ಕನ್ನಡ ನಾಡು-ನುಡಿ ಜಾಗೃತ ಸಮಿತಿಯ ಘೋಷಣೆ
ಬೆಂಗಳೂರು: ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸಾಹಿತಿ, ಪತ್ರಕರ್ತ, ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಆಯ್ಕೆಯಾಗಿದ್ದಾರೆ ಎಂದು ‘ಕನ್ನಡ ನಾಡು – ನುಡಿ ಜಾಗೃತ ಸಮಿತಿ’ ತಿಳಿಸಿದೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಸಾಹಿತಿಗಳು, ಕನ್ನಡಪರ ಹೋರಾಟಗಾರರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 112 ವರ್ಷಗಳ ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ಅತಂತ್ರವಾಗಿದೆ. ಭ್ರಷ್ಟಾಚಾರದ ಆಪಾದನೆಯಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಪ್ರಾಥಮಿಕ ಸದಸ್ಯತ್ವ ಕಳೆದು ಕೊಂಡ ಮಹೇಶ ಜೋಶಿ ವಿರುದ್ಧ ಹೋರಾಡಿದ ಸದಸ್ಯರಲ್ಲಿ ಜಾಣಗೆರೆ ಪ್ರಮುಖ ಪತ್ರವಹಿಸಿದ್ದರು. ಕಸಾಪಕ್ಕೆ ಎರಡು ಅವಧಿಯಲ್ಲಿ ಅಧಿಕಾರಶಾಹಿಗಳಿಂದ ಸಾಕಷ್ಟು ಹಾನಿಯಾಗಿದ್ದು ಮುಂದೆಯೂ ಇದು ಪುನರುಕ್ತಿ ಆಗಬಾರದು. ಕಸಾಪದ ಪರಂಪರೆ, ಇತಿಹಾಸ, ಘನತೆ, ಗೌರವ ಕಾಪಾಡಲು ಸಾಹಿತಿಗಳು ಬದ್ಧರಾಗಿದ್ದಾರೆ ಎಂದು ಜಾಗೃತ ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಡಾ. ಜಯಪ್ರಕಾಶಗೌಡ, ಡಾ. ವಸುಂಧರಾ ಭೂಪತಿ, ಶ್ರೀಕಂಠೆಗೌಡ, ಮಾವಳ್ಳಿ ಶಂಕರ, , ಡಾ. ಮೀರಾ ಶಿವಲಿಂಗಯ್ಯ, ಡಾ. ಎಲ್. ಹನುಮಂತಯ್ಯ, ಆರ್.ಜಿ. ಹಳ್ಳಿ ನಾಗರಾಜ, ಎನ್.ಆರ್. ನಂಜುಂಡೇಗೌಡ, ಸಿ.ಕೆ. ರಾಮೇಗೌಡ, ಕೆ. ರೇವಣ್ಣ, ಪಣೆದೊಡ್ಡಿ ವಿ. ಹರ್ಷ, ಡಾ. ಡಿ. ಈರಯ್ಯ, ಚನ್ನಸಂದ್ರ ಮಹಾದೇವು ಮುಂತಾದವರಿದ್ದರು.
ಪರಿಷತ್ತಿಗೆ ಸಾಹಿತಿಗಳೇ ಬರಲಿ, ಆಡಳಿತಶಾಹಿಗಳು ಬೇಡ:
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಬರವಣಿಗೆ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆಯವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮಂಥನ ಮುಂತಾದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಈಗಾಗಲೇ ಸುಮಾರು 41 ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲೂ ಹೋರಾಟಗಳಲ್ಲಿಮಹತ್ವದ ಸಾಧನೆ ಮಾಡಿದ್ದಾರೆ. ಕನ್ನಡ ಪರ ದಶಕಗಳ ಕಾಲದಿಂದ ಸಕ್ರಿಯವಾಗಿದ್ದು ಅನೇಕ ಬಾರಿ ಸೆರೆವಾಸವನ್ನೂ ಅನುಭವಿಸಿದ್ದಾರೆ.
ಸಾಹಿತ್ಯ ಕೃಷಿಗಾಗಿ 2012ರಲ್ಲಿ ಕರ್ನಾಟಕ ಸರ್ಕಾರದಿಂದ ‘ರಾಜ್ಯೋತ್ಸವ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಮಹಾನದಿ’ ಮತ್ತು ‘ಮಹಾಯಾನ’ ಕೃತಿಗಳಿಗೆ ಉತ್ತಮ ಕಾದಂಬರಿ ಬಹುಮಾನಗಳು, ಕನ್ನಡ ಪುಸ್ತಕ ಪ್ರಾಧಿಕಾರದಿಂದ ‘ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ , ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಗೌರವ ಪ್ರಶಸ್ತಿ’ ಸಂದಿದೆ.
ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ‘ಹೆಚ್.ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ’, ‘ಮಹಾನದಿ’ ಕಾದಂಬರಿಗೆ ತುಮಕೂರಿನ ‘ವೀಚಿ ಸಾಹಿತ್ಯ ಪ್ರಶಸ್ತಿ’, ‘ಜೀವಜಲ’ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ‘ಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’, ‘ಜಲಯುದ್ಧ’ ಕಾದಂಬರಿಗೆ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗಳ ಜೊತೆಗೆ ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’, ಅರಸು ವಿಚಾರ ವೇದಿಕೆಯಿಂದ ‘ಅರಸುಶ್ರೀ ಪ್ರಶಸ್ತಿ’, ಕಟ್ಟೆ ಬಳಗದಿಂದ ‘ಕನ್ನಡ ಕಟ್ಟೆ ಪ್ರಶಸ್ತಿ’, ಮಂಡ್ಯದ ‘ಇಂಡುವಾಳು ಹೆಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ’ ಮತ್ತು ಬಿಎಂಶ್ರೀ ಪ್ರತಿಷ್ಠಾನದಿಂದ ‘ವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ’, ಕಸಾಪದಿಂದ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’, ಕರಾರಸಾಸಂ ಕನ್ನಡ ಕ್ರಿಯಾ ಸಮಿತಿಯಿಂದ ‘ಕರ್ನಾಟಕ ಚೂಡಾಮಣಿ ಪ್ರಶಸ್ತಿ’ ಹಾಗೂ ಕುವೆಂಪು ಕಲಾನಿಕೇತನದಿಂದ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ಮುಂತಾದವು ಬಂದಿವೆ. ಪ್ರಸ್ತುತ ಜಾಣಗೆರೆವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
