ಸಂಘಟನೆ ಎಂಬುದು ಉಂಡು ಬಿಸಾಕಿದ ಎಲೆಯಂತೆ ಅಲ್ಲ! ಉಣ್ಣಲು ಯೋಗ್ಯವಾದ ಆಹಾರ ತಯಾರಿಸಿದಂತೆ.ಉಂಡವರು ಹರಸಬೇಕು, ಉಂಡವರು ಖುಷಿ ಪಡಬೇಕು. ಸಂಘಟನೆ ಎಂಬುದು ಹಾಗೆ!ಹಲವರು ಮೂಗು ಮುರಿದಾಗಲೂ, ಕೆಲವರು ತೋಳು ಏರಿಸಿದಾಗಲೂ, ಕೆಲವರ ಕುಚೋದ್ಯೆ ಮಾತುಗಳನ್ನು ತಲೆಗೆ ಏರಿಸಿಕೊಳ್ಳದೆ ಹೃದಯದಲ್ಲಿ ಬಚ್ಚಿಟ್ಟು ಅವರನ್ನು ಸಂತೈಸಿ ಅವರ ಪ್ರೀತಿ ಗಳಿಸಿ ಇನ್ನುಳಿದವರಿಗೆ ಸಿಹಿ ಹಂಚುವುದೇ ಶಿಕ್ಷಕ ಸಂಘಟನೆಯ ಬಹುದೊಡ್ಡ ಕಾರ್ಯಗಳಲ್ಲಿ ಒಂದು. ಸುಮಾರು ಎರಡು ದಶಕಗಳ ಕಾಲ ಗೆಳೆಯ ಎಂ.ಜಿ.ನಾಯ್ಕ ಎಲ್ಲವನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡು ಯಾರು ಏನೇ ಹೇಳಿದರು ಅದನ್ನ ಅರಗಿಸಿಕೊಂಡು, ಶಿಕ್ಷಕ ಸ್ನೇಹಿ ಅಧ್ಯಕ್ಷನಾಗಿ ಹೊನ್ನಾವರ ತಾಲೂಕಿನ ಶಿಕ್ಷಕ ಸಂಘಟನೆ ಇಡೀ ಜಿಲ್ಲೆಗೆ ಮಾದರಿಯಾಗುವಲ್ಲಿ ಅವರ ಹಗಲಿರುಳು ಪರಿಶ್ರಮದ ಫಲವೇ ಇಂದು ಜಿಲ್ಲಾಧ್ಯಕ್ಷರ ಪಟ್ಟ ಅವರನ್ನರಸಿ ಬಂದಿದೆ. ಇದು ನಮ್ಮ ತಾಲೂಕಿಗೆ ಹೆಮ್ಮೆಯಾದರೆ, ಜಿಲ್ಲೆಗೆ ಮುಡಿಗೇರಿದ ಕಿರೀಟದಂತೆ!
ತಾಲೂಕಿನ ಯಾವುದೇ ಶಿಕ್ಷಕರು, ಯಾವುದೇ ಸಮಸ್ಯೆಯನ್ನು ಹೇಳಿದಾಗಲೂ ಅದನ್ನು ತನ್ನ ಎದೆ ಗವುಚಿಕೊಂಡು ಇಡೀ ಸಂಘಟನೆಯ ಬಲದೊಂದಿಗೆ ಮುನ್ನಡೆದು ಶಿಕ್ಷಕರ ಬೆನ್ನಿಗೆ ನಿಂತಿರುವುದು ಅವರ ಸಂಘಟನಾ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ತಾಲೂಕಿನ ಶಿಕ್ಷಕ ದಂಪತಿಗಳ ಮಕ್ಕಳ ಒಂದೇ ಒಂದು ಮದುವೆಯನ್ನು ಬಿಡದೇ ಎಲ್ಲಾ ವಧು- ವರರಿಗೆ ಅಕ್ಷತೆ ಹಾಕಿ ಸಂಘದ ಪರವಾಗಿ ಹರಸಿ,ಹಾರೈಸಿ ಬಂದಿರುವುದು ಮಳೆಗಾಲದಲ್ಲಿ ಮಳೆ ಸುರಿದಷ್ಟೇ ಸತ್ಯ!
ನಿವೃತ್ತಿಯಾದ ದಿನವೇ ಇಡೀ ಸಂಘಟನೆ ಅವರ ಶಾಲೆಗೆ ಹೋಗಿ ಅವರ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿ ಹರಸಿ ಬಂದಿರುವುದು ಕಳೆದ ಐದು ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿರುವುದು ಈ ವರ್ಷದ ಬಿರು ಬಿಸಿಲಿನಷ್ಟೇ ಸತ್ಯ!
