ಆದರ್ಶ ಶಿಕ್ಷಕ ಹೊಳೆಗದ್ದೆಯ ಎಂ .ಎಸ್.ನಾಯ್ಕ

” ಮೊದಲು ಆಳಾಗುವುದನ್ನು ಕಲಿಯಿರಿ.ಆಗ ನಾಯಕನ ಅಹೃತೆ ನಿಮಗೆ ಬರುತ್ತದೆ. ಒಂದುಸಾಮಾನ್ಯ ಕೆಲಸನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ” ಎಂಬ ಸ್ವಾಮಿವಿವೇಕಾನಂದರವರ ಮಾತನ್ನು ತಮ್ಮ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಅಚ್ಚುಕಟ್ಟುತನದಿಂದ ಕೆಲಸ ನಿರ್ವಹಿಸಿ ಆದರ್ಶ ಶಿಕ್ಷಕರಾಗಿ ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಹೊಳೆಗದ್ದೆಯ ಶ್ರೀ ಎಂ.ಎಸ್.ನಾಯ್ಕರವರು.

1960 ರಲ್ಲಿ ತಂದೆ ಶಿವಪ್ಪ ನಾಯ್ಕ ತಾಯಿ ಸಾವಿತ್ರಿ ನಾಯ್ಕ ರವರ ಮಗನಾಗಿ ಕುಮಟಾ ತಾಲೂಕಿನ ಹೊಳೆಗದ್ದೆಯಲ್ಲಿ ಜನಿಸಿದರು. ಬಾಲ್ಯದಿಂದಲೇ ಬಹುಮುಖ ಪ್ರತಿಭಾವಂತರಾದ ಮಂಜುನಾಥರವರು 1982 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಭಟ್ಕಳ ತಾಲೂಕಿನ ಮುಂಡಳ್ಳಿಯ ನಾಸ್ತಾರದಲ್ಲಿ ಸೇವೆ ಪ್ರಾರಂಭಿಸಿದರು. ತಮ್ಮ ವೃತ್ತಿ ಬದುಕಿನಲ್ಲಿ ಕರ್ತವ್ಯಕ್ಕೆ ಎಂದು ಚ್ಯುತಿಬಾರದ ರೀತಿಯಲ್ಲಿ ಮಕ್ಕಳ ಕಲಿಕೆಗೆ ವಿಶೇಷ ಕಾಳಜಿವಹಿಸಿ ಬದುಕಿನಲ್ಲಿ ಮುನ್ನಡೆದರು. ಸ್ವಪ್ರಯತ್ನದಿಂದ ಸರ್ವತೋಮುಖ ಏಳಿಗೆಗೆ ಸಾಧಿಸುವುದರ ಮೂಲಕ ಅಸಹಾಯಕರಿಗೆ, ನಿರ್ಗತಿಕರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸಾಮಾಜಿಕ ತುಡಿತಗಳಿಗೆ ಸದಾ ಸ್ಪಂದಿಸುವ ವ್ಯಕ್ತಿಗಳಾದರು .

ನಂತರ1985ರಲ್ಲಿ ಸಿದ್ದಾಪುರದ ಹರ್ಕಳಿ ಶಾಲೆಯಲ್ಲಿಯೂ , 1988 ರಲ್ಲಿ ಬೀಳಗಿಯಲ್ಲಿಯೂ ಸೇವೆ ಸಲ್ಲಿಸಿ , 1997 ರಲ್ಲಿ ಹೊನ್ನಾವರ ತಾಲೂಕಿನ ಕೋನಕಾರ ಶಾಲೆಗೆ ವರ್ಗವಾಗಿ ಬಂದರು. ಪರಿಶಿಷ್ಟ ಜಾತಿಯವರೆ ಅಧಿಕವಾಗಿರುವ ಕೋನಕಾರ ಶಾಲೆಯು ತುಂಬಾ ಜೀಣಾ೯ವಸ್ಥೆಯಲ್ಲಿ ಇದ್ದಾಗ ತಾಲೂಕು ಪಂಚಾಯತಿದಿಂದ ಬಿಡುಗಡೆಯಾದ ಅನುದಾನವು ಸಾಲದಾದಾಗ ಅರ್ಧದಷ್ಟು ಹಣವನ್ನು ತಮ್ಮ ಕೈಯಿಂದ ಬರಿಸಿ ಸುಸಜ್ಜಿತ ಕಟ್ಟಡ ಕಟ್ಟುವಲ್ಲಿ ನೆರವಾದರು. ನಂತರ 2002ರಲ್ಲಿ ಕೆರೆಗದ್ದೆ ಶಾಲೆಯಲ್ಲಿಯೂ, 2009ರಲ್ಲಿ ತಾರಿಬಾಗಿಲು ಶಾಲೆಯಲ್ಲಿ ಸೇವೆ ಸಲ್ಲಿಸಿ 2013 ನೇ ಸಾಲಿನಿಂದ ಪದೋನ್ನತಿ ಮುಖ್ಯ ಅಧ್ಯಾಪಕರಾಗಿ ಮಂಕಿಯ ಕುಂಬಾರಕೇರಿ ಶಾಲೆಯಲ್ಲಿ ಸೇವೆ ಪ್ರಾರಂಭಿಸಿ ದಿನಾಂಕ 31 ಮೇ 2020 ರಂದು ನಿವೃತ್ತಿಯಾದರು.

