ಹೀಗಾಗಬಾರದಿತ್ತು…

ಇಂದು…..

ಶೃಂಗರಿಸಿದ ನಿನ್ನ

ಗುಡಿಯ ಗಡಿಯೊಳಗಿನ ಬಟ್ಟೆಯೊಳು

ಭಾಜಾ ಭಜಂತ್ರಿಗೆ ಜೀವ ನೀಡಿ

ದೊಂದಿಯ ಬೆಳಕಿನಲಿ ಧ್ವಜವಿಡಿದು

ಮಡಿ ಮೈಲಿಗೆಯಲಿ ಬೆನ್ನು ಬಾಗಿಸಿ

ಡೋಲು ಢಮರುಗ ಢಂಕಣವ ಬಡಿದು

ಢಾಳಾಗಿ ಮೆರೆಸಿ ದುಂಡು ಮಲ್ಲಿಗೆ ಮೇಳೈಸಿ

ಕಟ್ಟೆಯೊಳು  ಹೊಸ ಬಟ್ಟೆ ಹಾಸಿ ಎತ್ತಿ  ಆರತಿ

ರಥಾರೂಢನನ್ನಾಗಿಸಿ ನಿನ್ನ ಮಹಾಲಿಂಗ….

ಎಳೆಯಬೇಕಾಗಿತ್ತು ನಾವು

ಹಿಡಿದ ಹಗ್ಗದ ‘ ಕೈ’ ಕೆಂಪಾಗುವ ತನಕ!

ಆದರೇನಾ ಮಾಡುವುದು ಲಯದೊಡೆಯ

ನಮ್ಮ ತಲೆಯೇ ಕೆಂಪಾಗಿದೆಯಲ್ಲ ಈ

ಬಂದು ತೂಗುವ ವೈರಸಿನೆದುರು ದುಂಡಾಕೃತಿಯಲಿ

ಹಾಗಾಗಿ……

‘ಕೈ ‘ಬಿಟ್ಟಿದ್ದೇವೆ ನಿನ್ನ ಈ ಬಾರಿ

ನಾವಾರು ಬಿಳಿಯ ಚಾದರವ ಹೊದ್ದು

ಕಪ್ಪಾಗಬಾರದೆಂದು ಸುಟ್ಟು ಕರಕಲಾಗಿ

ಮನೆಯೊಳಗುಳಿದು ಬರಿಯ ಬಿಳಿಯ

ಗೋಡೆಯ ನೋಡಿ ಬಾಡುತ

” ಗೋವಿಂದನೇ ಕೋವಿಂದ್ (ಡ್)” ಎಂದು

ನಾಮವ ಪಠಿಸುತಲಿ 19 ಬಾರಿ

20ರಲಿ “ಕುಚ್ ಕರೋನಾ” ಎಂದು

ಹಾಡಿ ಬೇಡುತ ಅನವರತ…!

                           -ಕಲ್ಲಚ್ಚು ಮಹೇಶ ಆರ್. ನಾಯಕ್ ಮಂಗಳೂರು

ಲೇಖಕರ ಪರಿಚಯ:  ಕವಿ ಕಲ್ಲಚ್ಚು ಮಹೇಶ ನಾಯಕರವರು ಮಂಗಳೂರಿನವರು. ಕಲ್ಲಚ್ಚು ಪ್ರಕಾಶನದ ಮೂಲಕ ಹಲವಾರು ಕೃತಿಗಳನ್ನು ಪ್ರಕಟಿಸುವ ಜೊತೆಗೆ ಹಲವಾರು ತಮ್ಮ ಕವನ ಸಂಕಲನ, ಪ್ರಬಂಧ ಬರಹಗಳನ್ನೂ ನೀಡಿ ನಾಡಿನ ಸಾರಸ್ವತ ಲೋಕಕ್ಕೆ ಪರಿಚಿತರಾದವರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*