Site icon ಒಡನಾಡಿ

ಅರಣ್ಯಾಧಿಕಾರಿ ಯೋಗೇಶನ ಉಸಿರನ್ನೇ ಕಸಿದುಕೊಂಡ ಕಳೆನಾಶಕದೊಳಗಿದ್ದ ಅಪಾಯಕಾರಿ ವಿಷ

ಆತ ಅರಣ್ಯ ಸೇವೆಯನ್ನೇ ಬಯಸಿ ಬಂದ ಕನಸುಗಣ್ಣಿನ ಯುವಕ. ವೃತ್ತಿ ಬದುಕಿನಲ್ಲಿ ಬದ್ದತೆ, ಖಾಸಗಿ ಬದುಕಿನಲ್ಲಿ ಶಿಸ್ತನ್ನು ರೂಡಿಸಿಕೊಂಡ ಸಂಯಮಿ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಸಹೃದಯಿ. ತನ್ನಷ್ಟೇ ಅರಣ್ಯವನ್ನೂ ಪ್ರೀತಿಸುವ ಪರಿಸರ ಪ್ರೇಮಿ. ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಸೂಕ್ಷ್ಮಗ್ರಾಹಿ. ಇಲಾಖೆಯಲ್ಲಿ ಅಧಿಕಾರಿ, ಹೊರಗಡೆ ಗೆಳೆಯ, ಸಹೋದರ ಹೀಗೆ ಎಲ್ಲವೂ ಆಗಿದ್ದ ಯೋಗೇಶ ನಾಯ್ಕ ಒಂದಿಷ್ಟು ಅವಸರವಸರವಾಗಿಯೇ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ಕಳೆದ ಹದಿಮೂರು ವರುಷಗಳಿಂದ ದಾಂಡೇಲಿಯ ವಿವಿಧ ವಲಯಗಳಲ್ಲಿ ಅರಣ್ಯ ಇಲಾಖೆಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತ ಬಂದ ಯೋಗೇಶ ನಾಯ್ಕ್ ಸಾಗವಾನಿ ಗಿಡ ಬೆಳೆಸುವ ಹುಮ್ಮಸ್ಸಿನಲ್ಲಿ ಸಾಗವಾನಿ ಮಡಿ (ಟೀಕ್ ಬೆಡ್) ಗೆ ಕೀಟನಾಶಕ ಸಿಂಪಡಿಸುವ ಸಂದರ್ಭದಲ್ಲಿ ಒಂದಿಷ್ಟು ನಿರ್ಲಕ್ಷ್ಯ ವಹಿಸಿ ತನ್ನ ಬದುಕನ್ನೇ ಕಳೆದುಕೊಂಡು ಬಿಟ್ಟಿದ್ದಾನೆ. ಕೀಟನಾಶಕದೊಳಗಿದ್ದ ಆ ಭಯಂಕರವಾದ ವಿಷ ಯೋಗೇಶನ ಉಸಿರನ್ನು ಕಸಿದುಕೊಂಡುಬಿಟ್ಟಿದೆ. ಈ ಸಾವು ನ್ಯಾಯವೇ ಎಂದು ಪ್ರಶ್ನಿಸುವಂತಾಗಿದೆ.

ಯೋಗೇಶ ನಾಯ್ಕ ಮೂಲತಃ ಕುಮಟಾ ತಾಲೂಕಿನ ಬಾಡದವರು. ಬಡತನದ ಕುಟುಂಬದಿಂದ ಬಂದವರು. ಗೌಂಡಿ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸಿದ ಅಪ್ಪ, ಇದೀಗ ಅನಾರೋಗ್ಯದಲ್ಲಿ ಹಾಸಿಗೆಯ ಮೇಲಿದ್ದಾರೆ. ಬಡತನದ ಈ ಕುಟುಂಬಕ್ಕೆ ನೆರವಾದಗಳು ಅಮ್ಮ. ಬಿಸಿಯೂಟದ ಸಿಬ್ಬಂದಿಯಾಗಿ ಕೆಲಸ ಮಾಡುತ್ತ ಇಡೀ ಕುಟುಂಬವನ್ನ ನಿರ್ವಹಿಸಿದವಳು. ಮಕ್ಕಳಿಗೆ ಓದಿಸಿದವಳು, ಮಗಳಿಗೆ ಮದುವೆ ಮಾಡಿಸಿದವಳು. ಇಂತಹ ಬಡ ಕುಟುಂಬದಿಂದಲ್ಲಿ ಒಂದು ಭರವಸೆಯಾಗಿ ಬೆಳೆದು ಬಂದವ ಯೋಗೇಶ ನಾಯ್ಕ.

