Site icon ಒಡನಾಡಿ

ಕಾನನದ ಶಾಲೆಗೆ ‘ಕ್ಲೀನ ಗ್ರೀನ ಎಕ್ಸಲೆನ್ಸ ಸ್ಕೂಲ್’ ಪ್ರಶಸ್ತಿ

ಅಣಶಿ ಇದು ಜೋಯಿಡಾದ ಗಡಿ ಪ್ರದೇಶ. ಹುಲಿ ಸಂರಕ್ಷಿತ ಪ್ರದೇಶವೆಂದು ಕರ್ನಾಟಕ ನಕಾಶೆಯಲ್ಲಿ ಗುರ್ತಿಸಿಕೊಂಡ ಊರು. ಜೋಯಿಡಾ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಊರು. ಕುಣಬಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸಿದ ಸಣ್ಣ ಕಾಡಿನ ಹಳ್ಳಿ. ಇಲ್ಲಿನ ಪ್ರಾಥಮಿಕ ಶಾಲೆ ಸದಾ ಜಾಗೃತವಾಗಿದ್ದು ಒಂದಲ್ಲ ಒಂದು ಚಟುವಟಿಕೆ ಮಾಡುತ್ತಾ ತನ್ನ ಅಸ್ಮಿತೆಯನ್ನು ಸಾರುತ್ತಿರುತ್ತದೆ. ಅಣಶಿಯ ಸರಕಾರಿ ಹೀಯ ಪ್ರಾಥಮಿಕ ಕನ್ನಡ ಶಾಲೆ. ಸುತ್ತಮುತ್ತಲಿನ ಸುಮಾರು ಹದಿನೈದು ಹಳ್ಳಿಯಿಂದ ಮಕ್ಕಳು ಶಾಲೆಗೆ ಬರುತ್ತಾರೆ. ಭೌಗೋಳಿಕ ವಾಗಿ ಅನನ್ಯವಾಗಿರುವ ಪ್ರತಿ ಹಳ್ಳಿಯ ಸಂಸ್ಕೃತಿಯೂ ಸೇರಿ ಈ ಶಾಲೆ ರೂಪಿತವಾಗಿದೆ.

ಹೀಗಾಗಿಯೆ ಈ ವರ್ಷ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಚಿಕ್ಕಬಳ್ಳಾಪುರ ವತಿಯಿಂದ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಗೆ ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಆಯ್ಕೆಯಾಗಿದೆ. ಪ್ರಶಸ್ತಿಯು 10,000 ರೂಗಳ ನಗದು ಹಾಗೂ ಆಕರ್ಷಕ ಪಾರಿತೋಷಕ ಒಳಗೊಂಡಿದೆ ಜೊತೆಗೆ ಶಾಲೆಯ ಆಕರ್ಷಕ ಪ್ರದರ್ಶನ ಫೋಟೋಗಳನ್ನು ಟ್ರಸ್ಟ್ ನ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.“ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್” ವತಿಯಿಂದ ಟ್ರಸ್ಟನ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂಧನ ಸಾಯಿ ಅವರ ೪೫ ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಆಯ್ದ ಉತ್ತಮ ಸರಕಾರಿ ಶಾಲೆಗಳಿಗೆ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.ಪ್ರಶಸ್ತಿ ವಿತರಣೆ ಕಾರ್ಯಕ್ರಮವು ದಿನಾಂಕ 27 ರ ಜುಲೈ , ಶನಿವಾರದಂದು ಸತ್ಯಸಾಯಿ ಗ್ರಾಮ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರದಲ್ಲಿ ಬೆಳಿಗ್ಗೆ 9 ಗಂಟೆಗೆ ಜರುಗಲಿದೆ. ಈಗಾಗಲೇ ಈ ಸಂಸ್ಥೆಯವರು ಪೂರಕ ಪೌಷ್ಟಿಕ ಆಹಾರವಾಗಿ ನೀಡುತ್ತಿರುವ ಸಾಯಿ ಶ್ಯೂರ್ ರಾಗಿ ಹೆಲ್ತ ಪೌಡರನ್ನು ಉಚಿತವಾಗಿ ರಾಜ್ಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಂದರಿಂದ ಹತ್ತನೇ ವರ್ಗದ ವಿದ್ಯಾರ್ಥಿಗಳಿಗೆ ಹಾಲಿನ ಜೊತೆ ವಿತರಿಸಲಾಗುತ್ತಿದೆ. ಅದರ ಜೊತೆಗೆ ಸಂಸ್ಥೆಯು ಉತ್ತಮ ಸರಕಾರಿ ಶಾಲೆಗಳನ್ನು ಗುರ್ತಿಸುವ ಕೆಲಸವನ್ನು ಮಾಡುತ್ತಿದೆ.

