ವಿಷ್ಣು ನಾಯ್ಕರ ಕಾವ್ಯ ಸಾಮಾಜಿಕ ಬದುಕಿಗೆ ಹಿಡಿದ ಕೈಗನ್ನಡಿ – ಪಾಲ್ಗುಣ ಗೌಡ

ಪರಿಮಳದಂಗಳದಲ್ಲಿ ನಡೆದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಸದಾ ಚಲನಶೀಲವಾಗಿ ನಿರಂತರತೆಯ ಮೂಲಕ ಕಾವ್ಯ ಕಟ್ಟಿಕೊಡುವಲ್ಲಿ ನಾಡಿಗೆ ಮಾದರಿಯಾದದ್ದು. ವಿಷ್ಣು ನಾಯ್ಕ ರವರ ಸಮಗ್ರ ಕಾವ್ಯ ಅವರ ಸಾಮಾಜಿಕ ಬದುಕಿನ ಅನುಭವದ ಸಮಗ್ರ ಚಿತ್ರಣ ಕಟ್ಟಿಕೊಡುವಲ್ಲಿ ಸಾರ್ಥಕವಾಗಿದೆ ಎಂದು ಸಾಹಿತಿ ಪಾಲ್ಗುಣ ಗೌಡ ಹೇಳಿದರು.

ಇತ್ತೀಚೆಗೆ ಅಂಕೋಲಾ ಅಂಬಾರಕೊಡ್ಲದ ಪರಿಮಳದಂಗಳದಲ್ಲಿ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ವಿಷ್ಣು ನಾಯ್ಕ ಸಮಗ್ರ ಕಾವ್ಯ ಭಾಗ-2 ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ವಿಷ್ಣು ನಾಯ್ಕರು ಓರ್ವ ಕವಿಯಾಗಿರುವುದರಿಂದ ಇಂತಹ ಬೃಹತ್ ಕೃತಿ ರಚಿಸಲು ಸಾಧ್ಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುವ ಕೆಲಸಕ್ಕಿಂತಲೂ ಮಿಗಿಲಾಗಿ ಈ ಪರಿಮಳದಂಗಳದಲ್ಲಿ ಮಾಡಿದ ಸಾಹಿತ್ಯಕ ಕಾರ್ಯಕ್ರಮ ನಾಡಿಗೆ ಮಾದರಿಯಾದದ್ದು ಎಂದರು. ವಿಷ್ಣು ನಾಯ್ಕರ ಸಮಗ್ರ ಕಾವ್ಯ ಹಲವು ಮುಖಗಳಲ್ಲಿ ಪ್ರಕಟಗೊಂಡು ಅವರ ಕಾವ್ಯ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ಮಾತನಾಡಿ, ವಿಷ್ಣು ನಾಯ್ಕರ ಕಾವ್ಯ ಶಕ್ತಿ ಅಪಾರವಾದದ್ದು. ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿ ಎಲ್ಲ ಬರಹಗಳಲ್ಲಿ ಕಾವ್ಯದೃಷ್ಟಿ ಇದೆ.ಅವರೊಬ್ಬ ನಾಟಕ ಕಲಾವಿದರಾಗಿಯೂ, ನಿರ್ದೇಶಕರಾಗಿಯೂ ಬದುಕಿನ ಅನುಭವದೊಂದಿಗೆ ನಿಕಟ ಸಂಪರ್ಕ ಹೊಂದಿದ ವಿಶಿಷ್ಟ ವ್ಯಕ್ತಿತ್ವ ಅವರದ್ದಾಗಿದೆ ಎಂದರು. ನಾಟಕಕಾರರಾಗಿ, ನಿರ್ದೇಶಕರಾಗಿ ಕಾವ್ಯವನ್ನು ಕಟ್ಟಿ ಕುಣಿಸಿದ ಅದ್ಭುತ ಕಲಾವಿದರು ಎಂದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ಶಾಂತರಾಮ ನಾಯಕ ಮಾತನಾಡಿ, ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ಸಂಪತ್ತನ್ನು ಹೆಚ್ಚಿಸಿ ಹುಟ್ಟಿದ ನೆಲ ಅಂಬಾರಕೊಡ್ಲನ್ನೆ ತನ್ನೆಲ್ಲ ಚಟುವಟಿಕೆಗಳ ಕೇಂದ್ರ ಬಿಂದುವನ್ನಾಗಿ ಮಾಡಿಕೊಂಡು ಅಂಬರಕ್ಕೆರಿಸಿ ನಾಡಿನುದ್ದಗಲಕ್ಕೂ ಅದರ ವರ್ತುಲವನ್ನು ವಿಸ್ತರಿಸಿದ ಅಪರೂಪದ ಸಾಧಕರು. ತಮ್ಮ ಕಾವ್ಯದ ಮೂಲಕ ವಿಶ್ವದರ್ಶನ ಮಾಡಿದ ಶ್ರೇಷ್ಠ ಕವಿಯಾಗಿ ಕಾವ್ಯ ಲೋಕವನ್ನು ಸೃಷ್ಟಿಸಿದವರು.ಅವರ ಕಾವ್ಯವನ್ನು ಮಗು ಪರೀಕ್ಷೆ ತಯಾರಿ ನಡೆಸುವ ರೀತಿಯಲ್ಲಿ ಓದಿದ ನನಗೆ ಅವರ ಕಾವ್ಯ ಆತ್ಮ ತೃಪ್ತಿ ನೀಡಿದೆ. ರಾಘವೇಂದ್ರ ಪ್ರಕಾಶನದ ಮೂಲಕ ಹಲವಾರು ಕವಿಗಳನ್ನು ಸೃಷ್ಟಿಸಿ ಕಾವ್ಯದ ರುಚಿ ಉಣಿಸಿ ಮಾದರಿಯಾಗಿದ್ದಾರೆ. ಮನುಷ್ಯ ಜನ್ಮದ ಸಂಪೂರ್ಣ ಸದ್ಬಳಕೆ ಅವರ ನಂಬಿಕೆ ಮತ್ತು ನಿಲುವುಗಳಾಗಿದ್ದವು ಎಂದರು.

