ಸಾಗವಾನಿ ಮಡಿ (ಟೀಕ್ ಬೆಡ್ )ಗೆ ಕಳೆನಾಶಕ ಹಾಕುವ ವೇಳೆ ಅಪಾಯಕಾರಿ ವಿಷಪೂರಿತ ಕಳೆನಾಶಕವನ್ನು ಸಿಂಪಡಿಸಿದ ಕೈಯಿಂದಲೇ ಆಹಾರ ಸೇವಿಸಿದ ಅರಣ್ಯ ಸಿಬ್ಬಂದಿಯೋರ್ವ ಇದೀಗ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವರಾಗಿರುವ, ಕಳೆದ 13 ವರ್ಷಗಳಿಂದ ದಾಂಡೇಲಿಯ ವಿವಿದೆಡೆ ಉಪವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ, ಸದ್ಯ ವಿರ್ನೋಲಿ ವಲಯದ ,ಕುಳಗಿ ಶಾಖೆಯಲ್ಲಿರುವ ಯೋಗೇಶ್ ನಾಯ್ಕ್ ಎಂಬವರೇ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಉಪವಲಯ ಅರಣ್ಯ ಅಧಿಕಾರಿಯಾಗಿದ್ದಾರೆ.
ನಡೆದ ಘಟನೆ ಒಂದಿಷ್ಟು ವೈಚಿತ್ರ್ಯ ಹಾಗೂ ವೈರುಧ್ಯದಿಂದಲು ಕೂಡಿದೆ. ವಿರ್ನೋಲಿ ಅರಣ್ಯ ವಲಯದ ಕುಳಗಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಯೋಗೇಶ್ ನಾಯ್ಕ ತನ್ನ ವೃತ್ತಿ ಸಿಬ್ಬಂದಿಗಳ ಜೊತೆ ಕಳೆದ ಆರು – ಏಳು ದಿನಗಳ ಹಿಂದೆ ಕುಳಗಿಯಲ್ಲಿ ಟೀಕ್ ಬೆಡ್ (ಸಾಗವಾನಿ ಮಡಿ) ಸಿದ್ಧಪಡಿಸುತ್ತಿದ್ದರು. ( ಟೀಕ್ ಬೆಡ್ ಎಂದರೆ ಬೀಜಗಳನ್ನು ನೆಡುವ ಮುನ್ನ ತೋಡನ್ನ ತೆಗೆದು ಭೂಮಿಯೊಳಗೆ ಹದ ಮಾಡುವುದು. ನಂತರ ಅಲ್ಲಿ ಬೀಜ ನೆಟ್ಟು ಆ ಬೀಜ ಸಸಿಯಾದ ತಕ್ಷಣ ನರ್ಸರಿಗೆ ತಂದು ಚೀಲದಲ್ಲಿ ಹಾಕಿ ಗಿಡ ಮಾಡುವುದು) ಹೀಗೆ ಟೀಕ್ ಬೆಡ್ ಮಾಡಿ ಬೀಜ ಬಿತ್ತಿದ ಸಾಗವಾನಿ ಸಸಿಗಳಲ್ಲಿ ಕಳೆ ಬೆಳೆದಿರುತ್ತವೆ.ಆ ಕಳೆಗಳನ್ನು ನಾಶಪಡಿಸಲು ಹಾಗೂ ವೇಳೆ ಭೂಮಿ ಒಳಗಡೆ ಇರುವ ಹುಳಹುಪ್ಪಡಿಗಳನ್ನು ಸಾಯಿಸಲು ಕೀಟ ಮತ್ತು ಕಳೆನಾಶಕಗಳನ್ನು ಬಳಸಲಾಗುತ್ತದೆ. ಯೋಗೇಶ್ ನಾಯ್ಕ ಕೂಡ ಪ್ಯಾರಾಖ್ಯೂಟ್ ( PARAQUAT) ಎಂಬ ವಿಷಪೂರಿತ ಕೀಟ ನಾಶಕವನ್ನು ಸಾಗವಾನಿ ಮಡಿಯೊಳಗೆ ಸಿಂಪಡಿಸಿದ್ದಾರೆ ಎನ್ನಲಾಗಿದೆ. ಈ ಕೀಟನಾಶಕವನ್ನು ಸಿಂಪಡಿಸಿದ ಯೋಗೇಶ್ ನಾಯ್ಕ ಕೈಯನ್ನ ಸ್ವಚ್ಛಗೊಳಿಸುವಲ್ಲಿ ಸ್ವಲ್ಪ ಅಜಾರೂಕತೆ ವಹಿಸಿದ್ದಾರೆ. ಕೈಯನ್ನು ಒರೆಸಿಕೊಂಡು ಅದೇ ಕೈಯಿಂದ ತಂಬಾಕು ತೀಡಿ ಬಾಯಿಗೆ ಹಾಕೊಂಡಿದ್ದಾರೆ. ಮತ್ತೆ ಅದೇ ಕೈಯಿಂದ ನೀರಿನ ಬಾಟಲನ್ನು ತೆಗೆದು ನೀರು ಕುಡಿದಿದ್ದಾರೆ ಎಂಬ ಮಾಹಿತಿಯಿದೆ ಈ ಬಗ್ಗೆ ಅವರೇ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರಂತೆ.
