(ಎಲ್.ಎಸ್. ಗಸ್ತಿ ಪೌಂಡೇಷನ ಮಹಿಳಾ ಸಮಾವೇಶ )
ದಾಂಡೇಲಿ: ಹಿಂದೆ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದರು. ಆದರೆ ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಮಹಿಳೆ ಸ್ವಾವಲಂಭಿಯಾಗುವ ಜೊತೆಗೆ ಸ್ವಾಭಿಮಾನದಿಂದ ಬಾಳಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು.
ಅವರು ದಾಂಡೇಲಿಯ ಎಲ್.ಎಸ್. ಗಸ್ತಿ ಸ್ಮಾರಕ ಟ್ರಸ್ಟ್ ನವರು ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಸರಕಾರ ಇದ್ದಾಗ ಜಿ.ಪಂ. ತಾ.ಪಂ. ಗ್ರಾ.ಪಂ. ನಗರಸಭೆ, ಪುರಸಭೆಗಳಲ್ಲಿ ಮಹಿಳೆಯರಿಗಾಗಿ ಶೇ 50 ರಷ್ಟು ಮೀಸಲಾತಿ ತಂದಿದ್ದೆವು. ಅದರಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ ಎಂದ ದೇಶಪಾಂಡೆಯವರು ಇಂದು ಬೆಲೆಯೇರಿಕೆ, ನಿರುದ್ಯೋಗದಿಂದ ಜನ ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು.
ಸ್ವ ಸಹಾಯ ಸಂಘಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಪಡೆದ ಸಾಲ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿ ಎಲ್.ಎಸ್. ಗಸ್ತಿ ಮೆಮೋರಿಯಲ್ ಪೌಂಡೇಷನ್ ನ ಜನಹಿತ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ, ಸಹೇಲಿ ಟ್ರಸ್ಟ್ ನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ಮಹಿಳೆಯರ ಕ್ರಿಯಾಶೀಲತೆ ಹಾಗೂ ಸ್ವಾವಲಂಭಿ ಬದುಕಿನ ಬಗ್ಗೆ ಮಾತನಾಡಿದರು. ಪೌಂಡೇಶನ ಅಧ್ಯಕ್ಷ ಸಿದ್ದರಾಜ ಗಸ್ತಿ ತಮ್ಮ ಸಂಸ್ಥೆ ನಡೆದು ಬಂದ ದಾರಿ ವಿವರಿಸಿ ಕಳೆದ ಆರು ವರ್ಷಗಳಿಂದ ಸಂಸ್ಥೆಯು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. 170 ಸ್ವ ಸಹಾಯ ಗುಂಪುಗಳು ನಮ್ಮಲ್ಲಿವೆ ಎಂದರು.
ಶಾಸಕ ಅರ್.ವಿ. ದೇಶಪಾಂಡೆಯವರ ಧರ್ಮಪತ್ನಿ ರಾಧಾಬಾಯಿ ದೇಶಪಾಂಡೆ, ಮಗ ಪ್ರಸಾದ ದೇಶಪಾಂಡೆ, ಎಲ್. ಎಸ್. ಗಸ್ತಿ ಮೆಮೊರಿಯಲ್ ಪೌಂಡೇಷನ್ ಅಧ್ಯಕ್ಷ ಸಿದ್ದರಾಜ ಗಸ್ತಿ, ಕಾರ್ಯದರ್ಶಿ ಪದ್ಮಾವತಿ ಗಸ್ತಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಶಾಸಕ ಆರ್.ವಿ. ದೇಶಪಾಂಡೆಯವರನ್ನು ಗಸ್ತಿ ಮೆಮೋರಿಯಲ್ ಪೌಂಡೇಶನ್ ನಿಂದ ಸನ್ಮಾನಿಸಿ ಗೌರವಿಸಿದರು. ಪೌಂಡೇಶನ ಅಧ್ಯಕ್ಷ ಸಿದ್ದರಾಜ ಗಸ್ತಿ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದ ವಿಡಿಯೋ ತುಣುಕು ನೋಡಿ
Be the first to comment