ನೀಲಗಗನದಲೈಕ್ಯವಾದ ನಾವುಡರು!

ಯಕ್ಷಗಾನ ಭಾಗವತಿಕೆಯ ಕಂಚಿನ ಕಠದ ಭಾಗವತ ಕಾಳಿಂಗ ನಾವುಡರು ನಮ್ಮನ್ನಗಲಿ 30 ವಷಗಳ ನೆನಪಿಗೆ ಈ ಲೇಖನ….

ಯಕ್ಷ ಜಗತ್ತು ಹಿಂದೆಂದೂ ಕಂಡಿರದ – ಮುಂದೆಂದೂ ಕಾಣಲಾಗದೆಂದೆನಿಸಿದ “ಯುಗದ ಭಾಗವತ” ರೆಂದರೆ ಕೊಂಚವೂ ಉತ್ಪ್ರೇಕ್ಷೆಯೆನಿಸದ, ಮರೆಯಾಗಿ ಮೂರು ದಶಕಗಳೇ ಮೀರಿದರೂ ಯಕ್ಷಗಾನದ ಕುರಿತು ಗಂಧ – ಗಾಳಿಯಿರದವರೂ ಕೇಳದಿರಲಾರದ ಹೆಸರದು ಕಾಳಿಂಗ ನಾವುಡರದು. ಅವರ ಸಿರಿಕಂಠದಲ್ಲಿ ಮೊಳಗಿದ “ನೀಲಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ” ಪದ್ಯವು ಅವರನ್ನು ಕಲಾರಾಧಕರ ಎದೆಯಬಾಂಧಳದಲ್ಲಿ ಚಿರಸ್ಥಾಯಿಯನ್ನಾಗಿಸಿದೆ!.

   ನಾವುಡರು ಕಳೆದ ಶತಮಾನದ ಉತ್ತರಾರ್ಧದಲ್ಲಿದ್ದವರು. ೨೧ ನೆಯ ಶತಮಾನವು ಆರಂಭವಾಗುವ ಹತ್ತು ವರ್ಷಗಳ ಮೊದಲೇ ಆಕಸ್ಮಿಕವಾಗಿ ಕಾಣದ ಲೋಕಕ್ಕೆ ಹೊರಟು ಹೋದರು. ಅವರು ಬದುಕಿದ್ದು ತುಸುಗಾಲವಷ್ಟೆ. ತಮ್ಮ ಮೂವತ್ತೆರಡರ ಹರೆಯದೊಳಗಿನ ಸರಿಸುಮಾರು ೧೮ – ೨೦ ವರ್ಷಗಳಷ್ಟೇ ರಂಗದಲ್ಲಿದ್ದರೂ ಯಕ್ಷಗಾನದ “ಭಾಗವತ” ನ ಸ್ಥಾನದ ಘನತೆಯನ್ನೆತ್ತರಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅಂದಿನ ಹೆಸರಾಂತ ಭಾಗವತರಲ್ಲೊಬ್ಬರಾದ ಕೀರ್ತಿಶೇಷ ರಾಮಚಂದ್ರ ನಾವುಡರ ಮಗನಾಗಿದ್ದ ಬಾಲ್ಯದಲ್ಲಿನ ಮನೆಯ ಪರಿಸರ, ಮುಂದೆ ಮಹಾಗುರು ಉಪ್ಪೂರರ ಶಿಷ್ಯತ್ವದೊಂದಿಗೆ ಜನ್ಮಜಾತವಾದ ದೈವದತ್ತ ಪ್ರತಿಭೆ, ತುಡಿತ ಹಾಗೂ ಪ್ರಯೋಗಗಳಿಂದ ಕಾಳಿಂಗ ನಾವುಡರು ದಾಖಲೆಯ ಭಾಗವತರಾಗಿ ಚರಿತ್ರೆಯನ್ನು ಸೃಜಿಸಿದವರು.