ಯೋಗೇಶ್ ನಾಯ್ಕ್
ಇದು ನಡೆದು ಮನೆಗೆ ಬಂದ ಒಂದು ದಿನದ ನಂತರ ಅವರ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿದೆ. ಸ್ಥಳೀಯ ಖಾಸಗಿ ವೈದ್ಯರಿಗೆ ತೋರಿಸಿದಾಗ ಅವರು ಆಂಟಿಬಯಾಟಿಕ್ ಕೊಟ್ಟು ಕಳುಹಿಸಿದ್ದಾರೆ. ಆದರೆ ಅದು ಅವರಿಗೆ ಕಡಿಮೆಯಾಗದ ಕಾರಣ ಮರುದಿನ ಯೋಗೇಶ್ ನಾಯ್ಕ ಅವರೇ ತನ್ನ ಕಾರು ತಾನೇ ಚಲಾಯಿಸಿಕೊಂಡು ತನ್ನ ಮಡದಿಯ ಜೊತೆಗೆ ಹುಬ್ಬಳ್ಳಿಯ ಎಸ್. ಡಿ. ಎಂ. ಗೆ ಹೋಗಿ ದಾಖಲಾಗಿದ್ದಾರೆ. ಅಲ್ಲಿಯೂ ಚಿಕಿತ್ಸೆ ಸಿಗಲು ಒಂದು ದಿನ ವಿಳಂಬವಾಗಿದೆ.
ನಂತರ ಚಿಕಿತ್ಸೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್ ಗಳು ಡ್ಯಾಮೇಜ್ ಆಗಿರುವುದು ತಿಳಿದು ಬಂದಿದೆ. ನಂತರ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದಾರೆ. ವೈದ್ಯರ ಅಂಬೋಣದ ಪ್ರಕಾರ ಯೋಗೇಶನ ಬಹು ಅಂಗಾಂಗ ವೈಫಲ್ಯವಾಗಿದ್ದು ಯೋಗೇಶ್ ನಾಯ್ಕ ಸ್ಥಿತಿ ತುಂಬಾ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿಲ್ಲ. ಆದರೆ ಅಂಬಿಕಾನಗರ ಪೊಲೀಸ್ ಠಾಣೆಯ ಪೊಲೀಸರು ನಾಲ್ಕು ದಿನಗಳ ಹಿಂದೆಯೇ ಹುಬ್ಬಳ್ಳಿಯ ಆಸ್ಪತ್ರೆಗೆ ಹೋಗಿ ಯೋಗೇಶ್ ನಾಯ್ಕ ಅವರ ಹೇಳಿಕೆಯನ್ನು ಪಡೆದು ಬಂದಿದ್ದಾರೆ ಎಂಬ ಮಾಹಿತಿಯಿದೆ.
