ಜಿಲ್ಲಾಧಿಕಾರಿಗಳ ಸರ್ವಾಧಿಕಾರಿ ನಿಲುವಿಗೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಕ್ಷೇಪ
ಕಾರವಾರ : ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಆಯ್ಕೆ ಸಮಿತಿಯ ಗಮನಕ್ಕೂ ತಾರದೇ, ಕೇವಲ ಅಧಿಕಾರಿಗಳ ಸಭೆ ನಡೆಸಿ ಆಯ್ಕೆಪಟ್ಟಿ ಪ್ರಕಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಇದು ಖಂಡನಾರ್ಹ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮ ಕಳೆದ ವರ್ಷದಿಂದ ಆರಂಭವಾಗಿತ್ತು. ಈ ಪ್ರಶಸ್ತಿಯನ್ನು ನೀಡುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಇನ್ನೂ ಕೆಲವು ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡು ಆಯ್ಕೆ ಸಮಿತಿಯನ್ನು ರಚಿಸಲಾಗುತ್ತಿತ್ತು. ಈ ವರ್ಷ ಕೂಡ ಆ ಆಯ್ಕೆ ಸಮಿತಿಯನ್ನು ರಚಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾದ ನನಗೆ ಪತ್ರವನ್ನು ರವಾನಿಸಿದ್ದರು. ನಂತರ ಅಕ್ಟೋಬರ್ 30ರಂದು ಸಂಜೆ 5 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಬಂದ ಅರ್ಜಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಸಭೆಯನ್ನು ಕರೆದಿದ್ದರು. ಈ ಪತ್ರ ಕೂಡ ನಮಗೆ ತಲುಪಿತ್ತು. ಆದರೆ ಈ ಸಭೆಯನ್ನೂ ನಡೆಸದೆ , ಆಯ್ಕೆ ಸಮಿತಿಯ ಎಲ್ಲ ಸದಸ್ಯರನ್ನೂ ಕತ್ತಲಲ್ಲಿಟ್ಟು, ಒಂದು ದಿನ ಮುಂಚಿತವಾಗಿಯೇ ಅಧಿಕಾರಿಗಳು ತಮ್ಮ ಕಾರ್ಯಾಲಯದಲ್ಲಿ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ನಡೆಸಿರುವುದು ಗೊತ್ತಾಗಿದೆ. ಇದು ಇಡೀ ಆಯ್ಕೆ ಸಮಿತಿಗೆ ಮಾಡಿದ ಅವಮಾನವಾಗಿದೆ ಎಂದಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಸಂದರ್ಭದಲ್ಲಿ ಕಸಾಪ ರಾಜ್ಯಾಧ್ಯಕ್ಷರು ಕೂಡ ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. ಜಿಲ್ಲಾ ಮಟ್ಟದ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಆಯ್ಕೆ ಸಮಿತಿಯ ಸದಸ್ಯರಾಗಿರುವುದು ನಿಯಮ. ಆದರೆ ಜಿಲ್ಲಾಧಿಕಾರಿಗಳು ಹಾಗೂ ಮತ್ತು ಅವರ ಇಲಾಖೆ ಶಿಷ್ಠಾಚಾರಕ್ಕೂ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಗಮನಕ್ಕೆ ಹಾಗೂ ಆಯ್ಕೆ ಸಮಿತಿಯ ಯಾವ ಸದಸ್ಯರ ಗಮನಕ್ಕೂ ತಾರದೆ, ಹಿಂದೆ ನಡೆದುಕೊಂಡು ಬಂದ ಪರಂಪರೆಯಂತೆ ಆಯ್ಕೆ ಸಭೆಯನ್ನೂ ನಡೆಸದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿರುವುದು ಅಧಿಕಾರಶಾಹಿ ಹಾಗೂ ಒಂದು ರೀತಿಯ ಸರ್ವಾಧಿಕಾರದ ಧೋರಣೆಯಾಗಿದೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಪ್ರಾದೇಶಿಕ ಅಸಮಾನತೆ
ಪ್ರಕಟವಾಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಯಾದಿಯನ್ನ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಯಲ್ಪಟ್ಟಿದ್ದು, ಈ ಆಯ್ಕೆ ಪಟ್ಟಿಯಲ್ಲಿ ಪ್ರಾದೇಶಿಕ ಅಸಮಾನತೆಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಕರಾವಳಿ ಭಾಗಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದ್ದು, ಘಟ್ಟದ ಮೇಲಿನ ತಾಲೂಕುಗಳನ್ನ ಕಡೆಗಣಿಸಲಾಗಿದೆ. ಸಾರ್ವಜನಿಕ ಕ್ಷೇತ್ರದ 17 ಪ್ರಶಸ್ತಿಗಳಲ್ಲಿ ಕರಾವಳಿ ತಾಲೂಕಿನ ಒಂದೇ ತಾಲೂಕಿಗೆ ಐದು ಪ್ರಶಸ್ತಿಗಳು ಬಂದಿವೆ. ಮತ್ತೆರಡು ಕರಾವಳಿ ತಾಲೂಕಿಗೆ ನಾಲ್ಕು ಪ್ರಶಸ್ತಿಗಳು ಬಂದಿದೆ. ದಾಂಡೇಲಿ, ಹಳಿಯಾಳ, ಜೋಯಿಡಾ, ಮುಂಡಗೋಡ, ಸಿದ್ದಾಪುರಕ್ಕೆ ಒಂದೇ ಒಂದು ಪ್ರಶಸ್ತಿ ಬಂದಿರುವುದಿಲ್ಲ. ಇದು ರಾಜಕೀಯ ಅಥವಾ ಆಳುವವರ ಒತ್ತಡವೋ, ಸಚಿವರ, ಶಾಸಕರ ಹಸ್ತಕ್ಷೇಪವೋ ಸ್ಪಷ್ಠ ಪಡಿಸಬೇಕಾಗಿದೆ.
