Site icon ಒಡನಾಡಿ

‘ಪ್ರೀತಿ ಪದಗಳ ಸಹಯಾನಿ ವಿಠ್ಠಲ’ ಒಂದು ಅವಲೋಕನ

ಡಾ. ವಿಠ್ಠಲ ಭಂಡಾರಿ (ಪ್ರೀತಿಯ ವಿಠ್ಠಲಣ್ಣ) ಇಲ್ಲದ ಮೊದಲ ಸಹಯಾನ ಸಾಹಿತ್ಯೋತ್ಸವ ಹಾಗೂ ವಿಠ್ಠಲರವರ ನೆನಪಿನ ಕಾರ್ಯಕ್ರಮ ಮೇ ತಿಂಗಳಲ್ಲಿ ಕೆರೆಕೋಣದಲ್ಲಿ ನಡೆಯಿತು. 2 ವರ್ಷಗಳ ಕೋವಿಡ್ ಸ್ಥಿತ್ಯಂತರಗಳ ನಂತರ ನಡೆದ ಕಾರ್ಯಕ್ರಮವಾದರೂ ಸೇರಿದ ಸಹಯಾನಿಗಳಲ್ಲಿ ಹಿಂದಿನ ಉತ್ಸಾಹವಿಲ್ಲ ; ಗೆಲುವು, ಹರಟೆ ಇಲ್ಲ. ಎಲ್ಲರ ಮುಖದಲ್ಲೂ ಒಂದು ರೀತಿಯ ವಿಷಾದ, ನೋವಿನ ಛಾಯೆ ಇಣುಕಿತ್ತು. ಇಡೀ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವಿಠ್ಠಲ್ ಅಭಿಮಾನಿಗಳು, ವಿದ್ಯಾರ್ಥಿಗಳು, ಗಣ್ಯಾತಿಗಣ್ಯರು, ಕಾಮ್ರೆಡ್ ಸಹ ಯಾನಿಗಳು ಸೇರಿದ್ದರು. ಸರಿಯಾಗಿ ಹತ್ತು ಮೂವತ್ತಕ್ಕೆ ವಿಠ್ಠಲ್ ಅವರ ಸಮಾಧಿ ಸ್ಥಳಕ್ಕೆ ಅತ್ಯಂತ ನೋವಿನಲ್ಲಿ ಎಲ್ಲರೂ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವಾಗ ಎಲ್ಲರ ಕಣ್ಣಾಲಿಗಳು ತೇವಗೊಂಡಿದ್ದವು. ಅವರ ಕಾಮ್ರೆಡ್ ಸಹಯಾನಿಗಳು ವಿದಾಯ ಗೀತೆಯೊಂದಿಗೆ
ಕೆಂಪು ನಮನ ಸಲ್ಲಿಸಿದರು. ತದನಂತರದಲ್ಲಿ ವಿಠ್ಠಲ್ ತನ್ನ ಜೀವಮಾನದಲ್ಲಿ ಸಂಗ್ರಹಿಸಿದ ಅಮೂಲ್ಯ ಆಸ್ತಿಯೇ ಎನ್ನಬಹುದಾದ ಬೃಹತ್ ಸಂಖ್ಯೆಯ ಗ್ರಂಥಗಳುಳ್ಳ ‘ವಿಠ್ಠಲ್ ಪುಸ್ತಕಮನೆ’ ಉದ್ಘಾಟನೆಗೊಂಡಿತು .ಅಲ್ಲಿ ಅಚ್ಚುಕಟ್ಟಾಗಿ ಸಂಗ್ರಹಿಸಿದ ರಾಶಿರಾಶಿ ದಪ್ಪನೆಯ ಪುಸ್ತಕಗಳ ನೋಡುವಾಗ ವಿಠ್ಠಲ್ ಅವರು ಜೀವನದಲ್ಲಿ ಸಂಗ್ರಹಿಸಿದ ಅಮೂಲ್ಯ ಆಸ್ತಿ ಇದುವೇ ಇರಬಹುದು ಅನ್ನಿಸದಿರಲಿಲ್ಲ. ಹಲವು ಬಗೆಯ ದಾಖಲೆಗಳು, ಭಾವಚಿತ್ರಗಳು, ಹಸ್ತಪ್ರತಿಗಳು, ಸಂಶೋಧನಾ ಗ್ರಂಥಗಳು ಮುಂದಿನ ತಲೆಮಾರಿಗೆ ವಿಠ್ಠಲ್ ಕೂಡಿಟ್ಟ ಬಹುದೊಡ್ಡ ಆಸ್ತಿ ಎನ್ನುವಂತಿತ್ತು. ಇಡೀ ಕಾರ್ಯಕ್ರಮದಲ್ಲಿ ವಿಠ್ಠಲನ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ವೇದಿಕೆಯ ಮೇಲಿನ ಡಾ. ಆರ್. ವಿ. ಭಂಡಾರಿಯವರ ಮತ್ತು ಮಗ ವಿಠ್ಠಲ್ ಅವರ ಭಾವಚಿತ್ರಗಳು ಸೇರಿದ ಸಮಸ್ತರನ್ನು ಸೂಜಿಗಲ್ಲಿನಂತೆ ಬೇರೆಯದೇ ಲೋಕಕ್ಕೆ ಕೊಂಡೊಯ್ಯುವಂತಿದ್ದವು. . ಅಂದು ಮಧ್ಯಾಹ್ನದ ಗೋಷ್ಠಿಯಲ್ಲಿ ವಿಠ್ಠಲ್ ಅವರ ನೆನಪಿನ ಪುಸ್ತಕ’ ಪ್ರೀತಿ ಪದಗಳ ಸಹಯಾನ ವಿಠ್ಠಲ’ ಅನಾವರಣಗೊಂಡಿತು. ಪುಸ್ತಕದ ಪ್ರಧಾನ ಸಂಪಾದಕರಾಗಿದ್ದ ಡಾಕ್ಟರ್ ಮೀನಾಕ್ಷಿ ಬಾಳಿ ಅವರ ಮಾತು ಉತ್ತರ ಕರ್ನಾಟಕದ ಖಡಕ್ ರೊಟ್ಟಿಯಂತೆ ಅತ್ಯಂತ ವಸ್ತುನಿಷ್ಠವಾಗಿತ್ತು. ವಿಠ್ಠಲ್ ಅವರೊಂದಿಗಿನ ಒಡನಾಟ, ಅವರ ಕಾರ್ಯವೈಖರಿ, ಮಾತುಕತೆ ಇವೆಲ್ಲವನ್ನು ಎಲ್ಲ ಭಾವೋದ್ವೇಗವನ್ನು ಬದಿಗಿಟ್ಟು ಎಳೆಎಳೆಯಾಗಿ ಬಿಚ್ಚಿಟ್ಟರು. ಅವರ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆ ಭಾವತೀವ್ರತೆ ಎದ್ದು ಕಾಣುತ್ತಿರಲಿಲ್ಲ ಆದರೆ ವಿಠ್ಠಲ್ ಅವರಲ್ಲಿದ್ದ ಅದ್ಭುತ ಸಂಘಟನಾ ಶಕ್ತಿ, ಕಾರ್ಯತತ್ಪರತೆ, ಮುನ್ನೋಟ, ಮಹಾ ಕನಸುಗಾರನ ಕೆಲಸದ ದಾಹ, ತನ್ನ ಸಹ ಯಾನಿಗಳಿಂದ ಕೆಲಸ ತೆಗೆದುಕೊಳ್ಳುವ ರೀತಿ, ಸವಾಲುಗಳನ್ನು ಸ್ವೀಕರಿಸಿ ಹಗಲು-ರಾತ್ರಿಯೆನ್ನದೆ ಹಿಡಿದ ಕೆಲಸವನ್ನು ನಿಭಾಯಿಸುತ್ತಿದ್ದ ರೀತಿ, ಪಾದರಸದಂಥ ವ್ಯಕ್ತಿತ್ವ, ಅಧ್ಯಯನಶೀಲ ಅಧ್ಯಾಪನ ಇತ್ಯಾದಿ ವಿಠ್ಠಲ್ ಅವರಲ್ಲಿ ಅಡಕವಾಗಿದ್ದ ಅಪಾರ ಶಕ್ತಿ ಸಂಚಯನದ ಅರಿವನ್ನು ನೆರೆದವರಲ್ಲಿ ಮೂಡಿಸಿತು. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕ ಬದಲಾವಣೆ ಸಂದರ್ಭದಲ್ಲಿ ತೆಗೆದುಕೊಂಡ ಜವಾಬ್ದಾರಿ ,ಕೆಲಸ ನಿಭಾಯಿಸಿದ ರೀತಿ ಅಸಾಧ್ಯವೆಂದು ಕೈಚೆಲ್ಲಿ ಕುಳಿತ ಆಡಳಿತ ಮಂಡಳಿಯಲ್ಲಿ ಧೈರ್ಯ ತುಂಬಿ ವಿದ್ಯಾರ್ಥಿ ಸ್ನೇಹಿ ಅಪರೂಪದ ಪಠ್ಯಪುಸ್ತಕವನ್ನು ಎಲ್ಲಾ ಭಾಷಾ ವಿಷಯಗಳಲ್ಲಿ ಒದಗಿಸಿಕೊಟ್ಟ ಅವರ ಚತುರತೆ, ಕೌಶಲ್ಯ, ‘ಸಂವಿಧಾನ ಓದು ‘ ಅಭಿಯಾನದಲ್ಲಿ ತೊಡಗಿಸಿಕೊಂಡ ರೀತಿ ಇವೆಲ್ಲವುಗಳ ಬಗ್ಗೆ ವಸ್ತುನಿಷ್ಠ ಅನುಭವ ಹಂಚಿಕೊಂಡರು. ಜೊತೆಗೆ ಆತನ ಸಹಯಾನಿಗಳು ವಿದ್ಯಾರ್ಥಿಗಳು ವಿಠ್ಠಲ್ ಮೇಷ್ಟ್ರ ಅಪರೂಪದ ವ್ಯಕ್ತಿತ್ವದ ಅನಾವರಣ ಮಾಡುತ್ತಲೇ ಕಣ್ಣೀರಾದರು.

ನಾನು ಕೂಡ ವಿಠ್ಠಲಣ್ಣನ ನೆನಪಿನ ಪುಸ್ತಕವನ್ನು ಕೊಂಡುಕೊಂಡು ಬಂದೆ. ಹದಿನೈದು ದಿನಗಳಾದರೂ ಕೆಲಸದ ಒತ್ತಡ, ಹಿಡಿದ ಪುಸ್ತಕವನ್ನು ಮುಗಿಸುವ ಧಾವಂತದಲ್ಲಿ ವಿಠ್ಠಲ್ ಅವರ ಪುಸ್ತಕವನ್ನು ಓದಲು ಆಗಿರಲಿಲ್ಲ; ತಂದ ದಿನವೇ ಹಾಗೆ ಸುಮ್ಮನೆ ಇಡೀ ಪುಸ್ತಕವನ್ನು ಒಮ್ಮೆ ತಿರುವಿ ನೋಡಿದ್ದಷ್ಟೇ ಆದರೂ ಓದುವ ಭಾವತೀವ್ರತೆ ಕಾಡುತ್ತಲೇ ಇತ್ತು.’ ಪ್ರೀತಿ ಪದಗಳ ಸಹಯಾನಿ ವಿಠ್ಠಲ’ ಪುಸ್ತಕವನ್ನು ಕೈಗೆತ್ತಿಕೊಂಡು ಓದಲಾರಂಭಿಸಿದೆ; ಓದುತ್ತಾ ಓದುತ್ತಾ ಹಲವು ಕಡೆ ಕಣ್ಣೀರಾದೆ. ಪುಸ್ತಕ ನನ್ನನ್ನು ಅದೆಷ್ಟು ಕಾಡಿತ್ತೆಂದರೆ ರಾತ್ರಿ ಹೊತ್ತು ಪುಸ್ತಕವನ್ನು ಓದಿ ಮಲಗಿದರೆ ನಿದ್ದೆ ಬರುತ್ತಿರಲಿಲ್ಲ! ವಿಠ್ಠಲಣ್ಣನ ವ್ಯಕ್ತಿತ್ವ ತೀವ್ರವಾಗಿ ಕಾಡುತ್ತಿತ್ತು. ಅನಂತರದ ದಿನಗಳಲ್ಲಿ ಎಂಟರ ನಂತರ ಬೇರೆ ಪುಸ್ತಕಗಳನ್ನು ಓದಿ ನಿದ್ದೆಗೆ ಜಾರುತ್ತಿದ್ದೆ. ನನ್ನನ್ನು ಅತ್ಯಂತ ತೀವ್ರವಾಗಿ ಕಾಡಿದ ಪುಸ್ತಕ ಇದು. ಪ್ರತಿಯೊಬ್ಬ ಯುವಕರು ಶಿಕ್ಷಕರು, ಪ್ರಾಧ್ಯಾಪಕರು ಓದಲೇಬೇಕಾದ ಅಪರೂಪದ ಪುಸ್ತಕ ಎಂದೇ ನನಗನಿಸಿದ್ದು.