   ಸಂಪ್ರದಾಯಬದ್ದ ಕಲಾವಿದರು – ಪೌರಾಣಿಕ ಪ್ರಸಂಗಗಳನ್ನಷ್ಟೇ ಸ್ವೀಕರಿಸುವ ಪ್ರೇಕ್ಷಕರಿರುವ ಕಾಲಘಟ್ಟದಲ್ಲಿ ಪರಂಪರೆಗೆ ಏಟು ನೀಡದೆ, ಸಾಮಾಜಿಕವಾದ ನೂತನ ಪ್ರಸಂಗಗಳನ್ನು ಒಪ್ಪುವಂತೆ ಮಾಡಿದ್ದು ನಾವುಡರ ಹಿರಿಮೆ. ರಂಗಕ್ಕೆ ಸಾಮಾನ್ಯವಾಗಿ ರಾತ್ರಿ ೧/೧-೧೫ ಘಂಟೆಗೆ ಬರುವ ಅವರಿಗಾಗಿಯೇ ಕಾದು ಕುಳಿತ ಪ್ರೇಕ್ಷಕರನ್ನು ನಾದಲೋಕದಲ್ಲಿಯೇ ತೇಲಿಸುವಲ್ಲಿ ನಿಸ್ಸೀಮರಾದ ಅವರ ನಂತರ ಅವರ ಸ್ಥಾನದಲ್ಲಿ ಕುಳಿತು ಆ ದಿನ ಆಟ ನಡೆಸುವ ಬೇರೆ ಭಾಗವತರೇ ಇರಲಿಲ್ಲ. ಅವರದು ತುಂಬು ಸ್ವರ. ಅದರ ಮಧುರತೆ, ಮಾದಕತೆ, ಸಮ್ಮೋಹಕತೆಗಳೆಲ್ಲ ವರ್ಣನಾತೀತವಾದುದು. ಅವರನ್ನು ಅನುಸರಿಸಿದ ಭಾಗವತರ ಸಂಖ್ಯೆಗಳಿಗೇನು ಕಡಿಮೆಯಿಲ್ಲ. ಭಾಗವತಿಕೆಯಲ್ಲಿ “ನಾವುಡ ಶೈಲಿ” ಎಂಬುದು ಸೃಷ್ಟಿಯಾಗಿ ಹಿಂದಿನ ಎಲ್ಲಾ ಶೈಲಿಗಳನ್ನು ನೇಪಥ್ಯಕ್ಕೆ ಸರಿಸಿದ್ದು ಸುಳ್ಳಲ್ಲ.

    ಕಾಳಿಂಗ ನಾವುಡರು *”ಚೆಲುವೆ ಚಿತ್ರಾವತಿ”* ಪ್ರಸಂಗದಲ್ಲಿ ಹಾಡಿರುವ “ಅನ್ಯ ಪುರುಷನೆಂಬ ಭಾವ ಭಿನ್ನವಾಯ್ತು ನಿನ್ನ ಕಂಡು” ಎಂಬ ಹಾಡಿರಲಿ, “ಸತಿ ಸೀಮಾಂತಿನಿ”* ಪ್ರಸಂಗದಲ್ಲಿ “ಉರಗಲೋಕವಿದುವೆ” ಎಂಬ ಪದ್ಯವನ್ನು ಹಾಡಿರುವುದಾಗಲಿ, “ನಾಗಶ್ರೀ” ಯಲ್ಲಿ “ಅಂಗನಾಮಣಿ ನಿಲ್ಲು ನಿಲ್ಲಲೆ” ಎಂದು ಹಾಡಿರುವುದಾಗಲಿ, “ಗದಾಯುದ್ದ” ದ “ಕಪಟನಾಟಕರಂಗ” , “ಭೀಷ್ಮ ವಿಜಯ” ದ “ಪರಮ ಋಷಿ ಮಂಡಲದ ಮಧ್ಯದಲಿ”, “ದ್ರೌಪತಿ ಪ್ರತಾಪ” ದಲ್ಲಿ “ಎಲವೋ ಮಘವನ ಮಗನೇ”, “ಬಬ್ರುವಾಹನ ಕಾಳಗ” ದ “ಅಹುದೇ ಎನ್ನಯ ರಮಣ”, “ಚಂದ್ರಹಾಸ” ದ “ಶ್ರೀಮತ್ ಸಚಿವ ಶೀರೋಮಣಿ” – ಪದ್ಯಗಳನೆಲ್ಲಾ ಅವರ ಧ್ವನಿಯಲ್ಲಿ ಕೇಳಿದ್ದನ್ನು ಮರೆಯಲಾಗದು.

