ʼಸಮುದಾಯʼ ಕ್ಕೀಗ ಐವತ್ತು ವರ್ಷ.
ಪ್ರಗತಿಪರ ಆಶಯದ ನಾಟಕಗಳನ್ನೇ ಎತ್ತಿಕೊಂಡು ಆಡುತ್ತ ಬಂದ ʼಸಮುದಾಯʼ ದ ಬೆಂಗಳೂರು, ಸುವರ್ಣ ವರ್ಷದಲ್ಲಿ ಎತ್ತಿಕೊಂಡಿದ್ದು ʼಭಗವಂತನ ಮರಣʼ. ನಾಟಕವನ್ನು. ಕೆ. ಆರ್ ಮೀರಾ ರ ಈ ಮಲಯಾಳಂ ಕತೆ ʼಬಹುರೂಪಿʼ ಯಿಂದ ಕನ್ನಡಕ್ಕೂ ಬಂದಿದೆ. ಇಂಥ ಕೃತಿಯೊಂದಕ್ಕೆ ಮಲಯಾಳಂ ನಾಟಕ ರೂಪ ಕೊಟ್ಟವರು ಕೇರಳದ ಪ್ರಸಿದ್ಧ ರಂಗ ನಿರ್ದೇಶಕ ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ. ಕೆ. ಪ್ರಭಾಕರನ್ ಅದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ಯಾಮ್ ಕುಟ್ಟಿಯವರೇ ಈ ನಾಟಕವನ್ನು ನಿರ್ದೇಶಿಸಿದ್ದಾರೆ.
ಭಗವದ್ಗೀತೆ ಯನ್ನು ವಿಮರ್ಶಿಸಿದರೆಂಬ ಕಾರಣಕ್ಕೆ, ಮಾನವತಾವಾದಿ ಪ್ರೊ. ʼಭಗವಂತʼ ರನ್ನು ಕೊಲ್ಲುವದಕ್ಕಾಗಿ ಸಂಘಟನೆಯೊಂದರಿಂದ ನೇಮಿಸಲ್ಪಟ್ಟ, ತಲೆಯ ತುಂಬ ದ್ವೇ಼ಷ, ಹಿಂಸೆಗಳನ್ನೇ ತುಂಬಿಕೊಂಡ ಅಮರ ಎನ್ನುವ ಯುವಕನೊಬ್ಬ, ಪಿಸ್ತೂಲು ಹಿಡಿದು ಅವರ ಮನೆಗೇ ಬರುತ್ತಾನೆ. ಕೊಲ್ಲುವ ಗಡಿಬಿಡಿಯಲ್ಲಿ ನಡೆಯುವ ಅಪಘಾತದಿಂದ ಆತ ಅವರ ಮನೆಯಲ್ಲೇ ಗಾಯಾಳುವಾಗಿಬಿಡುವ ಪರಿಸ್ಥಿತಿ ಬಂದುಬಿಡುತ್ತದೆ. “ಕೊಲ್ಲುವದೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಬದಲಿಗೆ ಬದುಕಲು ಬಿಡುವದು ಆದರ್ಶ” ಎನ್ನುತ್ತ, ಪ್ರೊಫೆಸರ್, ಕೈತುತ್ತಿನೊಂದಿಗೆ ಆತನ ಕೈಗೆ ಪುಸ್ತಕಗಳನ್ನೂ ಕೊಡುತ್ತ ಹೋಗುತ್ತಾರೆ. ಪಿಸ್ತೂಲು ಹಿಡಿದ ಕೈ ಪುಸ್ತಕಗಳನ್ನು ಹಿಡಿಯುತ್ತದೆ. ʼಪುಸ್ತಕಕ್ಕಿಂತ ದೊಡ್ಡ ಆಯುಧವಿಲ್ಲ” ಎನ್ನುತ್ತ ಮತ್ತೆ ಮತ್ತೆ ಓದಿಸುತ್ತಾರೆ. ಆ ಹುಡುಗ, ತನ್ನ ಸುತ್ತಲಿನ ಜನ ತೋರಿಸಿದ ಪ್ರೀತಿ,ʼ ಭಗವಂತʼ ರ ಮಾನವೀಯ ಸ್ಪರ್ಶ, ಬಸವಣ್ಣನವರ ವಚನಗಳ ನಿರಂತರ ಸಿಂಚನ, ಪುಸ್ತಕಗಳ ಸಹವಾಸದಿಂದ ಬದಲಾಗುತ್ತಾನೆ ʼಜ್ಞಾನದ ಬಲದಿಂದ ಅಜ್ಞಾನದ ಕೇಡʼ ನ್ನು ನೋಡಲಾರಂಭಿಸುತ್ತಾನೆ. ದ್ವೇಷದ ಜಾಗವನ್ನು ಪ್ರೀತಿ ತುಂಬುತ್ತದೆ.
