Site icon ಒಡನಾಡಿ

ಮಂಕಿಮಡಿ ಶಾಲೆಯ ಉದಯ ನಾಯ್ಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಮನಸು ಮುಖಮಲ್ಲು
ಪ್ರತಿಭೆ ಅಭಿಜಾತ
ಮುಟ್ಟಿದರೆ ಮುದುಡಿಕೊಂಬ
ಪತ್ವರ್ತೆಗಿಡವೀತ
ಅಭ್ಯಾಸಗಳ ಅಣ್ಣ ನಿತ್ಯ
ಗುಣ ಸಂಪನ್ನ
ಯಾವುದಕ್ಕೂ ಒಲ್ಲೆಂದು
ತಲೆಯಾಡಿಸದ ಹಿರಿಯಣ್ಣ!

ಹಿಡಿದ ಕೆಲಸದಲ್ಲಿ ಏಕಾಗ್ರತೆ, ಅಕಳಂಕ ಮನಸ್ಸು, ಅಗತ್ಯಕ್ಕೆ ತಕ್ಕ ವಿನಯ, ಅಜಾತಶತ್ರು, ಉಜ್ಜಿ ನೋಡಿದಷ್ಟು ಸುಖ ಕೊಡುವ ಶ್ರೀಗಂಧದ ಚಕ್ಕೆಯಂತೆ ಹಿತ-ಮಿತ ಭಾಷೆ, ಮೌನ ಸಂಘಟನೆಯ ಮೂಲಕ, ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿ, ಧ್ವನಿ ಮೆದು, ಮಾರ್ಗ ಹಿತ-ಮಿತ, ತನ್ನೆದೆಗೆ ನಿಜವೆನಿಸಿದ ಕೆಲಸಕ್ಕಾಗಿ ಸದಾ ಹಾತೊರೆಯುವ ಮಂಕಿಯ ಉದಯ ರಾಮಚಂದ್ರ ನಾಯ್ಕ ರವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಇಡಿ ಶಿಕ್ಷಕ ಕುಲಕ್ಕೆ ಸಂತಸ ತಂದಿದೆ.

ಗಣಿತವೆಂದರೆ ಸುಲಿದ ಬಾಳೆಹಣ್ಣಿನಂದದಿ ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠ ಬೋಧನೆ. ಅನ್ನ ನೀಡುವ ಪವಿತ್ರ ಮಂದಿರ ಶಾಲೆ ಎನ್ನುವ ಸತ್ಯದ ಅರಿವಿನೊಂದಿಗೆ ಇತರ ಸಾಮಾಜಿಕ ಚಟುವಟಿಕೆಗಳೆಲ್ಲ ಗರಿಗೆದರುವುದು ಶಾಲೆ ಬಿಟ್ಟ ನಂತರ ಅಥವಾ ರಜಾ ದಿನದಂದು ಮಾತ್ರ. ಮಕ್ಕಳಿಗಕ್ಕರದ ನಾಲ್ಕು ಅಕ್ಷರದ ವಿದ್ಯೆಗೆ ಎಂದು ಚ್ಯುತಿ ಬಾರದ ರೀತಿಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡ ಇವರು ಮಕ್ಕಳ ಇಷ್ಟದ ಗಣಿತ ಮೇಷ್ಟ್ರು.

