Site icon ಒಡನಾಡಿ

ಗೊಂಬೆಯಾಟದ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಿದ ಶಿಕ್ಷಕ ಸಿದ್ದಪ್ಪ ಬಿರಾದಾರರವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗೌರವ

ವಿಜ್ಞಾನವೆಂದರೆ ಈ ಪ್ರಪಂಚದ ಕುರಿತು ಪ್ರಶ್ನೆ, ಪರೀಕ್ಷೆ, ಶೋಧನೆ, ಇದು ಏಕೆ? ಅದು ಹೇಗೆ? ಎಂಬ ಹುಡುಕಾಟ. ಈ ಹುಡುಕಾಟದ ಫಲವಾಗಿ ದೊರೆತ ಜ್ಞಾನವೇ ವಿಜ್ಞಾನ. ಮಕ್ಕಳ ಬದುಕಿನಲ್ಲಿ ಸದಾ ವೈಜ್ಞಾನಿಕ ಮನೋಭಾವ ಬಿತ್ತುತ್ತ, ಸಾಂಪ್ರದಾಯಿಕ ಬೋಧನಾ ಪದ್ಧತಿಗೆ ವಿದಾಯ ಹೇಳಿ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ವೈಜ್ಞಾನಿಕ ಚಿಂತನೆಗಳ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾದವರು ಹಳಿಯಾಳದ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಿದ್ದಪ್ಪ ಬಿರಾದಾರರವರು.

ಪ್ರತಿಯೊಂದು ಮಗುವಿಗೂ ಉತ್ತಮ ಗುಣಮಟ್ಟದ ಪರಿಣಾಮಕಾರಿ ವಿಜ್ಞಾನ ಶಿಕ್ಷಣ ದೊರಕುವಂತೆ ಮಾಡಲು ಬದುಕಿನ ಬಹುಪಾಲು ಸಮಯವನ್ನು ಮೀಸಲಾಗಿಟ್ಟ ಅಪ್ಪಟ ಗ್ರಾಮೀಣ ಪ್ರತಿಭೆಗೆ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ ಮುಡಿಗೇರಿದೆ. ಇವರಿಗೆ ಅಭಿನಂದನೆಗಳು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಜ್ಞಾನವನ್ನು ಕೇವಲ ಪಠ್ಯಪುಸ್ತಕದ ವಿಷಯವಾಗಿರಿಸದೇ ಅದನ್ನು ಅನುಭವಿಸುವ, ಅಭಿನಯಿಸುವ, ಸೃಷ್ಟಿಸುವ ಮತ್ತು ಪ್ರಶ್ನಿಸುವ ಕಲೆಯಾಗಿ ರೂಪಿಸಲು ಸಿದ್ದಪ್ಪ ಬಿರಾದಾರರವರು ಕಂಡುಕೊಂಡ ನವೀನ ಬೋಧನಾ ತಂತ್ರವೇ ಗೊಂಬೆಯಾಟದ ಮೂಲಕ ಪಾಠ.

ಸಂಕೀರ್ಣ ವೈಜ್ಞಾನಿಕ ವಿಷಯಗಳನ್ನು ಮಕ್ಕಳಿಗೆ ಸರಳವಾಗಿ ಅರ್ಥ ಮಾಡಿಸಲು ಶೈಕ್ಷಣಿಕ ಗೊಂಬೆಯಾಟ ಪರಿಚಯಿಸಿ ಭಾರತದ ೨೩ ರಾಜ್ಯಗಳಲ್ಲಿ ಪ್ರದರ್ಶಿಸಿದ ಕೀರ್ತಿ ಇವರದ್ದಾಗಿದೆ. ಪಾಠಗಳಿಗೆ ಸಂಭಾಷಣೆ ಬರೆದು, ಶೈಕ್ಷಣಿಕ ಗೀತೆಗಳನ್ನು ರಚಿಸಿ, ವಿಷಯಕ್ಕೆ ತಕ್ಕಂತೆ ಗೊಂಬೆಗಳನ್ನು ತಯಾರಿಸಿ,ನಂತರ ವಿಜ್ಞಾನದ ಪಾಠಗಳನ್ನು ಗೊಂಬೆಗಳ ಅಭಿನಯ ರೂಪದಲ್ಲಿ ಮಕ್ಕಳ ಮುಂದೆ ಪ್ರದರ್ಶನವಾಯಿತು. ಪಾಠ ಹೇಳುವ ವಿದ್ಯಾರ್ಥಿಗಳು ಕೇವಲ ಪ್ರೇಕ್ಷರಾಗಿರಲಿಲ್ಲ. ಕಲಾವಿದರು, ಸಂಭಾಷಣೆಕಾರರು ಮತ್ತು ಸೃಷ್ಟಿಕರ್ತರಾಗತೊಡಗಿದರು.

