ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಯತ್ನ : ತಿಂಗಳೊಂದರಲ್ಲಿ 400 ಅರ್ಜಿಗಳ ವಿಲೇವಾರಿ
ಆಡಳಿತದಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ದಾಖಲೆಗಳ ಸುಲಭ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ದಾಂಡೇಲಿ ನಗರಸಭೆಯಲ್ಲಿ ಇ-ಆಫೀಸ್ ವ್ಯವಸ್ಥೆ ಜಾರಿಗೊಂಡಿದ್ದು, ಇದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ಬಂದಿರುವ ಮೊದಲ ಡಿಜಿಟಲ್ ವ್ಯವಸ್ಥೆ ಎಂಬುದು ವಿಶೇಷವಾಗಿದೆ.
ಇದು ದಾಂಡೇಲಿ ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆಯವರ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದ್ದು, ಮೊದಲ ತಿಂಗಳಲ್ಲಿಯೇ ಈ ಡಿಜಿಟಲ್ ವ್ಯವಸ್ಥೆಯ ಮೂಲಕ 400 ಕ್ಕೂ ಹೆಚ್ಚಿನ ಅರ್ಜಿ ವಿಲೇವಾರಿ ಮಾಡಿ ಗಮನ ಸೆಳೆದಿದ್ದಾರೆ. ಇ-ಆಫೀಸ್ ವ್ಯವಸ್ಥೆಯನ್ನು ಎಲ್ಲ ಸರ್ಕಾರಿ ಕಾರ್ಯಗಳಲ್ಲಿ ಮಾಡಬೇಕೆಂಬ ಆದೇಶ ಸರ್ಕಾರದಾಗಿತ್ತು. ಇದೀಗ ಇದನ್ನ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕೂಡ ಮಾಡಲು ಮುಂದಾಗಿದ್ದು , ಅದರ ಒಂದು ಪ್ರಯತ್ನವನ್ನು ದಾಂಡೇಲಿ ನಗರಸಭೆಯಲ್ಲಿ ಮಾಡಲಾಗಿದ್ದು ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಇ-ಆಫೀಸ್ ವ್ಯವಸ್ಥೆಯ ಮೂಲಕ ಕಡತಗಳ ವಿಲೇವಾರಿ, ಪತ್ರ ವ್ಯವಹಾರ, ಅನುಮೋದನೆ ಪ್ರಕ್ರಿಯೆ ಹಾಗೂ ವಿವಿಧ ಆಡಳಿತಾತ್ಮಕ ಕಾರ್ಯಗಳು ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಇದರಿಂದ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ವೇಗವಾಗಿ ನಡೆಯಲು ಸಾಧ್ಯವಾಗಲಿದೆ. ಕಚೇರಿಯಲ್ಲಿನ ಕಾಗದದ ಬಳಕೆ ಕಡಿಮೆಯಾಗುವುದರ ಜೊತೆಗೆ ದಾಖಲೆಗಳ ಸಂರಕ್ಷಣೆ ಮತ್ತು ಮೇಲ್ವಿಚಾರಣೆಯೂ ಸುಲಭವಾಗಲಿದೆ.
ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈಗಾಗಲೇ ಇ-ಆಫೀಸ್ ಬಳಕೆಯ ಕುರಿತು ಅಗತ್ಯ ತರಬೇತಿ ನೀಡಲಾಗಿದ್ದು, ಸರ್ಕಾರದ ಡಿಜಿಟಲ್ ಆಡಳಿತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಿದೆ ಎಂದು ಇ – ಆಫೀಸ್ ಅನುಷ್ಠಾನದ ಕನಸುಗಾರ ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದ್ದಾರೆ.
