Site icon ಒಡನಾಡಿ

ಶಿಕ್ಷಣ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ ಕುಮಟಾದ ಈಶ್ವರ ನಾಯ್ಕ

ಕಾರ್ಯಸಾಧಕನ ಕೈಯಲ್ಲಿ ಕಡ್ಡಿಯು ಗುಡ್ಡವಾದಿತು! ಎಂಬ ಹಿರಿದಾದ ಮಾತೊಂಗಿದೆ. ಯಾರು ಸೃಜನಶೀಲ ಮನಸ್ಥಿತಿಯುಳ್ಳವರೋ, ಕ್ರಿಯಾಶೀಲ ಪ್ರವೃತ್ತಿ ಹೊಂದಿರುತ್ತಾರೊ, ಕರ್ತವ್ಯವೇ ದೇವರೆಂದು ನಂಬಿ ನಡೆಯುತ್ತಾ ಇತರರ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೋ ಅಂಥವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾದವರು ಈಶ್ವರ ನಾಯ್ಕರವರು. ವೃತ್ತಿ ಬದುಕಿನಲ್ಲಿ ಹಿರಿ-ಕಿರಿಯ ನೌಕರರನ್ನು ಸ್ನೇಹಿತರಿಂದು ಭಾವಿಸಿ, ಸದಾ ಹಸನ್ಮುಖಿಯಾಗಿ ಎಲ್ಲರ ಪ್ರೀತಿ ಗಳಿಸಿದ ಸರಳ ಸಜ್ಜನರು. ಬುದ್ಧಿವಂತರೆಲ್ಲರೂ ಹೃದಯವಂತರಾಗಿರೊಲ್ಲ, ಹಾಗೆ ಹೃದಯವಂತರೆಲ್ಲರೂ ಬುದ್ಧಿವಂತರಾಗಿರೊಲ್ಲ. ಆದರೆ ಈಶ್ವರ ನಾಯ್ಕರವರು ಬುದ್ಧಿವಂತರಾಗಿಯೂ, ಹೃದಯವಂತರಾಗಿಯೂ ಇಲಾಖೆಯ ಘನತೆ-ಗೌರವ ಹೆಚ್ಚಿಸಿದವರು.

ಚಿನ್ನ, ಬೆಳ್ಳಿಗಳು ಮಾತ್ರ ನಾಣ್ಯವಲ್ಲ. ಗುಣವು ನಾಣ್ಯವೇ. ಇದು ಜಗತ್ತಿನ ಎಲ್ಲಾ ಕಡೆಗೂ ಚಲಾವಣೆಯಲ್ಲಿರುತ್ತದೆ. ತಮ್ಮ ನಿಷ್ಕಲ್ಮಶವಾದ, ನಿರ್ಮಲ ಮನಸ್ಸಿನ ಗುಣಗಳಿಂದಲೇ ಎಲ್ಲರಿಗೂ ಆಪ್ತರಾಗಿ ಬಿಡುತ್ತಾರೆ. ಇಲಾಖೆಯ ಯಾವ ಕೆಲಸಕ್ಕೂ ಜಗ್ಗದ ಕಾಯಕ ಯೋಗಿಯಾಗಿ ಕಿಲುಬಿಲ್ಲದೇ ಬದುಕಿದ ಪುಣ್ಯಾತ್ಮರು ಕೂಡ.

