ಆರಂಭದಲ್ಲಿ ಒಂದಿಷ್ಟು ನಿಯಂತ್ರಣದಲ್ಲಿದ್ದ ಕೊರೊನಾ ಸೋಂಕು ದಾಂಡೇಲಿಯಲ್ಲಿ ಕಳೆದೊಂದು ವಾರದಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಸೋಂಕಿತ ಸಂಖ್ಯೆಯಲ್ಲಿ ದಾಂಡೇಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನಕ್ಕೇರಿದಂತಾಗಿದೆ.
ಸೋಮವಾರ ಒಂದೇ ದಿನ 47 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದೂ ಸೇರಿ ಇಲ್ಲಿಯವರೆಗೆ 154 ಜನರಲ್ಲಿ ಪಾಸಿಟಿವ್ ಬಂದಿದ್ದು 15 ಜನರು ಗುಣಮುಖರಾಗಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ತಾಲೂಕುವಾರು ನೋಡುವುದಾದರೆ ಭಟ್ಕಳದಲ್ಲಿ ಸೊಂಕಿತರ ಸಂಖ್ಯೆ 285 ರಷ್ಟಾಗಿದೆ. ಅದನ್ನು ಬಿಟ್ಟರೆ ಸೋಂಕಿತರ ಸಂಖ್ಯೆ ಹೆಚ್ಚಿಗೆ ದಾಖಲಾಗಿರುವುದು ದಾಂಡೇಯಲ್ಲಿ. ಸೊಮವಾರದವರೆಗೆ 154 ಜನರು ಸೋಂಕಿಗೊಳಗಾಗಿದ್ದಾರೆ. ಇದನ್ನು ಗಮನಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿ ಕೊರೊನಾ ಸೋಂಕಿತರಲ್ಲಿ ಎರಡನೆಯ ಸ್ತಾನಕ್ಕೇರಿದೆ. ಇದು ಹೆಗ್ಗಳಿಕೆಯಂತೂ ಅಲ್ಲವೇ ಅಲ್ಲ.
ದಿನದ ಲೆಕ್ಕದಲ್ಲಿಯೂ ದಾಂಡೇಲಿಯದ್ದೇ ದಾಖಲೆ
ಪ್ರತೀ ದಿನದ ಕೊರೊನಾ ಸೋಂಕಿತರ ಲೆಕ್ಕ ಹಾಕುವುದಾದರ ಸೋಮವಾರ ದಾಂಡೇಲಿಯಲ್ಲಿ 47 ಪ್ರಕರಣಗಳಾಗುವ ಮೂಲಕ ಜಿಲ್ಲೆಯ ತಾಲೂಕುಲುವಾರು ಸಂಖ್ಯೆಯಲ್ಲಿ ದಾಂಡೇಲಿ ದಾಖಲೆ ಬರೆದಿದೆ. ಇಲ್ಲಯವರೆಗೆ ಭಟ್ಕಳದಲ್ಲಿ ಒಂದು ದಿನ 45 ಜನರು ಸೋಂಕಿಗೆ ಒಳಗಾದ ದಾಖಲೆಯಿತ್ತು. ಆದರೆ ಸೋಮವಾರ ದಾಂಡೇಲಿಯಲ್ಲಿ ದಾಂಡೇಲಿಯಲ್ಲಿ 47 ಜನರು ಸೋಂಕಿಗೊಳಗಾಗುವ ಮೂಲಕ ಭಟ್ಕಳದ ಆ ದಾಖಲೆಯನ್ನು ಮುರಿದಂತಾಗಿದೆ.
ತುಂಬಿಕೊಂಡ ಕೋವಿಡ್ ಕೇರ್ ಸೆಂಟರ್
ದಾಂಡೇಲಿಯಲ್ಲಿ ಕೊರೊನಾ ಸೋಂಖಿಗೊಳಗಾದವರನ್ನು ಆರಂಭದಲ್ಲಿ ಕಾರವಾರಕ್ಕೆ ಕಳುಹಿಸಲಾಗಿತ್ತು. ನಂತರ ಹಳಿಯಾಳ ಕೇರ್ ಸೆಂಟರ್‍ಗೆ ಕಳುಹಿಸಲಾಗಿತ್ತು. ಕಳೆದ ನಾಲ್ಲು ದಿನಗಳಿಂದ ದಾಂಡೇಲಿಯಲ್ಲಿಯೇ ಮುರಾರ್ಜಿ ವಸತಿ ಶಾಲೆಯಲ್ಲಿ ಪ್ರಾರಂಭಿಸಲಾದ ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಿಸಲಾಗುತ್ತಿತ್ತು. ಇದೀಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿತರ ಪ್ರಕರಣದಿಂದ ಹಾಗೂ ಸೋಮವಾರವೊಂದೇ ದಿನ ದಾಖಲಾದ 47 ಪ್ರಕರಣಗಳಿಂದ ಈಗ ಮಾಡಲಾಗಿದ್ದ ಕೋವಿಡ್ ಕೇರ್ ಸೆಂಟರ್ ಭರ್ತಿಯಾಗಿಬಿಟ್ಟಿದೆ. ಇದು ಅಧಿಕಾರಿಗಳಿಗೆ ಇನ್ನಷ್ಟು ಹೆಚ್ಚಿನ ಒತ್ತಡ ತಂದಿದೆ ಎನ್ನಲಾಗಿದೆ. ಸೋಂಕಿತರ ಸಂಖ್ಯೆ ಹೀಗೆಯೇ ಏರುತ್ತಿದ್ದರೆ ಮುಂದೆ ಯಾವರೀತಿ ವ್ಯವಸ್ಥೆ ಮಾಡುವುದು ಎಂಬ ಗೊಂದಲ ಮತ್ತು ಮುಂದಾಲೋಚನೆಯಲ್ಲಿ ಅಧಿಕಾರಿಗಳಿದ್ದಾರೆ. ಮುಂಜಾವುಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತುರ್ತಾಗಿ ಇ.ಎಸ್.ಐ. ಆಸ್ಪತ್ರೆಯಲ್ಲಿ 35 ಹಾಸಿಗೆಯ ಒಂದು ಕೋವಿಡ್ ಕೇರ್ ಸೆಂಟರ್ ಹಾಗೂ ಮುರಾರ್ಜಿ ವಸತಿ ಶಾಲೆಯ ಮತ್ತೊಂದು ಕಟ್ಟಡದಲ್ಲಿ ಇನ್ನೆರಡು ದಿನದಲ್ಲಿ ಮತ್ತೆ 120 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಮಾಡುವ ಸಿದ್ದತೆಯಲ್ಲಿ ಅಧಿಕಾರಿಗಳಿದ್ದಾರೆಂದು ತಿಳಿದು ಬಂದಿದೆ.
Be the first to comment