ಮಾತನಾಡುವ ಹಾಗೆ ಇರಲಿ ಮಗು ಶೈಲಿ
ನಯವಾಗಿ ಅರಳುವುದು ಹೂವು ನಿನ್ನ ಕೈಲಿ
ಎಳೆದು ತಂದರೆ ಕೃತಕ ಶಬ್ದಗಳ ಪುಂಜ
ಕೈಗೆ ಸಿಕ್ಕದೆ ಓಡಿ ಹೋಗುವುದು ಹುಂಜ-
ಕವಿ ದಿನಕರ ದೇಸಾಯಿ ಅವರ ಆಶಯದಂತೆ ಮಕ್ಕಳ ಓದು ಬರಹಕ್ಕೆ ಮೊದಲ ಆದ್ಯತೆ ನೀಡಿ ಅವರ ಅಭಿರುಚಿಗೆ ತಕ್ಕಂತೆ ಪಾಠ ಮಾಡುವ ಪ್ರಯೋಗಶೀಲ ಬೋಧನಾ ತಂತ್ರ ಇವರದ್ದಾಗಿದೆ. ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಂತಿರುವ ಗಣಿತವನ್ನು ಅವರ ಕೈಯಲ್ಲಿ ಹೂವಿನಂತೆ ನಯವಾಗಿ ಅರಳಿಸಿ ಅದನ್ನು ಆಸ್ವಾದಿಸುವ ಕಲೆಗಾರಿಕೆಯ ಬೋಧನಾ ತಂತ್ರ ಇವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬೋಧನಾ ಕಲಿಕಾ ಪ್ರಕ್ರಿಯೆ ಕುರಿತು ಪರ್ಯಾಲೋಚನೆ ನಡೆಸಬಲ್ಲ ಶಿಕ್ಷಕರಿಗೆ ಸಹಜವಾಗಿ ಶಿಕ್ಷಣದಡೆಗೆ ಶೋಧನೆ ಮತ್ತು ಕುತೂಹಲದ ದೃಷ್ಟಿಕೋನವಿರುತ್ತದೆ. ಇಂಥಹ ವಿಶಿಷ್ಟ ದೃಷ್ಟಿಕೋನದ,ವಿಶಾಲ ವ್ಯಕ್ತಿತ್ವದ ಉದಯ ನಾಯ್ಕ ರವರ ತಂದೆ ದಿವಂಗತ ರಾಮಚಂದ್ರ ನಾಯ್ಕ, ತಾಯಿ ಲಕ್ಷ್ಮಿ ಅವರ ಮಗನಾಗಿ ಮಂಕಿಯ ಸಿಂಗಾಣಿಹಿತ್ತಲಲ್ಲಿ ೧೯೭೨ ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಂಕಿಯಲ್ಲಿಯೂ, ಪದವಿಪೂರ್ವ ಮತ್ತು ವೃತ್ತಿ ತರಬೇತಿ ಶಿಕ್ಷಣವನ್ನು ಶಿರಾಲಿಯಲ್ಲಿಯೂ, ಹೊನ್ನಾವರದ ಎಸ್. ಡಿ.ಎಮ್. ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು,ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿ. ೧೯೯೭ ರಂದು ಹಳಿಯಾಳದ ಮಾಯನಾಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ಮೂರು ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ,೨೦೦೦ ಇಸವಿಯಂದು ಸಿದ್ದಾಪುರ ತಾಲೂಕಿನ ಕಾನಗೋಡು ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು. ಅಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ೨೦೦೪ ರಂದು ಹೊನ್ನಾವರ ತಾಲೂಕಿನ ಮಂಕಿ ಮಡಿಯ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದ ನಂತರ ಶಾಲೆಯ ಇತಿಹಾಸವನ್ನೇ ಬದಲಿಸಿದರು. ಮಕ್ಕಳ ಸ್ನೇಹಿ ಶಾಲಾ ಪರಿಸರವನ್ನು ನಿರ್ಮಿಸಿ ೬೧ ಮಕ್ಕಳಿರುವ ಹಾಜರಾತಿಯನ್ನು ೯೭ಕ್ಕೆರಿಸಿ ಗುಣಮಟ್ಟದ ಕಲಿಕೆಗೆ ವಿಶೇಷ ಪ್ರಾಧಾನ್ಯತೆ ನೀಡಿದರು.

ಇತ್ತೀಚೆಗೆ ಶಾಲಾ ಸುವರ್ಣ ಮಹೋತ್ಸವ ಆಚರಿಸಿ ಇಡೀ ತಾಲೂಕಿಗೆ ಮಾದರಿಯಾದ ಕಾರ್ಯಕ್ರಮ ಸಂಘಟಿಸಿ ಊರಿಗೆ ಹೆಮ್ಮೆಪಡುವ ಶಿಕ್ಷಕರಾಗಿ ಜನಮನ್ನಣೆ ಗಳಿಸಿದರು. ಕಳೆದ ಎರಡು ದಶಕಗಳಿಂದಲೂ ಒಂದೇ ಶಾಲೆಯಲ್ಲಿದ್ದರು ಯಾರಿಗೂ ಹೊರೆಯಾಗದೆ ಪಾಲಕ-ಬಾಲಕ- ಶಿಕ್ಷಕರ ಪ್ರೀತಿ ಗಳಿಸಿ ಶಾಲಾ ಭೌತಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಕಾರಣಿಕರ್ತರಾದರು. ತನ್ನೂರಿನ ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಗ್ಗಲಿರುಳೆನ್ನದೆ ದುಡಿದು ದಣಿವರಿಯದ ಮಕ್ಕಳ ಪಾಲಿನ ಅಚ್ಚುಮೆಚ್ಚಿನ ಗುರುಗಳಾಗಿ ಎಲ್ಲರ ಪ್ರೀತಿಗೆ ಪಾತ್ರರಾದರು. ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದವರೆಗೂ ಮಕ್ಕಳು ಭಾಗವಹಿಸಲು ಸೂಕ್ತ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಇವರದ್ದು. ಶಾಲಾ ರಜಾ ಅವಧಿಯಲ್ಲಿಯೂ ಶಾಲೆಯ ಸುತ್ತಮುತ್ತಲಿನ ಗಿಡ ಮರಗಳಿಗೆ ನೀರು ಉಣಿಸಿ ಶಾಲಾ ಪರಿಸರ ವನ್ನು ಉತ್ತಮವಾಗಿಡುವಲ್ಲಿ, ಪರಿಸರ ಪ್ರೇಮಿ ಶಿಕ್ಷಕರಾಗುವಲ್ಲಿ ಇವರ ಶ್ರಮ ಸಾರ್ಥಕವಾಗಿದೆ.

ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು ನಿರೂಪಣೆಯ ಮೂಲಕ ತಾಲೂಕಿನಾದ್ಯಂತ ಪರಿಚಿತರಾಗಿ ಭಾರತ ಸೇವಾದಳ ತಾಲೂಕಾ ಸಂಘಟಕರಾಗಿಯೂ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿಯೂ, ನೌಕರರ ಸಂಘದ ನಿರ್ದೇಶಕರಾಗಿಯೂ ಇವರ ಸೇವೆ ಅವಿಸ್ಮರಣೆಯವಾದದ್ದು. ಜಿಲ್ಲಾ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ಪ್ರಾಮಾಣಿಕ ಸೇವೆ ಸಲ್ಲಿಸಿ ಇವರು ಬದುಕಿನಲ್ಲಿ ಎದುರಾದ ವೇದನೆಯನ್ನೆಲ್ಲ ಸಂವೇದನೆಯನ್ನಾಗಿಸಿ ತಾಳ್ಮೆಯಿಂದ ಎಲ್ಲವನ್ನು, ಎಲ್ಲರನ್ನು ಗೆಲ್ಲುವುದರ ಮೂಲಕ ಎಲ್ಲರೊಳಗಿದ್ದು ಎಲ್ಲರಂತಾಗದೆ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡಿರುತ್ತಾರೆ.

ಅಂತರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ಅವರ ಕಾರ್ಯ ಕ್ಷೇತ್ರದ ವಿಸ್ತಾರಕ್ಕೆ ಸಾಕ್ಷಿಯಾಗಿದೆ. ಓರ್ವ ಕ್ರಿಯಾಶೀಲ ಶಿಕ್ಷಕರಾಗಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಾಲೆಯ ಎಸ್. ಡಿ. ಎಮ್. ಸಿ.ಮತ್ತು ಹಳೆ ವಿದ್ಯಾರ್ಥಿ ಸಂಘದವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ, ಪಾಲಕರ ಪ್ರೀತಿ ಗಳಿಸಿ,ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರಾಗಿ, ಅತ್ಯುತ್ತಮ ನಿರೂಪಕರಾಗಿ, ಸಂಘಟಕರಾಗಿ ಗುರುತಿಸಿಕೊಂಡಿರುತ್ತಾರೆ. ದಾನಿಗಳಿಂದ ಸ್ಮಾರ್ಟ್ ಕ್ಲಾಸ್ ಸಿದ್ಧಗೊಳಿಸಿ ಬೋಧನೆಯಲ್ಲಿ ನಾವಿನ್ಯಯುತ ಚಟುವಟಿಕೆ ಹಾಗೂ ಮಾದರಿ ಪಾಠ ಬೋಧನೆ ಇವರ ಕರ್ತೃತ್ವ ಶಕ್ತಿಗೆ ಹಿಡಿದ ಮೈಲುಗಲ್ಲಾಗಿದೆ.

ಸದಾ ಒಂದಿಲ್ಲೊಂದು ಹೊಸತನದ ನಿರೀಕ್ಷೆಯ ಮಧುರತೆಯೊಂದಿಗೆ ಕಾರ್ಯ ಪ್ರವೃತ್ತರಾಗುವ ಉದಯ ನಾಯ್ಕರವರ ಪತ್ನಿ ವೀಣಾ ನಾಯ್ಕ, ಮಗಳು ಅಭಿಷಾ ವೃತ್ತಿಯಲ್ಲಿ ಇಂಜಿನಿಯರ್ ಆದರೆ, ಮಗ ಆಕಾಶ ಇನ್ನೂ ವಿದ್ಯಾರ್ಥಿ. ಇವರ ಬದುಕು ಸದಾ ಹಸಿರಾಗಿರಲಿ, ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಇವರನ್ನರಸಿ ಬರಲಿ ಎಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್.ನಾಯ್ಕ
ನಲಿ-ಕಲಿ ಶಿಕ್ಷಕ ಹೊನ್ನಾವರ

Exit mobile version