ಶಿಕ್ಷಣ ಇಲಾಖೆಯ ಉನ್ನತ ಹುದ್ದೆಯಲಂಕರಿಸಿದರೂ ಅವರ ಮಾತಿನಲ್ಲಿ ಅಧಿಕಾರದ ದರ್ಪವಾಗಲಿ, ನಮಗಾಗದವರನ್ನು ಉರುಳಿಸಿ ಸುಖಿಸುವ ಆಷಾಡ ಭೂತಿತನದಿಂದ ಗಾವೂದ ದೂರ ಉಳಿದು ಅರಳಿದವರು. ಹೂ ಅರಳಿದರೆ ಮಾತ್ರ ಪರಿಮಳ ಹರಡಿತು. ಅವರ ನಯ,ವಿನಯದ ಸಂತಸದ ಸವಿ ಮಧುರ ನಗುವಿನಲ್ಲಿ ಅಪಹಾಸ್ಯದ ಉದ್ದೇಶವಿಲ್ಲ. ಅಟ್ಟಹಾಸದ ದರ್ಪವಿಲ್ಲ.ಹೊಟ್ಟೆ ಕಿಚ್ಚಿನ ನಂಜಿಲ್ಲದೇ ನಗುನಗುತ ಬಾಳ ಪಥದಲ್ಲಿ ಕೆಸರಿಲ್ಲದ ಕನಸಿನ ದಾರಿಯಲ್ಲಿ ನಡೆದ ಸರದಾರರು. ತನ್ನ ಸಹಜತೆಯ ಅಭಿವ್ಯಕ್ತಿಯೇ ನಗುವಾಗಿಸಿ ಮುಗುಳ್ನಗೆಯಲ್ಲಿ ಮಿಂಚಿ ಮರೆಯಾಗುವರು.ತನ್ನ ನಗು ಇತರರಿಗೆ ನಲಿವನ್ನು ಹೆಚ್ಚಿಸಿ ಅವರ ಸಮಸ್ಯೆಯನ್ನು ತಕ್ಷಣ ಕರಗಿಸಬಲ್ಲ ಮೃದು ಮೊನಚಿನ ಮಾತು ಜಿಲ್ಲೆಯ ಅಧ್ಯಾಪಕ ವೃಂದದ ಮನದಲ್ಲಿ ಸದಾ ಹಸಿರಾಗಿಯೇ ಇದೆ.

ಈಶ್ವರ ಅಲ್ಲಾ ತೇರೆ ನಾಮ್”- ಮಹಾತ್ಮ ಗಾಂಧೀಜಿಯವರ ಪ್ರಸಿದ್ಧ ಪ್ರಾರ್ಥನೆ. ‘ಎಲ್ಲಾ ಧರ್ಮಗಳ ದೇವರು ಒಬ್ಬನೇ’ ಎಂಬ ಸರ್ವಧರ್ಮ ಸಾರವನ್ನು ಸಾರುತ್ತದೆ. ಶಾಲಾ ಸಾಕ್ಷರತಾ ಇಲಾಖೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ “ಈಶ್ವರ” ಎಲ್ಲರೊಳಗೊಂದಾಗಿ, ಎಲ್ಲರಿಗೂ ಬೇಕಾಗಿ ವೃತ್ತಿ ಧರ್ಮದೊಂದಿಗೆ, ಲೋಕ ದೃಷ್ಟಿಯ ಬೆಳಕಾಗಿ ಮಿಂಚಿದವರು ಮೆರೆದವರು. ಎಲ್ಲರನ್ನೂ ಪ್ರೀತಿಸುವ ಭಕ್ತಿ ಯೋಗದಲ್ಲಿ ಮುನ್ನಡೆದವರು. ಬದುಕಿನ ಪಾಡನ್ನು ಹಾಡಾಗಿಸಿದವರು. ಶಿಕ್ಷಕರೊಳಗಿನ ಕತ್ತಲೆಯನ್ನು ಕಳೆಯುವ ಜ್ಞಾನಯೋಗಿಯಾಗಿ ಎಲ್ಲರಂತಾಗದೆ ಸಮಷ್ಟಿ ಪ್ರಜ್ಞೆಯಿಂದ ವೃತ್ತಿ ಬದುಕನ್ನು ಪ್ರೀತಿಸಿದವರು.

ಎರಡು ಕೋಣೆಗಳ ನಿಂ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಗರಾಟಗಳ ನಾಡು!
ವಿರಮಿಸೊಬ್ಬನೆ ಮೌನದೊಳ ಮನೆಯ ಶಾಂತಿಯಲಿ!
ವರಯೋಗ ಸೂತ್ರವಿದು- ಮಂಕುತಿಮ್ಮ

