Site icon ಒಡನಾಡಿ

ಕಾರವಾರ, ದಾಂಡೇಲಿಯಲ್ಲಿ‘ಸಾಹಿತ್ಯ ಭವನ’ : ಕೇಂದ್ರ ಕಸಾಪ ಸಮ್ಮತಿ – ನಗರಸಭೆ ನಿವೇಶನ ನೀಡಿದ ತಕ್ಷಣ ಭವನ ನಿರ್ಮಾಣ- ವಾಸರೆ

ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರ ಹಾಗೂ ಬಹು ಭಾಷೆಯ ನೆಲ ದಾಂಡೇಲಿಯಲ್ಲಿ ‘ಸಾಹಿತ್ಯ ಭವನ’ ನಿರ್ಮಾಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ತಾತ್ವಿಕ ಸಮ್ಮತಿ ನೀಡಿದೆ. ಆಯಾ ತಾಲೂಕಿನ ನಗರಸಭೆಯವರು ನಿವೇಶನ ಮಂಜೂರಿ ನೀಡಿದ ತಕ್ಷಣವೇ ಕ್ರಿಯಾಯೋಜನೆ ತಯಾರಿಸಿ ಭವನ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರ ಪತ್ರದ ಜೊತೆಗೆ ಪ್ರಕಟಣೆ ನೀಡಿರುವ ವಾಸರೆಯವರು ಸಂಬಂದಿಸಿದ ತಾಲೂಕುಗಳಲ್ಲಿ ನಿವೇಶನ ನೀಡಲು ಆಡಳಿತ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರವೂ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ‘ಸಾಹಿತ್ಯ ಭವನ’ಗಳಿರಲಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ‘ಸಾಹಿತ್ಯ ಭವನ ನಿರ್ಮಿಸಲು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದ ನಂತರ ಸಾಕಷ್ಟು ಪ್ರಯತ್ನ ಮಾಡುತ್ತಲೇ ಬಂರಲಾಗಿತ್ತು. ( ಪರಿಷತ್ತಿನ ಚುನಾವಣೆಯ ಸಂದರ್ಭದಲ್ಲಿಯೂ ನನ್ನ ಅದ್ಯತೆಯ ಕೆಲಸಕ್ಕೆ ಇದೇ ವಿಚಾರ ಹೇಳಲಾಗಿತ್ತು) ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರಿಗೂ ಹಲವು ಬಾರಿ ಲಿಖಿತ ಮನವಿ ನೀಡಿ ಒತ್ತಾಯಿಸಿದ್ದೆ. ಇದೀಗ ಕಸಾಪ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮೊದಲ ಹಂತವಾಗಿ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರ ಹಾಗೂ ಬಹುಭಾಷೆಯ ತಾಲೂಕಾಗಿರುವ ದಾಂಡೇಲಿಯಲ್ಲಿ ‘ಸಾಹಿತ್ಯ ಭವನ’ ನಿರ್ಮಿಸಲು ತಾತ್ವಿಕ ಒಪ್ಪಿಗೆ ನೀಡಿರುತ್ತಾರೆ.

