Site icon ಒಡನಾಡಿ

ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯು. ಎಸ್. ಪಾಟೀಲ್

ದಾಂಡೇಲಿ : ಫೆಬ್ರುವರಿ 28ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಬರಹಗಾರ ಯು. ಎಸ್. ಪಾಟೀಲ್ ಆಯ್ಕೆಯಾಗಿದ್ದಾರೆ.

ಶನಿವಾರ ದಾಂಡೇಲಿಯ ಸಾಹಿತ್ಯ ಭವನದಲ್ಲಿ ದಾಂಡೇಲಿ ತಾಲೂಕಾ  ಕಸಾಪ ಅಧ್ಯಕ್ಷ ನಾರಾಯಣ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ್,  ತಾಲೂಕು ಕಾರ್ಯದರ್ಶಿಗಳಾದ ಪ್ರವೀಣ್ ನಾಯ್ಕ,  ಗುರುಶಾಂತ್ ಜಡೆ ಹಿರೇಮಠ,  ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ,   ಪದಾಧಿಕಾರಿಗಳಾದ ಎನ್. ಆರ್. ನಾಯ್ಕ, ಸುರೇಶ್ ಕಾಮತ್, ಕಲ್ಪನಾ ಪಾಟೀಲ್, ಸುರೇಶ್ ಪಾಲನಕರ್  ಮುಂತಾದವರಿದ್ದರು.

*ಯು.ಎಸ್. ಪಾಟೀಲ್ ಪರಿಚಯ :*

ದಾಂಡೇಲಿಯ ಬಂಗೂರ ನಗರ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಉಮಕಾಂತ ಸೋಮನಗೌಡ ಪಾಟೀಲ್ ಸುಮಾರು 30  ವರ್ಷಗಳಿಂದ ಪತ್ರಕರ್ತರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.  ಪರಿಸರ, ಸಾಮಾಜಿಕ ಕಳಕಳಿ, ವ್ಯಕ್ತಿ ಪರಿಚಯ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.

2013-14ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಿಯುಸಿ ನೂತನ ಇತಿಹಾಸ ಪುಸ್ತಕದ ಪರಿಶೀಲನಾ ಸಮಿತಿಯ ಸದಸ್ಯರಾಗಿ, ರಾಜ್ಯಮಟ್ಟದ ಮೌಲ್ಯಮಾಪಕರಾಗಿ ಮೌಲ್ಯಮಾಪನ ಮುಖ್ಯ ಅಧ್ಯಕ್ಷರಾಗಿ, ಪ್ರಥಮ ಹಾಗೂ ದ್ವಿತೀಯ ವರ್ಷದ ಇತಿಹಾಸ  ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಕವಿವಿ ಕ್ರಿಕೆಟ್ ತಂಡದ ಸದಸ್ಯರಾಗಿ, ಲಯನ್ಸ ಕ್ಲಬ್ ನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಜಿಲ್ಲಾ ಚೇರ್ಮನರಾಗಿ, ಅಂತರಾಷ್ಟ್ರೀಯ ಲಯನ್ಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ, ತಾಲೂಕು ಸಂಯುಕ್ತ ಹೋರಾಟ ಸಮಿತಿಯ ಸಂಚಾಲಕರಾಗಿ, ದಾಂಡೇಲಿ ಪ್ರೆಸ್ ಕ್ಲಬ್ ನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಜಿಲ್ಲಾ ಪದವಿ ಪೂರ್ವ ಮಾವಿದ್ಯಾಲಯಗಳ ನೌಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾಗಿ,  ಸಾಕ್ಷರತಾ ಆಂದೋಲನದಲ್ಲಿ ಸಮನ್ವಯ ಅಧಿಕಾರಿಯಾಗಿ, ದಾಂಡೇಲಿಯ ಬಾಬಾ ಹಜರತ್ ಅಲಿ ದರ್ಗಾದ ಅಧ್ಯಕ್ಷರಾಗಿ ಗೌರವದ ಸ್ಥಾನಗಳನ್ನ ನಿರ್ವಹಿಸಿರುತ್ತಾರೆ. ಜೊತೆಗೆ ಸಾಹಿತಿಕ ಹಾಗೂ ಸಾಂಸ್ಕೃತಿಕ ಸಂಘಟನೆ ಮತ್ತು ಕಾರ್ಯಕ್ರಮಗಳಲ್ಲಿಯೂ ತೊಡೆಸಿಕೊಂಡಿರುವವರು ಹಲವಾರು ಗೌರವ ಪುರಸ್ಕಾರಗಳನ್ನು ಕೂಡ ಪಡೆದಿರುತ್ತಾರೆ.

Exit mobile version