ಪದವಿಯವರೆಗೂ ಓದಿ ಡಿಎಡ್ ಶಿಕ್ಷಣವನ್ನು ಮುಗಿಸಿದ ಯೋಗೇಶ ನಾಯ್ಕನಿಗೆ ಶಿಕ್ಷಕ ವೃತ್ತಿ ಒಲಿದು ಬಂದಿತ್ತು. ಆದರೆ ಆತ ಅದನ್ನು ಬಿಟ್ಟು ತನ್ನ ಕುಟುಂಬದಲ್ಲಿ ಅನೇಕರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆಂಬ ಕಾರಣಕ್ಕೆ ಆತ ಕೂಡಾ ಅರಣ್ಯ ಸೇವೆಯನ್ನೇ ಆಯ್ಕೆ ಮಾಡಿಕೊಂಡು 2013ರಲ್ಲಿ ದಾಂಡೇಲಿ ವಿಭಾಗದಲ್ಲಿ ಅರಣ್ಯ ರಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡ.

ಸೇವೆಗೆ ಸೇರಿದಾಗಿನಿಂದ ಅತ್ಯಂತ ಚುರುಕು ಬುದ್ಧಿಯ ಹುಡುಗನಾಗಿದ್ದ ಯೋಗೇಶ ಹಿರಿಯ ಅಧಿಕಾರಿಗಳಿಗೆ ಎಲ್ಲ ಸಂಗತಿಗಳಲ್ಲಿಯೂ ನೆರವಾಗುತ್ತಿದ್ದ. ತನಿಖೆಯ ವಿಚಾರದಲ್ಲಿ ಚುರುಕು ಬುದ್ಧಿ. ಬರವಣಿಗೆ ವಿಷಯದಲ್ಲಿಯೂ ಅಷ್ಟೇ ಪರ್ಫೆಕ್ಟ್. ಇಲಾಖೆಯ ಪ್ರಕರಣಗಳು ನ್ಯಾಯಾಲಯದಲ್ಲಿದ್ದರೆ ಅದಕ್ಕೆ ಸೂಕ್ತವಾದ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತಿದ್ದ ಯೋಗೇಶ್ ಒಬ್ಬ ಉತ್ತಮ ಕ್ರೀಡಪಟು ಕೂಡ. ಬ್ಯಾಡ್ಮಿಂಟನ್ ಅಂದರೆ ಈತನಿಗೆ ಇಷ್ಟವಾದ ಆಟ. ಎಲ್ಲರ ಜೊತೆಯಲ್ಲಿಯೂ ಬಾಂಧವ್ಯದಿಂದಲೇ ಬೆಸೆಯುತ್ತಿದ್ದ ಯೋಗೇಶ್ ದಾಂಡೇಲಿಯ ಸುತ್ತಮುತ್ತಲಿನ ಎಲ್ಲರಿಗೂ ಪರಿಚಯದವನಾಗಿದ್ದ. ಅರಣ್ಯ ಇಲಾಖೆಯ ಹಲವು ಪ್ರಕರಣಗಳಲ್ಲಿ ಅಪರಾಧಗಳು ನಡೆದಾಗ ಮೊದಲು ಬುದ್ಧಿ ಹೇಳುತ್ತಿದ್ದ ಸರಿದಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಂತಹ ಸೂಕ್ಷ್ಮಮತಿಯಾಗಿದ್ದ. ತನ್ನ ಕೆಲಸಗಳ ಮೂಲಕವೇ ಹಿರಿಯ ಅಧಿಕಾರಿಗಳ ವಿಶ್ವಾಸವನ್ನೂ ಗಳಿಸಿದ್ದ.