ನಾಡು-ನುಡಿಯ ಹಿತರಕ್ಷಣೆಯ ಆಶಯದೊಂದೊಂದಿಗೆ 1915 ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು 109 ವರ್ಷಗಳನ್ನು ದಾಟಿ, ಪ್ರತಿಯೊಂದು ಜಿಲ್ಲೆ, ಗಡಿ ರಾಜ್ಯವೂ ಸೇರಿದಂತೆ 258 ತಾಲೂಕುಗಳಲ್ಲಿಯೂ ತನ್ನ ಘಟಕಗಳನ್ನು ಹೊಂದಿದೆ. ಇವುಗಳಲ್ಲಿ ಹಲವಾರು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಈಗಾಗಲೇ‘ಸಾಹಿತ್ಯ ಭವನ’ಗಳು ನಿರ್ಮಾಣಗೊಂಡಿವೆ. ಆದರೆ ಇಲ್ಲಿಯವರೆಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವೂ ಸೇರಿದಂತೆ 12 ತಾಲೂಕುಗಳಲ್ಲಿಯೂ ಸಹ ಕನ್ನಡ ಸಾಹಿತ್ಯ ಪರಿಷತ್ತಿನ ಒಂದೇ ಒಂದು‘ಸಾಹಿತ್ಯ ಭವನ’ಗಳು ನಿರ್ಮಾಣಗೊಂಡಿಲ್ಲ ಎಂಬ ಕೊರಗು ಸಹಜವಾಗಿಯೇ ನನ್ನನ್ನೂ ಸೇರಿದಂತೆ ಜಿಲ್ಲೆಯ ಸಾಹಿತ್ಯವಲಯದಲ್ಲಿತ್ತು. ಇದನ್ನು ಮನಗಂಡು ನಮ್ಮ ಪ್ರಮುಖ ಆದ್ಯತೆಯಾಗಿ ನಾವು ಉ.ಕ. ಜಿಲ್ಲೆಯಲ್ಲಿ‘ಸಾಹಿತ್ಯ ಭವನ’ ನಿರ್ಮಿಸುವಂತೆ ಕೇಂದ್ರ ಕಸಾಪದಲ್ಲಿ ಒತ್ತಾಯಿಸುತ್ತಲೇ ಬಂದಿದ್ದೆವು. ಮನವಿಗೆ ಸ್ಪಂದಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ರಾಜ್ಯಾದ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮೊದಲ ಹಂತದಲ್ಲಿ ‘ಕಾರವಾರ’ ಹಾಗೂ‘ದಾಂಡೇಲಿ’ಯಲ್ಲಿ ಸಾಹಿತ್ಯ ಭವನಗಳನ್ನು ನಿರ್ಮಿಸಲು ಅನುಮತಿಸಿದ್ದಾರೆ. ಜೊತೆಗೆ ಪರಿಷತ್ತು, ಸರಕಾರ ಹಾಗೂ ಸ್ಥಳೀಯರ ಪ್ರಾಯೋಜಕತ್ವದಲ್ಲಿ ಕಟ್ಟಡ ಕಾಮಗಾರಿ ನಿರ್ಮಿಸಬಹುದಾಗಿದೆ ಎಂದೂ ತಿಳಿಸಿದ್ದಾರೆ. ಸಾಹಿತ್ಯದ ಕಾರ್ಯಕ್ರಮಗಳ ಸಂಘಟನೆ ಹಾಗೂ ಪರಿಷತ್ತಿನ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಹಂಬಲದೊಂದಿಗೆ‘ಸಾಹಿತ್ಯ ಭವನ’ ನಿರ್ಮಾಣಕ್ಕಾಗಿ ಪ್ರಯತ್ನ ನಡೆಸುತ್ತ ಬಂದಿದ್ದ ನಮಗೆ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ಈ ಲಿಖಿತ ಸಮ್ಮತಿ ಪತ್ರ ಸಂತಸ ತಂದಿದೆ. ಆ ಕಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಅಭಿನಂದಿಸುತ್ತಿದೆ ಎಂದು ವಾಸರೆ ತಿಳಿಸಿದ್ದಾರೆ.

