ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು- ಸಾಹಿತಿ ದೇವನೂರು ಮಹಾದೇವನವರು ಸಾಕ್ಷರತೆಗಾಗಿ ರಚಿಸಿದ ಹಾಡು. ಈ ಹಾಡಿನ ಪಯಣದಲ್ಲಿ ಸಾಗಿ ಫಲ ಕಂಡವರು ಹೊಳೆಗದ್ದೆ ಹೆಮ್ಮೆಯ ಶಿಕ್ಷಕಿ ಉಮಾ ನಾಯ್ಕ.
ಸುಮಾರು ೩೦ ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗುವ ಕನಸು, ನನಸಾದ ಸಂದರ್ಭ. ಊರುಕೇರಿ ಮೂಲದವರಾದರು ಯಲ್ಲಾಪುರಕ್ಕೆ ಹೋಗಬೇಕಾದ ಅನಿವಾರ್ಯತೆ. ಏಕೆಂದರೆ ಎದೆಗೆ ಬಿದ್ದ ಅಕ್ಷರ ಫಲಕೊಟ್ಟು ಬದುಕಿನ ಬುತ್ತಿ ತುಂಬಲು ಪ್ರಯಾಣವೇನೂ ಕಷ್ಟಕರವಾಗಲಿಲ್ಲ. “ಊರಿಂಗೆ ದಾರಿಯನು ಯಾರು ಕೇಳಿದರೇನು?” ಎಂದು ಸರ್ವಜ್ಞ ಕವಿಯೇ ಪ್ರಶ್ನಿಸಿರುವಾಗ ಅವರಿಗೆ ದಾರಿ ತೋರಿಸಿದವರು ಹಲವರು. ಯಲ್ಲಾಪುರದಿಂದ ಒಂದೂವರೆ ಮೈಲು ದೂರದ ಕಾಡಿನ ಪ್ರದೇಶ. ಹೊಸದಾಗಿ ಶಿಕ್ಷಕಿಯಾಗಿ ನೇಮಕರಾಗಿ ಆದೇಶವಾದ ಶಾಲೆಯ ಹೆಸರು ಬೊಂಡಗೇಸರ. ಹೊರಗೆ ನಗೆ, ಒಳಗೆ ಧಗೆ! ಕಾಲ್ನಡಿಗೆಯಲ್ಲಿ ಊರು ಸೇರಿದಾಗ ಭಟ್ಟರ ಮನೆ ಬಿಟ್ಟರೆ ಶಾಲೆಯೇ ಇಲ್ಲ. ಮಕ್ಕಳಿಗಾಗಿ ಹುಡುಕಾಡಿದರೂ ಉಮಾ ಅಕ್ಕೊರವರಿಗೆ ಮಕ್ಕಳೇ ಕಾಣಿಸಲಿಲ್ಲ. ಏನು ಮಾಡಬೇಕೆಂದು ದಿಕ್ಕು ತೊಚದಿರುವಾಗ ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿ ಊರುಕೇರಿ ಪಕ್ಕದ ಹರನೀರು ಗ್ರಾಮದ ಎಸ್. ಟಿ.ವೈದ್ಯರು.ಧೈರ್ಯ ತುಂಬಿ ಮಾರ್ಗ ತೋರಿಸಿದರು. ಭಟ್ಟರ ಮನೆ ಶಾಲೆಯ ಅಂಗಳವೆಂಬ ಅರಿವಾಗಿ ಭಟ್ಟರ ಕುಟುಂಬವೇ ಉಮಾ ನಾಯ್ಕರಿಗೆ ತಂದೆ- ತಾಯಿಯರಾದರು. ಮಕ್ಕಳಿಲ್ಲದ ಶಾಲೆಗೆ ಮಕ್ಕಳನ್ನು ಕರೆ ತರುವುದು ಸವಾಲಾಯಿತು. ಈಸಬೇಕು, ಈಸಿ ಜೈಸಬೇಕು. ಇದು ಈಜಾಡುವವರ ಧ್ಯೇಯ ವಾಕ್ಯ. ಆರ್ಥಿಕ ಸಂಕಷ್ಟದ ಬದುಕಿನ ಜಂಜಾಟದಲ್ಲಿ ಈಜಿ ದಡ ಸೇರಿದ ಹೊಳೆಗದ್ದೆ ಶಿಕ್ಷಕಿ ಉಮಾ ನಾಯ್ಕರವರಿಗೆ ಅದೇನೊ ಜೈಸದಿರುವ ಕೆಲಸವಾಗಲಿಲ್ಲ. ಧೃತಿಗೆಡದೆ ವಿವೇಕದಿಂದ ವಿಚಾರಿಸಿ ಎಲ್ಲವನ್ನು ಗೆದ್ದರು. ಮಾರನೇ ದಿನವೇ ಶಾಲೆಗೆ ಮಕ್ಕಳನ್ನು ಕರೆತರಲು ನಿರ್ಧರಿಸಿ ಬೊಂಡಗೇಸರದಿಂದ ಬೇರೆ ಊರಿನ ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು ಗುರುತಿಸಿದರು. ಮೂರನೇ ತರಗತಿಗೆ ಒಂದು ವಿದ್ಯಾರ್ಥಿ, ಎರಡನೇ ತರಗತಿಗೆ ಎರಡು ವಿದ್ಯಾರ್ಥಿ ಒಟ್ಟು ಮೂರು ವಿದ್ಯಾರ್ಥಿಗಳು ದೂರದ ಹೋಲಿ ರೋಜರಿ ಶಾಲೆಗೆ ಹೋಗುತ್ತಿರುವ ವಿಷಯ ತಿಳಿದು, ಕಾರ್ಯ ಸಾಧಕರ ಕೈಯಲ್ಲಿ ಕಡ್ಡಿಯೂ ಗುಡ್ಡವಾದಂತೆ ಕಾರ್ಯಪ್ರವೃತ್ತರಾದರು.
ಮೂರು ಮಕ್ಕಳನ್ನು ಭಟ್ಟರ ಮನೆಯ ಅಂಗಳಕ್ಕೆ ಕರೆತಂದು ಪಾಠ ಪ್ರಾರಂಭಿಸಿಯೇ ಬಿಟ್ಟರು. ಅಂದಿನಿಂದ ಅಕ್ಷರ ಬೀಜ ಬಿತ್ತಿದ ಶಿಕ್ಷಕಿ ಉಮಾ ನಾಯ್ಕರವರು ಸುಮಾರು ಎಂಟು ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಮೂರು ಮಕ್ಕಳಿದ್ದ ಶಾಲೆಗೆ ೩೫ ಮಕ್ಕಳು ಬರುವಂತೆ ಮಾಡಿದ ಮಹಾತಾಯಿಯಾದರು. ಮನೆಯಂಗಳ, ಮರದ ನೆರಳಿನಲ್ಲಿ, ನಂತರ ತಟ್ಟಿ ಬಿಡಾರದಲ್ಲಿ ಶಾಲೆ ಮಾಡಿ ತಮ್ಮ ಸೇವಾವಧಿಯಲ್ಲಿ ಹೊಸ ಕಟ್ಟಡ ಮಂಜೂರಿ ಮಾಡಿಸಿ ಅಕ್ಷರ ದೇಗುಲ ನಿರ್ಮಿಸಿ, ಅಕ್ಷರ ವಂಚಿತ ಮಕ್ಕಳ ಬದುಕಿಗೆ ಬೆಳಕಾದರು. ಊರಿಗೆ ಊರೇ ಹೆಮ್ಮೆ ಪಡುವ ಶಿಕ್ಷಕಿಯಾಗಿ ಎಲ್ಲರ ಪ್ರೀತಿ ಗಳಿಸಿದರು. ಬೊಂಡಗೆಸರಕ್ಕೆ ಶಿಕ್ಷಕ ವೃತ್ತಿಗಾಗಿ ತೆರಳಿ ಬೆಟ್ಟದಡಿ ಹುಲ್ಲಾಗಿ, ಊರಿಗೆ ಊರೇ ಘಮಘಮಿಸುವ ಮಲ್ಲಿಗೆಯಾಗಿ ಸುಮಾರು ಎಂಟು ವರ್ಷಗಳ ಸೇವೆ ಸಲ್ಲಿಸಿ, ಹಳದೀಪುರದ ಕೆರೆಗದ್ದೆ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು.