    “ಚೆಲುವೆ ಚಿತ್ರಾವತಿ” ಪ್ರಸಂಗದಲ್ಲಿ ಅವರು “ಧರಣಿ ಮಂಡಲ ಮಧ್ಯದೊಳಗೆ” ಪದ್ಯಕ್ಕೆ ಯಕ್ಷಗಾನದ ದಾಟಿಯಲ್ಲಿ ಜೀವತುಂಬಿದ್ದು ಪರಮಾದ್ಬುತ. “ಒಂದು ದಿನ ಸೊಬಗಿಂದ” ಎಂಬ “ಕೀಚಕವಧೆ” ಯ ಪದ್ಯಕ್ಕೆ ಕೀಚಕನಾಗಿ, ಹಾಗೆಯೇ “ಕಂಡನು ಭಸ್ಮಾಸುರನು ಮೋಹಿನಿಯ” ಎಂಬ “ಭಸ್ಮಾಸುರ ಮೋಹಿನಿ” ಯ ಪದ್ಯಕ್ಕೆ ಭಸ್ಮಾಸುರನಾಗಿ ಚಿಟ್ಟಾಣಿಯವರು ಅಭಿನಯಿಸಿದ್ದು ನೆನಪಿಸಿಕೊಂಡರೇ ರೋಮಾಂ‌ಚನವಾಗುತ್ತದೆ. ನಾವುಡರು ಶೃಂಗಾರ, ಕರುಣ, ವೀರರಸದ ಪದ್ಯಗಳನ್ನು ಹಾಡುವಲ್ಲಿ ಸಿದ್ದಹಸ್ತರಾಗಿದ್ದರು. ಪ್ರತಿವರ್ಷವು ಕನಿಷ್ಠ ನಾಲ್ಕಾರು ಹೊಸ ರಾಗಗಳನ್ನು ನೀಡುತ್ತಲೇ ಬಂದಿದ್ದರು. ಆಶು ಕವಿತ್ವವು ಅವರಿಗೆ ಕರಗತವಾಗಿತ್ತು.

   ನಾವುಡರ ಒಡನಾಟದಲ್ಲಿ ಸುತ್ತು – ಗತ್ತಿನ ಮೇರು ನಟರಾಗಿದ್ದ ವೆಂಕಟೇಶ ಜಲವಳ್ಳಿಯವರು ಅಭಿಮಾನಪಟ್ಟಿದ್ದಾರೆ.  ಕುಂಜಾಲು – ಕಿನ್ನಿಗೋಳಿ – ಹಳ್ಳಾಡಿ ಮೊದಲಾದ ಹಾಸ್ಯ ನಟರಲ್ಲದೆ, ಯಾಜಿ – ಕೊಂಡದಕುಳಿ – ಮಂಟಪ ಮೊದಲಾದ ಶ್ರೇಷ್ಠರ ಪಾತ್ರಗಳೆಲ್ಲಾ ನಾವುಡರ ಭಾಗವತಿಕೆಯಲ್ಲಿ ಶೋಭಾಯಮಾನವಾಗಿವೆ. ನಾವುಡರ ವಾತ್ಸಲ್ಯಕ್ಕೆ ಭಾಜನರಾಗಿದ್ದ ಸದಾಶಿವ ಅಮೀನರಂತು ನಾವುಡರ ನಂತರದಲ್ಲಿ ಮತ್ತೊಬ್ಬರನ್ನು ನಾವುಡರು ಕುಳಿತ ಜಾಗದಲ್ಲಿ ನೋಡಲಾಗದೆ ಬೇರೆ ಮೇಳಕ್ಕೆ ಹೋಗಿ ಮೂರ್ನಾಲ್ಕು ವರ್ಷಗಳ ಬಳಿಕ 20 ವರ್ಷಗಳಷ್ಟು ಕಾಲ ನೇಪಥ್ಯಕ್ಕೆ ಸರಿದರೂ ಮತ್ತೆ ರಂಗಕ್ಕೆ ಮರಳಿ ನಾವುಡರೊಂದಿಗಿನ ಒಡನಾಟದ ಗಟ್ಟಿತನವನ್ನು ತೋರುತ್ತಿದ್ದಾರೆ. ನಾವುಡರ ಸಮಕಾಲೀನ ಇನ್ನೋರ್ವ ಪ್ರಸಿದ್ದ ಭಾಗವತರೆನಿಸಿದ ಸುಬ್ರಹ್ಮಣ್ಯ ಧಾರೇಶ್ವರರು ನಾವುಡರ ಶ್ರೇಷ್ಠತ್ವವನ್ನು ಮುಕ್ತಕಂಠದಿಂದ ಒಪ್ಪಿದ್ದಾರೆ. “ಭಾಗವತಿಕೆಗೆ ನಾವುಡರೇ ಸ್ಪೂರ್ತಿ” ಎಂದು ರಾಘವೇಂದ್ರದ್ವಯರ ಅಭಿಪ್ರಾಯ ಕೂಡ. ಸ್ವತಃ ಪ್ರಸಂಗಕರ್ತರಾಗಿ ತನ್ನ ಪ್ರಸಂಗಗಳಂತೆ ಇತರ ಪ್ರಸಂಗಕರ್ತರ ಪ್ರಸಂಗಗಳನ್ನು ತಮ್ಮ ಭಾಗವತಿಕೆಯ ತ್ರಾಣದಿಂದ ಕಟ್ಟಿಕೊಟ್ಟು ನಾವುಡರು ಅಜರಾಮರರಾಗಿದ್ದಾರೆ.