ಇಲ್ಲಿ ಮತ್ತೊಂದು ತ್ವರಿತವಾಗಿ ಆಗಬೇಕಾದ ಸಂಗತಿಯಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ‘ಸಾಹಿತ್ಯ ಭವನ’ ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದೆ. ಇದರ ಆದಾರದಲ್ಲಿ ಸ್ಥಳೀಯ ಸಂಸ್ಥೆಯವರು (ನಗರಸಭೆ) ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ‘ಸಾಹಿತ್ಯ ಭವನ’ಕ್ಕೆ ಅವಶ್ಯವಿರುವ ನಿವೇಶನವನ್ನು ಮಂಜೂರಿ ಮಾಡಿಕೊಡಬೇಕಿದೆ. ಅವರು ನಿವೇಶನವನ್ನು ಕಸಾಪ ಹೆಸರಿಗೆ ಮಾಡಿಕೊಟ್ಟ ತಕ್ಷಣ, ಪರಿಷತ್ತು, ಸರಕಾರ ಹಾಗೂ ಸ್ಥಳೀಯ ದಾನಿಗಳ ಸಹಾಯ, ಸಹಕಾರದೊಂದಿಗೆ ಸಾಹಿತ್ಯ ಭವನ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಲಾಗುವುದು. ಹಾಗಾಗಿ ಸಂಬಂಧ ಪಟ್ಟ ತಾಲೂಕಾಡಳಿತದವರು, ಹಾಗೂ ಆಭಾಗದ ಜನಪ್ರತಿನಿದಿಗಳು ಈ ಬಗ್ಗೆ ಗಮನ ಹರಿಸುವ ಜೊತೆಗೆ ತಮ್ಮ ವ್ಯಾಪ್ತಿಯ ನಗರ ಪ್ರದೇಶದಲ್ಲಿ ಕನಿಷ್ಠ 20 ಗುಂಟೆಯ ನಿವೇಶನವನ್ನು ಅತಿ ಶೀಘ್ರವಾಗಿ ಮಂಜೂರಿ ಮಾಡಿಸಿ ಕೊಡುವ ಜೊತೆಗೆ‘ಸಾಹಿತ್ಯ ಭವನ’ ನಿರ್ಮಾಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿರುವ ಬಿ.ಎನ್. ವಾಸರೆಯವರು ಮತ್ತೆ ಹಂತ ಹಂತವಾಗಿ ಜಿಲ್ಲೆಯ ಬೇರೆ ತಾಲೂಕುಗಳಲ್ಲಿಯೂ ಕೂಡಾ ಸ್ಥಳೀಯ ಆಡಳಿತ ನಿವೇಶನ ನೀಡಿದರೆ ಸಾಹಿತ್ಯ ಭವನ ನಿರ್ಮಿಸಲಾಗುವುದು. ಈ ಬಗ್ಗೆಯೂ ರಾಜ್ಯಾಧ್ಯಕ್ಷರೂ ಕೂಡಾ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆಂದು ತಿಳಿಸಿದ್ದಾರೆ.

ನಿವೇಶನ ನೀಡಿದ ತಕ್ಷಣ ಭವನ
ಕಾರವಾರ , ದಾಂಡೇಲಿಯಲ್ಲಿ ಮೊದಲ ಹಂತದಲ್ಲಿ ಸಾಹಿತ್ಯ ಭವನ ನಿರ್ಮಿಸಲು ಕಸಾಪ ಸಮ್ಮತಿಸಿದೆ. ಆಯಾ ತಾಲೂಕು ಆಡಳಿತ ನಿವೇಶನ ನೀಡಿದ ತಕ್ಷಣ ಭವನ ನಿರ್ಮಾಣ ಮಾಡಲು ಕ್ರಿಯಾಯೋಜನೆ ತಯಾರಿಸಲಾಗುವುದು. ಉಳಿದ ತಾಲೂಕಿನಲ್ಲಿ ನಿವೇಶನ ನೀಡಿದರೆ ನಂತರದ ಹಂತದಲ್ಲಿ ಸಾಹಿತ್ಯ ಭವನ ನಿರ್ಮಿಸಲಾಗುವುದು. ಅದಕ್ಕೆ ರಾಜ್ಯಾಧ್ಯಕ್ಷರೂ ಸಹ ಒಪ್ಪಿದ್ದಾರೆ.

  • ಬಿ.ಎನ್. ವಾಸರೆ
    ಜಿಲ್ಲಾಧ್ಯಕ್ಷರು, ಕಸಾಪ. ಉ.ಕ
https://odanadi.com/wp-content/uploads/2023/07/0.mp4

Exit mobile version