ನಿರಂತರವಾಗಿ ಸುರಿಯುವ
ಮಳೆ
ನಡುವೆ
ಸಾಗಲು
ಕೊಡೆ
ಬೇಕು
ನೀ ನನಗೆ
ಪ್ರೀತಿ ಕೊಡೆ..
ಸುರಿಯುವ ಮಳೆಯನ್ನು ಛತ್ರಿ ನಿಲ್ಲಿಸುವುದಿಲ್ಲ.
ಆದರೆ, ಮಳೆಯ ನಡುವೆ ನೆಡೆಯುವ ಧೈರ್ಯ ನೀಡುತ್ತದೆ.
ಹೌದು ಬಿಸಿಲಿದ್ದಾಗ, ಮಳೆ ಇದ್ದಾಗ ಮೊಗ್ಗು ಅರಳಿ ಸುವಾಸನೆ ಬಿರದೆ ಇರುವ ಹೂ ಎನ್ನುವುದು ಮಕ್ಕಳ ಒಗಟಿನ ಮಾತಿನಲ್ಲಿ ಕೂಡ ಛತ್ರಿ…
ಸುಮಾರು 1980-90 ದಶಕದಲ್ಲಿ ಕಪ್ಪು ಛತ್ರಿಗಳದ್ದೇ ಪಾರುಪತ್ಯ. ಪ್ರತಿಷ್ಠೆಯ ಸಂಕೇತ.ಅನಂತರ ದಿನಗಳಲ್ಲಿ ಅದು ಪ್ಯಾಷನ್ ಆಗಿ ತನ್ನ ಬಣ್ಣ ಬದಲಿಸಿಕೊಂಡು ಈಗ ತರೇವಾರಿ ವಿಧದಲ್ಲಿ ಕಾಣುತ್ತೇವೆ..
ಬಯಲು ಸೀಮೆಯಲ್ಲಿ ಮಳೆಗಾಲ ಬಂದಿತೆಂದರೆ ಎಷ್ಟೇ ಕಷ್ಟವಾದರೂ ಮನೆಗೆ ಒಂದು, ಇಲ್ಲವೇ ಎರಡು ಛತ್ರಿ(ಕೊಡೆ) ಇರಲೇಬೇಕು.ಇಲ್ಲದೇ ಹೋದರೆ ಗೋಣಿ ಚೀಲದೊಂದಿಗೆ ಮಳೆಯಲ್ಲಿ ನೆನೆಯುವುದು ತಪ್ಪುವುದಿಲ್ಲ. ಇತ್ತೀಚಿಗೆ ಪ್ಲಾಸ್ಟಿಕ್ ಗೊಬ್ಬರ ಚೀಲ ಬಂದು ನಂತರ ಅದುವೇ ಮಳೆಯ ರಕ್ಷಣೆಗೆ ಬಳಸುವ ಅನಿರ್ವಾತೆಯನ್ನು ಕಂಡಿದ್ದೇವೆ. ಛತ್ರಿ ಎಂದರೆ ಕರಿಬಣ್ಣದ ಮೂರು ಅಡಿ ಉದ್ದದ ಛತ್ರಿ ಮಾತ್ರವೇ ಆಗಿತ್ತು. ಅದರೊಂದಿಗೆ ಊರುಗೋಲಾಗಿಯೂ, ಬೀದಿ ನಾಯಿಗಳಿಂದ ರಕ್ಷಣೆಗೆ ಕೋಲಾಗಿಯೂ,ಮಕ್ಕಳ ಆಟದ ಕೋಲುಗಾಡಿಯಾಗಿಯೂ,ಎತ್ತರದ ವಸ್ತುವನ್ನು ತೆಗೆದುಕೊಳ್ಳಲು ದೋಟಿಯಾಗಿಯೂ, ಮದುವೆಯಲ್ಲಿ ಕಾಶಿಯಾತ್ರೆಯ ಶಾಸ್ತ್ರಕ್ಕೆ ಕೈದಿಟ್ಟೇಯಾಗಿ ಸಾಂಪ್ರದಾಯದೊಂದಿಗೆ ಜೀವನದ ಭಾಗವಾಗಿ ಮನೆಯಲ್ಲಿ ಹೆಮ್ಮೆ ಗತ್ತಿನ ಖಾಯಂ ಅತಿಥಿಯಾಗಿ ಗೋಟಕ್ಕೆ ತೊಗುತ್ತಿತ್ತು. ಊರಿನ ಪಂಚಾಯಿತಿ ಮುಖ್ಯಸ್ಥನ ಇರುವಿಕೆಯನ್ನು ಈ ಛತ್ರಿ ಮತ್ತಷ್ಟು ಖಾತ್ರಿ ಮಾಡುತ್ತಿತ್ತು.ಬರುಬರುತ್ತಾ ಚೀಲದಲ್ಲಿ ಮಡಚಿ ಇಡುವ ಮೋಟು ಛತ್ರಿಗಳು ಬಂದವು. ಬಣ್ಣ ,ಬಣ್ಣದ ಛತ್ರಿಗಳು ಮಳೆಯಿಂದ ರಕ್ಷಣೆಯನ್ನು ಹೊರತು ಪಡಿಸಿ ಶೋಭಾಚಾರದ (ಫ್ಯಾಷನ್) ಪರಿಕರವಾಗಿ ಭಿನ್ನ ವಿಭಿನ್ನ ಶೈಲಿಯ ಛತ್ರಿಗಳು ಮಾರುಕಟ್ಟೆಯಲ್ಲಿ ಲಭ್ಯ. ಅಗತ್ಯ ವಸ್ತುಗಳಿಗೆ ಇರುವ ಬೇಡಿಕೆಯನ್ನು ಮನಗಂಡ ಉದ್ದೇಮದ ಸ್ವರೂಪ ಪಡೆದು ಮಳೆಗಾಲಕ್ಕೂ,ಬೇಸಿಗೆಕಾಲಕ್ಕೂ ಮಾರಾಟಕ್ಕೆ ನಿಂತಿದ್ದಾರೆ. ಕನ್ನಡ ಮಾಸ್ತರ ಕನ್ನಡ ವಿಷಯದಲ್ಲಿ ಕಾಳಿದಾಸನ ಕಾವ್ಯ ಹೇಳುವಾಗ ಬರುವ ಬಿಳ್ಳಗೋಡೆ ,ಛತ್ರಿಚಾಮರ ಬಗ್ಗೆ ವಿವರಣೆ ನೀಡುವಾಗ ಸ್ವರ್ಗದಲ್ಲಿ ಕರವಿಗಳನ್ನು ಬಿಸಿ ಸ್ವಾಗತಿಸಿದಂತೆ ನಾನೇ ರಾಜನಂತೆ ಕಲ್ಪನೆಯ ಲೋಕದಲ್ಲಿ ತೇಲಿದ್ದು ಇದೆ ಛತ್ರಿಯ ಹೆಸರಿನಲ್ಲಿ.