ಅವರ ಸುದೀರ್ಘ ಶಿಕ್ಷಕರ ಸೇವೆಯನ್ನು ಅತ್ಯಂತ ಪ್ರೀತಿಯಿಂದ ನಿರ್ವಹಿಸಿ ವಿದ್ಯಾರ್ಥಿಗಳ , ಪಾಲಕರ, ಎಸ್ ಡಿ ಎಂ ಸಿ ಯವರ,ಪೋಷಕರು ಪ್ರೀತಿಗೆ ಪಾತ್ರರಾದರು.
ಇಂತಹ ಒಬ್ಬ ಆದರ್ಶ ಶಿಕ್ಷಕ ನಮ್ಮೂರು ಹೊಳೆಗದ್ದೆಯ ಹೆಮ್ಮೆ. ಅವರ ಆಡಳಿತದ ದೃಷ್ಟಿಕೋನ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿತ್ತು. ತರಗತಿಯ ಕೋಣೆಯಲ್ಲಿ ಯಾವುದೇ ಶಿಕ್ಷಕನಿಲ್ಲದ ಸಂದರ್ಭದಲ್ಲಿ ತಾವೇ ಸ್ವತಃ ತರಗತಿಯನ್ನು ನಿರ್ವಹಿಸಿ ಮಕ್ಕಳ ಕಲಿಕೆಗೆ ಎಂದು ಚ್ಯುತಿ ಬಾರದ ರೀತಿಯಲ್ಲಿ ಅವರ ಕರ್ತವ್ಯನಿಷ್ಠೆ ಜಾಗೃತವಾಗಿರುತಿತ್ತು. ಸದಾ ಮಕ್ಕಳೊಂದಿಗೆ ಕಾಲಕಳೆಯುವ ಮನೋಬಲ ಅವರದಾಗಿತ್ತು .ಇಲಾಖೆಯ ಮಾಹಿತಿಯನ್ನು ಸಕಾಲಕ್ಕೆ ಒಪ್ಪಿಸುವ ಜಾಣ್ಮೆ ಅವರದಾಗಿತ್ತು. ಶಾಲೆಯಲ್ಲಿರುವ ಇನ್ನುಳಿದ ಶಿಕ್ಷಕರಿಗೆ ಅನ್ಯ ಕಾರ್ಯಕ್ಕೆ ಬಳಸಿಕೊಳ್ಳದೆ ಮಕ್ಕಳ ಕಲಿಕೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುತ್ತಿದ್ದರು. ಕಠಿಣ ವಿಷಯಗಳನ್ನು ಅತ್ಯಂತ ಸುಲಭವಾಗಿ ಮಕ್ಕಳಿಗೆ ಕಲಿಸುವ ಕಲೆ ಕರಗತ ಮಾಡಿಕೊಂಡಿದ್ದರು.

ಶಾಲೆಗೆ ಯಾವತ್ತೂ ತಡ ಮಾಡಿ ಬಂದವರಲ್ಲ. ಶಿಕ್ಷಕರ ಮನಸ್ಸನ್ನು ನೋಯಿಸದೆ ಎಲ್ಲರನ್ನೂ ಪ್ರೀತಿ ವಿಶ್ವಾಸದ ಮೂಲಕ ನೋಡಿಕೊಳ್ಳುತ್ತಿದ್ದರು. ಯಾವುದೇ ಕೆಲಸವಿರಲಿ ಅದಕ್ಕೊಂದು ಪೂರ್ವತಯಾರಿ ಇದ್ದೇ ಇರುತ್ತಿತ್ತು .ದುಡುಕಿನ ನಿರ್ಧಾರಕ್ಕೆ ಎಂದು ಕೈಹಾಕಿರಲಿಲ್ಲ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಮಕ್ಕಳಿಗೆ ಆರ್ಥಿಕ ಸಹಾಯ ನೀಡಿ ಹುರಿದುಂಬಿಸುತ್ತಿದ್ದರು. ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಇವರ ಆರ್ಥಿಕ ಸಹಾಯ, ಸಹಕಾರ ನಿರಂತರವಾಗಿ ಇರುತ್ತಿತ್ತು. ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪದೋನ್ನತ ಮುಖ್ಯ ಅಧ್ಯಾಪಕರಾಗಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 39 ವರ್ಷಗಳ ಕಾಲ ಅತ್ಯಂತ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಆಗುತ್ತಿರುವ ನನ್ನ ಪದೋನ್ನತ ಮುಖ್ಯ ಅಧ್ಯಾಪಕರಾದ ಎಂ.ಎಸ್.ನಾಯ್ಕ್ ಮತ್ತು ಕುಟುಂಬದವರು ನೂರುಕಾಲ ನಮ್ಮೊಂದಿಗೆ ಸುಖವಾಗಿ ಬಾಳಲೆಂದು ಹಾರೈಸುವೆ.

ಪಿ.ಆರ್ .ನಾಯ್ಕ .ಹೊಳೆಗದ್ದೆ.

ಲೇಖಕರ ಪರಿಚಯ: ವೃತ್ತಿಯಲ್ಲಿ ಶಿಕ್ಷಕರಾಗಿರುವ ಪಿ.ಆರ್.‌ ನಾಯ್ಕ ಕುಮಟಾದ ಹೊಳೆಗದ್ದೆಯವರು. ತಮ್ಮ ಹಲವಾರು ಕೃತಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಇವರು ಉತ್ತಮ ಸಂಘಟಕರೂ ಕೂಡಾ.
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*