ತಂದೆ ತಿಪ್ಪಯ್ಯ ನಾಯ್ಕ, ತಾಯಿ ದೇವಿಯವರ ಮುದ್ದಿನ ಮಗಳಾಗಿ ೧೯೬೬ ರಲ್ಲಿ ಕುಮಟಾ ತಾಲೂಕಿನ ಊರುಕೇರಿಯಲ್ಲಿ ಜನಿಸಿದರು. ಕಿರಿಯ ಪ್ರಾಥಮಿಕ ಶಿಕ್ಷಣ ಕಡವು ಶಾಲೆಯಲ್ಲಿಯೂ, ಹಿರಿಯ ಪ್ರಾಥಮಿಕ ಶಿಕ್ಷಣ ಊರುಕೇರಿಯಲ್ಲಿಯೂ, ಪ್ರೌಢ ಶಿಕ್ಷಣ ಜನತಾ ವಿದ್ಯಾಲಯ ಧಾರೇಶ್ವರದಲ್ಲಿಯೂ, ವೃತ್ತಿ ಬದುಕಿನ ಶಿಕ್ಷಣ ಕಡತೋಕ ಜೂನಿಯರ್ ಕಾಲೇಜಿನಲ್ಲಿಯೂ, ಪದವಿ ಶಿಕ್ಷಣ ಕುಮಟಾದ ಎ. ವಿ. ಬಾಳಿಗಾ ಕಾಲೇಜಿನಲ್ಲಿ ಪೂರೈಸಿ ೧೯೯೬ ರಲ್ಲಿ ಯಲ್ಲಾಪುರದ ಬಂಡಗೆಸರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ಎಂಟು ವರ್ಷಗಳ ಕಾಲ ಅವರು ಸಲ್ಲಿಸಿದ ಸೇವೆ ಸೂರಿಲ್ಲದ,ಮಕ್ಕಳಿಲ್ಲದ ಶಾಲೆಗೆ ಜೀವಸತ್ವ ನೀಡಿ ಛಲದಿಂದ ಸಾಧನೆಗೈದಿರುವುದನ್ನು ಅವರ ಕಾರ್ಯದರ್ಶಿತೆಗೆ ಹಿಡಿದ ಕೈಗನ್ನಡಿಯಾಗಿದೆ. ಈಗಲೂ ನೆನೆಯುತ್ತಾರೆ.
೨೦೦೪ರಿಂದ ಇಲ್ಲಿಯ ತನಕ ಕೆರೆಗದ್ದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ, ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿರುತ್ತಾರೆ. ತಮ್ಮ ಸೇವಾವಧಿಯ ಕೆಲವು ಸಂದರ್ಭಗಳಲ್ಲಿ ಕಿರುಬೈಲು ಮತ್ತು ಹೊಳೆಗದ್ದೆ ಶಾಲೆಗೆ ನಿಯೋಜಿತ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ವೃತ್ತಿ ಬದುಕಿನಲ್ಲಿ ಅರ್ಪಣಾ ಮನೋಭಾವದಿಂದ ದುಡಿದ ಪ್ರಾಮಾಣಿಕ ಶಿಕ್ಷಕಿ ಉಮಾ ನಾಯ್ಕರವರ ಪತಿ ಜೆ.ಕೆ.ನಾಯ್ಕರವರು ರೇಷ್ಮೆ ಇಲಾಖೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ. ಅವರ ಮಗ ಪ್ರಸನ್ನ ಇಂಜಿನಿಯರ್ ರಾಗಿ ವೃತ್ತಿ ಬದುಕನ್ನು ಆರಂಭಿಸಿದರೆ, ಇನ್ನೋವ೯ ಮಗ ಕಾತಿ೯ಕ ಕಾಲೇಜು ವಿದ್ಯಾರ್ಥಿ. ಸುಧೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲ ಕ್ರಿಯಾಶೀಲ ಶಿಕ್ಷಕಿಯಾಗಿ, ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಜೂನ್ ೩೦ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ವೃತ್ತಿ ಬದುಕಿನ ಪಾವಿತ್ರ್ಯತೆಗಾಗಿ ನಿತ್ಯ, ನಿರಂತರ ದುಡಿದ ಉಮಾ ನಾಯ್ಕರವರ ಬದುಕು ಸದಾ ಹಸಿರಾಗಿರಲೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.
