‘ಹರಕು ಅಂಗಿಯ ದೊಗಲೆ ಚಡ್ಡಿಯ
ನಾವು ಬಡವರ ಮಕ್ಕಳು
ಜೀವವಿಲ್ಲದ ಕನಸು ಕಾಣುತ
ಹುಟ್ಟಿ ಸಾಯುವ ಮಕ್ಕಳು…’ ಸುಮಾರು ೨೫ ವರ್ಷಗಳ ಹಿಂದೆ ಬಡ ಮಕ್ಕಳ ಭವಣೆಯನ್ನು ಹಾಡಿನ ಮೂಲಕ ಕುಣಿಕುಣಿದು, ತಣಿ ತಣಿದು ಮನ ತಟ್ಟುವಂತೆ ಕವನ ಕಟ್ಟಿದವರು ಸುಮುಖಾನಂದ ಜಲವಳ್ಳಿಯವರು. ಮಕ್ಕಳ ಸಾಹಿತ್ಯದಲ್ಲಿ ಇವರೊಬ್ಬ ಪ್ರಯೋಗ ಶೀಲ ಕವಿ, ಸಮರ್ಥ ಶಿಶು ಗೀತ ಕವಿ ಎಂಬುದನ್ನು ಸಾಬೀತುಪಡಿಸುವ ಹಲವು ಕೃತಿಗಳ ಸರದಾರರು. ಅವರ ಕೃತಿಯಲ್ಲಿ ತೀವ್ರವಾದ ಕುದಿತವಿದೆ. ಉಕ್ಕುವ ಕೋಪವಿದೆ. ಮಾನವ ಕುಲ ಕಲ್ಯಾಣದ ಗಾಢ ಕಾಳಜಿ, ವೇದನೆ, ಸಂವೇದನೆ, ಜೀವ ಪರ ಯೋಚನೆ, ಯೋಜನೆ, ಕಕ್ಕುಲಾತಿ, ನೀತಿ ಬೋಧನೆ ಎಲ್ಲವೂ ಇದೆ. ಸುತ್ತಮುತ್ತಲಿನ ಪ್ರಸಂಗಗಳನ್ನು, ಪರಿಸ್ಥಿತಿಗಳನ್ನು ಗ್ರಹಿಸಿ ಅವೆಲ್ಲವನ್ನು ಕಾವ್ಯದ ಧರ್ಮಕ್ಕೆ ಸಮರ್ಪಕವಾಗಿ ತೊಡಗಿಸಿಕೊಳ್ಳುವಲ್ಲಿ ಅವರ ಕಾವ್ಯ ಶಕ್ತಿ ಅಡಗಿದೆ.
“ಸುಮುಖಾನಂದ” ಈ ಹೆಸರಿನ ಪ್ರತಿಭೆಗೆ ಹಲವು ಮುಖಗಳು. ಎಲ್ಲವೂ ಸುಮುಖಗಳೇ; ಆನಂದದಾಯಕವೇ. ಎಲ್ಲರಿಗಿಂತ ಭಿನ್ನ ವ್ಯಕ್ತಿತ್ವ ರೂಪಿಸಿಕೊಂಡು,ಕಂಡುಂಡ ಅನುಭವಗಳನ್ನು ಸಾಹಿತ್ಯದ ಮೂಲಕ ಜೀವ ಪಡೆಯುವಂತೆ ಮಾಡಿದವರು. ಅವರ ಪಾಲಿಗೆ ಒಳಗಣ್ಣೆ ನಿಜದ ಕಣ್ಣು. ಅದು ಸದಾ ಜಾಗೃತವಾಗಿರಬೇಕೆಂಬುದೇ ಅವರ ನಿಷ್ಠೆ, ಕಾಳಜಿ. ಅವರದು ಸೃಜನಶೀಲ ಪ್ರತಿಭೆ. ಅದು ಬಲವಂತದ ಪ್ರಸವಗಳಲ್ಲ. ಸಹಜವಾದ ಪ್ರಕ್ರಿಯೆಗಳು. ಅವರು ಅಧ್ಯಯನಕ್ಕಾಗಿ ಆಳಕ್ಕೆ ಇಳಿಯುತ್ತಾರೆ; ವಾಸ್ತವಿಕ ಸಂಗತಿಯನ್ನು ಅಳೆಯುತ್ತಾರೆ.