ನಾಮಾಂಕಿತ ವಿಮರ್ಶಕ,ಸಾಹಿತಿ ಡಾ. ಎಂ.ಜಿ.ಹೆಗಡೆಯವರು ಮಾತನಾಡಿ, ಈ ಜಿಲ್ಲೆಯಲ್ಲಿ ಸಾಹಿತ್ಯದ ಬೆಳೆ ಬೆಳೆಯುವುದಕ್ಕೆ ಅವಕಾಶ ಮಾಡಿಕೊಟ್ಟ ವಿಷ್ಣು ನಾಯ್ಕರವರ ಸಾಧನೆ ನಾಡಿಗೆ ಮಾದರಿಯಾದದ್ದು. ಅವರ ಪಯಣ ಯಾವತ್ತು ಒಂಟಿಯಾಗಿರಲಿಲ್ಲ. ಖಚಿತ ಗುರಿಯೊಂದಿಗೆ ಸಂಗಾತಿ ಮೆರವಣಿಗೆ ಮೂಲಕ ಹಲವರ ಸಾಹಿತ್ಯ ಕೃಷಿಗೆ ಪ್ರೇರಣೆಯಾದವರು. ಪರಿಮಳದಂಗಳದಲ್ಲಿ ಎಷ್ಟೆಲ್ಲಾ ಹಿರಿ-ಕಿರಿಯ ಸಾಹಿತಿಗಳು ಸಂಭ್ರಮಿಸಲು ಎಲ್ಲರನ್ನು ಒಳಗೊಳ್ಳುತ್ತ ಇಡೀ ಸಮುದಾಯವನ್ನು ಮುನ್ನಡೆಸಿದ ವ್ಯಕ್ತಿ ಇನ್ನೊಬ್ಬರಿಲ್ಲ ಎಂದರು.ನಾಡಿನ ಬರವಣಿಗೆ ಸಾಹಿತ್ಯ ಇತಿಹಾಸದಲ್ಲಿ ಚಾರಿತ್ರಿಕ ದಾಖಲೆ ನಿರ್ಮಿಸಿದ ವಿಷ್ಣು ನಾಯ್ಕರವರ ಬದುಕಿನ ಕ್ರಮವೇ ಕಾವ್ಯ. ರಾಘವೇಂದ್ರ ಪ್ರಕಾಶನದಲ್ಲಿ ಪ್ರಕಟವಾದ ಒಂದೊಂದು ಕೃತಿಗಳು ಬರೆಯುವವರ ಉತ್ಪಾದಕತೆ ಹೆಚ್ಚಿಸಿದಂತೆ. ಇಂತಹ ವೈಶಿಷ್ಟ ಪೂರ್ಣವಾದ ಸಾಹಿತ್ಯ ಸಂಘಟನೆಯ ಬಹುಮುಖ ವ್ಯಕ್ತಿತ್ವ ಹೊಂದಿದ ವಿಷ್ಣು ನಾಯ್ಕರವರು ಕನ್ನಡ ಸಾರಸ್ವತ ಲೋಕದ ಅದ್ವೀತೆಯ ಸಾಧಕರು ಎಂದರು.