ಜೊತೆಗೆ ಸಮಾಜ ಸೇವೆ ವಿಭಾಗಕ್ಕೊಂದೇನೇ ನಾಲ್ಕು ಪ್ರಶಸ್ತಿಗಳನ್ನ ನೀಡಲಾಗಿದ್ದು, ರಂಗಭೂಮಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಯಾವುದೇ ಸಂಘಟನೆಗಳಿಗೆ ಪ್ರಶಸ್ತಿಯನ್ನು ನೀಡಿಲ್ಲ. ನಮ್ಮ ಜಿಲ್ಲೆಯಿಂದ ಹೊರಗಿರುವ ವ್ಯಕ್ತಿಗಳಿಗೂ ಕೂಡ ಪ್ರಶಸ್ತಿಯನ್ನು ನೀಡಿ ಲೋಪವೆಸಗಲಾಗಿದೆ. 17 ಜನರಲ್ಲಿ ಕೇವಲ ಇಬ್ಬರು ಮಹಿಳೆಯರಿಗೆ (ಅದರಲ್ಲೋ ಒಬ್ಬರ ಹೆಸರು ಕೊನೆಯಲ್ಲಿ ತುರುಕಿಸಲಾಗಿದೆ) ಮಾತ್ರ ಪ್ರಶಸ್ತಿ ನೀಡಿ ಮಹಿಳೆಯರ ಕಡೆಗಣನೆಯಾಗಿದೆ.
ಇದರ ಜೊತೆಗೆ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ಇಲಾಖೆ ಮತ್ತು ಇಲಾಖೆ ಅಧಿಕಾರಿಗಳಿಗೆ ನೀಡಿರಲಿಲ್ಲ. (ಆವರಿಗೆ ಸರ್ವೋತ್ತಮ ಪ್ರಶಸ್ತಿಗಳು ಬೇರೆ ಸಂದರ್ಭದಲ್ಲಿರುತ್ತವೆ) ಈ ವರ್ಷ ಇಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಇಲಾಖೆ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಇನ್ನೊಂದು ವ್ಯಂಗ್ಯವೆಂದರೆ ಉತ್ತರ ಕನ್ನಡ ಜಿಲ್ಲೆಗೆ ಕೇವಲ ಆರು ತಿಂಗಳ ಹಿಂದಷ್ಟೇ ವರ್ಗವಾಗಿ ಬಂದಿರುವ ಅಧಿಕಾರಿಗೆ ಕೂಡಾ ಪ್ರಶಸ್ತಿ ನೀಡಿರುವುದು ವಿಪರ್ಯಾಸವಾಗಿದೆ. ಇಲಾಖೆಗೆ ಪ್ರಶಸ್ತಿ ನೀಡುವಾಗಲೂ ಕೂಡ ಸಿರಿಸಿ, ಕಾರವಾರ, ಭಟ್ಕಳ, ಹಳಿಯಾಳ ಮತ್ತು ಕಾರವಾರ ತಾಲೂಕನ್ನು ಮಾತ್ರ ಪರಿಗಣಿಸಲಾಗಿದೆ. ಉಳಿದ ತಾಲೂಕುಗಳನ್ನು ನಿರ್ಲಕ್ಷಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೊರ ಬಿದ್ದಿರುವ ಈ ಆಯ್ಕೆ ಪಟ್ಟಿ ಹಲವು ಗೊಂದಲ ಮತ್ತು ಪ್ರಶ್ನೆಗಳಿಗೆ ಎಡೆಯಾಗಿದ್ದು, ಜಿಲ್ಲಾಧಿಕಾರಿಗಳ ಈ ನಡೆ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಅಸಮಾಧಾನವನ್ನು ಉಂಟುಮಾಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ
ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾಗಿರುವರಲ್ಲಿ ಕೆಲವರು ಯೋಗ್ಯರು ಮತ್ತು ಪ್ರಶಸ್ತಿಗೆ ಅರ್ಹತೆಯಿದ್ದವರಿದ್ದಾರೆ. ಪ್ರಶಸ್ತಿ ಪುರಸ್ಕೃತರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಇದು ಪ್ರಶಸ್ತಿಗೆ ಆಯ್ಕೆಯಾದವರ ಬಗೆಗಿನ ಅಸಮಾಧಾನವಲ್ಲ. ಜಿಲ್ಲಾಧಿಕಾರಿಗಳ ನಡೆಯ ಬಗೆಗಿನ ಆಕ್ಷೇಪ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.