ಪುಸ್ತಕದ ಆರಂಭದಲ್ಲಿ ನಾಡಿನ ಖ್ಯಾತ ಬರಹಗಾರರು ಹಿರಿಯ ಚಿಂತಕರು ಆದ ಸುಬ್ರಾಯ ಮತ್ತಿಹಳ್ಳಿ ಅವರು ತೊಂಬತ್ತರ ದಶಕದಲ್ಲಯೇ ವಿದ್ಯಾರ್ಥಿ ಸಂಘಟನೆ, ಕಮ್ಯುನಿಸ್ಟ್ ವಿಚಾರಧಾರೆ, ರಚನಾತ್ಮಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ 21ರ ಹರೆಯದ ವಿಠ್ಠಲ್ ಅವರು ಉತ್ತರ ಕನ್ನಡದ ಸಮಸ್ತ ಚಿಂತಕರ ಗಮನಸೆಳೆದು ಚಿಂತನ ಉತ್ತರಕನ್ನಡದ ಸಂಚಾಲಕರಾಗಿ ಸರ್ವಾನುಮತದಿಂದ ಆಯ್ಕೆಯಾದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ. ಆನಂತರದ ದಿನಗಳಲ್ಲಿ ಇಲ್ಲಿಯ ಸಮಾನಮನಸ್ಕ ಚಿಂತಕರು ಒಂದುಗೂಡಿ ವರ್ಷಪೂರ್ತಿ ಜಿಲ್ಲೆಯಾದ್ಯಂತ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವುದರ ಜೊತೆಜೊತೆಗೆ ಜಿಲ್ಲೆಯಾದ್ಯಂತ ಪುಸ್ತಕ ಕೊಂಡು ಓದುವ ಪ್ರವೃತ್ತಿಯನ್ನು ,ಜಾಗೃತ ಅಭಿಯಾನವನ್ನು ಎತ್ತಿಕೊಂಡು ಇಡೀ ರಾಜ್ಯಕ್ಕೆ ಮಾದರಿಯಾದ ದಿನಗಳನ್ನು ಮೆಲುಕು ಹಾಕುತ್ತಾರೆ.

ಡಾ. ಆರ್. ವಿ. ಭಂಡಾರಿಯವರ ಅಪ್ಪಟ ಎಡಪಂಥೀಯ ವಿಚಾರಗಳ ವಾರಸುದಾರರಾದ ವಿಠಲ್ ಅವರು ಮುಂದಿನ ದಿನಗಳಲ್ಲಿ ಸಂಘಟಕರಾಗಿ, ರಂಗಭೂಮಿ ಕಲಾವಿದರಾಗಿ, ಅಪರೂಪದ ಪ್ರಾಧ್ಯಾಪಕರಾಗಿ, ಹತ್ತಾರು ಸಂಘಟನೆಗಳ ಸಂಚಾಲಕರಾಗಿ, ಸದಸ್ಯರಾಗಿ ,ಯಕ್ಷಗಾನ ಪ್ರೇಮಿಯಾಗಿ, ತಾಳಮದ್ದಳೆಯ ಅಪರೂಪದ ಅರ್ಥದಾರಿಯಾಗಿ, ಪಿಎಚ್ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಬಂಡಾಯ ಪ್ರಕಾಶನದ ಸಂಚಾಲಕರಾಗಿ, ಉತ್ತರ ಕನ್ನಡದ ಜಾನಪದ ಕಲೆ, ಕಲಾವಿದರ, ಬುಡಕಟ್ಟು ಸಮುದಾಯಗಳ ಸಂದರ್ಶನ, ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಸಮುದಾಯ ಕರ್ನಾಟಕ, ಅಂಬೇಡ್ಕರ್ ಓದು ,ಸಹಯಾನ ಉತ್ತರಕನ್ನಡದ ಅಡಿಯಲ್ಲಿ ಹತ್ತು ಹಲವು ರೀತಿಯ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಮಹಾ ಕನಸುಗಾರನಾಗಿ , ಎಲ್ಲಕ್ಕಿಂತ ಮುಖ್ಯವಾಗಿ ಇಡೀ ದೇಶ ಒಂದು ಸಂಘರ್ಷ, ಕೋಮುದಳ್ಳುರಿಯ ಬೇಗೆಯಲ್ಲಿ ಬೇಯುತ್ತಿರುವಾಗ ‘ಸಂವಿಧಾನ ಓದು’ ಅಭಿಯಾನವನ್ನು ಕೈಗೆತ್ತಿಕೊಂಡು ರಾಜ್ಯಾದ್ಯಂತ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿ ಯುವಜನತೆಗೆ ಸಂವಿಧಾನವನ್ನು ತಲುಪಿಸುವ ಅಭೂತಪೂರ್ವ ಅಭಿಯಾನವನ್ನು ಸಂಘಟಿಸುವ ಮೂಲಕ ಸಂವಿಧಾನದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡು ಕೈಗೊಂಡ ಕಾರ್ಯಚಟುವಟಿಕೆಗಳು ವಿಠ್ಠಲ್ ಅವರ ಹೆಗ್ಗಳಿಕೆ.