           ಶಾಲೆಯಲ್ಲಿ ಮೂವರು ಖಾಯಂ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಕರ ಶ್ರದ್ದೆ ಮಕ್ಕಳನ್ನು ಬಹುವಾಗಿ ವಿವಿಧ ಚಟುವಟಿಕೆಯಲ್ಲಿ ತೊಡಗಿಸಲು ಸಾಧ್ಯವಾಗಿದೆ. ಈ ಶಾಲೆಯ ಶಿಕ್ಷಕಿ ಹಾಗೂ ಲೇಖಕಿಯಾದ ಅಕ್ಷತಾ ಕೃಷ್ಣಮೂರ್ತಿ ಅವರ ಸಂಪೂರ್ಣ ಜವಾಬ್ದಾರಿಯಲ್ಲಿ ಇಡೀ ಶಾಲೆ ಒಟ್ಟಾಗಿ ಕೆಲಸ ಮಾಡುತ್ತದೆ. ಕೊಂಕಣಿ ಮಾತೃಭಾಷೆಯಿರುವ ಮಕ್ಕಳಿಗೆ  ಹಾಗೂ ಜನರಲ್ಲಿ  ಕನ್ನಡ ಪ್ರೇಮವನ್ನು ಬೆಳೆಸಲು ಕಳೆದ ಹಲವಾರು ವರ್ಷಗಳಿಂದ  ಒಂದಿಲ್ಲೊಂದು ವಿಧಾಯಕ ಕನ್ನಡಪರ ಚಟುವಟಿಕೆಯನ್ನು ಶಾಲೆ ಸದ್ದಿಲ್ಲದೆ ಮಾಡುತ್ತಿರುತ್ತದೆ. ಅದರ ಜೊತೆಗೆ ಶೈಕ್ಷಣಿಕವಾಗಿ , ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿ ಮಕ್ಕಳಲ್ಲಿ ಗುಣಾತ್ಮಕ ಬೆಳವಣಿಗೆ ತರಲು ಅನೇಕ ಕಾರ್ಯಕ್ರಮವನ್ನು  ರೂಪಿಸುವ ಮೂಲಕ ಶಾಲೆಯನ್ನು ಸದಾ ಜೀವಂತವಾಗಿಟ್ಟಿದ್ದಾರೆ. ಶಾಲೆಯ ಆಗು ಹೋಗುಗಳನ್ನು ಜಗತ್ತಿಗೆ ತಿಳಿಸಲು ಅಕ್ಷತಾ ಆಯ್ದುಕೊಂಡ ಮಾರ್ಗ ಬರವಣಿಗೆ. ಇವರ ಇಸ್ಕೂಲು ಎಂಬ ಪುಸ್ತಕ ಸರಕಾರಿ ಶಾಲೆಯ ಟೀಚರ್ ಹೇಳುವ ಕಥೆಯಾಗಿದೆ. ತಮ್ಮ ಅಣಶಿ ಶಾಲೆಯನ್ನು ಕೇಂದ್ರವಾಗಿಟ್ಟುಕೊಂಡು , ಜೋಯಿಡಾ ತಾಲೂಕಿನ ಕನ್ನಡ ಶಾಲೆಗಳು ಮಾಡುವ ಕೆಲಸಗಳನ್ನು ದಾಖಲಿಸುತ್ತ  ಹೋಗುತ್ತಾರೆ. 