ಗ್ರಾಮೀಣ ಶಾಲೆಯ ತರಗತಿಯಲ್ಲಿ ಆರಂಭವಾದ ಈ ಪ್ರಯೋಗ ಕ್ರಮೇಣ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನವಾಗಿರುವುದು ಇವರ ವೈಜ್ಞಾನಿಕ ದೃಷ್ಟಿಕೋನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ೨೦೨೩ ರಲ್ಲಿ ಥೈಲ್ಯಾಂಡಿನ ಬ್ಯಾಂಕಾಕ್ ನಲ್ಲಿ ನಡೆದ ಅಂತರಾಷ್ಟ್ರೀಯ ಉತ್ಸವದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಜ್ಞಾನ ಗೊಂಬೆಯಾಟ ಪ್ರದರ್ಶನ ಮಾಡಿದರೆ, ೨೦೨೪ ರಲ್ಲಿ ಪ್ರಾನ್ಸ್ ನ ಪ್ಯಾರಿಸ್ ಮತ್ತು ಜರ್ಮನಿಯ ಬಲಿ೯ನ್ ನಲ್ಲಿ ಶೈಕ್ಷಣಿಕ ಪ್ರದರ್ಶನಗಳು ಹಾಗೂ ಸಂವಾದಾತ್ಮಕ ಪ್ರಾತ್ಯಕ್ಷಿಕೆ ನಡೆಸಿದರು. ೨೦೨೫ ರಲ್ಲಿ ಸಿಂಗಾಪುರದಲ್ಲಿ ಭಾರತೀಯ ಸಾಂಪ್ರದಾಯಿಕ ಸೂತ್ರದ ಗೊಂಬೆಆಟದ ಬೋಧನಾ ವಿಧಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿದರು. ೨೦೨೬ ರಲ್ಲಿ ಜರ್ಮನಿಯ ಪ್ರಾಂಕ್ ಫರ್ಟ್ ನಲ್ಲಿ ನಡೆದ ಜಾನಪದ ಉತ್ಸವದಲ್ಲಿ ಕರ್ನಾಟಕದ ವೈಭವಯುತ ಪರಂಪರೆ ಮತ್ತು ಶಿಕ್ಷಣದಲ್ಲಿನ ಸಮಕಾಲಿನ ಪರಿವರ್ತನೆಗಳು ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ ಹೆಗ್ಗಳಿಕೆ ಇವರಿದ್ದಾಗಿದೆ. ದೇಶದ ವಿವಿಧ ರಾಜ್ಯಗಳು ಹಾಗೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಶಿಕ್ಷಕರಿಗೆ ವಿಜ್ಞಾನ ತರಬೇತಿಗಳಲ್ಲಿ ಬೊಂಬೆಯಾಟ ಮತ್ತು ಕಾಗದ ಕಲೆಯ ಸಂಯೋಜನೆ ಕುರಿತು ತರಬೇತಿಯನ್ನು ನೀಡಿರುತ್ತಾರೆ. ಆಕಾಶವಾಣಿ ಧಾರವಾಡ ಮತ್ತು ಕಾರವಾರ ಕೇಂದ್ರಗಳ ಮೂಲಕ ೩೦ ಕ್ಕೂ ಹೆಚ್ಚು ಶೈಕ್ಷಣಿಕ ಮಾತುಕತೆಗಳು ಮತ್ತು ವಿಜ್ಞಾನ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಸೂತ್ರದ ಗೊಂಬೆ ಆಟದ ಮೂಲ ಮತ್ತು ವಿಕಾಸ, ಬಡಗುತಿಟ್ಟು ಯಕ್ಷಗಾನದ ವೇಷ ಭೂಷಣ ವಿನ್ಯಾಸ ಮತ್ತು ವೈವಿಧ್ಯತೆ, ಗುಣಮಟ್ಟದ ಶಿಕ್ಷಣ ನೀಡವಲ್ಲಿ ನಾಟಕದ ಪಾತ್ರ ಕುರಿತು ಸಂಶೋಧನಾ ಕೃತಿಗಳನ್ನು ರಚಿಸಿರುತ್ತಾರೆ. ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್, ಇನ್ಸ್ಪೈರ್ ಅವಾರ್ಡ್, ವಿಜ್ಞಾನ ವಿಚಾರ ಸಂಕೀರ್ಣಗಳು ಮತ್ತು ವಿಜ್ಞಾನ ನಾಟಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ದಕ್ಷಿಣ ಭಾರತ ವಲಯ ಮಟ್ಟದವರೆಗಿನ ಸಾಧನೆಗೆ ಸಿದ್ದಪ್ಪ ರವರ ಮಾರ್ಗದರ್ಶನ ಅವಿಸ್ಮರಣೆಯವಾದದ್ದು.

