ಪರಿಸರದ ಹೆಸರಲ್ಲಿ ಹುಬ್ಬಳ್ಳಿ-ಅಂಕೋಲಾ ರೇಲ್ವೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ: ದೇಶಪಾಂಡೆ

ದಾಂಡೇಲಿ: ಪರಿಸರದ ಸಂರಕ್ಷಣೆ ಆಗಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವೊಂದು ಅಭಿವೃದ್ದಿ ಕೆಲಸಗಳ ಸಂದರ್ಭದಲ್ಲಿ ಯಾವುದು ಪ್ರಥಮ ಆಯ್ಕೆ ಎಂಬುದನ್ನೂ ಸಹ ನೋಡಬೇಕಾಗುತ್ತದೆ. ಹಾಗಾಗಿ ಹುಬ್ಬಳ್ಳಿ-ಅಂಕೋಲಾ ರೇಲ್ವೆ ಮಾರ್ಗಕ್ಕೆ ಪರಿಸರದ ಹೆಸರಲ್ಲಿ ಅಡ್ಡಿಗಾಲು ಹಾಕುವುದು ಸರಿಯಲ್ಲ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.


ದಾಂಡೇಲಿಗಾಗಮಿಸಿದ್ದ ಅವರು ಮಾದ್ಯಮದವರ ಜೊತೆ ಮಾತನಾಡುತ್ತಿದ್ದರು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ವಾದರೆ ಇದು ಕೇವಲ ಒಂದೆರಡು ತಾಲೂಕಿಗಷ್ಟೇ ಪ್ರೋಜನವಾಗುವುದಿಲ್ಲ. ಇದರಿಂದ ಸಮಗ್ರ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ದಿಯ ಜೊತೆಗೆ ರಾಜ್ಯದ ಸಂಪರ್ಕವೂ ಜಿಲ್ಲೆಗೆ ಸುಲಭವಾಗಿ ತೆರೆದುಕೊಳ್ಳುವಂತಾಗುತ್ತದೆ. ಪ್ರವಾಸೋದ್ಯಮ ಬೆಳೆಯುತ್ತದೆ. ಕರಾವಳಿ, ಮಲೆನಾಡು ಭಾಗಗಳ ಸಂಪರ್ಕ ಬೆಸೆಯುತ್ತದೆ. ನಾನು ಬಹಳ ವರ್ಷಗಳಿಂದ ಈ ಯೋಜನೆಯನ್ನು ಬೆಂಬಲಿಸಿಕೊಂಡು ಬಂದಿದ್ದೇನೆ. ಜೊತೆಗೆ ನಮ್ಮ ಸರಕಾರ ಇದ್ದಾಗಲೆಲ್ಲ ಇದಕ್ಕಾಗಿ ಒಂiÀತ್ತಾಯಿಸಿದ್ದೇನೆ. ಈಗಲೂ ಸಹ ಈ ರೈಲು ಮಾರ್ಗ ಆಗಲೇ ಬೇಕೆಂಬುದು ನನ್ನ ಒತ್ತಾಸೆಯಾಗಿದೆ.
ಪರಿಸರದ ಹೆಸರಲ್ಲಿ ಕೆಲವರು ಹೈಕೋರ್ಟಲ್ಲಿ ಇದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯ ಮದ್ಯಂತರ ತಡೆಯಾಜ್ಞೆ ನೀಡಿದೆಯಷ್ಟೆ. ಇದು ಶೀಘ್ರವಾಗಿ ಬಗೆಹರಿಯಬಹುದೆಂಬ ನಿರೀಕ್ಷೆ ನನ್ನದು. ಈ ಪರಿಸರ ಕೂಡಾ ನಮ್ಮದೇ. ಮುಂದಿನ ತಲೆಮಾರಿಗಾಗಿ ನಾವು ಅದನ್ನು ರಕ್ಷಿಸಲೇ ಬೇಕು. ಆದರೆ ಎಲ್ಲ ಯೋಜನೆಗಳಿಗೂ ಪರಿಸರದ ಹೆಸರಲ್ಲಿ ಅಡ್ಡಿಪಡಿಸುವುದು ಸರಿಯಲ್ಲ ಎಂದರು.


ವಿಮಾನ ನಿಲ್ದಾಣ ಕೂಡಾ ಹಿಂದೆಯೇ ಪ್ರಸ್ತಾಪಿಸಿದ್ದೆ:
ಈಗ ಅಂಕೋಲಾದ ಬೇಲೆಕೇರಿ, ಅಲಗೇರಿಯಲ್ಲಿ ಯೋಜಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ನಾನು ಬಹಳ ವರ್ಷಗಳ ಹಿಂದೆಯೇ ಈ ಭಾಗದಲ್ಲಿ ವಿಮಾನ ನಿಲ್ದಾಣವಾಗಬೇಕೆಂಬುದರ ಬಗ್ಗೆ ಪ್ರಸ್ತಾಪಿಸಿದ್ದೆ. ಬಹುಶಹ ಅದು ಸೀಬರ್ಡ ಯೋಜನೆ ಜಿಲ್ಲೆಗೆ ಬಂದ ಸಂದರ್ಭದಲ್ಲಿರಬೇಕು. ರಾಜೀವ ಗಾಂಧಿಯವರು ಬಂದು ಅಡಿಗಲ್ಲನ್ನೂ ಹಾಕಿದ್ದರು. ಈಗ ಅದು ನೇರವೇರುವ ಕಾಲ ಬಂದಿದೆ. ನಿನ್ನೆಯಷ್ಟೇ ಸಚಿವ ಜಗದೀಶ ಶೆಟ್ಟರವರು ಬಂದು ಸ್ಥಳ ಪರಿಶೀಲಿಸಿ ಹೋಗಿರುವುದು ಖುಶಿಯ ವಿಚಾರ. ನಾನೂ ಕೂಡಾ ಈ ವಿಮಾನ ನಿಲ್ದಾಣ ಆರಂಭವಾಗುವುದನ್ನು ಸ್ವಾಗತಿಸುತ್ತೇನೆ. ಇದು ಕೂಡಾ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಇತರೆ ಅಭಿವೃದ್ದಿಗೆ ಸಹಾಯಕವಾಗಲಿದೆ ಆರ್.ವಿ. ದೇಶಪಾಂಡೆ ತಿಳಿಸಿದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*