ವಿಶಿಷ್ಟ, ವಿಭಿನ್ನ ಆಲೋಚನೆಯ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಬರೆದ ಹಲವು ಕೃತಿಗಳು ಮಕ್ಕಳ ಸಾಹಿತ್ಯಕ್ಕೆ ಇವರು ನೀಡಿದ ಮಹತ್ವದ ಕೊಡುಗೆಯಾಗಿದೆ. ಈಗಾಗಲೇ ಪ್ರಕಟಿಸಿದ ಕೃತಿಗಳು ೮೫. ಇನ್ನೂ ಪ್ರಕಟನಾ ಹಂತದಲ್ಲಿರುವ ಕೃತಿಗಳ ಸಂಖ್ಯೆ ೧೬. ಯಾವ ಉದ್ವೇಗವೂ ಇಲ್ಲದೇ, ಯಾವ ಅವಸರವೂ ಇಲ್ಲದೇ, ಮನಸ್ಸಿನಲ್ಲಿ ಯಾವ ಕಹಿಯೂ ಇಲ್ಲದೇ ಇದ್ದದ್ದನ್ನು ಇದ್ದ ಹಾಗೆ ಬರೆದವರು, ಬದುಕಿದವರು ಕೂಡ. ಮಕ್ಕಳ ಬಗ್ಗೆ ವಿಶೇಷ ಕಕ್ಕುಲಾತಿ ಹೊಂದಿ ಅವರ ನಾಡಿಯರಿತು ಅವರಿಗಾಗಿಯೇ ಬರೆದ ಕೃತಿಗಳನ್ನು ಮಕ್ಕಳ ನಾಟಕಗಳು, ಮಕ್ಕಳ ಕಥೆಗಳ ಸಂಕಲನಗಳು, ಮಕ್ಕಳ ಕವನ ಸಂಕಲನಗಳು, ಮಕ್ಕಳ ವ್ಯಾಕರಣ ಕೃತಿಗಳು, ಮಕ್ಕಳ ವಿಚಾರ ಸಾಹಿತ್ಯ ಕೃತಿಗಳು ಎಂದು ವಿಂಗಡಿಸಬಹುದು.
ಎಳೆಯರ ರಂಗಮಾಲೆ ಎಂಬ ಶಿರೋ ನಾಮದಡಿ ಮಕ್ಕಳಿಗಾಗಿ ನಾಟಕ ರಚಿಸಿ ವಿದ್ಯಾರ್ಥಿಗಳಲ್ಲಿ ನಾಟಕದ ಅಭಿರುಚಿಯ ಜೊತೆಗೆ ಜೀವನ ಮೌಲ್ಯ ಎತ್ತರಿಸುವಲ್ಲಿ ಇವರ ಕೃತಿ ಸಾರ್ಥಕವೆನಿಸಿದೆ. ‘ಆತ್ಮಾರ್ಪಣೆ’, ‘ನನ್ನ ಮರ’, ‘ಗರುಡನ ಮರಿ’, ‘ಬೆಳಕಿನ ಮರಿ’,’ವಿಕಟ ಕವಿ’, ‘ಗರ್ವಭಂಗ’, ‘ಕಾರ್ಗಿಲ್ ವೀರ’, ‘ಆನಂದ ಕಂದ’, ‘ಮೋಹನದಾಸ’, ‘ಪಶ್ಚಾತಾಪ’, ‘ಯಾವೂರ ತಾಯಿ’, ‘ಕಲ್ಲನಕೇರಿಯ ಕೆರೆ’, ‘ವೀರನಾರಿ’, ‘ಸಿಂಹ ಸ್ವಪ್ನ’,’ಬೆಳಕಿನ ಕುಡಿ’ ಎಂಬ ೧೫ ನಾಟಕಗಳು ಎಳೆಯರ ರಂಗಮಾಲೆಯ ಮೂಲಕ ಮಕ್ಕಳಲ್ಲಿ ದೇಶಪ್ರೇಮ, ಪರಿಸರ ಜಾಗೃತಿ, ಚಾರಿತ್ರಿಕ ಮತ್ತು ಐತಿಹಾಸಿಕ ಘಟನೆಗಳು, ರಾಷ್ಟ್ರ ನಾಯಕರ ಜೀವನ ಮೌಲ್ಯ, ಜನಪದ ಕಥೆ ಮುಂತಾದ ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲುವ ನಾಟಕಗಳು ರಂಗ ಪ್ರದರ್ಶನದಲ್ಲೂ ಯಶಸ್ಸು ಕಂಡಿದೆ.
ಮಕ್ಕಳಿಗಾಗಿ ನಾಲ್ಕು ಕವನ ಸಂಕಲನಗಳು ಪ್ರಕಟಗೊಂಡಿವೆ. ‘ಚೆಲುವಿನ ಕನ್ನಡ ಮಕ್ಕಳ ಹಾಡು’, ‘ಪುಟಾಣಿಗೆರಡು ವಠಾಣಿ-೧’, ‘ಪುಟಾಣಿಗೆರಡು ವಠಾಣಿ-೨’, ‘ಪುಟಾಣಿಗಳಿಗೆ ವಠಾಣಿ’. ಮಕ್ಕಳ ಭಾವನೆ, ಕಲ್ಪನೆಗಳಿಗೆ ನಿಲುಕುವಂತ ವಿಷಯ,ವಿಚಾರಗಳು ಈ ಕವನ ಸಂಕಲನದಲ್ಲಿದೆ. ‘ಮರಾಠಿ ಮಾಮನ ಮದುವೆ ಮತ್ತು ಪಾಚಣ್ಣ’, ‘ಬಾಲಣ್ಣರ ಸತ್ಯಾಗ್ರಹ’, ‘ಬಂಗಾರಳ್ಳಿಯ ನೆಗಸು’ ಇವರು ಮಕ್ಕಳಿಗಾಗಿ ಬರೆದ ಮಕ್ಕಳ ಕಥಾಸಂಕಲನವಾಗಿದೆ.
ಮಕ್ಕಳ ಕಥೆ, ಕವನದ ಹೊರತಾಗಿ ಅವರ ಸೃಜನೇತರ ಸಾಹಿತ್ಯ ಕುರಿತಾದ ಆರು ಕೃತಿಗಳು ಪ್ರಕಟವಾಗಿವೆ. ‘ಚರ್ಚಾ ಕೂಟ ನಡೆಸುವುದು ಹೇಗೆ?’,’ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಮಾರ್ಗದರ್ಶನ’, ‘ಮಕ್ಕಳಲ್ಲಿ ಸೃಜನಶೀಲತೆ: ಭಾಷೆ ಬರವಣಿಗೆ ವಿಕಾಸ’, ‘ಪಾಲಕರ ಮುಂದೆ ಒಂದೆರಡು ಮಾತು’, ‘ವ್ಯಾಕರಣ ಕಲಿ ಕಂದಾ-ನಲಿ’, ‘ಛಂದಸ್ಸು ಕಲಿ ಕಂದಾ-ನಲಿ’, ‘ಅಲಂಕಾರ ಕಲಿ ಕಂದಾ-ನಲಿ’ ಇವೆಲ್ಲವೂ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಸಾಹಿತ್ಯವಾಗಿದೆ.ವ್ಯಾಕರಣ ಬೋಧನೆಯ ಒಂದು ತರಗತಿಯೇ ಇಲ್ಲಿದೆ.