ಮೊದಲು ಮತ್ತು ಈಗ:
ಈ ಮೊದಲು ಸಾರ್ವಜನಿಕರು ನಗರಸಭೆಗೆ ನೀಡಿದ ಅರ್ಜಿಯನ್ನು ಮ್ಯಾನುವಲ್ ನಲ್ಲಿ ಸ್ವೀಕೃತಿ ವಿಭಾಗದಲ್ಲಿ ಸ್ವೀಕರಿಸಿ ಅದು ಸಂಬಂಧಪಟ್ಟ ವಿಭಾಗಕ್ಕೆ ಹೋಗಿ, ಪೌರಾಯುಕ್ತರ ಗಮನಕ್ಕೆ ಬರುವಾಗ ಅದೆಷ್ಟೋ ಸಮಯವಾಗುತ್ತಿತ್ತು. ಒಮ್ಮೊಮ್ಮೆ ಪೌರಾಯುಕ್ತರ ಗಮನಕ್ಕೂ ಬಾರದೇ , ವಿಲೇವಾರಿಗೆ ವಿಳಂಬವಾಗಿ ಅರ್ಜಿ ನೀಡಿದವರ ಆಕ್ಷೇಪಕ್ಕೂ ಕಾರಣವಾಗುತ್ತಿತ್ತು. ಇನ್ನೊ ಕೆಲವೊಮ್ಮೆ ನೀಡಿದ ಅರ್ಜಿಗಳೇ ಕಾಣೆಯಾಗುತ್ತಿದ್ದ ಘಟನೆಗಳೂ ನಡೆಯುತ್ತಿತ್ತು. ಈಗ ಇ- ಆಫೀಸ್ ಆದ ನಂತರ ಇವ್ಯಾವುದೂ ನಡೆಯುವುದಿಲ್ಲ. ಸಾರ್ವಜನಿಕರು ಸ್ವೀಕೃತಿ ವಿಭಾಗದಲ್ಲಿ ಅರ್ಜಿ ನೀಡಿದ ತಕ್ಷಣ ಅದು ಸ್ಕ್ಯಾನ್ ಆಗಿ ತಕ್ಷಣ ಪೌರಾಯುಕ್ತರ ಗಮನಕ್ಕೆಬರುತ್ತದೆ. ಪೌರಾಯುಕ್ತರು ಅದನ್ನು ಅನುಮೋದಿಸಿ ಸಂಬಂಧಪಟ್ಡ ವಿಭಾಗದ ಅಧಿಕಾರಿಗೆ ರವಾನಿಸುತ್ತಾರೆ. ಆ ವಿಭಾಗದ ಅಧಿಕಾರಿ ತಕ್ಷಣ ಆ ಅರ್ಜಿಯ ಬಗ್ಗೆ ಪರಿಶೀಲಿಸಿ ಮಂಜೂರಿ ಮಾಡಿ, ಅಥವಾ ವಿವರಣೆ ನೀಡಿ ಮತ್ತೆ ಅಂತಿಮವಾಗಿ ಪೌರಾಯುಕ್ತರಿಗೆ ಕಳುಹಿಸುತ್ತಾರೆ. ಪೌರಾಯುಕ್ತರು ಆ ಅರ್ಜಿಗೆ ಅಂತಿಮ ಮುದ್ರೆ ಹಾಕುತ್ತಾರೆ. ಇವೆಲ್ಲವೂ ಕೂಡಾ ಕಂಪ್ಯೂಟರ್‌ನಿಂದ ಕಂಪ್ಯೂಟರ್ ಗೆ ನಡೆಯುವ ಆನ್ ಲೈನ್ ಕಾರ್ಯವಾಗಿದೆ. ಇದು ಸಂಪೂರ್ಣವಾಗಿ ಡಿಜಿಟಲೀಕರಣದ ವ್ಯವಸ್ಥೆಯಾಗಿದ್ದು, ಇದರಿಂದ ಸಾರ್ವಜನಿಕರ ಅರ್ಜಿ ಬಹು ಬೇಗ ಇತ್ಯರ್ಥಗೊಳ್ಳುವುದಲ್ಲದೇ, ಸಮಯವೂ ಉಳಿಯುತ್ತದೆ. ಪಾರದರ್ಶಕತೆಯೂ ಇರುತ್ತದೆ. ಅರ್ಜಿಗಳು ಪೆಂಡಿಂಗ್ ಇರದಂತೆ (ಮೇಲಾಧಿಕಾರಿಗಳ ಭಯದಲ್ಲಿ) ಸಂಬಂದಪಟ್ಡ ಸಿಬ್ಬಂದಿಗಳು ಜಾಗೃತೆ ವಹಿಸುವ ಜೊತೆಗೆ , ತಕ್ಷಣ ಕಾರ್ಯನಿರ್ವಹಣೆಯನ್ನೂ ಮಾಡುತ್ತಾರೆ. ದಾಂಡೇಲಿ ನಗರಸಭೆಯ ಡಿಜಿಟಲ್ ವ್ಯವಸ್ಥೆಯ ಈ ಉಪಕ್ರಮ ಭಾಗಶಹ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಒಂದು ಮಾದರಿಯಾಗಲಿದೆ ಎನ್ನುತ್ತಾರೆ ನಾಗರಿಕರು.
