
ನನ್ನ ವೃತ್ತಿ ಬದುಕಿನ ಸೇವಾ ಅವಧಿಯಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ ಇದಾಗಿದೆ. ಊರಿನವರ ಶ್ರಮದಿಂದಾಗಿ ಮಕ್ಕಳ ಭವಿಷ್ಯತ್ತನ್ನು ರೂಪಿಸಲು ಅಂತರ್ಜಾಲ ಆಧಾರಿತ ಕಲಿಕೆಗೆ ನೀಡಿದ ಕೊಡುಗೆ ನೂರು ಕೋಟಿಗೂ ಮೀರಿದ ಸಾಧನೆ ಎಂದು ಉಪನಿರ್ದೇಶಕರಾದ ಹರೀಶ ಗಾಂವ್ಕರ ಹೇಳಿದರು.
ಇತ್ತೀಚೆಗೆ ಯಲಕೊಟ್ಟಿಗೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಹಿನ್ನೆಲೆಯಲ್ಲಿ ಅಂತರ್ಜಾಲ ಆಧಾರಿತ Teachmint ಆನ್ಲೈನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಶಾಲೆಯ ಪಾಲಕರ ಹೃದಯ ವೈಶಾಲ್ಯತೆ ನಿಜಕ್ಕೂ ಶ್ಲಾಘನೀಯ. ಜಗತ್ತಿನ ಶೈಕ್ಷಣಿಕ ಇತಿಹಾಸದ ದುರಂತಗಳಲ್ಲಿ ಒಂದಾದ ಕೊರನಾ ಕಾಲಘಟ್ಟದಲ್ಲಿ ಆನ್ಲೈನ್ ಮೂಲಕ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದರು.

ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಊರಿನವರು ಮಾಡಿದ ಇಂತಹ ಮಹತ್ಕಾರ್ಯಕ್ಕೆ ಇಲಾಖೆಯು ಸದಾ ಚಿರಋಣಿ ಎಂದರು. ಊರಿನ ಶ್ರಮಿಕ ವರ್ಗದ ಬೆವರಿನ ಫಲ ಇಲ್ಲಿದೆ ಎಂದರು. ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾಕ್ಟರ ಸವಿತಾ ನಾಯಕರವರು ಮಾತನಾಡಿ, ಇಂದು ಹೊನ್ನಾವರ ತಾಲೂಕಿನ ವಿಶೇಷ ದಿನ. ಇಲ್ಲಿಯ ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ತುಂಬಾ ಕಾಳಜಿ ಉಳ್ಳವರು. ಪಾಲಕರ ಸಹಕಾರದಿಂದ ಇಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯ. ಶಿಕ್ಷಣ ಇಲಾಖೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ ಇಬ್ಬರು ಶಿಕ್ಷಕರನ್ನು ಅಭಿನಂದಿಸಿದರು.
ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ ಮಾತನಾಡಿ ಕಿರಿಯ ಪ್ರಾಥಮಿಕ ಶಾಲೆ ಯಾದರೂ, ಹಿರಿಯ ಸಾಧನೆ ಮಾಡಿ ತಾಲೂಕಿನ ಕೀರ್ತಿ ಹೆಚ್ಚಿಸಿದೆ ಎಂದರು.

ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಇಂತಹ ಕಾರ್ಯಕ್ರಮ ನಡೆಯಲು ಸಾಧ್ಯ. ಮಕ್ಕಳ ಹಿತ ಕಾಪಾಡುವ ಪವಿತ್ರ ಕಾರ್ಯದಲ್ಲಿ ಇಲ್ಲಿಯ ಶಿಕ್ಷಕರು ತೊಡಗಿಸಿಕೊಂಡಿರುವುದು ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿ ಎಂದರು.
ಜಿಲ್ಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ ಮಾತನಾಡಿ, ಅಂತರ್ಜಾಲ ಆಧಾರಿತ ಕಲಿಕೆ ಅಂಗೈಯಲ್ಲಿ ಜಗತ್ತನ್ನು ಕಾಣುವಂತಾಗಿದೆ. ಮಕ್ಕಳ ಕಲಿಕಾ ಕನಸು ಸಾಕಾರವಾಗಿದೆ. ಪಾಲಕರ ಮತ್ತು ಶಿಕ್ಷಕರ ಶ್ರಮ ಸಾರ್ಥಕವಾಗಿದೆ. ಭವಿಷತ್ತಿನ ಮಕ್ಕಳಿಗೆ ಇದೊಂದು ವರವಾಗಿದೆ ಎಂದರು.
ಕಾರ್ಯಕ್ರಮದ ವಿಡಿಯೋ ತುಣುಕು ನೋಡಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾದೇವಿ ಉಪ್ಪಾರ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಯೋಜನೆ ಸಮನ್ವಯಾಧಿಕಾರಿ ಶ್ರೀಕಾಂತ ಹೆಗಡೆ, ಶಿಕ್ಷಣಾಧಿಕಾರಿ ನದಾಫ್, ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ಎಚ್. ನಾಯ್ಕ, ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥಗೌಡ, ಶಿಕ್ಷಣ ಸಂಯೋಜಕ ಪ್ರಮೋದ ನಾಯ್ಕ,ಬಿ.ಆರ್. ಪಿ. ಗಳಾದ ಸೀಮಾ ನಾಯಕ,ಸತೀಶ ನಾಯ್ಕ, ಗಜಾನನ ನಾಯ್ಕ, ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷೆ ಸಾಧನ ಬಗಿ೯, ತಾಲೂಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ,ಅಣ್ಣಪ್ಪ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಕೇಶವ ಗೌಡ, ಮಹೇಶ್ ಆಚಾರ್ಯ, ಸಿ.ಆರ್.ಪಿ ಗಳಾದ ಸುಭಾಷ ನಾಯ್ಕ,ತ್ರಿವೇಣಿ ಶಾಸ್ತ್ರಿ,ಶೈಲಾ ಚಿತ್ರಾಪುರ, ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಿಕ್ಷಕ ಸುಬ್ರಾಯ ಶಾನಭಾಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶೋಭಾ ವಂದಿಸಿದರು. ಮಕ್ಕಳು ಆನ್ಲೈನ್ ಮೂಲಕ ಪ್ರಾರ್ಥನೆ, ಸ್ವಾಗತ ಗೀತೆ ಹಾಡಿದರು.
–ಲೇಖನ : ಪಿ.ಆರ್. ನಾಯ್ಕ, ಹೊಳೆಗದ್ದೆ

Be the first to comment