ಒಟ್ಟಿನಲ್ಲಿ ಮಕ್ಕಳಿಗಾಗಿಯೇ ವಿವಿಧ ಪ್ರಕಾರದ ೩೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಮಕ್ಕಳ ಮನೋವಿಕಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದ ನಾಡಿನ ನಾಮಾಂಕಿತ ಸಾಹಿತಿಗಳ ಸಾಲಿನಲ್ಲಿ ಸೇರುವ ಸುಮುಖಾನಂದ ಜಲವಳ್ಳಿಯವರು ಪ್ರೌಢ ಸಾಹಿತ್ಯವನ್ನು ಬರೆದು ಹಿರಿಯರ ಮೆಚ್ಚುಗೆಗೆ, ಗುರುಗಳ ಪ್ರೀತಿಗೆ ಪಾತ್ರರಾದವರು. ಅಧ್ಯಾಪನದ ಜೊತೆ ಜೊತೆಯಲ್ಲೇ ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಂಡ ಸುಮುಖಾನಂದ ಜಲವಳ್ಳಿಯವರು ೧೯೮೫ ರ ಹೊತ್ತಿಗೆ ಕೃತಿ ಪ್ರಕಟಿಸಲು ಪ್ರಾರಂಭಿಸಿ ಇಲ್ಲಿವರೆಗೆ ಬರೋಬ್ಬರಿ ೮೫ ಕೃತಿಗಳನ್ನು ಅಕ್ಷರ ಲೋಕಕ್ಕೆ ಸಮರ್ಪಿಸಿರುತ್ತಾರೆ. ೧೧ ವೈಚಾರಿಕ ಕೃತಿಗಳು, ೧೨ ಅಧ್ಯಯನ ವಿಮರ್ಶಾ ಕೃತಿಗಳು, ೮ ರೂಪಕಗಳು, ೮ ದೊಡ್ಡವರಿಗಾಗಿ ಬರೆದ ನಾಟಕಗಳು, ೫ ಕವನ ಸಂಕಲನ, ೩ ಕಥಾ ಸಂಕಲನ, ೬ ಜನಪದ ಕತೆಗಳು,ಒಂದು ಹಾಸ್ಯ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುತ್ತಾರೆ.
ಸುಮುಖಾನಂದ ಜಲವಳ್ಳಿಯವರು ಮೂಲತಃ ಹೊನ್ನಾವರ ತಾಲೂಕಿನ ಜಲವಳ್ಳಿಯವರು. ಇವರ ಮೂಲ ಹೆಸರು ರಾಮ ವೆಂಕಟ ನಾಯಕ. “ಸುಮುಖಾನಂದ ಜಲವಳ್ಳಿ”ಇವರ ಕಾವ್ಯನಾಮ. ತಂದೆ ವೆಂಕಟ ನಾಯಕ, ತಾಯಿ ವೆಂಕಮ್ಮನವರ ಮಗನಾಗಿ ೧೯೫೩ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಜಲವಳ್ಳಿ, ಬಳಕೂರಿನಲ್ಲಿಯೂ, ಪ್ರೌಢ ಶಿಕ್ಷಣ ಖವಾ೯ದ ಶ್ರೀ ಸಿದ್ಧಿ ವಿನಾಯಕ ಪ್ರೌಢಶಾಲೆಯಲ್ಲಿಯೂ,ಪದವಿ ಶಿಕ್ಷಣ ಎಸ್.ಡಿ.ಎಂ. ಕಾಲೇಜಿನಲ್ಲಿಯೂ, ಬಿಇಡಿ ಪದವಿಯನ್ನು ಕಾರವಾರದ ಶಿವಾಜಿ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿ ,೧೯೭೬ ರಲ್ಲಿ ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಬಾಲಿಕಾ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ಸದಾ ಒಂದಿಲ್ಲೊಂದು ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ತಮ್ಮ ಧ್ವನಿ ಪೂರ್ಣ ಕಥೆ, ಕವನ,ವೈಚಾರಿಕ ಲೇಖನ,ನಾಟಕಗಳ ಮೂಲಕ ಲೋಕದ ದೌರ್ಜನ್ಯಗಳನ್ನು, ಮೋಸಗಳನ್ನು, ದಾರಿದ್ರ್ಯಗಳನ್ನು ಮತ್ತು ದುಃಖವನ್ನು ತೆರೆದಿಡುತ್ತಾ ಹಸಿರು ಲೋಕವನ್ನು ಕಟ್ಟಿಕೊಳ್ಳುವುದರತ್ತ; ಎಲ್ಲರೂ ವೈರತ್ವ ಮರೆತು ಜೊತೆಗೂಡಿ ಎತ್ತರೆತ್ತರಕ್ಕೆ ಏರಬೇಕೆಂಬ ಆಸೆ ಹೊತ್ತವರು, ಕನಸ ಕಂಡವರು. ಉತ್ತರ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಸಂಚಾಲಕತ್ವದ ಹೊಣೆ ಹೊತ್ತು ಎರಡು ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ.
