ಫುಲ್‌‌ ಡೇ ಲಾಕ್ ಡೌನ್‌ಗೆ ಸ್ವಯಂ ಪ್ರೇರಣೆಯಿಂದ ಸಹಕರಿಸಿ : ನಗರಸಭಾ ಸದಸ್ಯರ ಮನವಿ

ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕಾಗಿ ....

ದಾಂಡೇಲಿ ನಗರಸಭಾ ಕಾರ್ಯಾಲಯ

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಪ್ರಕರಣದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.  ನಗರದ ಹಿತ ದೃಷ್ಠಿಯಿಂದ ಹಾಗೂ ಕೊರೊನಾ ನಿಯಂತ್ರಿಸುವ ಉದ್ದೇಶದಿಂದ  ಜುಲೈ 20 ಸೋಮವಾರದಿಂದ ಕರೆನೀಡಿರುವ ಏಳು ದಿನಗಳ ಲಾಕ್‍ಡೌನ್‍ಗೆ ನಗರದ ಜನತೆ ಸ್ವಯಂ ಪ್ರೇರಣೆಣೆಯಿಂದ ಸಹಕರಿಸಬೇಕು ಎಂದು ನಗರಸಭೆಯ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಪರವಾಗಿ ಕಾಂಗ್ರೆಸ್‍ನ ನಗರಸಭಾ ಸದಸ್ಯ ಆದಂ ದೇಸೂರ, ಭಾ.ಜ.ಪ ನಗರಸಭಾ ಸದಸ್ಯ ನರೇಂದ್ರ ಚೌಹಾಣ ಮನವಿ ಮಾಡಿದ್ದಾರೆ.

   ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ನಾವು ಸಭೆ ನಡೆಸಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಹಸಿರು ನಿಶಾನೆಯ ಮೇರೆಗೆ ತಹಶಿಲ್ದಾರರು ಸ್ವಯಂ ಪ್ರೇರಣೆಯ ಲಾಕ್‍ಡೌನ್‍ಗೆ ಸಮ್ಮತಿಸಿದ್ದಾರೆ. ಶನಿವಾರ ಮದ್ಯಾಹ್ನ 4 ಗಂಟೆಯವರೆಗೆ  ವ್ಯಾಪಾರ ವಹಿವಾಟು ನಡೆಯಲಿದ್ದು ಜನರು ವಾರದವರೆಗೆ ಬೇಕಾಗುವ ದಿನಸಿ, ತರಕಾರಿ ಹಾಗೂ ಅಗತ್ಯ ಸಾಮಾನುಗಳನ್ನು ಶನಿವಾರ ನಾಲ್ಕು ಗಂಟೆಯ ಒಳಗಾಗಿ ಖರೀದಿಸಬೇಕು. ಓಷಧಿ ಅಂಗಡಿಗಳು ಮಾತ್ರ ತೆರೆದಿರುತ್ತವೆ.  ಹೊಟೆಲ್ಲು, ದಿನಸಿ, ಕಿರಾಣಿ, ತರಕಾರಿ, ಮೀನು, ಮಾಂಸ ಸೇರಿದಂತೆ ಎಲ್ಲ ವ್ಯಾಪಾರ ವಹಿವಾಟುಗಳನ್ನೂ ಸ್ಥಗಿತಗೊಳಿಸಲಾಗುತ್ತದೆ. ಜೊತೆಗೆ ಯಾವ ವಾರ್ಡುಗಳಿಗೆ ಅಥವಾ ಮನೆ ಮನೆಗೆ ತರಕಾರಿ ಅಥವ ದಿನಸಿ ಕಳುಹಿಸಲಾಗುವುದಿಲ್ಲ. ಇದರಿಂದ ಜನರಿಗೆ ಒಂದಿಷ್ಟು ಸಮಸ್ಯೆಯಾಗಬಹುದೆಂಬುದು ನಮಗೂ ತಿಳಿದಿದೆ. ಆದರೆ ಮಿತಿ ಮೀರಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ನಾವೆಲ್ಲರೂ ಸಹ ನಮಗಾಗುತ್ತಿರುವ ತೊಂದರೆಯನ್ನು ಸಹಿಸಿಕೊಂಡು ಸಹಕರಿಸಬೇಕಾಗಿದೆ. ಇದು ನಾವು ನಮ್ಮ ನಗರಕ್ಕಾಗಿ ಮಾಡುತ್ತಿರುವ ಒಂದು ರೀತಿಯ ತ್ಯಾಗದ ಕೆಸವೆನ್ನಬಹುದಾಗಿದೆ.

  ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅರ್ಧ ದಿನದ ಲಾಕ್‍ಡೌನ್ ಮಾಡಿದ್ದರು. ಈಗ ಅವರೂ ಸಹ ನಮ್ಮ ಇಡೀ ದಿನದ ಲಾಕ್‍ಡೌನ್ ಮನವಿಗೆ ಸಹಕರಿಸುತ್ತಾರೆಂಬ ನಂಬಿಕೆಯಿದೆ.ಈಗಾಗಲೇ ಈ ಬಗ್ಗೆ ಈಗಾಗಲೇ ದ್ವನಿವರ್ಧಕದ ಮೂಲಕ ತಿಳುವಳಿಕೆ ನೀಡಲಾಗುತ್ತಿದೆ.  ನಗರದಲ್ಲಿ ಲಾಕ್‍ಡೌನ್ ಸಮಯದಲ್ಲಿ ಯಾರೂ ಸಹ ಅನಗತ್ಯವಾಗಿ ಓಡಾಡಕೂಡದು. ಲಾಕ್‍ಡೌನ್ ಎಂದು ಯಾರೂ ಸಹ ನಗರ ಬಿಟ್ಟು ಬೇರೆ ಊರಿಗೂ ಹೋಗುವ ಹಾಗಿಲ್ಲ. ಹಾಗೆ ಹೋದ ಮಾಹಿತಿ ಸಿಕ್ಕರೆ ಅವರು ಬಂದ ನಂತರ ಮತ್ತೆ 15 ದಿನ ಕ್ವಾರೆಂಟೈನ್ ಆಗಬೇಕಾಗುತ್ತದೆ. ಜನರು ಕಂದಾಯ, ನಗರಸಭೆ ಹಾಗೂ ಪೊಲಿಸ್ ಇಲಾಖೆಗೆ ಸಹಕರಿಸಬೇಕು. ಅನಗತ್ಯ ಗೊಂದಲಗಳಿಗೆ ಅವಕಾಶ ನೀಡಕೂಡದು ಎಂದು ಆದಂ ದೇಸೂರ, ನರೇಂದ್ರ ಚೌಹಾಣ ಮನವಿ ಮಾಡಿದ್ದಾರೆ.

