ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ, ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿದರೆ ಸಮಾಜದಲ್ಲಿ ಗೌರವ ಕಡಿಮೆಯೆನ್ನುವ ಅದೆಷ್ಟೋ ಪಾಲಕರಿಗೆ ಪುಷ್ಠಿ ನೀಡಲು ಸರಕಾರ ಯೋಚಿಸಿ, ಯೋಜಿಸಿದ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಪ್ರಶಸ್ತಿ ನೀಡಿರುವುದು “ಪಾಲಕರ ಚಿತ್ತ ಸರಕಾರಿ ಶಾಲೆಯತ್ತ” ಎನ್ನುವಂತಾಗಿದೆ.
ಊರು ನೋಡುವ ಮೊದಲು ಶಾಲೆ ನೋಡು, ಶಾಲೆಯ ಪರಿಶುದ್ಧ ಪರಿಸರವೇ ಇಡೀ ಊರಿನ ಚಿತ್ರಣದ ಸ್ಪಷ್ಟ ರೂಪ. ಶಾಲೆಯನ್ನು ದೇವಸ್ಥಾನಕ್ಕೆ ಹೋಲಿಸಿ, ಮಕ್ಕಳನ್ನು ದೇವರಂತೆಯೂ, ಗುರು-ಗುರು ಮಾತೆಯರನ್ನು ಪೂಜಾರಿ ಸ್ಥಾನದಲ್ಲಿಟ್ಟು ಗೌರವಿಸುವ ಕಾಲದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಜವಾಬ್ದಾರಿಯೂ ಅಷ್ಟೇ ಪ್ರಾಮುಖ್ಯತೆ ಪಡೆದಿತ್ತು. ಕಾಲ ಬದಲಾದಂತೆ ಎಲ್ಲವೂ ಬದಲಾಗಿರುವುದು ಸತ್ಯ. ಈ ಕಾರಣಕ್ಕಾಗಿ ಸರಕಾರ ಹಲವು ಯೋಜನೆ ಗಳನ್ನು ಅನುಷ್ಠಾನ ಮಾಡುವುದರ ಮೂಲಕ ಶಾಲಾ ಶೈಕ್ಷಣಿಕ ಗುಣಮಟ್ಟ ಎತ್ತರಿಸುವಲ್ಲಿ ಇಂತಹ ಯೋಜನೆ ತುಂಬಾ ಪರಿಣಾಮಕಾರಿಯಾಗಿದೆ.
“ಪುಷ್ಟಿ” ಪದದ ಅರ್ಥವೇ ಉತ್ತಮ ಪೋಷಣೆ ಅಥವಾ ಚೆನ್ನಾಗಿ ಬೆಳೆದ ಸ್ಥಿತಿ. ಈ ಸ್ಥಿತಿ-ಗತಿಯ ಉಸ್ತುವಾರಿ ನೋಡಿಕೊಳ್ಳುವವರು ಶಾಲಾಭಿವೃದ್ಧಿ ಸಮಿತಿ. ಸರಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣ ಅಭಿವೃದ್ದಿ ಸಂಬಂಧ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳನ್ನು ಗುರುತಿಸಿ ಗೌರವಿಸುವುದಾಗಿದೆ. ಸಮಿತಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವದ್ದಕ್ಕಾಗಿ ಮತ್ತು ಉತ್ತಮ ಶಾಲೆ ಹೇಗಿರಬೇಕು ಎಂಬುದರ ಅರಿವಿನ ಚಿತ್ರಣ ಮೂಡಿಸಿ ಅವರನ್ನು ಪ್ರೋತ್ಸಾಹಿಸಲು ಈ ಯೋಜನೆ ಜಾರಿಗೆ ತರಲಾಗಿದೆ.