ಇಂಥ ಪವಿತ್ರ ಕಾರ್ಯಗಳಿಗೆ ಹೋಗಿ ಬಂದ ನಂತರ ಫೋಟೋ , ಜೊತೆಯಲ್ಲಿ ಪುಟ್ಟ ವರದಿ ತಾಲೂಕಿನ ಶಿಕ್ಷಕರಿಗೆ ಈ ವಿದ್ಯಾಮಾನ ಹಂಚುತ್ತಿರುವುದು ಹುಣ್ಣಿಮೆ ಚಂದ್ರ ಮೋಡ ಮರೆಮಾಚಿ ಬಂದಷ್ಟೆ ಸತ್ಯ!
ಶಿಕ್ಷಕ ದಿನಾಚರಣೆ ಬಂದರೆ ಸಾಕು! ಸಪ್ಟೆಂಬರ್ 5ರ ಸಂಭ್ರಮ ಜಿಲ್ಲೆಯಲ್ಲಿ ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ. ಪ್ರಚಾರ ಪ್ರಸಿದ್ಧಿ ಬಯಸದ ಹತ್ತು ಜನ ಕಾಯಕಯೋಗಿಯನ್ನು ಹುಡುಕಿ ತಾಲೂಕಿನ ಶಿಕ್ಷಕರ ಎದುರಿಗೆ ಸನ್ಮಾನಿಸಿ ಗೌರವಿಸಿರುವುದು ಇಡೀ ಶಿಕ್ಷಕ ಕುಲಕ್ಕೆ ಸಂದ ಅತಿದೊಡ್ಡ ಗೌರವಗಳಲ್ಲಿ ಒಂದು ಎಂಬುದು ಚಂದ್ರಯಾನ ಮಾಡಿ ಭೂಮಿಗಿಳಿದಷ್ಟೇ ಸತ್ಯ!
ಸಾವಿತ್ರಿಬಾಯಿ ಪುಲೆ ದಿನಾಚರಣೆ ಬಂತೆಂದರೆ ಇಡೀ ಶಿಕ್ಷಕ ಕುಲಕ್ಕೆ ಅವರ ಸಾಧನೆಯನ್ನು ಪರಿಚಯಿಸುವುದರ ಮೂಲಕ ದುರ್ಗಮ ಪ್ರದೇಶದಲ್ಲಿರುವ, ತುಂಬಾ ಕಷ್ಟದ ಪರಿಸ್ಥಿತಿಯಲ್ಲಿಯೂ ಮಕ್ಕಳ ಪಾಲಿನ ಆರಾಧ್ಯ ದೈವಿಯಂತಿರುವ ಎರಡು ಜನ ಮಹಿಳೆಯರಿಗೆ ಸಂಘಟನೆಯ ಪರವಾಗಿ ಅಭಿನಂದಿಸುವ ಕಾರ್ಯ ಒಂದೆಡೆಯಾದರೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಬಂತೆಂದರೆ ಅಲ್ಲಿ ಐದು ಮಹಿಳೆಯರನ್ನ ಗೌರವಿಸಿ ಮಹಿಳಾ ಶಿಕ್ಷಕಿಯರನ್ನು ತಾಯಿಯ ಸಮಾನರಂತೆ ನೋಡಿದ ಸಂಘಟನೆ ಮತ್ತೊಂದಿಲ್ಲ.ಕಳೆದ ಐದು ವರ್ಷಗಳಲ್ಲಿ ನೂರಾರು ಶಿಕ್ಷಕರ ತಲೆಗೆ ಟೋಪಿ, ಹೆಗಲಿಗೆ ಶಾಲು, ಕೈಯಲ್ಲಿ ನೆನಪಿನ ಕಾಣಿಕೆ ನೀಡಿ ಶಿಕ್ಷಕರನ್ನು ಗೌರವಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಮಳೆಗಾಲದಲ್ಲಿ ನದಿ, ತೊರೆ, ಹಳ್ಳಗಳು ತುಂಬಿ ಹರಿಯುವುದಷ್ಟೇ ಸತ್ಯ!
ಇನ್ನು ಶಿಕ್ಷಕರು ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ, ಶಿಕ್ಷಕರ ಹೊರತಾಗಿ ಬೇರೆಯವರಿಂದ ತೊಂದರೆಗೊಳಗಾದಾಗ ಅಥವಾ ಯಾವುದೋ ಅನಾಹುತಕ್ಕೆ ಎಡೆಯಾದಾಗಲೆಲ್ಲ ಎಂ.ಜಿ.ನಾಯ್ಕ ಸಂಘಟನೆ ಮುಂದೆ ನಿಂತು ಆ ಸಮಸ್ಯೆಗೆ ಪರಿಹಾರದ ಪೊಟ್ಟಣದೊಂದಿಗೆ ಸಾಕ್ಷಿಕರಿಸಿರುವುದು ಹಾಲು ಬೆಳ್ಳಗಿರುವುದಷ್ಟೆ ಸತ್ಯ!