ನಿನ್ನ ಮನಸ್ಸಿನ ಆಲಯದಲ್ಲಿ ಎರಡು ಕೋಣೆಗಳನ್ನು ಮಾಡಿಕೊ. ಹೊರಗಿನ ಕೋಣೆಯಲ್ಲಿ ಲೋಕದ ವ್ಯವಹಾರಗಳು ಮತ್ತು ಆಟಗಳನ್ನು ಆಡು, ಆದರೆ ಒಳಗಿನ ಕೋಣೆಯಲ್ಲಿ ಯಾವುದೇ ಗಲಾಟೆ ಇಲ್ಲದ ಮೌನದ ಶಾಂತಿಯಲ್ಲಿ ನೀನೊಬ್ಬನೇ ವಿಶ್ರಮಿಸು. ಒತ್ತಡವಿಲ್ಲದ,ಆರೋಗ್ಯಕರ ಮತ್ತು ಸಮತೋಲಿತ ಜೀವನವನ್ನು ನಡೆಸಲು ಡಿವಿಜಿಯವರು ನೀಡಿರುವ ಅದ್ಭುತವಾದ ಯೋಗ ಸೂತ್ರವನ್ನು ತನ್ನ ಎದೆಗವುಚಿಕೊಂಡು ವೃತ್ತಿ ಬದುಕಿನಲ್ಲಿ ಎದುರಾದ ಸಮಸ್ಯೆಯಿರಲಿ, ಇಲಾಖೆಯ ನೌಕರರಲ್ಲಿ ಎದುರಾದ ಸಮಸ್ಯೆಯಿರಲಿ ಎಲ್ಲವನ್ನು ಹೊರಗಿನ ಕೋಣೆಯಲ್ಲಿ ಸ್ವೀಕರಿಸಿ, ಅದಕ್ಕೊಂದು ಪರಿಹಾರ ಸೂಚಿಸಿ ಧೈರ್ಯ ತುಂಬುವ ವಿಶಾಲ ಹೃದಯದ ಧ್ವನಿ ಒಂದೆಡೆಯಾದರೆ, ಒಳಗಿನ ಕೋಣೆಯಲ್ಲಿ ಮೌನಕ್ಕೆ ಜಾರಿ ಸರಿ- ತಪ್ಪುಗಳ ಕೈ ದೀಪ ಹಿಡಿದು ಮುನ್ನಡೆಯುತ್ತಾ, ಬೆಳಕಿನಿಂದ ಬೆಳಕು ಹಂಚುವ ಜಾಣ್ಮೆ ಈಶ್ವರ ನಾಯ್ಕರವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರ ಸೌಜನ್ಯದ ನಡೆ ಅಂತ್ಯವಿಲ್ಲದ ಅನಂತ ಸ್ಥಿತಿ.

ಈಶ್ವರ ನಾಯ್ಕರವರು ಮಾಡುವ ಪ್ರತಿಯೊಂದು ಕೆಲಸವನ್ನು ಅರ್ಪಣಾ ಭಾವದಿಂದ ಮಾಡಿರುವುದನ್ನು ಹಲವು ತರಬೇತಿಗಳಲ್ಲಿ ನಾನು ಗಮನಿಸಿದ್ದು ಇದೆ. ಸಂತರು ಹೇಳುವಂತೆ ಕರ್ಮ ಮಾಡುತ್ತಿರು, ಕರ್ತವ್ಯದಲ್ಲಿ ತನ್ಮಯನಾಗು, ಫಲ ಬಂದೇ ಬರುತ್ತದೆ. ಮಾಡುವ ಕಾರ್ಯದಲ್ಲಿ ಸಂತೋಷಪಡುವುದೇ ಒಂದು ಸುಯೋಗ ಎನ್ನುವ ಮಹತ್ತರ ವಿಚಾರಕ್ಕೆ ಸದಾ ತೆರೆದುಕೊಳ್ಳುವ, ಇತರರನ್ನು ಆ ದಿಶೆಯಲ್ಲಿ ಪ್ರೇರೇಪಿಸುವ ಪ್ರಾಚಾರ್ಯರಾಗಿದ್ದರು. “ದಕ್ಷಣೆಗೆ ತಕ್ಕ ಪ್ರದಕ್ಷಿಣೆ” ಎಂಬ ಪ್ರತಿಫಲದ ಕಡೆಗೆ ಗಮನಹರಿಸದೇ ಕಡಲ ನೀರಿಗೆ ಆಸೆ ಪಡದೆ, ಮನೆ ಬಾವಿಯ ನೀರನ್ನೆ ಬದುಕಿಗೆ ಆಸರೆ ಎಂದೆನಿಸಿಕೊಂಡವರು. ತಮ್ಮ ಕೆಲಸ ಕಾರ್ಯಗಳಲ್ಲಿ ಪ್ರೀತಿ ಮತ್ತು ಸ್ವಂತಿಕೆಯ ಜೊತೆಗೆ ಬಾಳಿದವರು. ಅನೇಕ ಶಿಕ್ಷಕ ವೃತ್ತಿ ಬದುಕಿಗೆ ಚೈತನ್ಯ ತುಂಬಿ ಆಸರೆಯಾದವರು.


