Site icon ಒಡನಾಡಿ

ವೃತ್ತಿಯಿಂದ ನಿವೃತ್ತಿಯಾದ ಚೈತನ್ಯದ ಚಿಲುಮೆಯಂತಿರುವ ಕಡ್ನೀರು ಶಾಲೆಯ ಶಿಕ್ಷಕಿ ಶಾರದಾ ಶರ್ಮಾ

ನೂರು ಹಾಡಿಗೆ ನಾಡಿಯಾದವ
ನಾಡ ಬೆಳಗಿದ ಸಾಧಕ
ಬಾಳಗುಟ್ಟಿಗೆ,ಒಲುಮೆ ಒಗಟಿಗೆ
ಭಾಷ್ಯ ಬರೆದಿಹ ಬೋಧಕ!

ಬೋಧಕರ ಕುರಿತಾಗಿ ಕವಿ ಬರೆದ ಈ ಕವನ ಬಾಳಗುಟ್ಟಿಗೆ ಒಲುಮೆ ಒಗಟಿಗೆ ಸಾಕ್ಷಿಯಾದವರು ಆ ದಿಶೆಯಲ್ಲಿ ಮಕ್ಕಳ ಬದುಕಿನಲ್ಲಿ ಶಾಶ್ವತವಾಗಿ ನೆಲೆ ನಿಂತವರು ಶಾರದಾ ಶಂಕರ ಶರ್ಮಾ ರವರು.

ನಿನ್ನೆಯಷ್ಟೆ ವೃತ್ತಿಯಿಂದ ನಿವೃತ್ತಿ. ಜನ್ಮತ: ಸತ್ಯವೂ ಸುಂದರವೂ ಆದ ಮನಸ್ಸು. ಮಕ್ಕಳ ಕುರಿತಾಗಿ ಹೊಸ ಹೊಸ ಆಲೋಚನೆಯ ನಾವಿನ್ಯಯುತ ಕಲಿಕೆಯಲ್ಲಿ ಅದ್ಭುತ ಸಂಯಮ ಹಾಗೂ ಶಿಸ್ತನ್ನು ರೂಢಿಸಿಕೊಂಡು ಹೊಸ ಹೆದ್ದಾರಿ ಸೃಷ್ಟಿಸಿದವರು. ಹಿರಿಯರನ್ನು ಕಿರಿಯರನ್ನು ಒಂದೇ ಏಟಿಗೆ ತಲೆದೋಗಿಸುವ ತನ್ಮಯತೆಯಲ್ಲಿ ವಾಸ್ತವಿಕತೆ ಯನ್ನು ಮರೆಯದ ಎಚ್ಚರಿಕೆಯ ಹೆಜ್ಜೆ ಇಡುತ್ತಾ ಕಡ್ನೀರಿನಂತ ಕುಗ್ರಾಮದಲ್ಲೂ ಹೊಸ ಭಾಷ್ಯ ಬರೆದ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿದ ಛಲಗಾರ್ತಿಯೂ ಹೌದು.

ನೆಲ ಬಗೆದು ನೆಗೆವ
ಹಸಿರುಕ್ಕಿ ನಗುವ
ಹೊಳೆದಂಡೆ ಕರಕಿ ನಾನೂ! ಎಂಬ ಕವಿವಾಣಿಯಂತೆ ನಗು ಮೊಗದಿಂದ ಹಿರಿ-ಕಿರಿಯರೆನ್ನದೆ ಹಸಿರುಕ್ಕಿ ನಗುವ ಮಾತೃ ಸ್ವರೂಪಿ. ಮಕ್ಕಳ ಪಾಲಿನ ಆರಾಧ್ಯ ದೇವತೆಯಂತಿರುವ ಶಾರದಾ ಶರ್ಮಾ ರವರ ತಂದೆ ಶಂಕರನಾರಾಯಣ ಶರ್ಮಾ, ತಾಯಿ ಗಿರಿಜಾರವರ ಮುದ್ದಿನ ಮಗಳಾಗಿ ೧೯೬೪ ರಲ್ಲಿ ಸಿರ್ಸಿಯ ಬರೂರನಲ್ಲಿ ಜನಿಸಿದರು. ಪ್ರಾಥಮಿಕ ಹಂತದ ಒಂದು ಮತ್ತು ಎರಡನೇ ತರಗತಿಯನ್ನು ಸಿರ್ಸಿಯ ಬರೂರಿನಲ್ಲಿಯೂ, ಮೂರನೇ ತರಗತಿಯನ್ನು ಯಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ, ನಾಲ್ಕರಿಂದ ಏಳನೇ ತರಗತಿಯನ್ನು ಹೊನ್ನಾವರದ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕಾರ್ ನಂಬರ ಎರಡರಲ್ಲಿಯೂ, ಎಂಟನೇ ತರಗತಿಯನ್ನು ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದಲ್ಲಿಯೂ, ಒಂಬತ್ತನೇ ತರಗತಿಯಿಂದ ಪದವಿ ಪೂರ್ವ ಶಿಕ್ಷಣವನ್ನು ಜನತಾ ವಿದ್ಯಾಲಯ ಕಡತೋಕಾದಲ್ಲಿಯೂ, ಹೊನ್ನಾವರದ ಎಸ್. ಡಿ.ಎಮ್ ಕಾಲೇಜಿನಲ್ಲಿ ಪದವಿ ಶಿಕ್ಷಣದ ಮೊದಲ ವರ್ಷ ಪೂರೈಸಿ. ಎರಡನೇ ವರ್ಷದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ೧೯೮೪ ರಲ್ಲಿ ಸಿರ್ಸಿಯ ನೆಗ್ಗು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಪ್ರಾರಂಭಿಸಿದರು. ನಂತರ ೧೯೮೫ ರಲ್ಲಿ ಹೊನ್ನಾವರ ತಾಲೂಕಿನ ಅಡ್ಕಾರ ಶಾಲೆಗೆ ಸರಕಾರದಿಂದ ಕಾಯಂ ಶಿಕ್ಷಕರಾಗಿ ನೇಮಕರಾದರು. ೧೯೮೭ ರಿಂದ ಹಳಿಯಾಳದ ಶಾಸಕರ ಮಾದರಿ ಶಾಲೆಗೆ ವರ್ಗವಾದರು. ನಂತರ ೧೯೯೮ ರಿಂದ ೨೦೦೯ ರ ವರೆಗೆ ಅಂದರೆ ಸುಮಾರು ೧೧ ವರ್ಷಗಳ ಕಾಲ ಕಡತೋಕಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಂತರ ೨೦೦೯ ರಿಂದ ನಿವೃತ್ತಿಯವರೆಗೂ ಕಡ್ನೀರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ.

ಸುಮಾರು ನಾಲ್ಕು ದಶಕಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಅತ್ಯಂತ ಲವಲವಿಕೆಯಿಂದ, ಪಾದರಸದಂತ ಚುರುಕಿನೊಂದಿಗೆ ಕ್ರಿಯಾಶೀಲ ಪ್ರವೃತ್ತಿಯೊಂದಿಗೆ, ಕರ್ತವ್ಯ ಬದ್ಧತೆಯೊಂದಿಗೆ, ಎಲ್ಲರೊಳಗೊಂದಾಗಿ ಬೆರೆತು- ಬಲಿತು ಇಲಾಖೆಯ ಘನತೆ ಗೌರವ ಹೆಚ್ಚಿಸಿದ ಅಪರೂಪದ ಸಾಧಕ ಶಿಕ್ಷಕಿ ