Site icon ಒಡನಾಡಿ

ಕವಿವಿ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಡಾ. ಒಕ್ಕುಂದ

ದಾಂಡೇಲಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಅಕಾಡೆಮಿ ಕೌನ್ಸಿಲ್ ಸದಸ್ಯರನ್ನಾಗಿ ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಅವರನ್ನು ನೇಮಕ ಮಾಡಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಾಚಾರ್ಯರ ಸೇವಾ ಹಿರಿತನದ ಆಧಾರದ ಮೇಲೆ ಈ ನಾಮ ನಿರ್ದೇಶನ ಮಾಡಲಾಗಿದೆ ಎಂದು ಕುಲ ಸಚಿವರ ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಅವರು ಒಂದೇ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಅಕಾಡೆಮಿ ಕೌನ್ಸಿಲ್ (ವಿದ್ಯಾ ವಿಷಯ ಪರಿಷತ್) ಸದಸ್ಯರಾಗಿ ನಾಮನಿರ್ದೇಶನ ಗೊಂಡಿರುವುದು ವಿಶೇಷವಾಗಿದೆ.

ರೋಣ, ನರಗುಂದ , ಸವಣೂರು, ಅಳ್ನಾವರ ಸೇರಿದಂತೆ ವಿವಿಧಡೆಯ ಪದವಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಕಾಲೇಜುಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿರುವ ಎಮ್. ಡಿ. ಒಕ್ಕುಂದರವರು ಸದ್ಯ ದಾಂಡೇಲಿಯಲ್ಲಿ ಕಳೆದ ಏಳು ವರ್ಷಗಳಿಂದ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಕವಿವಿ ‘ಪ್ರೊಫೆಸರ್’ ಪದವಿಯನ್ನು ಪಡೆದುಕೊಂಡಿದ್ದಾರೆ.

ಕನ್ನಡ ವಿಷಯದ ಪ್ರಾಧ್ಯಾಪಕರಾಗಿರುವ ಇವರು ನಾಡಿನ ಪ್ರಬುದ್ಧ ಬರಹಗಾರರು ಕೂಡ. ಇವರ ಅನೇಕ ಕೃತಿಗಳು ಪ್ರಕಟವಾಗಿವೆ. ಇವರ ಸಾಹಿತ್ಯಕ್ಕೆ ಪ್ರಾಧಿಕಾರ ಹಾಗೂ ಅಕಾಡೆಮಿಗಳ ಪ್ರಶಸ್ತಿ ಕೂಡ ಬಂದಿದೆ.

10 ವರ್ಷದ ಹಿಂದೆ ಆರಂಭವಾಗಿದ್ದ ದಾಂಡೇಲಿಯ ಸರ್ಕಾರಿ ಪದವಿ ಕಾಲೇಜು ಇದೀಗ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಬೆಳೆದು ನಿಂತಿದೆ. ಕಿರಿದಾದ ಖಾಸಗಿ ಕಟ್ಟಡದಲ್ಲಿ ಆರಂಭವಾಗಿದ್ದ ಈ ಕಾಲೇಜು ಸ್ವಂತ ಕಟ್ಟಡವನ್ನ ನಿರ್ಮಿಸಿಕೊಳ್ಳುವಲ್ಲಿ, ಈ ಕಾಲೇಜಿನಲ್ಲಿ ಎಲ್ಲ ಅವಶ್ಯವಿರುವ ಮೂಲಸೌಕರ್ಯಗಳನ್ನು ತಂದುಕೊಳ್ಳುವಲ್ಲಿ, ಗುಣಮಟ್ಟದ ಶಿಕ್ಷಣವನ್ನ ನೀಡುವಲ್ಲಿ, ಈ ಕಾಲೇಜಿನ್ನು ಒಂದು ಸಾಂಸ್ಕೃತಿಕ ಕೇಂದ್ರದ ರೀತಿಯಲ್ಲಿ ರೂಪಿಸುವಲ್ಲಿ ಡಾ. ಎಂ. ಡಿ. ಒಕ್ಕುಂದ ಅವರ ಪರಿಶ್ರಮ ಸಾಕಷ್ಟಿದೆ. ಇದೀಗ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ನಾಡಿನ ಒಂದು ಮಾದರಿ ಕಾಲೇಜ್ ಆಗಿ ಬೆಳೆದು ನಿಂತಿದೆ. ಅದಕ್ಕೆ ಹಿರಿಮೆ ಎನ್ನುವ ಹಾಗೆ ಕಾಲೇಜಿನ ಪ್ರಾಚಾರ್ಯ ಡಾ. ಎಮ್.ಡಿ. ಒಕ್ಕುಂದವರು ಇದೀಗ ಸಿಂಡಿಕೇಟ್ ಹಾಗೂ ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಇವರ ನೇಮಕಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಆರ್. ವಿ. ದೇಶಪಾಂಡೆ ಹಾಗೂ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Exit mobile version