ಪ್ರಸಕ್ತ ಸಾಲಿನಲ್ಲಿ ನಮ್ಮ ಹೊನ್ನಾವರ ತಾಲೂಕಿನ ಖರ್ವಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಪುಷ್ಟಿ ಕಾರ್ಯಕ್ರಮದ ಯೋಜನೆಯಡಿ ಅತ್ಯುತ್ತಮ ಎಸ್‌ಡಿಎಂಸಿ ಶಾಲೆಯಾಗಿ ತಾಲೂಕಿಗೆ ಮಾದರಿ ಎನಿಸಿದೆ. ಹೊನ್ನಾವರ ತಾಲೂಕಿನಲ್ಲಿ ಕಿರಿ-ಹಿರಿಯ ಸರಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆ ೨೬೬, ಸರಕಾರಿ ಪ್ರೌಢಶಾಲೆಗಳ ಸಂಖ್ಯೆ ೧೧ ಇವೆಲ್ಲವನ್ನು ಮೀರಿ ಬೆಳೆದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಜಿಲ್ಲೆಯ ಇತಿಹಾಸ ಪುಟದಲ್ಲಿ ದಾಖಲಾದ ಹೊನ್ನಾವರದ ಮೊದಲ ಶಾಲೆ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಮಾವಿನಕುವಾ೯ ವಲಯದ ಅತಿ ದೊಡ್ಡ ಶಾಲೆಯಾದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಖರ್ವಾದ ವಿದ್ಯಾರ್ಥಿಗಳು ಯೋಗದಲ್ಲಿ ರಾಜ್ಯ,ರಾಷ್ಟ್ರಮಟ್ಟದವರೆಗೆ ಅವರ ಪ್ರತಿಭೆ ಮೆರೆದಿದೆ. ಅಂದಿನ ಯೋಗ ಶಿಕ್ಷಕಿ ರಾಜೇಶ್ವರಿ ಭಟ್ ರವರ ನಿರಂತರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಯೋಗದ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಿರುತ್ತಾರೆ. ಇತ್ತೀಚೆಗಷ್ಟೇ ನೂರರ ಸಂಭ್ರಮ ಆಚರಿಸಿಕೊಂಡ ಶಾಲೆ ಇದಾಗಿದೆ.
ಈಗಿರುವ ಮುಖ್ಯಾಧ್ಯಾಪಕರು ಸಾಹಿತ್ಯ, ಸಾಂಸ್ಕೃತಿಕ ಪರಿಚಾರಿಕೆಯಂತೆ ಸದಾ ಶಿಸ್ತು ಬದ್ಧ ಸಂಘಟನೆಯ ಜೊತೆಗೆ ಮಾತೃ ಸ್ವರೂಪಿ ಸಾಹಿತಿ, ಶಿಕ್ಷಕಿ ಸುಧಾ ಭಂಡಾರಿ ಅವರ ಕಾರ್ಯ ಶ್ಲಾಘನೀಯವಾದದ್ದು. ಕ್ರಿಯಾಶೀಲತೆಯೊಂದಿಗೆ ಮಕ್ಕಳ ಅಕ್ಷರ ದಾಹಕ್ಕೆ ದಾಸೋಹದಂತೆ ಪೌಷ್ಟಿಕ ಪೋಷಕಾಂಶ ಒದಗಿಸುವ ಗುರುಮಾತೆ ಕೂಡ. ಅವರಿಗೆ ಸಂಗಾತಿಯಾಗಿ ಕೈಜೋಡಿಸುವ ಸುನೀತಾ ಪಟಗಾರ, ರೇಷ್ಮಾ ಅಂಬಿಗ ಮತ್ತು ವಿನಾಯಕ ದೇಶಭಂಡಾರಿಯವರೊಂದಿಗೆ ೫೪ ವಿದ್ಯಾರ್ಥಿಗಳಿಗೆ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ನೆರವಾಗುವ ಅನುಕೂಲಿಸುವವರು ಅಭಿನಂದನಾರ್ಹರು. ಅವರೊಂದಿಗೆ ನಿತ್ಯ- ಸತ್ಯ ಶೈಕ್ಷಣಿಕ ಮಾರ್ಗದರ್ಶಕ ಅದೇ ಊರಿನ ಎಸ್.ಎಂ.ಭಟ್ ರವರ ಸಾರ್ಥಕ ಸೇವೆ ಮರೆಯುವಂತಿಲ್ಲ.
ಇನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಟೇಶ ನಾಯ್ಕ ಮತ್ತು ಉಪಾಧ್ಯಕ್ಷೆ ನಾಗವೇಣಿ ನಾಯ್ಕ ಮತ್ತು ಅವರ ತಂಡದ ಪ್ರಯತ್ನ ಪ್ರಶಸ್ತಿಯು ಅವರ ಶಾಲೆಯ ಜಗ್ಗುಲಿಯನ್ನರಸಿ ಬಂದಿದೆ. ಬೇಕು ಎನ್ನುವ ಬದುಕಿಗೆ ಒಂದು ಲಕ್ಷದ ಪುರಸ್ಕಾರವಿದೆ. ಮಕ್ಕಳ ಬದುಕಿನ ಕನಸಿನ ಅರಮನೆಯಲ್ಲಿ ಅಕ್ಷರ ನೀಡಲು ಸದಾ ಹಾತೊರೆಯುವ ಶಿಕ್ಷಕ ಬಳಗ, ಶಾಲಾ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವ ಸ್ಥಳೀಯ ಸರಕಾರ,ಎಸ್‌ಡಿಎಂಸಿ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ಜೊತೆ ಊರ ನಾಗರೀಕರ ಸಾಮೂಹಿಕ ಸಹಭಾಗಿತ್ವದ ಕಾರ್ಯಕ್ಕೆ ಮಹಾಫಲ ದೊರಕಿದೆ.
ಸಾವಿರಾರು ಜನರ ಬಾಳು ಬೆಳಗಿದ ಅಕ್ಷರ ಮತ್ತು ಅನ್ನಕ್ಕೆ ಸಂಪರ್ಕ ಕಲ್ಪಿಸಿದ ಅಕ್ಷರ ಪ್ರೇಮಿ ದಿವಂಗತ ನಾಗಪ್ಪ ಸಣ್ತಮ್ಮ ನಾಯ್ಕ ರವರ ಮನೆಯ ಮಾಳಿಗೆಯ ಮೇಲೆ ಸುಮಾರು ಮೂರು ದಶಕಗಳ ಕಾಲ ಮೈದಳೆದು ನಿಂತು, ನಂತರ ಅವರ ಕರ್ಮ ಭೂಮಿಯಲ್ಲಿ ಸ್ಥಾಪನೆಯಾದ ಶಾಲೆಗ ಅತ್ಯುತ್ತಮ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಪ್ರಶಸ್ತಿ ಬಂದಿರುವುದು ಇಡೀ ಖವಾ೯ ಊರ ನಾಗರಿಕರಿಗೆ ಸಂದ ಗೌರವವಾಗಿದೆ. ಕಳೆದ ಮೂರು ವರ್ಷಗಳ ಕಾಲ ದೂರ ದೃಷ್ಟಿ ವ್ಯಕ್ತಿತ್ವದ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುಧಾ ಭಂಡಾರಿ ಮತ್ತು ಸಹವರ್ತಿಗಳಿಗೆ ಮೊದಲ ಪುಷ್ಟಿ ಯೋಜನೆಯ ಪ್ರಶಸ್ತಿ “ನನ್ನ ಶಾಲೆ ನನ್ನ ಹೆಮ್ಮೆ” ಎನ್ನುವಂತಾಗಿದೆ. ಸರಕಾರದ ಪುಷ್ಟಿ ಯೋಜನೆ ಪಾಲಕರಲ್ಲಿ ಆತ್ಮಬಲ ಹೆಚ್ಚಿಸುವುದರ ಮೂಲಕ “ಸರ್ಕಾರಿ ಶಾಲೆಗೆ ನಮ್ಮ ಮಕ್ಕಳು” ಎಂಬ ಜನಜಾಗೃತಿ ಮೂಡಿ ಕುಸಿಯುತ್ತಿರುವ ದಾಖಲಾತಿಗೆ ಇನ್ನಷ್ಟು ಪುಷ್ಟಿ ನೀಡಲೆಂಬುದೇ ತಾಲೂಕಿನ ಸಮಸ್ತ ಗುರು ವೃಂದದ ಹಾರೈಕೆಯಾಗಿದೆ.
ಪಿ.ಆರ್.ನಾಯ್ಕ
ನಲಿ-ಕಲಿ ಶಿಕ್ಷಕ, ಹೊನ್ನಾವರ.