ಕಸಾಪ ಆಜೀವ ಸದಸ್ಯರ ಸಭೆ: ವಾರ್ಷಿಕ ಲೆಕ್ಕಪತ್ರ ಮಂಡನೆ
ಹಳಿಯಾಳ : ಸಂಘಟನೆ ಎಂಬುದು ಬರಿ ಹೆಸರಿಗಷ್ಟೇ ಇದ್ದರೆ ಸಾಲದು. ಹುದ್ದೆ ಕೂಡಾ ವಿಸಿಟಿಂಗ್ ಕಾರ್ಡ ಶೋಕಿಯಾಗಬಾರದು. ಯಾವುದೇ ಸಂಘಟನೆ ಯಿರಲಿ ಅದು ಸದಾ ತನ್ನ ಉದ್ದೇಶಿತ ಸಮಾಜಮುಖಿ ಚಟುವಟಿಕೆ ಹೊಂದಿರಬೇಕು. ಜೊತೆಗೆ ಕ್ರಿಯಾಶೀಲತೆ ಹಾಗೂ ಪಾರದರ್ಶಕತೆಯಿಂದಿರಬೇಕು. ಅದೇ ಸಂಘಟನೆಯ ನಿಜವಾದ ಯಶಸ್ಸು. ಆ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ ಎಂಬ ಅಭಿಮಾನ ನಮಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ನುಡಿದರು.
ಅವರು ಹಳಿಯಾಳದ ಚಂದಾವನದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಮ್ಮ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ರಾಜ್ಯ ಸಮಿತಿಯಿಂದ ಹಾಗೂ ಬೇರೆ ಬೇರೆ ಮೂಲಗಳಿಂದ ಬಂದಿರುವ ಒಟ್ಟು ಹಣಕಾಸಿನ ನೆರವು ಹಾಗೂ ಮಾಡಿರುವ ಒಟ್ಟು ಖರ್ಚುಗಳ ಲೆಕ್ಕಪತ್ರದ ವ್ಯವಹಾರವನ್ನು ಅತ್ಯಂತ ಶಿಸ್ತು ಬದ್ಧವಾಗಿ ಇಡಲಾಗಿದೆ. ವಾರ್ಷಿಕವಾಗಿ ಅದನ್ನ ಆಡಿಟ್ ಮಾಡಿಸಿ ರಾಜ್ಯ ಸಮಿತಿಗೆ ಸಲ್ಲಿಸುವ ಜೊತೆಗೆ ನಾವು ಚುನಾವಣೆಯ ಸಂದರ್ಭದಲ್ಲಿಯೇ ಹೇಳಿದ ಹಾಗೆ ಪ್ರತಿ ವರ್ಷ ಆಜೀವ ಸದಸ್ಯರ ಸಭೆಯನ್ನು ಕರೆದು ನಮ್ಮ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸುತಿದ್ದೇವೆ. ಸಾಹಿತ್ಯ ಪರಿಷತ್ತಿನ ಲೆಕ್ಕಪತ್ರ ವ್ಯವಹಾರ ತೆರೆದ ಪುಸ್ತಕದ ಹಾಗೆ ಮುಕ್ತವಾಗಿದೆ ಎಂದರು.
