ಸಾಂಸ್ಕೃತಿಕ ಸಮೃದ್ಧಿಯೇ ನಾಡಿನ ನಿಜವಾದ ಅಭಿವೃದ್ಧಿ- ವಾಸರೆ ಅಭಿಮತ
ಹೊನ್ನಾವರ: ಒಂದು ನಾಡಿನ ಅಭಿವೃದ್ಧಿಯನ್ನು ಕೇವಲ ರಸ್ತೆ ಗಟಾರ, ಕಟ್ಟಡಗಳಿಂದ ಮಾತ್ರ ಅಳೆಯುವಂತದ್ದಲ್ಲ. ಸಾಂಸ್ಕೃತಿಕವಾಗಿ ನಾಡು ಸಮೃದ್ಧವಾಗಿದೆ ಎಂದರೆ ಅದು ಆ ಪ್ರದೇಶದ ನಿಜವಾದ ಅಭಿವೃದ್ಧಿಯ ಪರಿಪೂರ್ಣತೆಯಾಗಿರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ನುಡಿದರು.
ಅವರು ಹೊನ್ನಾವರದ ಗುಣಮಂತೆಯಲ್ಲಿ ಕೆರೆಮನೆ ಶಂಭು ಹೆಗಡೆಯವರ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೇಯ ದಿನದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಭಿವೃದ್ಧಿಯನ್ನು ಕೇವಲ ಭೌತಿಕವಾಗಿ ನೋಡಿದರೆ ಸಾಲದು. ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಜ್ಞೆ ಕೂಡ ನಿಜವಾದ ಅಭಿವೃದ್ಧಿಯ ಮಾನದಂಡವಾಗಿರುತ್ತದೆ ಎಂದರು.
ಕನ್ನಡವನ್ನೇ ಪರಿಪೂರ್ಣವಾಗಿ, ಪರಿಶುದ್ಧವಾಗಿ ಬಳಸುವ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡಿಕೊಂಡಿರುವ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ. ಇಂತಹ ಯಕ್ಷಗಾನದ ವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಅಧ್ಯಯನ ಕೇಂದ್ರದ ರೂಪದಲ್ಲಿ ಬೆಳೆಸುತ್ತಿರುವವರು ಕೆರೆಮನೆ ಕುಟುಂಬದವರು. ಪ್ರತಿ ವರ್ಷ ರಾಷ್ಟ್ರೀಯ ನಾಟ್ಯೋತ್ಸವವನ್ನು ಮಾಡುವ ಮೂಲಕ ಯಕ್ಷಗಾನವನ್ನು ಬೆಳೆಸುವ, ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಾಲ್ಕು ತಲೆಮಾರುಗಳಿಂದ ಕೆರೆಮನೆ ಕುಟುಂಬ ಯಕ್ಷಗಾನಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾದದ್ದು.