ಈ ರಂಗಕೃತಿ, ಸುತ್ತ ಮುತ್ತ ಕಾಣುತ್ತಿರುವ ಧಾರ್ಮಿಕ ಅಸಹಿಷ್ಣುತೆ ಮತ್ತು ಕ್ರೌರ್ಯದ ಕಾರಣಗಳನ್ನು ಹುಡುಕುತ್ತ ಹೋಗುವ ಪ್ರಯತ್ನ ಮಾಡುತ್ತದೆ. ಬಹುತೇಕ ನಿಂತೇ ಹೋಗಿರುವ ಸಂವಾದ, ಚರ್ಚೆಗಳು, ಹರಡುತ್ತಿರುವ ಹಸಿ ಹಸಿ ಸುಳ್ಳುಗಳು, ದ್ವೇ಼ಷದ ಮಾತುಗಳು, ಯುವ ಜನತೆಯಲ್ಲಿ ವಿಷ ತುಂಬುತ್ತಿವೆ. ಹಿಂಸೆಗೆ ಪ್ರೇರೇಪಿಸುತ್ತಿವೆ. ದ್ವೇಷದಾಟದ ದಾಳವಾದ ʼಅಮರʼನ ದುರಂತ ಬದುಕಿನ ಮೂಲಕ ನಾಟಕ ಇಂಥದೊಂದು ಸ್ಥಿತಿಯನ್ನು ತೋರಿಸುತ್ತ, ಎಚ್ಚರಿಸುತ್ತ ಹೋಗುತ್ತದೆ. ಅಮರ್, ಧಾರ್ಮಿಕ ದಂಗೆಯೊಂದರಲ್ಲಿ, ತಾನು ಪ್ರೀತಿಸಿದ ಕಾವೇರಿ ಯ ಕ್ರೂರವಾದ ಸಾವನ್ನು ಕಾಣುವ ಸ್ಥಿತಿ ಬರುತ್ತದೆ. ಒಂದು ಸುಂದರ ಬದುಕು ಮುರುಟಿ ಹೋಗುವ ದುರಂತವಿದು.