ಇದಕ್ಕೆ ಹೊಣೆಗಾರರು ಯಾರು
ಯೋಗೇಶ್ ನಾಯ್ಕ್ ಅರಣ್ಯ ಇಲಾಖೆಯ ಕರ್ತವ್ಯದಲ್ಲಿ ಇರುವಾಗಲೇ ಈ ಘಟನೆ ನಡೆದಿದೆ. ಕೀಟನಾಶಕ ಸಿಂಪಡಿಸಿದ ವೇಳೆ ಅವರು ಕರ್ತವ್ಯದಲ್ಲಿದ ದವರು. ಜೀವನ್ಮರಣದ ಸ್ಥಿತಿಯಲ್ಲಿರುವ ಅವರ ಈ ಸ್ಥಿತಿಗೆ ಕಾರಣರಾರು ಎಂಬುದು ಪ್ರಶ್ನೆಯಾಗಿದೆ. ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಯೋಗೇಶ್ ನಾಯ್ಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೋಡಿಕೊಂಡು ಬರುತ್ತಿದ್ದಾರೆ. ಚಿಕಿತ್ಸೆಗೆ ಸಹಕರಿಸುತ್ತಿದ್ದಾರೆ. ಆದರೂ ಕೂಡ ಮುಂದೆ ಏನು ಎಂಬುದು ಪ್ರಶ್ನಾರ್ಥಕವೇ ಆಗಿದೆ.
ಇಷ್ಟೊಂದು ವಿಷಪೂರಿತ ಕೀಟನಾಶಕ ಬಳಸಬಹುದೇ?
ಬೆಳೆ ಬೆಳೆಯುವ ಸಂದರ್ಭದಲ್ಲಿ ಕೀಟನಾಶಕ ಬಳಸುವುದು ಸಹಜ. ಆದರೆ ಪ್ಯಾರಾಖ್ಯೂಟ್ ( PARAQUAT) ಎಂಬ ಇಷ್ಟೊಂದು ವಿಷಪೂರಿತ ಕೀಟನಾಶಕವನ್ನು ಬಳಸಬಹುದೇ ಎಂಬುದು ಪ್ರಶ್ನೆಯಾಗಿದೆ. ಸಾಗವಾನಿ ಬೀಜಗಳನ್ನು ನೆಡಲು ತೆಗೆದ ತೋಡಿನಲ್ಲಿ ಇರುವ ಕೀಟಗಳನ್ನು ಮತ್ತು ಕಳೆಯನ್ನು ನಿಯಂತ್ರಿಸಲು ಈ ಕೀಟನಾಶಕ ಸಿಂಪಡಿಸಲಾಗಿದೆ. ಅದೇ ಕೈಯಿಂದ ಸಣ್ಣ ಪ್ರಮಾಣದ ಆಹಾರ ಸೇವಿಸಿದ್ದಕ್ಕೆ ಒಂದು ಜೀವವೇ ಸಾವು ಬದುಕಿನ ಹೋರಾಟದೊಳಗಿದ್ದರೆ, ಮಣ್ಣಿನೊಳಗೆ ಸೇರಿದ ಆ ವಿಷದ ಅಂಶಗಳನ್ನು ಕಾಡಿನೊಳಗಿನ ಪ್ರಾಣಿಗಳು ಸೇವಿಸಿದರೆ ಅವುಗಳ ಕಥೆ ಏನಾಗಲಿಕ್ಕಿಲ್ಲ ಎಂಬುದಕ್ಕೆ ಅರಣ್ಯ ಅಧಿಕಾರಿಗಳೇ ಉತ್ತರಿಸಬೇಕಿದೆ.
ವೈದ್ಯಕೀಯ ವರದಿ ನೋಡಬೇಕು
ಯೋಗೇಶ್ ನಾಯ್ಕ ನಮ್ಮ ಇಲಾಖೆಯಲ್ಲಿ ಒಬ್ಬ ಒಳ್ಳೆಯ ಕೆಲಸಗಾರ. ಕುಳಗಿಯಲ್ಲಿ ಟೀಕ್ ಬೆಡ್ ಮಾಡುವ ವೇಳೆ ಔಷಧಿ ಸಿಂಪಡಿಸಿದ ಸಂದರ್ಭದಲ್ಲಿ ಅಜಾರೂಕತೆಯಿಂದ ಈ ಘಟನೆ ನಡೆದಿದೆ ಎಂಬ ಮಾಹಿತಿಯಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ವೈದ್ಯಕೀಯ ವರದಿ ಬಂದ ನಂತರವೇ ಮುಂದಿನದರ ಬಗ್ಗೆ ಹೇಳಲಾಗುವುದು ಎಂದು ಹಳಿಯಾಳ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ. ತಿಳಿಸಿದ್ದಾರೆ.