  ನಗರಸಭೆ, ಕಂದಾಯ, ಪೊಲೀಸ್ ಜೊತೆ ಸಭೆ

   ನಗರಸಭೆಯಲ್ಲಿ  ಸರ್ವಪಕ್ಷಗಳ ನಗರಸಭಾ ಸದಸ್ಯರು  ಶುಕ್ರವಾರ  ತಹಶೀಲ್ದಾರ, ಪೌರಾಯುಕ್ತರು ಹಾಗೂ ಸಿ.ಪಿ.ಐ ಜೊತೆ ಸಭೆ ನಡೆಸಿದ್ದು ಲಾಕ್‍ಡೌನ್ ಸಮಯದಲ್ಲಿ ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಗರದ ಹಿತದೃಷ್ಠಿಯಿಂದ ಕರೆ ನೀಡಿರುವ ಈ ಲಾಕ್‍ಡೌನ್ ನಿಯಮಗಳನ್ನು ಯಾರಾದರೂ ಅನಗತ್ಯವಾಗಿ ಮೀರಿದರೆ, ಅಥವಾ ಸಹಕರಿಸದೇ ಇದ್ದರೆ, ಅನಾವಶ್ಯಕ ಸಂಚಾರ ನಡೆಸಿದರೆ ಅಂಥವರ ಮೇಲೆ ಕ್ರಮ ಕೂಗೊಳ್ಳುವಂತೆಯೂ ನಗರಸಭಾ ಸದಸ್ಯರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದು,  ಅಧಿಕರಿಗಳು  ಆಡಳಿತ ಹಾಗೂ ಕಾನೂನು ಪರಿಮತಿಯಲ್ಲಿ   ಸಹಕರಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

  ಉದ್ಯೋಗಿಗಳು ಗುರುತಿನ ಚೀಡಿ ಇಟ್ಟುಕೊಳ್ಳಿ

 ಲಾಕ್‍ಡೌನ್ ಸಮಯದಲ್ಲಿ ಯಾರೂ ಸಹ ಅನಾವಶ್ಯಕವಾಗಿ ಹೊರಗಡೆ ಓಡಾಡಕೂಡದು. ಆದರೆ ಸ್ಥಳಿಯವಾಗಿ ಹಾಗೂ ಹೊರಗಡೆ ಹೋಗಿ ಬರುವ ಸರಕಾರಿ, ಅರೆ ಸರಕಾರಿ ನೌಕರರು ಹಾಗೂ ಕಾಗದ ಕಂಪನಿಯ ಕಾರ್ಮಿಕರು ತಮ್ಮ ಜೊತೆ ತಮ್ಮ ಇಲಾಖೆ ಅಥವಾ ಕಂಪನಿ ನೀಡಿದ ಗುರುತಿನ ಚೀಟಿಗಳನ್ನು ಇಟ್ಟುಕೊಂಡಿರಬೇಕು. ತಪಾಸಣೆಯ ವೇಳೆ ಕೇಳಿದರೆ ತೋರಿಸಬೇಕು ಎಂದು ತಹಶೀಲ್ದಾರ ಶೈಲೇಶ ಪರಮಾನಂದ ತಿಳಿಸಿದ್ದಾರೆ.

 ಗುಂಪಾಗಿ ಸೇರಿದರೆ, ಅನ್ಯತ್ಯ ಓಡಾಡಿದರೆ ಕ್ರಮ 

 ಇದು ನಗರ ಸಭಾ ಸದಸ್ಯರ ಹಾಗೂ ಎಲ್ಲ ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ  ಸಹಕಾರದಿಂದ ನಡೆಯುವ ಸ್ವಯಂ ಪ್ರೇರಣೆಯ ಲಾಕ್‍ಡೌನ್. ಗುಂಪಾಗಿ ಸೇರಿದರೆ, ಅನಗತ್ಯ ಹೊರಗಡೆ ಬಂದರೆ ಪ್ರಕರಣ ದಾಖಲಿಸಲಾಗುತ್ತದೆ.  ಹಾಲು ಮಾರಾಟಕ್ಕೆ ಮುಂಜಾನೆ 7 ರಿಂದ 8 ಹಾಗೂ ಸಂಜೆ 6ರಿಂದ 8 ರವರೆಗೆ ಮಾತ್ರ ಅವಕಾಶ. ಮುಂಜಾನೆ ಪೇಪರ್‍ಗಳ ಮಾರಾಟದ ಹೊರತಾಗಿ ದಿನವಿಡಿ ಬೇರೆ ಯಾವ ಅಂಗಡಿಗಳೂ ತೆರೆದಿರುವುದಿಲ್ಲ. ಸಹಕರಿಸಿ ಎಂದು ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ ಮನವಿ ಮಾಡಿದ್ಧಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*