ದೇವರು ಮತ್ತು ಪೂಜೆಯ ಹೆಸರಿನಲ್ಲಿ ಮುಗ್ಧ ಜನರಿಗೆ ಪುರೋಹಿತಶಾಹಿಗಳಿಂದ ಆಗುವ ಶೋಷಣೆ ತಪ್ಪಿಸಲು ಹಾಗೂ ಜನರಲ್ಲಿರುವ ಮೌಢ್ಯವನ್ನು ದೂರ ಮಾಡಲು ಮಂಗಳೂರಿನಲ್ಲಿ ನಡೆದ ೨೦ ದಿನಗಳ ವೇದ ಶಿಬಿರದಲ್ಲಿ ಪಾಲ್ಗೊಂಡು ಭಕ್ತಿ, ಶ್ರದ್ಧೆ ಮತ್ತು ಜ್ಞಾನವಿದ್ದರೆ ಪೂಜಾ ವಿಧಾನ ಯಾರು ಬೇಕಾದರೂ ಮಾಡಬಹುದೆಂದು ಜಾಗೃತಿ ಮೂಡಿಸಲು ಸ್ವತಃ ತಾವೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಮುಂದಾದರು. ಸತ್ಯನಾರಾಯಣ ವ್ರತ, ಗೃಹಪ್ರವೇಶ, ಗಣ ಹೋಮ, ದೇವರ ಪ್ರತಿಷ್ಠೆ,ಬ್ರಹ್ಮೊಪದೇಶ ಮುಂತಾದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ತಮ್ಮ ಮನೆಯಲ್ಲಿ ಆಚರಿಸುವುದರ ಮೂಲಕ ಇನ್ನುಳಿದವರ ಮನೆಗೂ ಹೋಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿ ಮಾದರಿಯಾಗಿರುತ್ತಾರೆ. ೧೯೯೬ ಮೇನಲ್ಲಿ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಮಾಸಿಕ ಪತ್ರಿಕೆ “ಸಂಪ್ರಭಾ”ವೈಚಾರಿಕ ನಿಲುವಿನ ಕೈಗನ್ನಡಿಯಲ್ಲಿ ನಿರಂತರವಾಗಿ ಅವರ ಆಲೋಚನಾಲಹರಿ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಲೇ ಇದೆ. ಪೂಜಾ ಮಾರ್ಗದರ್ಶನ ಕೃತಿ, “ಪೂಜಾ ಕೈಪಿಡಿ” ಭಾಗ-೧,ಹನ್ನೊಂದು ಅಧ್ಯಾಯಗಳಲ್ಲಿ ಪ್ರಕಟಗೊಂಡಿದೆ.
ಯಾವುದೇ ಪ್ರಚಾರ ಪ್ರಸಿದ್ಧಿ ಬಯಸಿದ ಕಾಯಕಯೋಗಿಗೆ ಸ್ಥಳೀಯವಾಗಿ ಹಲವು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬಂದಿದೆ. ಹೊನ್ನಾವರ ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗರಿ ಅವರ ಮುಡಿಗೇರಿದೆ. ಓವ೯ ಪ್ರೌಢಶಾಲಾ ಶಿಕ್ಷಕರಾಗಿ ಮಕ್ಕಳ ಮನೋವಿಕಾಸಕ್ಕಾಗಿ ಮಾಡಿದ ಸಾಹಿತಿಕ ಚಟುವಟಿಕೆಗಳು ಉಹಿಸಲಸಾಧ್ಯವಾಗಿದೆ. ಶಿಕ್ಷಣ ಇಲಾಖೆ ನೀಡುವ ರಾಜ್ಯ. ರಾಷ್ಟ್ರ ಪ್ರಶಸ್ತಿಗೆ ಪರಿಗಣಿಸದಿರುವುದು ವಿಪರ್ಯಾಸವಾಗಿದೆ. ಇನ್ನಾದರೂ ಸರಕಾರ ಮಟ್ಟದಲ್ಲಿ ಇವರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಲಿ ಎಂದು ಹಾರೈಸುತ್ತೇನೆ.
- ಪಿ.ಆರ್. ನಾಯ್ಕ, ಹೊಳೆಗದ್ದೆ
