Site icon ಒಡನಾಡಿ

ಶಾರದಾ ಎಂ. ನಾಯ್ಕರ ಮುಡಿಗೇರಿದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯ ಗರಿ

ಶಾಲೆ ಎಂದರೆ ಬದುಕಿನ ಒಂದು ಭಾಗವಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಅವರು ಇಷ್ಟಪಡುವ ಕಲಿಕೆಯನ್ನು ಕಷ್ಟಪಡದೆ ಸ್ವೀಕರಿಸುವ ಹಾಗೆ ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸಿ ಸಹಜವಾದ ಕಲಿಕೆಯೊಂದಿಗೆ ಸಾರ್ಥಕ ಬದುಕನ್ನು ಕಂಡುಕೊಂಡ ಶಾರದಾ ಮಾರಿ ನಾಯ್ಕ ರವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿರುವುದು ಇಡೀ ತಾಲೂಕಿಗೆ ಹೆಮ್ಮೆ ಎನಿಸಿದೆ. ಜ್ಞಾನ ಮತ್ತು ಕೌಶಲಗಳ ಜೊತೆಗೆ ಉತ್ತಮ ನಾಗರಿಕನಾಗಲು ಪ್ರೇರಕವಾದ ಮೌಲ್ಯ ಶಿಕ್ಷಣವನ್ನು ನೀಡುವುದರ ಮೂಲಕ ಮಕ್ಕಳ ಸ್ನೇಹಿ ಶಾಲಾ ಪರಿಸರವನ್ನು ನಿರ್ಮಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಬಾಲ್ಯದಲ್ಲಿ ಮಕ್ಕಳಿಗೆ ನೀಡಬೇಕಾದ ಅಕ್ಷರದ ಜ್ಞಾನವನ್ನು ಸಂತಸದಿಂದ ನೀಡಿ ಮಕ್ಕಳ ಪಾಲಿನ ಆದರ್ಶ ಗುರುಮಾತೆಯಾಗಿ ಸರಳ ಸಜ್ಜನಿಕೆಗೆ ಹೆಸರಾದವರು ಶಾರದಾ ನಾಯ್ಕರವರು.

ಕರೆದ ದಾರಿ ಬೇರೆ ಮತ್ತೆ ತೆರೆದ ದಾರಿ ಬೇರೆಯೇ ಆದರೂ ಎಲ್ಲವನ್ನು ಒಂದೇ ದಾರಿಯಲ್ಲಿ ಸೇರಿಸಿ ಬದುಕು ಕಟ್ಟಿಕೊಳ್ಳಲು, ಮುಂದಿನ ಭವಿಷ್ಯತ್ತನ್ನು ನಿರ್ಮಿಸಿಕೊಳ್ಳಲು ಅನುಕೂಲವಾಗುವ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಿ ಸದಾ ಮಕ್ಕಳ ಕಲಿಕೆಗಾಗಿ, ಅವರ ಒಳಿತಿಗಾಗಿ ಹಾತೊರೆಯುವ ಅಪರೂಪದ ಶಿಕ್ಷಕಿ, ಇತರರಿಗೆ ಮಾದರಿಯಾದವರು.

*ಸತ್ಯ ಹೇಗೆ ಆತ್ಮದಲ್ಲಿದೆಯೋ ಹಾಗೆಯೇ ಮನಸ್ಸಿನಲ್ಲಿರುತ್ತದೆ,*
*ಹೇಗೆ,ಮನುಷ್ಯನಲ್ಲಿರುತ್ತದೆಯೋ ಹಾಗೆಯೇ ಮಾತಿನಲ್ಲಿರುತ್ತದೆ*
*ಹೇಗೆ, ಮಾತಿನಲ್ಲಿರುತ್ತದೆಯೋ ಹಾಗೆಯೇ ಕರ್ಮದಲ್ಲಿ ವರ್ದಿಸುತ್ತದೆ* ಎಂಬ ಹಿರಿಯರ ಮಾತಿನಂತೆ,ಸತ್ಯಪ್ಪನ ಸಂಗಾತಿ ಸತ್ಯಾನುಭವಗಳನ್ನು ಕಾಯಾ, ವಾಚಾ,ಮನಸಾ ಆಸ್ವಾದಿಸಿ ತಮ್ಮ ನಡುವಿರುವ ಮಕ್ಕಳಿಗೆ ಸಿಹಿಯಾದ ಜೇನಿನಂತೆ ಹಂಚಿ ಬದುಕಿನುದ್ದಕ್ಕೂ ಸಂಭ್ರಮಿಸಿ ವೃತ್ತಿ ಬದುಕನ್ನು ಪ್ರೀತಿಸಿದವರು.*

ಸದಾ ಚೈತನ್ಯದ ಚಿಲುಮೆಯಂತೆ ಮಕ್ಕಳೊಂದಿಗೆ ಮಕ್ಕಳಾಗಿ ಅವರು ಕೇಳುವ ಪ್ರಶ್ನೆಗಳನ್ನು ಮೌನವಾಗಿ ಕೇಳಿಸಿಕೊಂಡು, ಮಕ್ಕಳ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಉತ್ತರಿಸುವ ಮಾತೃ ಸ್ವರೂಪಿ ಶಾರದಾ ನಾಯ್ಕರವರು ಮಕ್ಕಳ ಬಾಲ್ಯದ ಶಿಕ್ಷಣಕ್ಕೆ ಬೆನ್ನೆಲುಬಾದವರು. ಬದುಕಿನ ಸುತ್ತಮುತ್ತಲಿನ ಪರಿಸರದ ಜೊತೆಯಲ್ಲಿ ಮಕ್ಕಳೊಂದಿಗೆ ಬೆರೆತು- ಬೆವರದ, ಅರಿತು- ಕರಗದ, ನುರಿತು- ನರಗದ ವಿಶಾಲ ದೃಷ್ಟಿಕೋನದ ಚುರುಕು ಬುದ್ಧಿಯ ಶಿಕ್ಷಕಿ ಶಾರದಾ ನಾಯ್ಕರವರು ಮುರ್ನಕಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡುವರೆ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಾಧಕ ಶಿಕ್ಷಕಿ.