ಅವರ ವಿದ್ಯಾರ್ಥಿಗಳು ದಾಖಲಿಸಿರುವಂತೆ ವಿಠ್ಠಲ್ ಅವರ ಭಾಷಾ ಕಲಿಕೆಯ ಬೋಧನಾ ಅವಧಿ ಅಪರೂಪದ ಬೆಳಕಿಂಡಿಯಂತೆ ಇರುತ್ತಿತ್ತು ವಿದ್ಯಾರ್ಥಿಗಳಿಗೆ ಅಸೈನ್ಮೆಂಟ್ ರೂಪದಲ್ಲಿ ನಾಡಿನ ಖ್ಯಾತ ಸಾಹಿತಿಗಳ ಪುಸ್ತಕ ಓದು, ಅವರೊಂದಿಗೆ ಪತ್ರ ವ್ಯವಹಾರ, ಹಸ್ತಾಕ್ಷರ ಸಂಗ್ರಹ, ಸಾಹಿತಿಗಳೊಂದಿಗೆ ಮಾತುಕತೆ, ಅಪರೂಪದ ಜಾನಪದ ಹಾಡು, ಗಾದೆ ಮಾತುಗಳ ಸಂಗ್ರಹ ಇತ್ಯಾದಿ ರೂಪದಲ್ಲಿ ಇರುತ್ತಿದ್ದವು.ವಿದ್ಯಾರ್ಥಿಗಳು ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು ಶಾಲಾ ಗ್ರಂಥಾಲಯದಲ್ಲಿ ಕಾಪಿಟ್ಟು ಮುಂದೊಂದು ದಿನ ಅವನ್ನೆಲ್ಲ ಪುಸ್ತಕರೂಪದಲ್ಲಿ ತರುವ ಬೃಹತ್ ಯೋಜನೆ ವಿಠ್ಠಲ್ ಅವರದಾಗಿತ್ತು ವಿದ್ಯಾರ್ಥಿಗಳನ್ನು ಭಾಷಣ, ಕವಿಗೋಷ್ಠಿಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ಅವರು ಬರೆದ ಕತೆ, ಕವನಗಳನ್ನುವಿದ್ಯಾರ್ಥಿಗಳಿಗೇ ಗೊತ್ತಿಲ್ಲದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿ ಅವರಲ್ಲಿ ಒಂದು ಹೊಸ ಹುಮ್ಮಸ್ಸನ್ನು, ಸಂಚಲನವನ್ನು ಉಂಟು ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪದವಿ ತರಗತಿಗಳಲ್ಲಿ ಭಾಷಾ ಬೋಧನೆ ನೀರಸವಾಗಿ ಅರ್ಥ ಕಳೆದುಕೊಳ್ಳುತ್ತಿರುವ ಹೊತ್ತಲ್ಲಿ ವಿಠ್ಠಲ ಅವರ ಬೋಧನಾ ವಿಧಾನಗಳು ನಿಜಕ್ಕೂ ಭಾಷಾ ಬೋಧಕರಿಗೆ ಒಂದು ಅಪರೂಪದ ಮಾದರಿಯಾಗಿ ನಿಲ್ಲುತ್ತವೆ.. ಇಂದು ವಿಠಲ್ ಅವರ ಅನುಪಸ್ಥಿತಿಯಲ್ಲಿಯೂ ಅವರ ವಿದ್ಯಾರ್ಥಿಗಳು ‘ಚಿಗುರುಗಳು’ ಎಂಬ ಹೆಸರಿನಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಅವರ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ತಾನು ಕೆಲಸ ನಿರ್ವಹಿಸುವ ಕಾಲೇಜಿನಲ್ಲಿ ಉತ್ತರ ಕನ್ನಡದ ಹಿರಿ-ಕಿರಿಯ ಸಾಹಿತಿಗಳೆಲ್ಲರ ಕೃತಿಗಳನ್ನು ಸಂಗ್ರಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಇಡೀ ಜಿಲ್ಲೆಯ ಸಾಹಿತ್ಯ ಭಂಡಾರ ವೆಲ್ಲವೂ ಒಂದೇ ಕಡೆಯಲ್ಲಿ ಲಭಿಸುವ ಹಾಗೆ ನೋಡಿಕೊಂಡಿರುವುದು ಕಾಲೇಜಿಗೆ ಹೆಮ್ಮೆಯ ವಿಷಯ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿ ಮುಂದಿನ ಕಲಿಕೆಗೆ ಅನುವು ಮಾಡಿಕೊಟ್ಟವರು ಕೂಡ. ಪ್ರಜಾಪ್ರಭುತ್ವ ಮಾದರಿಯ ಆಳ್ವಿಕೆಯಲ್ಲಿ ಅಪಾರ ನಂಬಿಕೆ ಇಟ್ಟು ಅದರ ಆಶಯಗಳಿಗೆ, ಸಂವಿಧಾನಕ್ಕೆ ಧಕ್ಕೆಯುಂಟಾದ ಸಂದರ್ಭಗಳಲ್ಲೆಲ್ಲ ಶಾಂತಿಯುತ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು.

ವಿಠ್ಠಲ್ ಅವರ ನೆನಪಿಲ್ಲಿ ಹರಿದುಬಂದ ರಾಶಿರಾಶಿ ಕವನ, ಲೇಖನಗಳಲ್ಲಿ ಎಲ್ಲಿಯೂ ಚರ್ವಿತ ಚರ್ವಣ ಆಗಬಾರದೆಂಬ ಎಚ್ಚರಿಕೆಯಿಂದ ಕೆಲವೇ ಕೆಲವು ಟೈಟಲ್ ಅಡಿಯಲ್ಲಿ ಆಯ್ದ ಬರೆಹಗಳನ್ನು ಮಾತ್ರ ಪ್ರಕಟಿಸಿ ಹೊರತಂದ ಪುಸ್ತಕದಲ್ಲಿ ಎಲ್ಲಿಯೂ ಉತ್ಪ್ರೇಕ್ಷೆ, ಭಾವೋದ್ವೇಗ ಇಲ್ಲ. ಬಾಳಸಂಗಾತಿ ಯಮುನಾ ಅವರ ಬರಹಗಳಲ್ಲಿ ವ್ಯಕ್ತವಾಗುವ ವಿಠ್ಠಲ್ ಅವರ ಸರಳ ವ್ಯಕ್ತಿತ್ವ, ಜೊತೆಗೆ ಅಂತ್ಯಕಾಲದಲ್ಲಿ ಕೋವಿಡ್ ನೊಂದಿಗಿನ ನರಳಾಟದ ಅನುಭವಗಳು ಕರುಳು ಚುರ್ ಎನಿಸುತ್ತದೆ ಅತ್ಯಂತ ಆತ್ಮವಿಶ್ವಾಸದಿಂದ ಕೊನೆಯ ಗಳಿಗೆಯಲ್ಲಿಯೂ ಸಂಗಾತಿಯೊಂದಿಗೆ ಮೊಬೈಲ್ ಸಂದೇಶದ ಮೂಲಕ ಸಂವಾದ ನಡೆಸುತ್ತಿದ್ದ ವಿಠ್ಠಲ್ ಅವರನ್ನು ಅವರಿಗೆ ಗೊತ್ತಿಲ್ಲದಂತೆ ಕೋವಿಡ್ ಅತಿಕ್ರಮಿಸಿಕೊಂಡ ರೀತಿ ಭಯಾನಕ!! ಇನ್ನು ಮಾಧವಿ ಯವರ ಬರಹದಲ್ಲಿ ವಿಠ್ಠಲ್ ಅವರ ಬಾಲ್ಯದ ದಿನಗಳು, ಆಟ -ತುಂಟಾಟಗಳು ಅವರ ಜೀವಕ್ಕೆ ಜೀವವಾಗಿದ್ದ ಅನೇಕ ಸಂದರ್ಭಗಳು, ಮಾತುಕತೆಗಳು ಕಣ್ಣಾಲಿಗಳನ್ನು