ತಿಂಗಳೊಂದರಲ್ಲಿ 400 ಅರ್ಜಿ ವಿಲೇವಾರಿ:
ದಾಂಡೇಲಿ ನಗರಸಭೆಯಲ್ಲಿ ಮೇ 1ರಿಂದ ಇ-ಆಫೀಸ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದು, ಇದು ಸಕ್ರಿಯವಾಗಿ ಕಾರ್ಯ ಆರಂಭಿಸಿದ್ದು, ಮೇ 7 ರಿಂದ. ಅಲ್ಲಿಂದ ಇಲ್ಲಿಯವರೆಗೆ ದಾಂಡೇಲಿ ನಗರಸಭೆಗೆ ಬಂದ 548 ಅರ್ಜಿಗಳನ್ನ ಡಿಜಿಟಲ್ ವ್ಯವಸ್ಥೆಯ ಮೂಲಕ ಸ್ವೀಕರಿಸಿ, ಪರಿಶೀಲಿಸಲಾಗಿದ್ದು, ಅವುಗಳಲ್ಲಿ ಈಗಾಗಲೇ ಸುಮಾರು 400 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಕೇವಲ 138 ಅರ್ಜಿಗಳು ಮಾತ್ರ ಬಾಕಿ ಇವೆ ಎಂಬ ಮಾಹಿತಿ ನಗರಸಭೆಯಿಂದ ದೊರೆತಿದೆ. ಈ ಹಿಂದೆ ನೀಡಿದ ಅರ್ಜಿಗಳು ವರ್ಷಾನುಗಟ್ಟಲೆ ವಿಳಂಬವಾಗುವ ಸಂದರ್ಭದಲ್ಲಿ ಇಂದು ತಿಂಗಳೊಂದರಲ್ಲಿಯೇ 400 ರಷ್ಟು ಅರ್ಜಿಗಳು ವಿಲೇವಾರಿ ಆಗಿರುವುದು ನಿಜಕ್ಕೂ ಕೂಡ ಗಮನಾರ್ಹ ಸಂಗತಿಯಾಗಿದೆ. ಇ-ಆಫೀಸ್ ಕಾರ್ಯ ನಿರ್ವಹಣೆ ದಾಂಡೇಲಿ ನಗರಸಭೆಗೆ ಮುಂದೊಂದು ದಿನ ಹೊಸ ರೂಪವನ್ನು ತಂದು ಕೊಡಲಿದೆ ಎನ್ನುತ್ತಾರೆ ನಾಗರಿಕರು.
ಸಾರ್ವಜನಿಕರಿಗೆ ಉಪಯುಕ್ತ:
ನಮ್ಮ ನಗರಸಭೆಯಲ್ಲಿ ಇ-ಆಫೀಸ್ ವ್ಯವಸ್ಥೆ ಜಾರಿಯಾಗಿರುವುದರಿಂದ ನಗರಸಭೆಯ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಲಿದ್ದು, ಸಾರ್ವಜನಿಕರಿಗೂ ತ್ವರಿತ ಸೇವೆ ದೊರೆಯುವ ನಿರೀಕ್ಷೆಯಿದೆ. ಸಾರ್ವಜನಿಕರು ನೀಡಿದ ಅರ್ಜಿಯನ್ನು ತಕ್ಷಣ ಆನ್ಲೈನ್ ನಲ್ಲಿ ಪಡೆದು ಪರಿಶೀಲಿಸಿ ಸಂಬಂಧಪಟ್ಟ ವಿಭಾಗಕ್ಕೆ ರವಾನಿಸಿ, ವಿಲೇವಾರಿ ಮಾಡಲು ಶೀಘ್ರ ಕಮ ಕೈಗೊಳ್ಳಲಾಗುತ್ತದೆ. ಇದು ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಲಿದೆ. ಇದು ಮೊದಲ ತಿಂಗಳು ಆಗಿರುವುದರಿಂದ 548 ಅರ್ಜಿಗಳಲ್ಲಿ 138 ಅರ್ಜಿಗಳು ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಿನ ವೇಗ ಪಡೆದುಕೊಳ್ಳಲಿದೆ ಎನ್ನುತ್ತಾರೆ ದಾಂಡೇಲಿ ನಗರಸಭೆಯ ಪೌರಾಯುಕ್ತರಾದ ವಿವೇಕ ಬನ್ನೆಯವರು.
