ಉಪ್ಪರಗುಡಿಯ ಸೋಮಿದೇವಯ್ಯ : ಅಂದಾನಯ್ಯನವರ ವಚನ ವಿಚಾರ

ಮರನುರಿದು ಬೆಂದು ಕರಿಯಾದ ಮತ್ತೆ
ಉರಿಗೊಡಲಾದುದ ಕಂಡು,
ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ.
ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ,
ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ,

ಉರಿಯೊಳಗೊಡಗೂಡಿದ ತಿಲಸಾರ
ತುಪ್ಪ ಮರಳಿ ಅಳೆತಕ್ಕುಂಟೆ ?
ವಸ್ತುವಿನಲ್ಲಿ ಕರಿಗೊಂಡ ಚಿತ್ತ,
ತ್ರಿವಿಧಮಲಕ್ಕೆ ಹೊರಳಿ ಮರಳುವದೆ ?
ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.

**

-ಉಪ್ಪರಗುಡಿಯ ಸೋಮಿದೇವಯ್ಯ

ವಚನ- ಅನುಸಂಧಾನ

ವಚನಗಳು; ಶರಣರು ತಮ್ಮ ಅನುಭಾವಿಕ ಬದುಕನ್ನು ಈ ಮಣ್ಣಲ್ಲಿ ಬದುಕಿ, ಪಡೆದಂಥ ಅನುಭವದ ಅನನ್ಯ ಅನುಭೂತಿಯ ಸತ್ ಫಲ ಗಳಾಗಿದ್ದು, ಅವು ಲೌಕಿಕ ದೃಷ್ಟಾಂತ ಹಾಗೂ ರೂಪಕದ ಭಕ್ತಿಪರಿಭಾಷೆಯಲ್ಲಿ ಅರಳಿ, ನಳನಳಿ ಸಿ ಪರಿಮಳಿಸಿ ಬೆಳಗುವ, ಅನುಭಾವದ ಅಮೃತ ಫಲದ ನಿಷ್ಪತ್ತಿಗಳಾಗಿವೆ. ಇವುಗಳನ್ನು ಸಹಜದ ಓದಿನಲ್ಲಿ ಸರಿಯಾಗಿ ದಕ್ಕಿಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ. ಈ ಅರಿವನ್ನು ಎಚ್ಚರದಲ್ಲಿ
ಇಟ್ಟುಕೊಂಡು; ಇಲ್ಲಿ ಉಪ್ಪರಗುಡಿಯ ಸೋಮಿ ದೇವಯ್ಯ ಶರಣರ ಪ್ರಸ್ತುತ ವಚನದ ಅನುಸಂ ಧಾನವನ್ನು ಮಾಡಿ ನೋಡೋಣ.

ಮರನುರಿದು ಬೆಂದು ಕರಿಯಾದ ಮತ್ತೆ
ಉರಿಗೊಡಲಾದುದ ಕಂಡು,
ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ.
ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ,
ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ,

ಒಂದು ಮರ ಬೆಂಕಿ ಬಿದ್ದು ಉರಿದು ಇದ್ದಿಲು ಆದ ಮೇಲೆಯೂ ಆ ಇದ್ದಿಲು ಮತ್ತೊಂದು ಸಾರೆಗೂ ಉರಿಗೆ ಒಡಲಾಗಿ ಉರಿಯಬಲ್ಲದು. ಈ ದೃಶ್ಯವ ನ್ನು ಕಂಡಾಗ, ಪರಾತ್ಪರದಲ್ಲಿರುವಂಥಾ ಪರಮನ ಆತ್ಮವೂ ಸಹಿತವಾಗಿ ಮತ್ತೊಂದು ಸಾರಿ ಭವಕ್ಕೆ ಬರಬಹುದೆನ್ನುವುದಕ್ಕೆ ಇದೊಂದು ದೃಷ್ಟಾಂತವು ಆದರೆ ಇದ್ದಿಲು ಉರಿಯಲ್ಲಿ ಬೆಂದು ಭಸ್ಮವಾದ ಮೇಲೆ ಮತ್ತೆ ಉರಿಗೆ ಒಡಲಾಗದು. ಅಂತೆಯೇ ಭವಕ್ಕೆ ಬಂದ ಭಕ್ತನೆಂಬ ಪರಮಾತ್ಮನ ಮರದ ಆತ್ಮ (ಇದ್ದಿಲು) ಅಷ್ಟಾವರಣದ ಅಗ್ಗಿಷ್ಟಿಕೆಯಲ್ಲಿ ಬೆಂದು ಬೂದಿ ಆದಮೇಲೆ ಪುನಃ ಭವಕ್ಕೆ ಹುಟ್ಟಿ ಬರಲಾರನು. ಶರಣರ ‘ಇದೇ ಜನ್ಮ ಕಡೆ’ ಎಂಬ ತತ್ವವನ್ನು ಇಲ್ಲಿ ಪ್ರತಿಪಾದಿಸಲಾಗಿದೆ ಎನಿಸುತ್ತದೆ.