ಇನ್ನು ಶಿಕ್ಷಕರ ಇನ್ಕಮ್ ಟ್ಯಾಕ್ಸ್ ಮಾಹಿತಿಯನ್ನು ಇಂದಿಕರಿಸುವುದು, ಸಂಬಳ ಆದ ತಕ್ಷಣ ಮೊಬೈಲಿನಲ್ಲಿ ಮೆಸೇಜ್ ರಿಂಗಣಿಸುವುದು, ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಧ್ಯರಾತ್ರಿ ಮನೆಗೆ ಬರುವುದು, ಸಾಧಕ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಸಂಘಟನೆ ಪರವಾಗಿ ಗೌರವಿಸುವುದು, ಕೋರೋನು ಕಾಲದಲ್ಲಿ ಆಪತ್ ಬಾಂಧವರಂತೆ ಸಹಕರಿಸಿರುವುದು, ಮೆಡಿಕಲ್ ಬಿಲ್ ಪಾವತಿಸಲು ಸಂಬಂಧಿಸಿದವರೊಂದಿಗೆ ನಿರಂತರವಾಗಿ ಸಂಪರ್ಕಿಸುವುದು ಅವರಿಗೆ ಆದಿಶೆದಲ್ಲಿ ಸಹಕರಿಸುವುದು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ ಅಧಿಕಾರಿಗಳನ್ನು ಅಭಿನಂದಿಸುವುದು, ಮಳೆಗಾಲದಲ್ಲಿ ಆಗುವ ಅವಾಂತರಗಳಿಗೆ ಅಧಿಕಾರಿಗಳ ಮನವೊಲಿಸಿ ಶಿಕ್ಷಕರಿಗೆ ಸಹಕರಿಸುವುದು, ವರ್ಗಾವಣೆಗೊಂಡ ಅಧಿಕಾರಿಗಳನ್ನು, ವೃತ್ತಿಬಾಂಧವರನ್ನು ಅಭಿನಂದಿಸುವುದು ಇಂತಹ ನೂರಾರು ಕಾರ್ಯಕ್ರಮಗಳು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಎಂ.ಜಿ .ನಾಯ್ಕ ರವರ ನಾಯಕತ್ವದಲ್ಲಿ ಉಳಿದ ಪದಾಧಿಕಾರಿಗಳ ಸಹಕಾರದೊಂದಿಗೆ ನಿತ್ಯ ನಿರಂತರವಾಗಿ ನಡೆದುಕೊಂಡು ಬಂದಿರುವುದು ಕತ್ತಲೆ ದೂರ ಮಾಡಲು ಬೆಳಕು ಬೇಕೆನ್ನುವುದಷ್ಟೇ ಸತ್ಯ!
ಎಂ. ಜಿ. ಎಂದರೆ ಅದು ನಿಂತ ನೀರಲ್ಲ! ಸದಾ ಹರಿಯುವ ತೊರೆಯಂತೆ! ಶಿಕ್ಷಕ ಸಂಘದ ನಿರ್ದೇಶಕರಾಗಿ ಪ್ರಾರಂಭಿಸಿದ ಇವರ ಕಾರ್ಯ ಚಟುವಟಿಕೆ ನಂತರ ಸಂಘಟನೆಯ ಪ್ರಮುಖ ಭಾಗವಾದ ಪ್ರಧಾನ ಕಾರ್ಯದರ್ಶಿಯಾಗಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಹೊನ್ನಾವರ ತಾಲೂಕಾ ಸರಕಾರಿ ನೌಕರರ ಸಂಘದಲ್ಲಿ ಎರಡು ಬಾರಿ ಉಪಾಧ್ಯಕ್ಷರಾಗಿ, ರಾಜ್ಯ ಪರಿಷತ್ ಸದಸ್ಯರಾಗಿ, ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈಗ ಜಿಲ್ಲಾ ಅಧ್ಯಕ್ಷ ಪಟ್ಟ ಅವರಿಗೊಲಿದು ಮುಡಿಗೇರಿ ಕುಳಿತಿದೆ. ಇಡೀ ಜಿಲ್ಲೆಯ ಶಿಕ್ಷಕರ ಮನಸ್ಸನ್ನು ಗೆಲ್ಲಬೇಕಾಗಿದೆ. ಅವರ ಕಷ್ಟಕೋಟಲೆಗಳಿಗೆ ನೆರವಾಗಬೇಕಾಗಿದೆ. ಯಾವುದೇ ಸಂಘಟನೆಯನ್ನು ಎದುರಿಸಬಹುದು. ಆದರೆ ಶಿಕ್ಷಕ ಸಂಘಟನೆ ಗೆಲ್ಲುವುದು ದೇವರು ಕಣ್ಣೆದುರಿಗೆ ಬರುವಷ್ಟು ಕಠಿಣ ಧ್ಯಾನದ ಅಗತ್ಯತೆ ಇದೆ. ಆ ದಿಶೆಯಲ್ಲಿ ಎಂ.ಜಿ.ಅವರಿಗೆ ಎಲ್ಲಾ ಮನಸ್ಸುಗಳು ಒಂದುಗೂಡಿ ಸಹಕರಿಸಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.