ತನ್ನ ಬಾಳ ಸಂಗತಿಯನ್ನು ತಾನೇ ಆಯ್ಕೆ ಮಾಡಿಕೊಂಡಿದ್ದ ಯೋಗೇಶ್ ದಾಂಡೇಲಿಯಲ್ಲಿ ತನ್ನ ಜೊತೆಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಾಪುರ ಮೂಲದ ಅಕ್ಷತಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಆ ಪ್ರೇಮದ ಫಲವಾಗಿ ಈಗ ಅವನಿಗೆ ಮೂರು ವರ್ಷದ ಮಗನಿದ್ದಾನೆ. ಸುಂದರ ಮತ್ತು ಸುಖ ಸಂಸಾರ ನಡೆಸುತ್ತಿದ್ದ ಯೋಗೇಶ ಮಗನನ್ನ ಅತಿಯಾಗಿ ಪ್ರೀತಿಸುತ್ತಿದ್ದ. ಈ ನಡುವೆ ಉಪ ವಲಯ ಅರಣ್ಯ ಅಧಿಕಾರಿಯಾಗಿ ಪದೋನ್ನತ್ತಿ ಹೊಂದಿದ್ದ.

ಅವನ ಊರು ಬಾಡದ ಮನೆಯಲ್ಲಿಯೂ ಕೂಡ ಈಗಷ್ಟೇ ಒಂದು ರೀತಿಯ ನೆಮ್ಮದಿ. ತಮ್ಮ ಮಗ ಅರಣ್ಯಾಧಿಕಾರಿಯಾಗಿದ್ದಾನೆ ಇನ್ನು ನಮ್ಮ ಕಷ್ಟಗಳು ದೂರವಾಗುತ್ತವೆ. ಕನಸುಗಳು ನನಸಾಗುತ್ತವೆ ಎಂದು ಮನೆಯವರೆಲ್ಲ ಅಂದುಕೊಳ್ಳುತ್ತಿದ್ದರು. ಮದುವೆಯಾಗಿ ಹೋದ ಅಕ್ಕ, ಮನೆಯಲ್ಲಿದ್ದ ತಮ್ಮ, ಅಣ್ಣ ಯೋಗೇಶನ ನೆರಳಲ್ಲಿದ್ದರು. ಅವರೆಲ್ಲರ ಕನಸಿನ ಕಣ್ಣು ಇದೀಗ ಯೋಗೇಶನ ಅಗಲುವಿಕೆಯಿಂದ ಒದ್ದೆಯಾಗಿವೆ.