ಉರಿಯೊಳಗೊಡಗೂಡಿದ ತಿಲಸಾರ
ತುಪ್ಪ ಮರಳಿ ಅಳೆತಕ್ಕುಂಟೆ ?
ವಸ್ತುವಿನಲ್ಲಿ ಕರಿಗೊಂಡ ಚಿತ್ತ,
ತ್ರಿವಿಧಮಲಕ್ಕೆ ಹೊರಳಿ ಮರಳುವದೆ ?
ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.

ಉರಿಯಲ್ಲಿ ಸೇರಿ ಉರಿದುಹೋದಂಥ ತಿಲಸಾರ (ಎಣ್ಣೆಕಾಳು) ಮತ್ತು ತುಪ್ಪ ಇವು ಮರಳಿ ಅಳತೆಗೆ ಸಿಗಲಾರವು. ಅದರಂತೆಯೇ ವಸ್ತುವಿನಲ್ಲಿ ಕರಿ ಗೊಂಡ ಚಿತ್ತ, ಎಂದರೆ ಚಿನ್ಮಯನಲ್ಲಿ ಚಿತ್ತ ಸೇರಿ ಕರಿಗೊಂಡ ಮೇಲೆ ಮರಳಿ ತ್ರಿವಿಧಮಲಗಳಾದ; (ಆಣವ, ಮಾಯಾ, ಕಾರಣ)ಕ್ಕೆ ಬರಲಾರದು.ಈ ಗುಣವು ನಡೆ ನುಡಿ ಸಿದ್ಧಾಂತವಾದ ಶರಣನ ಸ್ಥಿತಿ

ಹಾಗೂ ಗಾರುಡೇಶ್ವರಲಿಂಗವನ್ನು ಕೂಡಿದವನ ಕೂಟ ಎಂದು ಪ್ರಸ್ತುತ ವಚನದ ವಚನಕಾರರಾ ದ ಉಪ್ಪರಗುಡಿಯ ಸೋಮಿದೇವಯ್ಯ ಶರಣ ಈ ವಚನದ ಮೂಲಕ ಶರಣರಿಗೆ ಮತ್ತೊಂದು ಸಾರೆ ಹುಟ್ಟು ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸಂಕ್ಷಿಪ್ತ ಪರಿಚಯ

ಸೋಮಿದೇವಯ್ಯ ೧೨ನೆಯ ಶತಮಾನದ ಶರಣರು. ಅನುಭವ ಮಂಟಪದ ೭೭೦ ಅಮರ ಗಣಂಗಳ ಪೈಕಿ ಒಬ್ಬ ವಚನಕಾರ ಶರಣರು. “ಗಾರುಡೇಶ್ವರ ಲಿಂಗ’ ಈ ಅಂಕಿತದಲ್ಲಿ ಇವರು ರಚಿಸಿದ ೧೧ ವಚನ ದೊರೆತಿವೆ. ಅಲ್ಲಿ; ಕಾಯ-ಅತ್ಮಗಳ ಸಂಬಂಧ, ಪ್ರಸಾದ ಮಹತ್ವ, ಕ್ರಿಯಾ-ಜ್ಞಾನ ಸಾಮರಸ್ಯ ಇಂಥ ವಿಷಯಗಳು ಅಭಿವ್ಯಕ್ತಿ ಗೊಂಡಿವೆ.ಇವರು ಒಳ್ಳೆಯ ಅನುಭಾ ವಿಯಾಗಿದ್ದು, ತಮ್ಮ ವಚನಗಳಲ್ಲಿ ಅನುಭಾವಿಕ ಆಲೋಚನೆಗಳನ್ನು ಅತ್ಯಂತ ಪರಿಣಾಮಕಾರಿ ಯಾದ ಉಪಮೆ, ದೃಷ್ಟಾಂತಗಳ ಮೂಲಕವಾಗಿ ತಿಳಿಯ ಪಡಿಸುವರು. ಕಾಯಕ ಮೊದಲ್ಗೊಂಡು ಇವರ ಬದುಕಿನ ಬಗ್ಗೆ ಯಾವುದೇ ರೀತಿ ಮಾಹಿತಿ ಲಭ್ಯವಾಗಿಲ್ಲ.

-ಅಳಗುಂಡಿ ಅಂದಾನಯ್ಯ

– ಅಳಗುಂಡಿ ಅಂದಾನಯ್ಯನವರು ಹಿರಿಯ ಸಾಹಿತಿಗಳು. ಶರಣ ಚಿಂತಕರು. ಪ್ರಬುದ್ದ ವಾಗ್ಮಿಗಳು. ಇವರ ಹಲವು ಕೃತಿಗಳು ಸಾಹಿತ್ಯ ಲೋಕದಲ್ಲಿ ಸಮರ್ಣೆಪಗೊಂಎಡಿವೆ. ಬದುಕಿನುದ್ದಕ್ಕೂ ಶರಣ ಶರಣೆಯರ ಜೀವನಾದರ್ಶಗಳನ್ನೇ ಪಾಲಿಸಿಕೊಂಡು ಬಂದಿರುವ ಇವರು ಮಾಡುತ್ತಿರುವ ವಚನಕಾರರ ಪರಿಚಯ ನಿಜಕ್ಕೂ ವಚನಸಾಹಿತ್ಯಕ್ಕೆ ಬಲು ದೊಡ್ಡ ಕೊಡುಗೆಯಾಗಿದೆ.
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*