ಇನ್ನು ಮುಂದೆ ಅಭಿವೃದ್ದಿ ಕೆಲಸಗಳ ಹಿನ್ನೆಡೆಗೆ ಕೊರೊನಾ ಕಾರಣ ನೀಡುವಂತಿಲ್ಲ – ಅಧಿಕಾರಿಗಳಿಗೆ ದೇಶಪಾಂಡೆ ಕಡಕ್ ಎ‌ಚ್ಚರಿಕೆ

ದಾಂಡೇಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆ

ದಾಂಡೇಲಿ: ಕೊವಿಡ್ 19. ಕೊರೊನಾ ಕಾರಣದಿಂದಾಗಿ ಈಗಾಗಲೇ ಮೂರು ತಿಂಗಳು ಅಭಿವೃದ್ದಿ ಕೆಲಸಗಳಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಈಗ ಕೊರೊನಾದ ಮುಂಜಾಗೃತೆಯೊಂದಿಗೆ ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುವುದು ಅನಿವಾರ್ಯ. ಹಾಗಾಗಿ ಇನ್ನು ಮುಂದೆ ಯಾವ ಇಲಾಖೆಯ ಅಧಿಕಾರಿಗಳೂ ಸಹ ಅಭಿವೃದ್ದಿ ಕೆಲಸಗಳ ಹಿನ್ನೆಡೆಗೆ ಕೊರೊನಾ ಕಾರಣವನ್ನು ನೀಡುವಂತಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ದಾಂಡೇಲಿ ನಗರಸಭೆಯಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕೊರೊನಾ ನಿಯಂತ್ರಿಸುವಲ್ಲಿ ಶ್ರಮಿಸಿದ ಎಲ್ಲ ವಾರಿಯರ್ಸಗಳಿಗೂ ನಮ್ಮ ಕೃತಜ್ಞತೆ ಇದ್ದೇ ಇದೆ. ಆದರೆ ಇದೀಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಹ ಕೊರೊನಾ ಜೊತೆಗೇ ನಮ್ಮ ನಿತ್ಯದ ಕೆಲಸಗಳನ್ನು ಮುಂಜಾಗೃತೆಯಿಂದ ಮಾಡಬೇಕೆಂದಿವೆ. ಅದು ಅನಿವಾರ್ಯ ಕೂಡಾ. ಶೈಕ್ಷಣಿಕ ಸಂಸ್ಥೆಗಳನ್ನು ಹೊರತು ಪಡಿಸಿ ಎಲ್ಲ ಕ್ಷೇತ್ರಗಳೂ ಸಹ ಈಗ ತೆರೆದುಕೊಂಡಿವೆ. ಮೂರು ತಿಂಗಳ ಲಾಕ್‍ಡೌನ್ ಅವಧಿಯಲ್ಲಾದ ಹಿನ್ನೆಡೆಯನ್ನು ಈಗ ಸರಿದೂಗಿಸಿಕೊಳ್ಳಬೇಕು. ಎಲ್ಲ ಇಲಾಖೆಯ ಎಲ್ಲ ಅಭಿವೃದ್ದಿ ಕೆಲಸಗಳೂ ಸಹ ತ್ವರಿತಗತಿಯಲ್ಲಿ ನಡೆಯುವಂತಾಗಬೇಕು ಯಾರೂ ಕೂಡಾ ಸಬೂಬು ನೀಡುವಂತಿಲ್ಲ ಎಂದರು.


ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬೈಲಪಾರನಲ್ಲಿ ನಡೆಯುತ್ತಿರುವ ಗೃಹ ನಿರ್ಮಾಣ ಕೆಲಸ ಮತ್ತು ಮಂಡಳಿಯ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ದೇಶಪಂಡೆಯವರು ಸಭೆಯಲ್ಲಿದ್ದ ಮಂಡಳಿಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಬೆಳಗಾವಿಯಲ್ಲಿರದೇ ದಾಂಡೇಲಿ, ಹಳಿಯಾಳದಲ್ಲಿಯೇ ವಾಸವಿದ್ದು ಕೆಲಸನೋಡಿಕೊಳ್ಳುವಂತೆ ಸೂಚಿಸಿದರು.
ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ, ನಗರೋತ್ಥಾನ ಕಾಮಗಾರಿ, ಸರಕಾರಿ ಪದವಿ ಕಾಲೇಜು ಕಟ್ಟಡ, ಜಿ ಪ್ಲಸ್ ಟು ಕಟ್ಟಡ ಹಾಗೂ ಇತರೆ ಅಭಿವೃದ್ದಿ ಕೆಲಸಗಳ ಮಾಹಿತಿ ಪಡೆದು ಕೆಲಸ ತ್ವರಿತಗತಿಯಲ್ಲಾಗುವಂತಾಗಬೇಕೆಂದರು. ಒಳಚರಂಡಿ ಕೆಲಸ ಮುಗಿಸಲು ಮೂರು ವರ್ಷದ ಅವಧಿಯಿದೆ ಎಂದು ಅಧಿಕಾರಿ ತಿಳಿಸಿದಾಗ ಮೂರು ವರ್ಷದವರೆಗೂ ಕಾಯದೇ ಆದಷ್ಠು ಬೇಗ ಕೆಲಸ ಮುಗಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಮಿನಿ ವಿಧಾನ ಸೌಧ ಕಾಮಗಾರಿಯ ಐದು ಕೋಟಿ ರು.ಗಳಲ್ಲಿ ಒಂದು ಕೋಟಿ ರು ಮರಳಿ ಹೋಗಿರುವ ಬಗ್ಗೆ ಲೋಕೋಪಯೋಗಿ ಅಧಿಕಾರಿ ತಿಳಿಸಿದಾಗ ಅದು ಸಾದ್ಯವಿಲ್ಲ. ಅದು ನಾನು ಕಂದಾಯ ಸಚಿವನಾಗಿದ್ದಾಗ ಬಿಡುಗಡೆ ಮಾಡಿದ್ದು. ಆ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದರು. ಜಿ ಪ್ಲಸ್‍ ಟು ಮನೆ ನೀಡುವಲ್ಲಿ ವಿಳಂಬವಾಗುತ್ತಿದ್ದು, ಗುತ್ತಿಗೆದಾರ ಕೂಡಾ ಶೀಘ್ರ್ರವಾಗಿ ಕೆಲಸ ಮುಗಿಸಬೇಕು. ಕೆಲ ಫಲಾನುಭವಿಗಳು ಹಣ ನೀಡಿಲ್ಲ ಎಂದು ಉಳಿದವರಿಗೆ ಮನೆ ನೀಡದಿರುವುದು ಸರಿಯಲ್ಲ. ಹಣ ತುಂಬಿದವರಿಗೆ ಮನೆ ನೀಡುವಂತೆ ಕ್ರಮ ಕೈಗೊಳ್ಳಿ ಎಂದು ಪೌರಾಯುಕ್ತರಿಗೆ ಸೂಚಿಸಿದರು. ಸರಕಾರಿ ಪದವಿ ಕಾಲೇಜು ಕಟ್ಟಡ ಕಾಮಗಾರಿ ಯ ಬಗ್ಗೆ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದರಿಂದ ಮಾಹಿತಿ ಪಡೆದರು. ಕಾರ್ಮಿಕ ಇಲಾಖೆಯ ಕಾರ್ಯವೈಖರಿ ಹಾಗೂ ವಿಳಂಬದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು.


ಆರಂಭದಲ್ಲಿ ಕರೊನಾ ಮುಂಜಾಗೃತೆ ಹಾಗೂ ಕ್ವಾರೆಂಟೈನ್ ಮತ್ತು ಅದರ ವ್ಯವಸ್ಥೆಯ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ ಹಾಗೂ ತಹಶಿಲ್ದಾರ್ ಶೈಲೇಶ ಪರಮಾನಂದರಿಂದ ಮಾಹಿತಿ ಪಡೆದುಕೊಂಡು, ಹೊರ ರಾಜ್ಯದಿಂದ ಬರುವವರ ಬಗ್ಗೆ ಹಾಗೂ ಕೊರೊನಾ ಹರಡದಂತೆ ಅವಶ್ಯ ಮುಂಜಾಗರೂಕ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಮುಂದೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಂದರ್ಭದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಳಿಗನುಕೂಲವಾಗುವ ಹಾಗೆ ಬಸ್ ವ್ಯವಸ್ಥೆ ಮಾಡಬೇಕೆಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪಾಲ್ಗೊಂಡ ನಗರಸಭಾ ಸದಸ್ಯರು, ಇಲಖಾ ಅಧಿಕಾರಿಗಳು


ಜಿ.ಪಂ ಉಪಧ್ಯಕ್ಷ ಸಂತೋಷ್ ರೇಣಕೆ, ತಹಶಿಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ, ಡಿ.ವೈ.ಎಸ್.ಪಿ. ಮೋಹನ ಪ್ರಸಾದ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಗಸ್ತಿ, ಸಿ.ಪಿ.ಐ ಪ್ರಭು ಗಂಗನಳ್ಳಿ, ತಾಲೂಕು ವೈದ್ಯಾಧಿÀಕಾರಿ ಡಾ. ರಮೇಶ ಕದಂ, ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶಪ್ರಸಾದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದರು.
ನಗರಸಭಾ ಸದಸ್ಯರಾದ ಅದಂ ದೇಸೂರ, ಯಾಸ್ಮಿನ್ ಕಿತ್ತೂರ, ಮಜೀದ ಸನದಿ, ಅಷ್ಪಾಕ ಶೇಖ, ಆಸಿಪ್ ಮುಜಾವರ, ರುಕ್ಮಿಣಿ ಬಾಗಡೆ, ಸಂಜಯ ನಂದ್ಯಾಳಕರ, ಅನಿಲ್ ನಾಯ್ಕರ, ಸರಸ್ವತಿ ರಜಪೂತ, ಪ್ರೀತಿ ನಾಯರ್, ವೆಂಕಟರಮಣಮ್ಮ ಮೈತಕುರಿ, ಶಿಲ್ಪಾ ಕೋಡೆ, ಸಪೂರಾ ಯರಗಟ್ಟಿ, ಶಾಯಿದಾ ಪಠಾಣ, ನೀಲವ್ವ ಬಂಡಿವಡ್ಡರ್ ಹಾಗೂ ನಗರದ ಪ್ರಮುಖರನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*