ದಾಂಡೇಲಿ: ಉತ್ತರ ಕನ್ನಡ ಜಿಲ್ಲೆ ಮಹಾಕವಿ ಪಂಪನ ಆದಿಯಾಗಿ ಹಲವಾರು ದಿಗ್ಗಜ ಸಾಹಿತಿಗಳನ್ನು ಕಂಡಿದೆ. ವೈಶಿಷ್ಟ್ಯಪೂರ್ಣವಾದ ಬುಡಕಟ್ಟು ಸಂಸ್ಕೃತಿಯನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಶ್ರೀಮಂತವಾಗಿರುವ ಈ ಜಿಲ್ಲೆ ಸಾಹಿತ್ಯಿಕ, ಸಾಂಸ್ಕೃತಿಕ ಸಂಪತ್ತಿನ ಆಗರವೂ ಆಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ ನುಡಿದರು.
ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ದಾಂಡೇಲಿಯ ಬಂಗೂರನಗರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕಾಲೇಜು ಕನ್ನಡ ಸಂಘ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಬಂಗೂರನಗರ ಪದವಿ ಕಾಲೇಜಿನ ಗ್ರಂಥಾಲಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಹದಿಹರೆಯಕ್ಕೆ ಸಾಹಿತ್ಯ ಸುಧೆ ಹಾಗೂ ವಿದ್ಯಾರ್ಥಿಗಳ ಕವಿಗೋಷ್ಠಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬ ಮನುಷ್ಯ ಒಂದು ಉದಾತ್ತ ಧ್ಯೇಯವನ್ನು ಇಟ್ಟುಕೊಂಡು ಬದುಕಬೇಕು. ಅದೇ ಅವನನ್ನು ಮಹಾ ವ್ಯಕ್ತಿಯನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಎಲ್ಲಡೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ದೇಶವನ್ನು ಕಟ್ಟಿದ, ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡಲು ಹೋರಾಟ ಮಾಡಿದ, ಬಲಿದಾನಗೈದ ಮಹಾಪುರುಷರು ನಮಗೆ ಆದರ್ಶವಾಗಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾದದ್ದು. ಅಂಕೋಲೆಯನ್ನು ಕರ್ನಾಟಕದ ಬಾರ್ಡೋಲಿ ಎಂದೇ ಕರೆಯಲಾಗುತ್ತದೆ. ಅಲ್ಲಿಯ ಸ್ವಾತಂತ್ರ್ಯ ಹೋರಾಟಗಾರರು ಪಟ್ಟ ಕಷ್ಟಗಳ ಬಗ್ಗೆ ಇಂದಿನ ವಿದ್ಯಾರ್ಥಿ ಯುವಜನರು ತಿಳಿದುಕೊಳ್ಳಬೇಕು ಎಂದ ಬಿ. ವಿ. ವಸಂತಕುಮಾರ್ ಅವರು ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಬುಡಕಟ್ಟು ಸಂಸ್ಕೃತಿಯ ಕುರಿತಾಗಿ ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್. ಜಿ. ಹೆಗಡೆಯವರು ಶಾಲಾ ಕಾಲೇಜುಗಳ ಕೊಠಡಿಯೊಳಗಡೆ ಸಿಗುವ ಪಾಠವೊಂದೇ ಶಿಕ್ಷಣವಲ್ಲ. ಅದರಾಚೆ ಬದುಕನ್ನು ರೂಪಿಸುವಂತಹ ಹಲವಾರು ಜ್ಞಾನಗಳು, ಕಾರ್ಯಕ್ರಮಗಳು ನಡೆಯುತ್ತವೆ. ಅದರ ಭಾಗವಾಗಿಯೇ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸುವ ಕಾರಣಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನುಡಿದು ಅಂಥದೊಂದು ಕಾರ್ಯಕ್ರಮವನ್ನು ನೀಡಿದ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ. ವಿ. ವಸಂತಕುಮಾರವರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆಯವರು ಇಂದಿನ ವಿದ್ಯಾರ್ಥಿ ಯುವಜನರಲ್ಲಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವಂಥ ಹೆಚ್ಚೆಚ್ಚು ಕಾರ್ಯಕ್ರಮಗಳು ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾದುದು. ವಿದ್ಯಾರ್ಥಿಗಳು