ಬೆಂಗಳೂರು: ಜುಲೈ 1ರಿಂದ ಶಾಲೆ ಪ್ರಾರಂಭಿಸುವ ಯಾವುದೇ ಉದ್ದೇಶ ಸರಕಾರದ ಮುಂದೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾವುದೇ ಸಂದರ್ಭದಲ್ಲಿಯೂ ಶಿಕ್ಷಣ ಇಲಾಖೆ ಜುಲೈ 1ರಿಂದ ಯಾವ ಶಾಲೆಯನ್ನೂ ಪ್ರಾರಂಭಿಸುವ ಉದ್ದೇಶವನ್ನು ಹೊಂದಿಲ್ಲ. ಈ ಬಗ್ಗೆ ಯಾವುದೇ ಪೋಷಕರು ಅನವಶ್ಯಕವಾಗಿ ಗೊಂದಲಕ್ಕೆ ಒಳಗಾಗುವುದು ಬೇಡ. ರಾಜ್ಯದಲ್ಲಿ ಶಾಲಾರಂಭ ಕುರಿತಂತೆ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಸಹ ಚರ್ಚಿಸಿ ಸಹಮತವನ್ನು ಪಡೆಯಲಾಗುವುದು .
ಶಾಲಾ ಅರಂಭದ ಕುರಿತಂತೆ ವಿವಿಧ ರಾಜ್ಯಗಳ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲದಯ ವಿಡಿಯೋ ಸಂವಾದ ನಡೆಸಿ ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹವನ್ನು ಮಾಡಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರೂ ಸಹ ಆಗಸ್ಟ್ 15ರ ಬಳಿಕವಷ್ಟೇ ಶಾಲಾರಂಭದ ದಿನಾಂಕವನ್ನು ನಿಗದಿಪಡಿಸಲಾಗುವುದೆಂಬ ಸುಳಿವು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಶಿಕ್ಷಣ ಇಲಾಖೆಯು ನಮ್ಮ ರಾಜ್ಯದಲ್ಲಿ ಶಾಲಾರಂಭದ ಕುರಿತು ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಲು ಜೂನ್ 10, 12 ಮತ್ತು 12ರಂದು ಪೋಷಕರ, ಶಾಲಾ ಅಭಿವೃದ್ದಿ ಸಮಿತಿಯವರ ಸಭೆಗಳನ್ನು ನಡೆಸಿ ಕ್ರಮ ವಹಿಸಲು ನೀಡಲಾಗಿದ್ದ ಸೂಚನೆಯನ್ನು ಜೂನ್ 20ರವರೆಗೆ ವಿಸ್ತರಿಸಲು ಇಂದಿನ ಸಭೆಯು ನಿರ್ಣಯಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Be the first to comment