ನಮ್ಮದು ಬಯಲು ಸೀಮೆಯ ಎರಿ ಭೂಮಿಯ 100-120 ಮಣ್ಣಿನ ಮೇಲಮುದ್ದಿಯ ಮನೆಗಳಿದ್ದ ಇದ್ದ ಊರು. ಮುಂಗಾರು ಮಳೆ ಕೈಕೊಟ್ಟರೆ ಹಿಂಗಾರು ಕೈ ಹಿಡಿಯಬೇಕು ಹಾಗೆ ಹಿಡಿದರೆ ಮಳೆ ವಾರಗಟ್ಟಲೆ ಜಿಟಿ ಜಿಟಿ..ಒಂದು ಮಳೆ ಬಿದ್ದರೆ ಹೊಲದಲ್ಲಿ ಕಾಲು ಇಡಲು ಆಗುವುದಿಲ್ಲ ಅಷ್ಟು ಕೆಸರು ಎರಿ ಹೊಲ.ಮನೆಯಲ್ಲಿ ಒಂದೇ ಒಂದು ದೊಡ್ಡ ಛತ್ರಿ ಅದನ್ನು ಮಳೆಗಾಲಕ್ಕೆ ಹೊರಗೆ ತೆಗೆಯುವುದು ವಾಡಿಕೆ.ನಮ್ಮ ದೊಡ್ಡವ್ವಾ ಜಾಣೆ ಮೇ ಕೊನೆಯ ವಾರದಲ್ಲಿ ಊರಿಗೆ ಬರುವ ಛತ್ರಿ ರಿಪೇರಿ ಮಾಡುವವರು ಜೊತೆ ಚೌಕಾಸಿಗಿಳಿದು.ಅವನು ಎರಡು ಸೇರು ಜ್ವಾಳ, 20 ರೂಪಾಯಿ ಕೇಳಿದ್ರೆ ನಮ್ಮ ದೊಡ್ಡವ್ವಾ ಒಂದು ಸೇರು ಜ್ವಾಳ 8 ರೂಪಾಯಿಗೆ ರಿಪೇರಿ ಮಜೂರಿ ಮುಗಿಸುತ್ತಿದ್ದಳು.ಆದರೆ, ರಿಪೇರಿ ಮಾಡುವವನು ಯಾವ ತಕರಾರು ಮಾಡದೆ ಮುರಿದು ಹೋದ ಕಡ್ಡಿ ತೆಗೆದು ಹೊಸ ಕಡ್ಡಿ ಹಾಕಿ, ಹರಿದ ಭಾಗಕ್ಕೆ ಹೊಸ ಅರಿವೇ ಹಾಕಿ ಮುತುವರ್ಜಿಯಿಂದ ಹೊಲೆದು ಕೊಡುತ್ತಿದ್ದ. ರಿಪೇರಿ ಕೆಲಸ ಮುಗಿದು ಛತ್ರಿಯನ್ನು ಒಂದು ಸಾರಿ ನೋಡಿ ಎಂದು ಕೂಗಿದಾಗ ಹೊರ ಬಂದ ದೊಡ್ಡವ್ವಾ ಛತ್ರಿಯನ್ನು ಕೂಲಂಕುಶವಾಗಿ ಪರೀಕ್ಷಿಸಿ ಎತ್ತಿಕೊಂಡು ಒಳಗೆ ಹೋಗಿ ಅದರ ಖಾಯಂ ಜಾಗಕ್ಕೆ ನೇತುಹಾಕಿ. ಅವನ ಮಜೂರಿ ಹಣ,ಜ್ವಾಳ ತಂದುಕೊಟ್ಟು. ಸ್ವಲ್ಪ ತಿಂಡಿ ಎಂದು ಒಳಗೆ ಹೋಗಿ ಎರಡು ಮೂರು ಬಿಸಿ ರೊಟ್ಟಿ, ಬದನೆಕಾಯಿ ಪಲ್ಯ, ಕೆಂಪು ಚಟ್ನಿ ಒಂದಿಷ್ಟು ಮೊಸರು ಹಾಕಿ ರಿಪೇರಿಯವನ ಕೈಗೆ ಕೊಟ್ಟು ತಿನ್ನು ಎನ್ನುತ್ತಿದ್ದಳು. ರಿಪೇರಿಯವನ ಕಣ್ಣಿನಲ್ಲಿ ಕೃತಜ್ಞತಾ ಭಾವ ಮೂಡಿ,ಅಕ್ಕವರ ಇದ್ದೇಲ್ಲಾ ಯಾಕೆ ಮಜೂರಿ ಕೊಟ್ಟಿರಲ್ಲ ಎನ್ನುತ್ತಲೇ ಧನ್ಯತೆಯಿಂದ ರೊಟ್ಟಿ ಮುರಿದು ಬಾಯಿಗಿಟ್ಟುಕೊಂಡನು. ಮನೆಯ ಜಗಲಿಕಟ್ಟೆಗೆ ಬೆನ್ನು ಆಣಿಸಿ ಕುಳಿತ ಅವನನ್ನು ನಮ್ಮ ಅಜ್ಜಿ ಮಾತಿಗೆ ಎಳೆಯುತ್ತಾ ಅವನ ಕುಟುಂಬದ ಉಭಯಕುಶಲೋಪರಿ ವಿಚಾರಿಸಿ ತನ್ನ ಬದುಕಿನ ಅನುಭವಗಳನ್ನು ಹೇಳಿ, ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸು ಅವು ಆದಾರೂ ನಾಲ್ಕು ಕಾಸು, ಒಳ್ಳೇ ಜೀವನ ಕಾಣಲಿ ಎನ್ನುವಷ್ಟರಲ್ಲಿ ಹಾ..ಹು…ಎಂದು ಕೈಯಲ್ಲಿನ ರೊಟ್ಟಿ ಮುಗಿದ್ದ ನೀರಿಗೆ ಬೇಡಿಕೆ ಇಟ್ಟಿರುತ್ತಿದ್ದ ರಿಪೇರಿಯವನು. ತನ್ನ ಸಾಮಾನು ಸರಂಜಾಮು ಎತ್ತಿಕೊಂಡು ಮುಂದಿನ ಓಣಿಗೆ ಹೋಗುವಾಗ ಅವನು ಬರುವುದೇ ವರ್ಷಕ್ಕೊಂದು ಸಾರಿ ಊರಿನ ಕೆಲವು ಮನೆಗಳಲ್ಲಿ ಅವನಿಗೆ ಸಿಗುತ್ತಿದ್ದ ಆತಿಥ್ಯವನ್ನು ನೋಡಿ ಅಂಗಳದಲ್ಲಿ ಆಡುತ್ತಿದ್ದ ನಮಗೆ ಇದೊಂದು ಅವಿನಾಭಾವ ಸಂಬಂಧದಲ್ಲಿ ಮನುಷ್ಯ ಮನುಷ್ಯನಿಗೆ ಕೊಡುವ ದೊಡ್ಡ ಗೌರವ ಎಂದು ಕಾಣುತ್ತಿತ್ತು. ಮುಂದಿನ ಓಣಿಯಲ್ಲಿ ಕೊಡೇ… ರಿಪೇರಿ ಇದೇವೇನರ್ರೀ…. ಛತ್ರಿ ರಿಪೇರಿ… ಮಾಡಿಕೊಡುತ್ತೇವೆ..ಕಡ್ಡಿ ಮುರಿದಿರಲಿ, ಅರಿವೇ ಹರಿದಿದಲಿ.. ಜಬರ್ದಸ್ತ್, ಮಜಬೂತಾಗಿ… ಬಂದೋಬಸ್ತ್ ಆಗಿ ರಿಪೇರಿ ಮಾಡಿಕೊಡುತ್ತೇವೆ ಎಂದು ರಾಗವಾಗಿ ಒದರೋತ್ತಾ ಓಣಿಯಲ್ಲಿ ಮರೆಯಾಗುತ್ತಿದ್ದು. ಆ.. ಧ್ವನಿ ಎರಡು ಮೂರು ದಿನ ನಮ್ಮ ಕಿವಿಯಲ್ಲಿ ಗುಂಯ್ ಗುಂಯ್ ಗುಡುತಿತ್ತು.ಮತ್ತೆ ಮುಂದಿನ ವರ್ಷ ಬಂದಾಗ ಅದೇ ನಗು ಮುಖ ಉತ್ಸವದ ಅವನನ್ನು ಊರು ಸಲೀಸಾಗಿ ಸ್ವಾಗತಿಸುತ್ತಿತ್ತು.
ಪ್ರವೀಣಕುಮಾರ ಕೆ.ಎಸ್. ದಾಂಡೇಲಿ.