ಕೇವಲ ಕ್ರಿಕೆಟ್ ವೀಕ್ಷಣೆ, ಯೂಟ್ಯೂಬು, ಚಲನಚಿತ್ರ, ಫೇಸ್ಬುಕ್ಕು ಇವುಗಳಲ್ಲಿಯೇ ಕಾಲ ಕಳೆಯದೇ ದಿನಪತ್ರಿಕೆಗಳನ್ನು, ಸಾಹಿತ್ಯದ ಪುಸ್ತಕಗಳನ್ನು ಓದುವ ಮೂಲಕ ಸುತ್ತಲು ನಡೆಯುವ ಸಾಮಾಜಿಕ ಸಂಗತಿಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕು . ಸಾಹಿತ್ಯದ ಮೂಲಕ ಎಲ್ಲರನ್ನು ಬೆಸೆಯುವ, ಪ್ರೀತಿಯನ್ನು ಹಂಚುವ ಕೆಲಸವನ್ನು ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ದಾಂಡೇಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ. ಜಿ. ಗಿರಿರಾಜ ಮಾತನಾಡಿ ಉತ್ತರ ಕನ್ನಡ ಜಿಲ್ಲೆ ಬಹುಭಾಷೆ, ಬಹುಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆ. ಇಲ್ಲಿಯ ಭಾಷಾ ಸೊಗಡು ಅತ್ಯಂತ ವಿಶಿಷ್ಟವಾದುದು. ಸಾಹಿತ್ಯಕವಾದ, ಸಾಂಸ್ಕೃತಿಕವಾದ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆಯ ಸಹಕಾರ ಸದಾ ಇದೆ ಎಂದರು . ಶಿವಮೊಗ್ಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ. ಆರ್.. ಹೆಗಡೆಯವರು ಮಹಾಶ್ವೇತಾದೇವಿಯವರ ಕೃತಿ ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಕುರಿತು ಉಪನ್ಯಾಸ ನೀಡಿದರು . ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಜಿನದತ್ತ ಹಡಗಲಿ ಸಾಂದರ್ಭಿಕವಾಗಿ ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತರ ಕನ್ನಡದ ಸದಸ್ಯ ದತ್ತಗುರು ಹೆಗಡೆ , ಆಂತರಿಕ ಗುಣಮಟ್ಟ ಭರವಸೆ ಕೋಶದ ವಿನಯ ಎಸ್., ಬಂಗೂರನಗರ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಎಸ್. ದೊಡಮನಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಸಹನಾ ನಾಯ್ಕ ಪ್ರಾರ್ಥಿಸಿದರು. ಬಂಗೂರನಗರ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಎಸ್. ದೊಡಮನಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾಲೇಜು ಕನ್ನಡ ಸಂಘದ ಕಾರ್ಯದರ್ಶಿ, ಉಪನ್ಯಾಸಕಿ ಡಾ. ತೃಪ್ತಿ ನಾಯಕ ನಿರೂಪಿಸಿದರು. ಉಪನ್ಯಾಸಕ ವಿನಯ ಎಸ್. ವಂದಿಸಿದರು.
ಕವಿಗೋಷ್ಠಿ- ಸನ್ಮಾನ
ಕಾರ್ಯಕ್ರಮದ ಭಾಗವಾಗಿ ನಡೆದ ಕವಿಗೋಷ್ಠಿಯಲ್ಲಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಹತ್ತುಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿದರು . ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ. ವಿ .ವಸಂತಕುಮಾರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ, ದಾಂಡೇಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ. ಗಿರಿರಾಜ, ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ ಆರ್ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ವಿಡಿಯೋ ವೀಕ್ಷಿಸಿ…….
Be the first to comment