ್ತುತ್ತದೆನ್ನುವಲ್ಲಿ, ಶರಣರ ಪರಿಕಲ್ಪನೆಯಲ್ಲಿರುವ ದೇವರ ಕುರುಹು ‘ಇಷ್ಟಲಿಂಗ’ ಕುರಿತು ಪರೋಕ್ಷ ವಾಗಿ ಗಮನ ಸೆಳೆಯುತ್ತಾರೆ. ಮುಂದೆ;

ಕುರುಹಿಂದ ಅರಿವನರಿತು

ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯ*,

 ಐಘಟದೂರ ರಾಮೇಶ್ವರಲಿಂಗ, ಅಂಗವ ಅರಿತು ನಿಂದ ನಿಲವು.

ಹೀಗೆ ಕುರುಹಿನ ನೆರೆವಿನಿಂದ ‘ಅರಿವು’ ಆಗಿ,ಆ ಅರಿವು ಕುರುಹನ್ನು ನಷ್ಟಮಾಡಿ

ನಿಂತಲ್ಲಿ; ಅದುವೇ ಐಘಟದೂರ ರಾಮೇಶ್ವರಲಿಂಗವು. ಅಷ್ಟೇ ಅಲ್ಲದೇ ಅದು ಅಂಗವೆಂದು ಅರಿತೂ ಆತ್ಮಲಿಂಗ ದ ಮೂಲಕ ತೋರುವ ನಿಲುವು ಎಂದು ಶರಣ ಮೆರೆಮಿಂಡಯ್ಯ ಸಾರುತ್ತಾರೆ.

————————————————-

ವಚನಕಾರನ ಸಂಕ್ಷಿಪ್ತ ಪರಿಚಯ

 ಈ ಶರಣ ಮೆರೆಮಿಂಡಯ್ಯ ತಮಿಳುನಾಡಿನ 63 ಪುರಾತನರಲ್ಲಿ ಒಬ್ಬರಾದ ‘ಮೆರೆಮಿಂಡ ದೇವ’ ನಿಂದ ಭಿನ್ನವಾದವರು. ಇವರು ಬಸವಾದಿಶರಣರ ಸಮಕಾಲೀನರು. ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೂ ಒಬ್ಬ ವಚನಕಾರ ಶರಣರು. “ಐಘಟದೂರ ರಾಮೇಶ್ವರ ಲಿಂಗ’ ಅಂಕಿತದಲ್ಲಿವರು ಬರೆದ ೧೧೦ ವಚನಗಳು ಲಭ್ಯವಾಗಿವೆ. ಇವುಗಳಲ್ಲಿ; ಅಷ್ಟಾವರಣ, ಲಿಂಗಾಂಗ ಸಾಮರಸ್ಯ ಈ ಮೊದಲಾದ ತಾತ್ವಿಕ ವಿಷಯ, ಸಾಮಾಜಿಕ ವಿಡಂಬನೆಗಳು ಸರಳ ಶೈಲಿಯಲ್ಲಿ ನಿರೂಪಿ ತವಾಗಿವೆ. ಇವರ ಕಾಯಕದ ಬಗ್ಗೆ ಮಾಹಿತಿ ಇಲ್ಲ. ಆದರೆ, ಯಾವುದೇ ಕಾಯಕವಿರಲಿ, ಅದನ್ನು ಮಾಡುವಾಗ ಹುಸಿಯಿಲ್ಲದಿರಬೇಕು, ಅದು ಶಿವನ ವರ, ಪಶುಪತಿಯ ವಾಸ ಸ್ಥಾನ, ಅದು ಪ್ರತ್ಯಕ್ಷ ಪರಮೇಶ್ವರ ಎನ್ನು ವ ಇವರು, ಕಾಯಕದ ಬಗ್ಗೆ ತುಂಬು ಗೌರವದಿಂದ ಮಾತನಾಡಿರು ವರು. ಭಕ್ತನ ಆರ್ತತೆ, ಹಾಗೂ ಸಾಧನೆಯ ಹಠಮಾರಿತನ ಇವರ ವಚನಗಳಲ್ಲಿ ಹೆಪ್ಪು ಗಟ್ಟಿದೆ

-ಅಳಗುಂಡಿ ಅಂದಾನಯ್ಯ

ಲೇಖಕರ ಪರಿಚಯ: ಲೇಖಕ ಅಳಗುಂಡಿ ಅಂದಾನಯ್ಯನವರು ಸರಕಾರಿ ಉದ್ಯೋಗದಲ್ಲಿದ್ದು ನಿವೃತ್ತರಾದವರು. ಇವರ ಬದುಕೇ ಒಂದು ರೀತಿಯ ಶರಣತ್ವದ್ದು. ಇವರು ಕವನ ಸಂಕಲನ, ವಿಚಾರ ಸಂಕಲನಗಳು ಪ್ರಕಟವಾಗಿದ್ದು ತಮ್ಮ ಬರಹಗಳ ಮೂಲಕ ನಾಡಿಗೆ ಪರಿಚಿತರಾದವರು. ಇವರು ಪರಿಚಯಸುವ ಶರಣ-ಶರಣೆಯರ ಹಾಗೂ  ಅವರ ವಚನ ವಿಚಾರಗಳನ್ನು ಇಲ್ಲಿ  ನೀಡಲಾಗುತ್ತಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಪ್ರಾಯೋಗಿಕ ಸಂಚಿಕೆಯಲ್ಲಿಯೇ ಸದೃಢ ಹೆಜ್ಜೆಯನ್ನು ಇಟ್ಟಿದ್ದೀರಿ.ಹಾರ್ದಿಕ ಶುಭಾಶಯಗಳು.🌹🙏

Leave a Reply

Your email address will not be published.


*