ಪ್ರತಿಷ್ಠಾನದ ಕೋಶಾಧಿಕಾರಿ ಡಾ. ಎಸ್. ವಿ. ವಸ್ತ್ರದ ಮಾತನಾಡಿ, ವಿಷ್ಣು ನಾಯ್ಕರು ಕಾವ್ಯ ಮಾರ್ಗದಲ್ಲಿ ಹೆದ್ದಾರಿಯನ್ನೇ ನಿರ್ಮಿಸಿ ಕಾವ್ಯದ ಧ್ವನಿಯನ್ನು ಗಟ್ಟಿಗೊಳಿಸಿದರು. ಬಹಳ ಆಪ್ತ ಸಂಗತಿಗಳನ್ನು ಕೂಡ ಜನಮಾನಸದಲ್ಲಿ ಶಾಶ್ವತವಾಗಿ ನಿಲ್ಲುವ ಸಾಹಿತ್ಯ ಕೃಷಿ ವಿಷ್ಣು ನಾಯ್ಕರಿಂದ ಆಗಿದೆ ಎಂದರು. ಅವರ ಧ್ವನಿ ಪೂರ್ಣ ಕಾವ್ಯದ ಗಟ್ಟಿತನ ಕಾವ್ಯಾಶಕ್ತರಿಗೆ ದಾರಿದೀಪವಿದ್ದಂತೆ ಎಂದರು. ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ರಾಮಕೃಷ್ಣ ಗುಂದಿ ಮಾತನಾಡಿ ತಳ ಸಂಸ್ಕೃತಿಯಿಂದ ಬಂದ ವಿಷ್ಣು ನಾಯ್ಕರು ಕಾವ್ಯದ ಮೂಲಕ, ತಮ್ಮ ತತ್ವ ಸಿದ್ಧಾಂತಗಳ ಮೂಲಕ ನೋವು ನಲಿವುಗಳಿಗೆ ಉತ್ತರಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಸಾಹಿತಿ ವಿಷ್ಣು ನಾಯ್ಕ ಉಪಸ್ಥಿತರಿದ್ದು ಎಲ್ಲರನ್ನು ಅಭಿನಂದಿಸಿದರು. ಪ್ರಾರಂಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಸ್ವಾಗತಿಸಿದರೆ, ಇನ್ನೊವ೯ ಕಾರ್ಯದರ್ಶಿ ಜಗದೀಶ ನಾಯಕ ವಂದಿಸಿದರು. ಪ್ರತಿಷ್ಠಾನದ ಸದಸ್ಯ ಮಹಾಂತೇಶ ರೇವಡಿ ನಿರೂಪಿಸಿದರು. ಸಭೆಯಲ್ಲಿ ಹಿರಿಯ ಸಾಹಿತಿ ಕುಮಟಾದ ಬೀರಣ್ಣ ನಾಯಕ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಹೊನ್ನಮ್ಮ ನಾಯಕ, ನಾಗೇಂದ್ರ ನಾಯಕ, ಕಾರವಾರದ ಕಸಾಪ ಘಟಕದ ಅಧ್ಯಕ್ಷ ರಾಮ ನಾಯ್ಕ, ಸಾಹಿತಿಗಳಾದ ರೇಣುಕಾ ರಮಾನಂದ, ಉಮೇಶ ನಾಯ್ಕ, ಜೆ. ಪ್ರೇಮಾನಂದ, ಬಾಲಚಂದ್ರ ನಾಯಕ, ಮಹೇಶ ನಾಯಕ, ಅನಂತನಾಯ್ಕ, ರವೀಂದ್ರ ಕೇಣಿ, ವಿ.ಕೆ. ನಾಯರ ಯಶವಂತ ನಾಯ್ಕ. ಜಯಶೀಲ ಆಗೇರ ಮುಂತಾದವರು ಉಪಸ್ಥಿತರಿದ್ದರು.

ವರದಿ: ಪಿ.ಆರ್. ನಾಯ್ಕ ಹೊಳೆಗದ್ದೆ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*