ಸಿದ್ದಪ್ಪ ಬಿರಾದಾರರವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಮರ್ಪಿತ ಸ್ಕೌಟ್ ಮಾಸ್ಟರ್ ಆಗಿ ವಿದ್ಯಾರ್ಥಿಗಳಲ್ಲಿ ನಾಗರಿಕತೆ, ಶಿಸ್ತು ಮತ್ತು ಸಮುದಾಯ ಸೇವೆಯ ಮೂಲಭೂತ ಮೌಲ್ಯಗಳನ್ನು ಬೆಳೆಸಿ ಇಲ್ಲಿಯವರೆಗೆ ಇವರು ಕಲಿಸಿದ ಸುಮಾರು ೫೬ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಸೇರಿ ರಾಷ್ಟ್ರ ರಕ್ಷಣೆಯ ಹೊಣೆ ಹೊತ್ತಿರುತ್ತಾರೆ. ಶಾಲಾ ಆವರಣದಲ್ಲಿ ಔಷಧೀಯ ಸಸ್ಯಗಳು, ಹಣ್ಣು ಮತ್ತು ಸಾವಯವ ತರಕಾರಿಗಳನ್ನು ಬೆಳೆಸಿ ಶಾಲಾ ಕೈತೋಟ ನಿರ್ಮಿಸಿರುತ್ತಾರೆ. ಜಿಲ್ಲಾ ಮಟ್ಟದ ಹಸಿರು ಶಾಲಾ ಪ್ರಶಸ್ತಿಯು ಇವರ ಶಾಲೆಗೆ ಬಂದಿದೆ. ಶಾಲಾ ಗೋಡೆಗಳ ಮೇಲೆ ಆಕರ್ಷಕ ಶೈಕ್ಷಣಿಕ ವಿಜ್ಞಾನ ಚಿತ್ರಗಳನ್ನು ಪ್ರದರ್ಶಿಸಿ ಶಾಲಾ ಆವರಣವನ್ನು ತೆರೆದ ಪಠ್ಯಪುಸ್ತಕವಾಗಿ ಪರಿವರ್ತಿಸಿದ ವಿಜ್ಞಾನ ಶಿಕ್ಷಕ, ಶಾಲಾ ಸಮಯದ ಹೊರತಾಗಿ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿ ಕೂಡ ನಡೆಸುತ್ತಾರೆ.

ಸಿದ್ದಪ್ಪ ಬಿರಾದಾರರವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುದ್ದಾಪುರದಲ್ಲಿ ೧೯೭೭ ರಂದು ತಂದೆ ವೀರಭದ್ರಪ್ಪ, ತಾಯಿ ಯಮನವ್ವರವರ ಮುದ್ದಿನ ಮಗನಾಗಿ ಜನಿಸಿದರು. ವಿಜ್ಞಾನ ಪದವೀಧರರಾದ ಇವರು ಶಿಕ್ಷಕ ವೃತ್ತಿ ತರಬೇತಿಯನ್ನು ಅಪಜಲಪುರ ಮಹಾಂತೇಶ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪೂರೈಸಿದರು. ಈಗ್ನೋ ನವದೆಹಲಿಯಲ್ಲಿ ಬಿ.ಎಡ್.ಪದವಿಯನ್ನು, ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಪಡೆದರು. ಸಿರ್ಸಿ ತಾಲೂಕಿನ ಸುಗಾವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ೨೦೦೨ ರಂದು ವೃತ್ತಿ ಬದುಕನ್ನು ಆರಂಭಿಸಿದರು. ನಂತರ ೨೦೦೬ ರಂದು ಸೀಗೆಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಹೋದಾಗಿನಿಂದ ಶೈಕ್ಷಣಿಕ ಗೊಂಬೆಯಾಟ ಆರಂಭಿಸಿ ನೂತನ ಮೈಲುಗಲ್ಲನ್ನು ಸ್ಥಾಪಿಸಿದರು. ಪ್ರಸ್ತುತ ೨೦೧೧ ರಿಂದ ಬಡ್ತಿ ಹೊಂದಿ, ಹಳಿಯಾಳ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಚಿಬ್ಬಲಗೇರಿಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮತ್ತು ಕರ್ನಾಟಕ ಬಯಲಾಟ ಅಕಾಡೆಮಿಗಳ ಸದಸ್ಯರಾಗಿಯೂ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿಯೂ, ಭಾರತ ಸ್ಕೌಟ್ ಮತ್ತು ಗೈಡ್ಸ್ ನ ಜಿಲ್ಲಾ ಸಹಾಯಕ ಆಯುಕ್ತರಾಗಿಯೂ, ಪರಿಸರ ಮಿತ್ರ ಶಾಲೆಯ ತಾಲೂಕಾ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ ಅನುಭವವಿದೆ.

ಗಾಳಿಯ ಗಮ್ಮತ್ತು, ಮಕ್ಕಳಿಗಾಗಿ ಬೊಂಬೆಯಾಟ, ಶಿಕ್ಷಣದಲ್ಲಿ ಅಭಿನಯ, ರಂಗಸೂತ್ರ, ಉಳಿದವ ನಮ್ಮ ಹಾಡು ಕೃತಿ ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುತ್ತಾರೆ. ಉಡುಪಿ ನ್ಯಾಷನಲ್ ಪೌಂಡೇಶನ್ ಆಫ್ ಶ್ರೀ ಕೃಷ್ಣ ಮಠದಿಂದ ರಾಜ್ಯಮಟ್ಟದ ಪಚ್ಚೆವನ ಶ್ರೀ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದಿಂದ ಜೀವಮಾನ ಸಾಧನೆ ಗೌರವ, ಗುರುಶ್ರೀ ಪ್ರಶಸ್ತಿ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಇವರ ಮುಡಿಗೇರಿದೆ.

ವಿಜ್ಞಾನವೆಂದರೆ ಮೂಗು ಮುರಿಯುವ ಅದೆಷ್ಟು ಗ್ರಾಮೀಣ ಮಕ್ಕಳ ಬದುಕಿನಲ್ಲಿ ವಿಜ್ಞಾನವನ್ನು ಬೊಂಬೆಯಾಟದೊಂದಿಗೆ, ರಂಗಭೂಮಿಯೊಂದಿಗೆ, ಶಾಲಾ ಕೈತೋಟದೊಂದಿಗೆ, ವೈವಿಧ್ಯಮಯ ಪ್ರಯೋಗದೊಂದಿಗೆ ಬೆಸೆದು, ಪಠ್ಯ ಪುಸ್ತಕದಾಚೆಯ ಶಿಕ್ಷಣವೇ ಬದುಕನ್ನು ರೂಪಿಸುತ್ತದೆ ಎಂಬ ವೈಜ್ಞಾನಿಕ ಮನೋಭಾವನೆಯನ್ನು ಉತ್ತಿ, ಬಿತ್ತಿ ಬೆಳೆದ, ಬೆಳಗಿಸಿದ ಸಿದ್ದಪ್ಪ ಬಿರಾದರವರಿಗೆ ಜಿಲ್ಲೆಯ ಸಮಸ್ತ ಗುರು, ಗುರುಮಾತೆಯವರ ಪರವಾಗಿ ಅಭಿಮಾನದಿಂದ ರಾಷ್ಟ್ರ ಪ್ರಶಸ್ತಿ ಇವರ ಮುಡಿಗೇರಲಿ ಎಂದು ಹಾರೈಸುತ್ತೇನೆ.

ಪಿ. ಆರ್. ನಾಯ್ಕ
ನಲಿ-ಕಲಿ ಶಿಕ್ಷಕ, ಹೊನ್ನಾವರ.

Exit mobile version