ಸಾಹಿತ್ಯ ಸಮ್ಮೇಳನಗಳ ಜೊತೆಗೆ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು, ಶಾಲೆಗಳತ್ತ ಸಾಹಿತ್ಯ ಪರಿಷತ್ತು, ವಿಚಾರ ಸಂಕಿರಣ, ಪುಸ್ತಕ ಪರಿಚಯ, ಪುಸ್ತಕ ಬಿಡುಗಡೆ, ನವೆಂಬರ್ ತಿಂಗಳಿಡಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮಗಳ ಜೊತೆಗೆ ಪ್ರತಿವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ, ಶಿರೂರು ಸಂತ್ರಸ್ಥ ವಿದ್ಯಾರ್ಥಿಗಳಿಗೆ ಮಾನವೀಯ ನೆರವು ಹೀಗೆ ಹತ್ತು ಹಲವರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಆಶಯದ ಹಾಗೆ ಜನಸಾಮಾನ್ಯರ ಪರಿಷತ್ತು ಆಗಿ ಮುನ್ನಡೆಯುತ್ತಿದೆ ಎಂಬ ಖುಷಿಯಂತೂ ನಮಗೆ ಇದ್ದೇ ಇದೆ. ಮುಂದಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ಸಮಾವೇಶ, ಬುಡಕಟ್ಟು ಸಾಹಿತ್ಯ ಸಮಾವೇಶಗಳ ಜೊತೆಗೆ ಹಲವಾರು ವೈಶಿಷ್ಟ್ಯ ಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಮತ್ತು ಯೋಚನೆ ಇದೆ ಎಂದು ಹೇಳಿ, ಸಹಕರಿಸಿದವರನ್ನು ಸ್ಮರಿಸಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಲೆಕ್ಕಪತ್ರ ಮಂಡಿಸಿದರು. 2023-2024ನೇ ಸಾಲಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ , ನಾಲ್ಕು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ನಿರ್ವಹಣಾ ಅನುದಾನ ಸೇರಿದಂತೆ ರಾಜ್ಯ ಸಾಹಿತ್ಯ ಪರಿಷತ್ತಿನಿಂದ 11,36,038 ರೂ ಬಂದಿದ್ದು ಇದನ್ನು ನಿಯಮಾನುಸಾರ ಖರ್ಚುಮಾಡಲಾಗಿದೆ. ಈಗಾಗಲೇ ಇದರ ಆಡಿಟ್ ಮಾಡಿಸಲಾಗಿದ್ದು, ಕೇಂದ್ರ ಸಮಿತಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಿ ದಾನಿಗಳನ್ನು ಸ್ಮರಿಸಿದರು.
ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದಕ್ಕೆ ರಾಜ್ಯಾಧ್ಯಕ್ಷರು ಪ್ರಶಂಸನಾ ಪತ್ರ ನೀಡಿರುವುದೇ ನಿದರ್ಶನವಾಗಿದೆ. ಅನುದಾನ ಇಲ್ಲದಿದ್ದರೂ ಸಮ್ಮೇಳನ ನಡೆಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.
ಹಳಿಯಾಳ ತಾಲೂಕ ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ ಶುಭಾಶಯ ಕೋರಿದರು. ಆಜಿವ ಸದಸ್ಯರ ಪರವಾಗಿ ಮುಂಡಗೋಡದ ಡಾ.ಪಿ.ಬಿ ಛಬ್ಬಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿ ಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಕುಸ್ತಿಪಟು ಸುಶೀಲ್ ಸಿದ್ದಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಬೊಂಬೆಯಾಟದ ಕಲಾವಿದ ಸಿದ್ದಪ್ಪ ಬಿರಾದರವರನ್ನು ಸನ್ಮಾನಿಸಿ ಗೌರವಿಸಿದರು. ಶಾಂತಾರಾಮ ಚಿಬ್ಬುಲ್ಕರ ಸನ್ಮಾನಿತರ ಪರಿಚಯ ಮಾಡಿದರು.
ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆಹೊಸೂರು ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯ ಜಯಶೀಲ ಆಗೇರ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಸಮಿತಿ ಸದಸ್ಯ ಸಿದ್ದಪ್ಪ ಬಿರಾದರ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳ ಕಸಾಪ ಕಸಾಪ ಅಧ್ಯಕ್ಷರು, ಜಿಲ್ಲಾ ಸಮಿತಿ ಸದಸ್ಯರು ಹಾಗೂ ಆಜೀವ ಸದಸ್ಯರು ಭಾಗವಹಿಸಿದ್ದರು.