    ಕಾಳಿಂಗ ನಾವುಡರು ಹುಟ್ಟಿದ್ದು ೧೯೫೮ರ ಜೂನ್ ೬ ರಂದು. ಬದುಕಿದ್ದರೆ ಅವರಿಗೀಗ ೬೨ ತುಂಬುತ್ತಿತ್ತು. ೧೯೯೦ ರ ಮೇ ೨೭ ರಂದು ಕೇವಲ ೩೨ ವರ್ಷಗಳಾಗುವ  ಮುನ್ನವೇ ದೇವರ ಪಾದವನ್ನು ಸೇರಿದ ಅವರು ಬದುಕಿದ್ದ ಅತ್ಯಲ್ಪಾವಧಿಯಲ್ಲಿ ಮಾಡಿದ ಸಾಧನೆಯೇನು ಕಡಿಮೆಯಲ್ಲ.  ಇನ್ನಷ್ಟು ವರ್ಷಗಳು ಬದುಕಿದ್ದರೆ ಯಕ್ಷರಂಗವನ್ನು ಮತ್ತೆಷ್ಟು ಬೆಳೆಸುತ್ತಿದ್ದರೆಂದು ಊಹೆಗೆ ನಿಲುಕದು. ಬದುಕಿದ್ದಾಗ ರಂಗದಲ್ಲೂ, ನೇಪಥ್ಯದಲ್ಲೂ, ಸಾರ್ವಜನಿಕ ವಲಯದಲ್ಲೂ ಗೌರವಕ್ಕೆ ಪಾತ್ರವಾಗಿದ್ದ ಅವರು ಅಳಿದಿಷ್ಟು ಸಮಯವಾದರೂ ಯಕ್ಷೋಪಾಸಕರ ಒಡಲಲ್ಲಿ ರಸರಾಗ ಚಕ್ರವರ್ತಿಯಾಗುಳಿದಿದ್ದಾರೆ!. ಅವರನ್ನು ಅಧ್ಯಯನದ ವಸ್ತುವನ್ನಾಗಿಸಿ ಶಾಲಾ ಪಠ್ಯದಲ್ಲಿ ಸೇರ್ಪಡೆಗೊಳಿಸುವ ಸಾಂಸ್ಕೃತಿಕ ಬದ್ದತೆಯನ್ನು ಮೆರೆಸಬೇಕಷ್ಟೇ.

                           – ಮಂಜುನಾಥ ಗಾಂವಕರ್, ಬರ್ಗಿ.

ಲೇಖಕರ ಪರಿಚಯ:ವೃತ್ತಿಯಲ್ಲಿ ಪ್ರೌಢ ಶಾಲಾ  ಅಧ್ಯಾಪಕರಾಗಿರುವ ಮಂಜುನಾಥ ನಾಯಕ, ಬರ್ಗಿಯವರು ಯಕ್ಷಗಾನದ ಹವ್ಯಾಸಿ ಕಲಾವಿದರು. ಉತ್ತಮ ವಾಗ್ಮಿಗಳೂ. ಪ್ರಬುದ್ದ ತಾಳಮದ್ದಲೆಯ ಅಥದಾರಿಗಳು. ಬರಹಗಾರರೂ ಕೂಡಾ. ಇವರ ಕೆಲ ಕೃತಿಗಳು ಪ್ರಕಟವಾಗಿವೆ.

  

ಕಾಳಿಂಗ ನಾವುಡರು ನಮ್ಮನ್ನಗಲಿ 30 ವಷಗಳ ನೆನಪಿಗೆ ಈ ಲೇಖನ….

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*