ಏಳು- ಬೆಳಕಿದೆ ನಿನ್ನ ಪಾಲಿಗೆ
ನಿಲ್ಲು- ಶಕ್ತಿ ಇದೆ ನಿನ್ನ ಕಾಲಿಗೆ
ಎತ್ತು- ತಾಕತ್ತಿದೆ ನಿನ್ನ ಕೈಗೆ
ಮಾತಾಡು- ಧ್ವನಿಯಿದೆ ನಿನ್ನ ಕೊರಳಿಗೆ
ವಿಷ್ಣು ನಾಯ್ಕರವರ ಆತ್ಮಬಲದ ಚಿಂತನೆಗೆ ಜೊತೆಯಾಗಿ ಶಿಕ್ಷಕರ ಪಾಲಿನ ಬೆಳಕಿನಂತಾದ ಈಶ್ವರ ನಾಯ್ಕರವರು ಸಾವಿರದ ನಾಳೆಗಳನ್ನು ಕಟ್ಟುವ ಸಂಕಲ್ಪದ ಕನಸನ್ನು ಹೊತ್ತು ಸುಮಾರು ಮೂರುವರೆ ದಶಕಗಳ ಕಾಲ ಶಿಕ್ಷಣ ಇಲಾಖೆಯ ಮೈಲುಗಲ್ಲಾಗಿದ್ದರು. ಸಾವಿರದ ಆತ್ಮಬಲ, ಸಾಧಿಸುವ ವೀರ ಛಲದೊಂದಿಗೆ ಮುನ್ನುಗ್ಗಿ ಸಾಕ್ಷರತಾ ಇಲಾಖೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ,ಹೊಸ ಇತಿಹಾಸ ಸೃಷ್ಟಿಸಿದ ಈಶ್ವರ ನಾಯ್ಕರವರು ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿರುತ್ತಾರೆ. ಸೂರ್ಯನ ತೇಜಸನ್ನು, ಅಗ್ನಿಯ ಶಾಖವನ್ನು ಸತ್ಯವೆಂದು ಪ್ರತಿಪಾದಿಸಬೇಕಾದ ಅಗತ್ಯವೇ ಇಲ್ಲ. ಇದೆಲ್ಲ ತ್ರಿಕಾಲಾಬಾಧಿತವಾದ ಸತ್ಯ.ಅಧಿಕಾರಿ ಆದವನು ಹೀಗಿದ್ದರೆ ಚಿನ್ನದಂತೆ ಚೆಂದ ಎಂದು ಇಲಾಖೆಗೆ ತೋರಿಸಿಕೊಟ್ಟ ಒಬ್ಬ ಅಪರೂಪದ ಅಧಿಕಾರಿ. ಅಂತೆಯೇ ಶಾಲಾ ಶಿಕ್ಷಣ ಇಲಾಖೆಯಲ್ಲಿ ಈಶ್ವರ ನಾಯ್ಕ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆ ತನ್ನ ಇತಿಮಿತಿಯಲ್ಲಿ ಎಲ್ಲರೂ ಮೆಚ್ಚುವ ಹಾಗೆ, ಒಪ್ಪುವ ಹಾಗೆ ಶಾಲಾ ಸಾಕ್ಷರತಾ ಇಲಾಖೆಯ ನಿರ್ದೇಶಕರಾಗಿ ಇಲಾಖೆಯನ್ನು ಮುನ್ನಡೆಸಿರುವುದು ಅಧ್ಯಾಪಕರ ಮತ್ತು ಹಿರಿ- ಕಿರಿಯ ಅಧಿಕಾರಿಗಳ ಮನದಾಳದಲ್ಲಿ ಶಾಶ್ವತವಾದ ಹೆಜ್ಜೆ ಗುರುತು ಮೂಡಿಸಿರುವುದಂತೂ ಸತ್ಯ.

ಪಿ. ಆರ್. ನಾಯ್ಕ
ನಲಿ-ಕಲಿ ಶಿಕ್ಷಕ, ಹೊನ್ನಾವರ

Exit mobile version