ಅಂದು ಜೂನ್ 28 ಎಂದಿನಂತೆ ನಸುಕಿನಲ್ಲಿ ಎದ್ದು ಮನೆಯ ಕೆಲಸ ಮುಗಿಸಿ ಮಡದಿಯನ್ನ ಕೆಲಸಕ್ಕೆ ಬಿಟ್ಟು ತಾನು ಕೆಲಸ ಮಾಡುವ ಸ್ಥಳ ಕುಳಗಿಗೆ ಹೋದ ಯೋಗೇಶ್ ಅಲ್ಲಿ ಸಾಗವನಿ ಬೀಜ ನೆಡಲು ಸಿದ್ಧಪಡಿಸಿದ್ದ ಮಣ್ಣಿನ ತೋಡಿ ಕೀಟಗಳ ಬಾಧೆ ಆಗದಿರಲಿ ಎಂದು ಕಳೆನಾಶಕವನ್ನು ಸಿಂಪಡಿಸಿದ್ದ. ಅಲ್ಲಿಯೇ ಆತ ಸ್ವಲ್ಪ ಎಡವಿದ್ದು. ಔಷಧಿ ಸಿಂಪಡಿಸಿದ ಕೈಯನ್ನು ಸರಿಯಾಗಿ ಸ್ವಚ್ಛಗೊಳಿಸದೆ ಅದೇ ಕೈಯಲ್ಲಿ ಚಾಕಲೇಟ್ ತಿಂದ. ನೀರು ಕುಡಿದ. ಅವನಿರಿವಿಲ್ಲದೆ ಆ ಕೀಟನಾಶಕದ ಒಂದಿಷ್ಟು ಅಂಶ ಅವನ ದೇಹದೊಳಗೆ ಸೇರಿಕೊಂಡಿರಬೇಕು. ಆದರೆ ಅದು ಅವನ ಬದುಕನ್ನೇ ಕೊನೆಗಾಣಿಸುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಮರುದಿನ ಹೊಟ್ಟೆಯಲ್ಲಿ ತಳಮಳವಾದಾಗ ಸ್ಥಳೀಯ ವೈದ್ಯರಿಗೆ ತೋರಿಸಿದ್ದಾನೆ. ಅವರ ಔಷಧಿ ಪರಿಣಾಮ ಬೀರದೆ ಇದ್ದಾಗ ಧಾರವಾಡದಲ್ಲಿ ಎಸ್.ಡಿ.ಎಮ್. ಗೆ ದಾಖಲಾಗಿದ್ದಾನೆ. ಅಲ್ಲಿಯೂ ಕಡಿಮೆಯಾಗದೇ ಇನ್ನಷ್ಟು ಉಲ್ಬಣೊಂಡಾಗ ಸುಚಿವರಾಯು ಆಸ್ಪತ್ರೆಗೆ ಸಾಗಿಸಲಾಗಿದೆ. ಮೂರ್ನಾಲ್ಕು ದಿನ ತೀವ್ರ ನಿಘಾ ಘಟಕದಲ್ಲಿ ವೆಂಟಿಲೇಟರನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆತನನ್ನು ಬದುಕಿಸಲು ಅವನ ಕುಟುಂಬದವರು, ಸ್ನೇಹಿತರು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಎಲ್ಲರೂ ಪ್ರಯತ್ನಿಸಿದ್ದಾರೆ. ಬದುಕಿಸಿಕೊಡುವಂತೆ ವೈದ್ಯರಲ್ಲಿ ಅಂಗಲಾಚಿದ್ದಾರೆ. ಮಡದಿ ದೇವರಲ್ಲಿ ಮೊರೆಯಿಟ್ಟಿದ್ದಾಳೆ. ಅಲ್ಲಿ ಹಣದ ಮಾತೆ ಬರಲಿಲ್ಲ. ಆದರೆ ಯೋಗೇಶ್ ಕೊನೆಗೂ ಬದುಕುಳಿಯಲಿಲ್ಲ. ಯಾರ ಮೊರೆ, ಪ್ರಯತ್ನಗಳೂ ಫಲಿಸಲಿಲ್ಲ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ನೂರಾರು ಕನಸುಗಳು ಯೋಗೇಶ ಜೊತೆಗೇ ಮಣ್ಣಾದವು. ಮರ ಬೆಳೆಸಲು ಬೀಜ ನೀಡಲು ಹೋಗಿ ತನ್ನ ಬದುಕನ್ನೇ ಕಳೆದುಕೊಂಡ. ತನ್ನನ್ನೇ ಪ್ರೀತಿಸಿ ಮದುವೆಯಾದ ಮಡದಿಗೂ , ಲೋಕವರಿಯದ ಹಸುಳೆ ಮಗುವಿಗೂ ನಡುದಾರಿಯಲ್ಲಿ ಬಿಟ್ಟು ನಡೆದ. ಇನ್ನು ಯೋಗೇಶ ನೆನಪು ಮಾತ್ರ

ನಡುದಾರಿಯಲ್ಲಿ ಮಡದಿ ಮಗು
ಯೋಗೇಶ್ ನಾಯ್ಕ್ ಪ್ರೀತಿಸಿ ಮದುವೆಯಾಗಿದ್ದು ತನ್ನದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಾಪುರ ಮೂಲದ ಅಕ್ಷತಾಳನ್ನ. ಅವರಿಗೀಗ 3 ವರ್ಷದ ಮಗುವಿದೆ. ನಂಬಿ ನಡೆಯುವ ಮಡದಿ, ಅತಿಯಾಗಿ ಪ್ರೀತಿಸುವ ಮುದ್ದಾದ ಮಗುವಿನ ಸುಖ ಸಂಸಾರದಲ್ಲಿ ನೆರಳಿನಂತಿರಬೇಕಿದ್ದ ಯೋಗೇಶ್ ನಡುದಾರಿಯಲ್ಲೇ ಎಲ್ಲವನ್ನು ಬಿಟ್ಟು ನಡೆದ ವಿರಾಗಿಯಂತೆ. ಹೋಗುವ ಮುನ್ನ ಕೆಲವೊಂದು ಸತ್ಯಗಳನ್ನು ತನ್ನೊಳಗೇ ಬಚ್ಚಿಟ್ಟುಕೊಂಡು ಹೋಗಿದ್ದು ಮಾತ್ರ ವಿಪರ್ಯಾಸವೇ ಸರಿ.