ಮೂಲತ: ಕುಮಟಾ ತಾಲೂಕಿನ ಹುಬ್ಬಣಗೇರಿಯವರಾದ  ಶಾರದಾ ನಾಯ್ಕರವರ ತಂದೆ ಮಾರಿ ನಾಯ್ಕ, ತಾಯಿ ಲಕ್ಷ್ಮಿ ನಾಯ್ಕ ರವರ ಮುದ್ದಿನ ಮಗಳಾಗಿ ೧೯೬೮ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಬ್ಬಣಗೇರಿಯಲ್ಲಿಯೂ, ಪ್ರೌಢ ಶಿಕ್ಷಣ ಜನತಾ ವಿದ್ಯಾಲಯ ಬಾಡದಲ್ಲಿಯೂ, ವೃತ್ತಿ ಬದುಕಿನ ಶಿಕ್ಷಣ ಕುಮಟಾದ ಡಯಟ್ ನಲ್ಲಿ ಪೂರೈಸಿ ೧೯೯೦ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕೊಡಗು ಜಿಲ್ಲೆ ಅರೆಕಾಡು ಹಿರಿಯ ಪ್ರಾಥಮಿಕ ಶಾಲೆಗೆ ನೇಮಕರಾದರು.

ಅರೆಕಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ ಅಲ್ಲಿಂದ ಭಟ್ಕಳ ತಾಲೂಕಿನ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಗೆ ವರ್ಗವಾಗಿ ಬಂದರು. ಅಲ್ಲಿ ಮೂರು ವರ್ಷಗಳ ಕಾಲ ಸೇವಿ ಸಲ್ಲಿಸಿ ೧೯೯೮ ರಂದು ಸರಕಾರಿ ಕಿರಿಯ ಪ್ರಾಥಮಿಕ  ಮುರ್ನಕಳಿ ಶಾಲೆಗೆ ವರ್ಗವಾಗಿ ಬಂದರು. ಸುಮಾರು ೩೪ ವರ್ಷಗಳ ಸೇವಾ ಅವಧಿಯಲ್ಲಿಯೂ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮಕ್ಕಳ ಬದುಕು ಎಂದರೆ ಬೆಳಕು ಅನ್ನುವ ರೀತಿಯಲ್ಲಿ, ಜ್ಞಾನವನ್ನು ಪ್ರವಾಹದ ರೀತಿಯಲ್ಲಿ ಹಲವು ಚಟುವಟಿಕೆಗಳ ಮೂಲಕ ನೀಡುತ್ತಿರುವುದು ಅವರ ಕೃತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. “ಎದೆಯೆದೆಯ ಪುಟ್ಟ ಬೆಳಕಿಗೆ ಕಿರು ಆಸೆಯ ಕೋಟೆ ಕಟ್ಟಿ”ಬದುಕು ಮುಗಿಲೇತ್ತರಕ್ಕೆ ಬೆಳೆಯಲೆಂದು ಹಾರೈಸುವ, ಮಕ್ಕಳಲ್ಲಿ ಸರ್ವಸ್ವವನ್ನು ಕಂಡು ಉಪ್ಪು ಸಕ್ಕರೆಯ ಸೇರಿದ ಮಾತ್ರಕ್ಕೆ ಸಿಹಿ ಆಗೋಲ್ಲ. ಅದು ಸಿಹಿಯಾಗಲು ಎರಡು ಬೇಕೆಂದು ಮಕ್ಕಳ ಮತ್ತು ಪಾಲಕರ ಎದುರಿಗೆ ತೆರೆದಿಟ್ಟು, ಕತ್ತಲೆಯ ಹಿಂದೆ ಬೆಳಕು, ಅಳುವಿನ ಹಿಂದೆ ನಗುವಿದ್ದರೆ ಬದುಕು ಹೆಚ್ಚು ಸುಂದರ ಎಂಬ ಕಟು ಸತ್ಯವನ್ನು ಸಮಾಜದ ಎದುರಿಗೆ ತೆರೆದಿಟ್ಟ ಅಪರೂಪದ ವ್ಯಕ್ತಿತ್ವ ಇವರದ್ದಾಗಿದೆ.

ಶಾಲೆ ಭೌತಿಕವಾಗಿ ಆಕರ್ಷಣೀಯ ಕೇಂದ್ರವಾಗಿರುವುದಷ್ಟೇ ಅಲ್ಲದೆ, ಪ್ರೀತಿ, ವಾತ್ಸಲ್ಯ ತುಂಬಿದ ಹೃದಯವಂತಿಕೆಯಿಂದ ಶೋಭಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಪತಿ ಸತ್ಯಪ್ಪ ನಾಯ್ಕರವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತರಾಗಿರುತ್ತಾರೆ. ಮಗ ನಂದನ ಇಂಜಿನಿಯರ ಆಗಿ ಉದ್ಯೋಗದಲ್ಲಿದ್ದರೆ, ಮಗಳು ನವ್ಯ ಎಮ್ಫಾರ್ಮಸಿ ಓದುತ್ತಿದ್ದಾಳೆ.ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿ  ಶಾರದಾ ನಾಯ್ಕ ರವರು ನೂರ್ಕಾಲ ಬಾಳಿ ಬದುಕಲೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ
ನಲಿ-ಕಲಿ ಶಿಕ್ಷಕರು, ಹೊನ್ನಾವರ

Exit mobile version