ಹಿಂದೆ ಕವಿ ಕಲಾವಿದರಿಗೆ ರಾಜಾಶ್ರಯವಿತ್ತು. ಆದರೆ ಇಂದು ಪ್ರಜಾಪ್ರಭುತ್ವದಲ್ಲಿ ಆಳುವವರು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕಾದ ಅಗತ್ಯತೆಯಿದೆ. ಯಕ್ಷಗಾನ ಮೇಳಗಳು ದಕ್ಷಿಣ ಕನ್ನಡದಲ್ಲಿ ಹೆಚ್ಚಿಗೆ ಇದ್ದರೂ, ಉತ್ತರ ಕನ್ನಡದಲ್ಲಿ ಯಕ್ಷಗಾನ ಕಲಾವಿದರು ಹೆಚ್ಚಿದ್ದಾರೆ. ದಕ್ಷಿಣ ಕನ್ನಡದ ಎಲ್ಲಾ ಮೇಳಗಳಲ್ಲಿ ಉತ್ತರ ಕನ್ನಡದ ಕಲಾವಿದರು ಇರುತ್ತಾರೆ. ಇಂತಹ ಯಕ್ಷಗಾನ ಪ್ರಭುದ್ದರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ ಕೂಡ ಯಕ್ಷಗಾನ ಅಕಾಡೆಮಿಯಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇರುವುದು, ಈ ವರ್ಷದ ಅಕಾಡೆಮಿಯಲ್ಲಿ ಒಂದೇ ಒಂದು ಸದಸ್ಯತ್ವತ್ವವನ್ನೂ ಉತ್ತರ ಕನ್ನಡ ಜಿಲ್ಲೆಗೆ ನೀಡದೇ ಇರುವುದು ಬೇಸರವನ್ನ ತಂದಿದೆ. ನಮ್ಮ ಜಿಲ್ಲೆಯ ಯಕ್ಷಗಾನ ಕಲಾವಿದರು, ಜನಪದ, ರಂಗಭೂಮಿ ಸೇರಿದಂತೆ ವಿವಿಧ ಕಲೆ ಮತ್ತು ಕಲಾವಿದರನ್ನು ಉಳಿಸುವ ನಿಟ್ಟಿನಲ್ಲಿ ಒಂದು ಸಾಂಸ್ಕೃತಿಕ ಚಳುವಳಿಯ ಅಗತ್ಯತೆಯಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಸಿದ್ದಾಪುರದ ಟಿ.ಎಂ. ಎಸ್. ನ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ್ ಅವರು ಕೆರೆಮನೆ ಕುಟುಂಬದ ಯಕ್ಷಗಾನ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಕೆರೆಮನೆ ಕುಟುಂಬದ ಮೂವರು ಯಕ್ಷಗಾನ ಕಲಾವಿದರು ರಾಷ್ಟ್ರ ಪ್ರಶಸ್ತಿ ಪಡೆದಿರುವುದು ಜಿಲ್ಲೆಯ ಹೆಮ್ಮೆ ಎಂದರು. ವಿಮರ್ಶಕ ಮೈಸೂರಿನ ಗ.ನಾ. ಭಟ್ಟ ಕೆರೆಮನೆ ಕುಟುಂಬ ಮೂರು ತಲೆ ಮಾರುಗಳಿಂದ ತಮ್ಮದೇ ಆದ ವೈಶಿಷ್ಟ ಪೂರ್ಣತೆಯ ಸೊಬಗನ್ನ ನೀಡಿದ್ದರ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಾವಂತವಾಡಿಯ ಕಲಾತಜ್ಞ ವಿಜಯ ಪಾತ್ರೇಕರ್, ಬೆಂಗಳೂರಿನ ಶಿಲ್ಪಿಗಳಾದ ಸೂರಾಲು ವೆಂಕಟರಮಣ ಭಟ್ಟ, ಮತ್ತು ರತ್ನ ಟಿ. ಎಸ್. ಶಿರಸಿಯ ಪರಿಸರ ತಜ್ಞ ಶಿವಾನಂದ ಕಳವೆ, ಇವರುಗಳನ್ನು ಸನ್ಮಾನಿಸಿ ಗೌರವಹಿಸಿದರು. ಸನ್ಮಾನಿತರು ಅಭಿನಂದಿಸಿ ಮಾತನಾಡಿದರು.
ಇಡುಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿಯ ನಿರ್ದೇಶಕರು ಹಾಗೂ ಯಕ್ಷಗಾನ ಕಲಾವಿದರಾದ ಕೆರೆಮನೆ ಶಿವಾನಂದ ಹೆಗಡೆ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ವಂದಿಸಿದರು. ಸುಧೀಶ ನಾಯ್ಕ್, ಹೊಳೆಗದ್ದೆ ಹಾಗೂ ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು.
ನಂತರ ಕುಚಿಪುಡಿ ನೃತ್ಯ, ಸುಗಮ ಸಂಗೀತ, ಒಡಿಸ್ಸಾ ನೃತ್ಯ, ಕಾರ್ಯಕ್ರಮಗಳು ನಡೆದವು.
Be the first to comment