ಈ ಪುಸ್ತಕದ ಓದುಗರು ಅನೇಕ ರೀತಿಯಲ್ಲಿ ಸಹಾಯದ ನೆರವು ನೀಡಲು ಮುಂದಾದಾಗ,  ಆ ಸಹಾಯವನ್ನು ಸಂಪೂರ್ಣವಾಗಿ ಶಾಲೆಯ ಅಭಿವೃದ್ಧಿಗೆ ತೊಡಗಿಸಿದ್ದನ್ನು ಶಾಲೆ ಗಮನಿಸಿದರೆ ತಿಳಿಯುತ್ತದೆ. ಇಸ್ಕೂಲು ಪುಸ್ತಕ ಮುಖೇನ  ಕನಸಿನ ಶಾಲೆಯ ರೂಪವನ್ನು ಅಣಶಿ ಶಾಲೆಗೆ ಕೊಡುವಲ್ಲಿ  ಯಶಸ್ವಿಯಾಗಿದ್ದಾರೆ. ಈಗಾಗಲೇ  ಶಾಲೆಗೆ ಅಗತ್ಯವಿದ್ದ ಸುಮಾರು ಮೂರು ಲಕ್ಷ ಮೌಲ್ಯದ ಅನೇಕ ಸಾಮಗ್ರಿಗಳನ್ನು ಸಂಗ್ರಹಿಸುವ ಮೂಲಕ ಶಾಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇದೆಲ್ಲವನ್ನು ಗಮನಿಸಿದ ಅನ್ನಪೂರ್ಣ ಟ್ರಸ್ಟ , ಸುಮಾರು 22 ವಿಭಾಗದಲ್ಲಿ ಶಾಲೆಯ ಸಂಪೂರ್ಣ ಇತಿಹಾಸವನ್ನು ಪರಿಶೀಲಿಸಿ ಈ ಪ್ರಶಸ್ತಿಯನ್ನು ನೀಡಿದೆ. ಶಾಲೆ ನಡೆಸುವ ಪರಿಸರಸ್ನೇಹಿ ಕಾರ್ಯಕ್ರಮಗಳು, ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳು, , ಸ್ವಚ್ಛತೆ, ಮಕ್ಕಳ ಸಾಹಿತ್ಯ ರಚನೆ, ಮಕ್ಕಳು ಸಮುದಾಯ ದೊಂದಿಗೆ ತೆರೆದುಕೊಳ್ಳುವ ಬಗೆ, ಕೃಷಿಯಲ್ಲಿನ ಆಸಕ್ತಿ, ಔಷಧಿ ಸಸ್ಯಗಳ ಬಗೆಗಿನ ಕಾಳಜಿ, ಸುತ್ತಮುತ್ತಲಿನ ಪರಿಸರದ ಆಗುಹೋಗುಗಳಿಗೆ ಶಾಲೆಯ ಸ್ಪಂದನೆ, ಹಳೆ ವಿದ್ಯಾರ್ಥಿಗಳ ಶಾಲೆಯ ಮೇಲಿನ ಪ್ರೀತಿ, ನಿಷ್ಟೆಯಿಂದ ಕೆಲಸ ಮಾಡುವ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷೆ ಹಾಗೂ ಸರ್ವ ಸದಸ್ಯರು, ಆರೋಗ್ಯ ಇಲಾಖೆಯ ಜೊತೆಗೂಡಿ ಮಾಡುವ ಮಕ್ಕಳ ಕಾಳಜಿ ಕಾರ್ಯಕ್ರಮಗಳು, ಪಾಲಕರ ಬೆಂಬಲ ಇವೆಲ್ಲ ಅಂಶಗಳನ್ನು ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ  ತಂಡ ಶಾಲೆಯ ಪ್ರಗತಿ ವರದಿ ಪರಿಶೀಲಿಸಿ ಪ್ರಸಂಶಿಸಿದೆ.

ಅಕ್ಷತಾ ಅವರು ಸಂಘಟಿಸುವ ಕಾರ್ಯಕ್ರಮಗಳಿಗೆ ಉಳಿದ ಶಿಕ್ಷಕರ ಸಂಪೂರ್ಣ ಬೆಂಬಲವಿದೆ. ಎಲ್ಲ ರೀತಿಯಲ್ಲಿಯೂ ಚಟುವಟಿಕೆಗಳು ಯಶಸ್ವಿಯಾಗಲು ಮಕ್ಕಳು , ಶಿಕ್ಷಕರು ತಮ್ಮನ್ನು ತಾವು ಸೃಜನಾತ್ಮವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಣಶಿ ಶಾಲೆಯು ಕಳೆದ ಹನ್ನೆರಡು ವರುಷಗಳಿಂದ ಶಾಲೆಯ ಹಿರಿಯ ವರ್ಗದ ವಿದ್ಯಾರ್ಥಿಗಳನ್ಮು ಗದ್ದೆಗೆ ಕರೆದೊಯ್ದು ಕೃಷಿ ಪಾಠ ನೀಡುವುದರ ಜೊತೆಗೆ,  ನಲಿಕಲಿ ಮಕ್ಕಳಿಗೋಸ್ಕರ ವಿಶೇಷವಾಗಿ ಶಾಲೆಯ ಆವರಣದಲ್ಲೆ ಗದ್ದೆ ನಾಟಿ ಮಾಡಿ ಕೃಷಿ ಬಗ್ಗೆ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ ರೂಪಿಸಿದ್ದು ದೃಶ್ಯ ವಾಹಿನಿ ಹಾಗೂ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದು ಮರೆಯುವಂತಿಲ್ಲ.
 