ತೇವ ಗೊಳಿಸುತ್ತವೆ ವಿಠ್ಠಲ್ ಅವರಿಗೆ ಸಹಯಾನದ ಬಗೆಗಿರುವ ಅಪಾರವಾದ ಕನಸುಗಳು, ಮುಂದೊಂದು ದಿನ ಸಹಯಾನವನ್ನು ಓಪನ್ ಥಿಯೇಟರ್, ಮಹಾ ಮನೆಯನ್ನಾಗಿ ,ಅಲ್ಲೊಂದು ಗ್ರಂಥಾಲಯ, ಮ್ಯೂಸಿಯಂ ಕಟ್ಟಿಸಿ ಮುನ್ನಡೆಸಬೇಕೆಂಬ ಕನಸು; ಅದಕ್ಕೆ ಪೂರಕವಾಗಿ ಕೈಗೊಂಡ ಕೆಲಸ ಕಾರ್ಯಗಳು ….ಬಹುಶ: ವಿಠ್ಠಲ್ ಅವರು ಬದುಕಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇಡೀ ರಾಜ್ಯ ಕೆರೆಕೋಣ ಕಡೆಗೆ ತಿರು ತಿರುಗಿ ನೋಡುವಂತೆ ಮಾಡುತ್ತಿದ್ದರೇನೊ! ಎಂಬ ಮಾತುಗಳು ತುಂಬಾ ನೋವುಂಟು ಮಾಡುತ್ತವೆ.


ವಿಠಲ್ ಅವರು ಆರಂಭಿಸಿದ ಪಿಚ್ಚರ್ ಪಯಣ, ವಾರದ ಕವಿತೆ ಆವರ ನೆನಪಲ್ಲಿ ಮುಂದುವರಿಯುತ್ತಲೇ ಇವೆ. ಒಟ್ಟಾರೆ ತನ್ನ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ದಣಿವರಿಯದೆ ದುಡಿದು, ನಾಡಿನ ಖ್ಯಾತ ಸಂಘಟಕನಾಗಿ, ಸಾಂಸ್ಕೃತಿಕ ಸೊಗಸಾಗಿ, ಎಡಪಂಥೀಯ ವಿಚಾರ ಧಾರೆಗಳ ಕೊಂಡಿಯಾಗಿ, ಸಂಶೋಧಕನಾಗಿ, ರಂಗಭೂಮಿ, ಯಕ್ಷಗಾನ ಪ್ರೇಮಿಯಾಗಿ ಕೊನೆಗೆ ಕೋವಿಡ್ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯನಾಗಿ ಹತ್ತುಹಲವು ದಿಶೆಯಲ್ಲಿ ಕೆಲಸ ನಿರ್ವಹಿಸುತ್ತ ಇರುವಾಗಲೇ ಇದ್ದಕ್ಕಿದ್ದಂತೆ ಚಿರನಿದ್ರೆಗೆ ಜಾರಿ ಸಹಯಾನದ ಅಂಗಳದಲ್ಲಿ ಮೌನವಾಗಿ ಮಲಗಿರುವುದು ತುಂಬಲಾರದ ನಷ್ಟವೇ ಸರಿ. ಆದರೂ ವಿಠ್ಠಲ್ ಅವರ ಕಾರ್ಯವೈಖರಿ, ಅವರಲ್ಲಿದ್ದ ಕನಸುಗಳು ,ಸಂಘಟನಾ ಚತುರತೆ, ಅಧ್ಯಯನ-ಅಧ್ಯಾಪನ ಪ್ರವೃತ್ತಿ , ಯುವ ತಲೆಮಾರಿಗೆ ಮಾದರಿ. ಆದ್ದರಿಂದ ಪ್ರತಿಯೊಬ್ಬರೂ ಓದಲೇಬೇಕಾದ ಅಪರೂಪದ ಪುಸ್ತಕ’ ಪ್ರೀತಿ ಪದಗಳ ಸಹಯಾನಿ ವಿಠಲ್ ವಿಠ್ಠಲ ‘

ಸುಧಾ ಭಂಡಾರಿ
ಹಡಿನಬಾಳ
೯೪೮೧೧೧೧೧೯೩

Exit mobile version