ದಿ. ಪಿ.ಎಸ್. ಕಾಮತ ಸ್ಮರರಣಾರ್ಥ ಚರ್ಚಾ ಸ್ಪರ್ಧೆಯ ಉದ್ಘಾಟನೆ

ವಿದ್ಯಾರ್ಥಿ- ಯುವಜನರಲ್ಲಿ ಹೊಸ ಆಲೋಚನೆಗಳ ತುಡಿತವಿರಬೇಕು- ಬಿ.ಎನ್. ವಾಸರೆ

ದಾಂಡೇಲಿ: ಜ್ಞಾನ,ವಿಜ್ಞಾನದ ದೃಷ್ಟಿಯಿಂದ ಇಂದು ವಿಶ್ವ ಕ್ಷಣಕ್ಷಣಕ್ಕೂ ಬೆಳೆಯುತ್ತಿದೆ. ವಿಶ್ವದಲ್ಲಾಗುವ ವಿದ್ಯಾಮಾನಗಳನ್ನು ನಿತ್ಯ ಅರಿತುಕೊಳ್ಳುವ ಜೊತೆಗೆ ಹೊಸ ಆಲೋಚನೆಗಳ ತುಡಿತ ವಿದ್ಯಾರ್ಥಿ- ಯುವಜನರಲ್ಲಿರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ನುಡಿದರು

ಅವರು ಕೆನರಾ ವೆಲ್ಫರ್ ಟ್ರಸ್ಟ್ ನ ಆಶ್ರಯದಲ್ಲಿ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 10 ನೇ ವರ್ಷದ ದಿ. ಪಿ.ಎಸ್. ಕಾಮತ ಸ್ಮರಣಾರ್ಥ ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.

ಚರ್ಚಾ ಸ್ಪರ್ಧೆ ಎಂದರೆ ಅದು  ಕೇವಲ  ಸೋಲು – ಗೆಲುವಿಗಷ್ಟೇ ಅಲ್ಲ. ಸ್ಪರ್ದೆ ವಿದ್ಯಾರ್ಥಿಗಳಲ್ಲಿ ಓದಿನ ಅರಿವನ್ನ ಹೆಚ್ಚಿಸುತ್ತದೆ.  ಬೌದ್ಧಿಕ ಶಕ್ತಿ ಮತ್ತು ಸಂವಹನ ಶಕ್ತಿಯನ್ನು ಬೆಳೆಸುತ್ತದೆ. ಚರ್ಚಾ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳನ್ನು ವಿದ್ಯಾರ್ಥಿ ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಕೂಡ ಕಟ್ಟಿಕೊಡುತ್ತದೆ. ಹಾಗಾಗಿ ಇಂದು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಸಂಗತಿಗಳನ್ನು ಕೂಡ ತಿಳಿದುಕೊಳ್ಳುತ್ತ ನಿತ್ಯ ಓದುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು ಎಂದರು.

ಕಾರವಾರದಲ್ಲಿ ಪಿ.ಎಸ್. ಕಾಮತರು ಮೊಟ್ಟ ಮೊದಲು ಕನ್ನಡದ ಚಳುವಳಿ ಮಾಡಿದವರು. ಅವರ ಮಗ ನ್ಯಾಯವಾದಿ ಎಸ್.ಪಿ. ಕಾಮತರು ದಿನಕರ ದೇಸಾಯಿಯವರು ಕಟ್ಥಿ ಬೆಳೆಸಿದ ಕೆನರಾ ವೆಲ್ಫರ್ ಟ್ರಸ್ಟನ್ನ  ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.  ಅವರ ಮಗ ದೇವದತ್ತ ಕಾಮತ್   ದೆಹಲಿಯಲ್ಲಿ ಸುಪ್ರೀಂ ಕೋರ್ಟ ನ್ಯಾಯವಾದಿಗಳಾಗಿದ್ದು, ಜಿಲ್ಲೆಯ ಹಲವು ಸಂಗತಿಗಳಿಗೆ ನ್ಯಾಯಕೊಡಿಸಿದ್ದಾರೆ. ಪ್ರತೀ ವರ್ಷ ಈ ಚರ್ಚಾ ಸ್ಪರ್ದೆ ಆಯೋಜಿಸಿ ತಮ್ಮ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ. ಇವರ ಕೊಡುಗೆ ಅಪಾರ ಎಂದರು.

ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಉಪನ್ಯಾಸಕ ಡಾ. ಪಿ. ವಿ. ಶಾನಭಾಗ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಕೂಡ ಆರೋಗ್ಯಕರವಾದ ಸ್ಪರ್ಧಾ ಮನೋಭಾವವಿರಬೇಕು. ಕೇವಲ ಚರ್ಚಾ ಸ್ಪರ್ಧೆಗಳಿಗಾಗಿ ಓದದೆ ಬದುಕಿನ ಜ್ಞಾನಾರ್ಜನೆಗಾಗಿಯೂ ಕೂಡ ಓದುವ ಹವ್ಯಾಸ  ಇಟ್ಟುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನತಾ ವಿದ್ಯಾಲಯದ ಪ್ರಾಚಾರ್ಯ ಎಂ. ಎಸ್. ಇಟಗಿ  ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಕೆನರಾ ವೆಲ್ಫರ್ ಟ್ರಸ್ಟ್  ಆಶ್ರಯದಲ್ಲಿ ದಿ. ಪಿ.ಎಸ್. ಕಾಮತ ಸ್ಮರಣಾರ್ಥ ಸುಪ್ರೀಂ ಕೋರ್ಟ ನ ನ್ಯಾಯವಾದಿ ದೇವದತ್ತ  ಕಾಮತರ ಸಹಕಾರದೊಂದಿಗೆ ಈ ಚರ್ಚಾ ಸ್ಪರ್ಧೆಯನ್ನು ಆಯೋಜಿತ್ತ ಬರಲಾಗಿದೆ. ಪ್ರಸ್ತುತ ಸಂಗತಿಗಳನ್ನೇ ವಿಷಯವನ್ನಾಗಿಟ್ಟು ಪ್ರತಿ ವರ್ಷ ಈ ಸ್ಪರ್ಧೆ ನಡೆಸುತ್ತಾ ಬರಲಾಗಿದ್ದು ವಿದ್ಯಾರ್ಥಿಗಳಲ್ಲಿ ಮಾತನಾಡುವ ಕೌಶಲ್ಯವನ್ನು ಬೆಳೆಸುವುದು ಮೂಲ ಉದ್ದೇಶವಾಗಿದೆ ಎಂದರು.

ವೇದಿಕೆಯಲ್ಲಿ ಬಂಗೂರ ನಗರ ಪದವಿ ಕಾಲೇಜಿನ ಉಪನ್ಯಾಸಕ ಡಾ. ಎಸ್. ಎಸ್. ಹಿರೇಮಠ್,  ನ್ಯಾಯವಾದಿ ನಾಗರತ್ನ ಹೆಗಡೆ,  ಜನತಾ ವಿದ್ಯಾಲಯ ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಎಂ. ಬಿ. ಅರವಳ್ಳಿ,  ಇ.ಎಂ.ಎಸ್. ನ ಮುಖ್ಯ ಮುಖ್ಯಾಧ್ಯಾಪಕಿ ಸಕ್ಕೂಬಾಯಿ ಉಪಸ್ಥಿತರಿದ್ದರು.

ಕಾಲೇಜಿನ ದ್ವಿತೀಯ ದರ್ಜೆ ಸಹಾಯಕಿ ಶೀತಲ್ ಸಾವಂತ್ ಪ್ರಾರ್ಥಿಸಿದರು. ಉಪನ್ಯಾಸಕ ಯು. ಆರ್. ಘೋರ್ಪಡೆ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ದೀಪಾ ಗಸ್ತಿ ವಂದಿಸಿದರು. ಉಪನ್ಯಾಸಕಿ ನಿರುಪಮಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಜಿ.ಎಸ್. ಹೆಗಡೆ ಮುಂತಾದವರು ಸಹಕರಿಸಿರು. ‘ರಾಷ್ಟ್ರೀಯ ಭಾವೈಖ್ಯತೆಗೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ’ ಎಂಬ ವಿಷಯದ ಮೇಲೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಹಳಿಯಾಳ, ದಾಂಡೇಲಿ, ಯಲ್ಲಾಪುರ ತಾಲೂಕುಗಳ ವಿವಿಧ ಕಾಲೇಜುಗಳ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*