ನಿರ್ದೇಶಕರು, ಚಿತ್ರಿಕೆಯಂಥ ಸರಳವಾದ ಸೆಟ್ ನಲ್ಲಿ ನಾಟಕ ಕಟ್ಟುತ್ತಾರೆ. ಗಾಂಧಿಯ ಚಿತ್ರ, ಬಸವಣ್ಣನವರ ಮೂರ್ತಿ, ನಾಟಕದ ಆಶಯವನ್ನು ಧ್ವನಿಸುವಂತಿವೆ. ರಂಗದ ಮಧ್ಯಭಾಗದ ಪೀಠ ಮತ್ತು ಅದರ ಸುತ್ತಲಿನ ಪುಟ್ಟ ಕೊಳ ಪ್ರಭಾವಶಾಲಿಯಾಗಿ ಬಳಕೆಯಾಗಿದೆ. ಪ್ರಾರಂಭದಲ್ಲಿ ಸಮಾಜದ ಕೊಳೆ ತೊಳೆಯುವದನ್ನು ಸಂಕೇತಿಸುವಂತೆ ಪ್ರೊಫೆಸರ್ ಬಳಸುವ ಶುಭ್ರ ನೀರು ಅವರ ಕೊಲೆಯಾಗುತ್ತಿದ್ದಂತೆ ಕೆಂಬಣ್ಣಕ್ಕೆ ತಿರುಗುವದು ಒಂದು ರೀತಿಯ ಕಠೋರ ವ್ಯಂಗ್ಯವಾಗಿ ತೋರುತ್ತದೆ. ಕಾವೇರಿ, ಅಮರ ನ ದೃಶ್ಯಗಳ ನಿರ್ಮಿತಿ ಕಲಾತ್ಮಕವಾಗಿದೆ. ಅಮರ-ಪ್ರೊಫೆಸರ್‌ರ ದೃಶ್ಯಗಳನ್ನು ಶಕ್ತಿಯುತವಾಗಿ ಕಟ್ಟಲಾಗಿದೆ.
ಇದು ಮಾತೇ ಮುಖ್ಯವೆನಿಸುವ ನಾಟಕ. ಕೆ. ಪ್ರಭಾಕರನ್ ರ ಅನುವಾದ ಚೆನ್ನಾಗಿದೆ. ಮನಮುಟ್ಟುವ ಮಾತುಗಳಿವೆ. ನಾಟಕದುದ್ದಕ್ಕೂ ವಚನಗಳನ್ನು ವಿಫುಲವಾಗಿ ಬಳಸಲಾಗಿದೆ. ಕೆಲವೊಂದು ಬಾರಿ ವಚನಗಳ ಭಾರ ಜಾಸ್ತಿಯಾದಂತೆಯೂ ಭಾಸವಾಗುತ್ತದೆ. ಉದ್ಧರಣೆಯ ರೂಪ ಪಡೆದು ಜಟಿಲವಾದ ಕೆಲವು ಮಾತುಗಳನ್ನು ಇನ್ನೂ ಸರಳವಾಗಿ ಹೇಳಬಹುದಿತ್ತೇನೋ ಎನಿಸದಿರದು. ಹಸುಗಳ ಕೂಗುವಿಕೆಯನ್ನು ಸೂಚ್ಯವಾಗಿ ಬಳಸಲಾಗಿದೆ. ಬೆಳಕಿನ ವಿನ್ಯಾಸದಲ್ಲಿ ಸೂಕ್ಷ್ಮತೆ ಕಾಣುತ್ತದೆ. ವಸ್ತ್ರವಿನ್ಯಾಸದಲ್ಲಿಯೂ, ಅವುಗಳ ಬಣ್ಣಗಳಲ್ಲೂ ಸಾಂಕೇತಿಕತೆ ಇದೆ.
ಇಂಥದೊಂದು ನಾಟಕವನ್ನು ಪ್ರಭಾವಶಾಲಿಯಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ನಟ ನಟಿಯರ ಪಾತ್ರ ತುಂಬ ಮಹತ್ವದ್ದು. ಅಂಥ ಪಾತ್ರವನ್ನು ಪಾತ್ರಧಾರಿಗಳು ತುಂಬ ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಅಭಿಷೇಕ್, ಕಾವೇರಿ ಶ್ರೀಧರ್, ಸಿದ್ದರಾಮು, ಚೇತನ್ ಗಂಗಾ. ಉಲ್ಲಾಸ್, ಸುನಿಲ್ ಕುಮಾರ್, ಪದ್ಮಾ ಶಿವಮೊಗ್ಗ ( ಇವರು ಸಹ ನಿರ್ದೇಶಕಿ ಕೂಡ), ಕಾವ್ಯ ಅಚ್ಯುತ, ರಾಣಿ ವಿಶ್ವನಾಥ್, ನಾಗಲಕ್ಷ್ಮಿ, ಫೈರೋಜ್, ದೀಪಿತ್, ಮನೋಜ್ ರ ತಂಡಕ್ಕೆ ಮೆಚ್ಚುಗೆಗಳು ಸಲ್ಲುತ್ತವೆ.
ಒಂದು ʼದಿಟ್ಟ ನಾಟಕʼ ಕೊನೆಯ ಹಂತಕ್ಕೆ ಬಂದಿದೆ. ಆದರೆ ʼಭಗವಂತ ʼಸತ್ತಿಲ್ಲ. ಅವರು ʼಅಮರʼ ನಲ್ಲಿ ತುಂಬಿದ ಮಾನವೀಯ ಗುಣಗಳಲ್ಲಿ ಅಮರರಾಗಿದ್ದಾರೆ. ಈಗ ಅಮರ ಅವರ ಸ್ಥಾನಕ್ಕೆ ಬಂದಿದ್ದಾನೆ. ಅವರದೇ ಬಿಳಿಯ ವಸ್ತ್ರ ಹೊದ್ದುಕೊಂಡಿದ್ದಾನೆ. ಕಾಲು ಮುರಿದುಕೊಂಡ ಮಲ್ಲಪ್ಪ ಈಗ ಗಾಲಿ ಖುರ್ಚಿಯಲ್ಲಿದ್ದಾನೆ. ಪ್ರೊಫೆಸರ್ ರ ಪೀಠವನ್ನ ಹತ್ತಿ ನಿಂತಿರುವ ಅಮರ್ ನ ಕೈಯಲ್ಲಿ ಪ್ರೊಫೆಸರ್ ತಿನ್ನಿಸುತ್ತಿದ್ದ ಕೈತುತ್ತಿನ ಹರಿವಾಣವಿದೆ. ಆತನ 9ಮುಖದಲ್ಲಿ ಮಲ್ಲಪ್ಪನಂಥ ಎಲ್ಲರನ್ನೂ ಸರಿದಾರಿಗೆ ತರಬಲ್ಲ ಆತ್ಮವಿಶ್ವಾಸವಿದೆ.
ಲೇಖಕರು – ಕಿರಣ ಭಟ್, ಹೊನ್ನಾವರ
ಲೇಖಕರ ಪರಿಚಯ: ಕಿರಣ್ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಹೊನ್ನಾವರದಲ್ಲಿ ಬಿ.ಎಸ್.ಸಿ ಪದವಿ ಪಡೆದ ನಂತರ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಹುಬ್ಬಳ್ಳಿ, ತಿರುವನಂತಪುರಂ, ಶಿರಸಿ, ಮಂಗಳೂರು, ಕುಮಟಾ, ಕಾರವಾರ, ಎರ್ನಾಕುಲಂ, ಕಣ್ಣಾನೂರಿನಲ್ಲಿ ಸೇವೆ ಸಲ್ಲಿಸಿ ಸದ್ಯ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಕಿರಣ್ ಭಟ್ ಮಂಗಳೂರು ಸಮುದಾಯ, ಆಯನ ತಂಡಗಳ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಶಿರಸಿಯಲ್ಲಿ ‘ರಂಗಸಂಗ’ ತಂಡ ಸ್ಥಾಪಿಸಿ, ನಾಟಕಗಳನ್ನು ನಿರ್ದೇಶಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ಹಾಗೂ ಮಕ್ಕಳ ರಂಗಶಿಬಿರಗಳ ನಿರ್ದೇಶಿಸಿದ್ದಾರೆ. ಹಲವು ಸಾಹಿತ್ಯ ಕೃತಿಗಳು ಪ್ರಕಟಗೊಂಡಿವೆ. ರಂಗಭೂಮಿ ಸೇವೆಗಾಗಿ 1999 ರಲ್ಲಿ ‘ ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ‘ ಕೊಗ್ರೆ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿ ಲಭಿಸಿವೆ.