                     ನಾಡಿನಾದ್ಯಂತ ಇರುವ ಇಸ್ಕೂಲು ಓದುಗರು‌ ಅಣಶಿ ಶಾಲೆಯನ್ನು ಹುಡುಕಿಕೊಂಡು ಬಂದು ನೋಡಿದ್ದಾರೆ. ಮಕ್ಕಳಿಗೆ ಶಿಕ್ಷಕರಿಗೆ ಬೆಂಬಲವಾಗಿ ನಿಂತಿದ್ದಾರೆ.  ಕಳೆದ ನಾಲ್ಕೈದು ತಿಂಗಳ ಹಿಂದೆ ಅಣಶಿಗೆ ಪ್ರವಾಸಿಗರಾಗಿ ಆಗಮಿಸಿದ್ದ ಪೋಲೆಂಡ ದೇಶದ ಮಹಿಳೆ ಎಲೆಜೆಬೆತ್ ಶಾಲೆಯ ಸ್ವಚ್ಛತೆ ಹಾಗೂ ವ್ಯವಸ್ಥೆ ಗಮನಿಸಿ, ಮಕ್ಕಳನ್ನು ಮಾತನಾಡಿಸಿ ಖುಷಿಗೊಂಡು ಗ್ರಂಥಾಲಯಕ್ಕೆ ಕನ್ನಡ ಭಾಷೆಯ ಪುಸ್ತಕ ಕೊಳ್ಳಲು ಧನಸಹಾಯ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ. 

“ನಮ್ಮ ಶಾಲೆಯು ಪ್ರಶಸ್ತಿ ಆಯ್ಕೆ ಆಗಿದ್ದು ತುಂಬಾ ಸಂತಸ ತಂದಿದೆ. ಶಿಕ್ಷಕರ ಶ್ರಮದಿಂದ ಈ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು, ಅಕ್ಷತಾ ಕೃಷ್ಣಮೂರ್ತಿ ಅವರು ಸಂಪೂರ್ಣವಾಗಿ ಶಾಲೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ಶಾಲೆಯ ಅಂದ ಹೆಚ್ಚಾಗಿದೆ ಎಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಕಾಂತ ಅಣಶಿಕರ ಅಭಿಪ್ರಾಯ ಪಟ್ಟಿದ್ದಾರೆ . ಶಿಕ್ಷಣ ಇಲಾಖೆ ಜೋಯಿಡಾ, ಶಿಕ್ಷಕರ ಸಂಘ, ತಾಲೂಕು ಪಂಚಾಯತ ಜೋಯಿಡಾ ಹಾಗೂ ಪಾಲಕರ, ಶಿಕ್ಷಕರ ಸಂಪೂರ್ಣ ಸಹಕಾರ ಶಾಲೆಗಿದೆ ಎಂದು ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅಭಿಪ್ರಾಯ ಪಡುತ್ತಾರೆ.

    ಕಾನನದ ಈ ಶಾಲೆಗೆ ಹಾಗೂ ಶಿಕ್ಷಕರಿಗೆ ಅನೇಕ ಪ್ರಶಸ್ತಿಗಳು ಒಲಿದು ಬರಲಿ. ಶಾಲೆ ಇನ್ನು ಹೆಚ್ಚಿನ  ಅಭಿವೃದ್ಧಿ ಕಾಣುವಂತಾಗಲಿ ಎಂಬುದು ಒಡನಾಡಿಯ ಹಾರೈಕೆ.
Exit mobile version