ಅರಣ್ಯ ಹುತಾತ್ಮರಾದನೆ ಯೋಗೇಶ್
ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿ ಇರುವಾಗಲೇ ಸಾವು ಸಂಭವಿಸಿದರೆ ಅವನನ್ನು ‘ಅರಣ್ಯ ಹುತಾತ್ಮ’ರೆಂದು ಕರೆಯಲಾಗುತ್ತದೆ. ಹಾಗೆ ಅರಣ್ಯ ಹುತಾತ್ಮರದವರ ಕುಟುಂಬಕ್ಕೆ ಒಂದಿಷ್ಟು ವಿಶೇಷ ಸೌಕರ್ಯಗಳು ಬರುತ್ತವೆ. ಹಾಗೆ ನೋಡಿದರೆ ಯೋಗೇಶನದ್ದು ಕೂಡ ಕರ್ತವ್ಯದಲ್ಲಿ ಇರುವಾಗಲೇ ನಡೆದ ಅವಘಡ. ಆತನನ್ನು ಕೂಡ ‘ಅರಣ್ಯ ಹುತಾತ್ಮ’ ಎಂದೇ ಪರಿಗಣಿಸಬೇಕು ಆದರೆ ಅರಣ್ಯ ಇಲಾಖೆ ಮರಣೋತ್ತರ ವೈದ್ಯಕೀಯ ವರದಿಗಾಗಿ ಕಾಯುತ್ತಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್. ಸಿ. ಯವರು ಮಾನವೀಯ ದೃಷ್ಟಿಯಿಂದ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಎಲ್ಲ ಅಧಿಕಾರಿಗಳು ಕೂಡ ಯೋಗೀಶನ ಪರವಾದ ನಿಲುವನ್ನೇ ತಳೆದಿದ್ದಾರೆ. ಆದರೆ ವ್ಯತಿರಿಕ್ತವಾಗದಿರಲಿ ಎಂಬುದೇ ಎಲ್ಲರ ಆಶಯ.

ಆಸ್ಪತ್ರೆ ವೆಚ್ಚ ನೋಡಿಕೊಂಡ ಅರಣ್ಯ ಇಲಾಖೆ
ಯೋಗೇಶ ಧಾರವಾಡ ಮತ್ತು ಹುಬ್ಬಳ್ಳಿಯ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಂತೆಯೇ ದಾಂಡೇಲಿಯ ಅರಣ್ಯಾಧಿಕಾರಿಗಳು ಆತನ ಚಿಕಿತ್ಸೆಗಾಗಿ ಖುದ್ದಾಗಿ ಸ್ಥಳದಲ್ಲಿಯೇ ಇದ್ದು ದೇಖರಕಿ ನೋಡಿಕೊಳ್ಳುವ ಜೊತೆಗೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ. ಬಹುತೇಕ ಯೋಗೇಶ ನಾಯ್ಕರ ವೈದ್ಯಕೀಯ ವೆಚ್ಚವನ್ನು ಅರಣ್ಯ ಇಲಾಖೆಯವರೇ ಭರಿಸಿದ್ದು, ಅರಣ್ಯ ಇಲಾಖೆಯ ಈ ಮಾನವೀಯ ಕಾರ್ಯದ ಬಗ್ಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ. ಯಾರೇನು ಮಾಡಿದರೇನು ಯೋಗೇಶ ಮಾತ್ರ ಗೋಡೆಯ ಮೇಲಿನ ಪಠವಾಗಿಬಿಟ್ಟ.

Exit mobile version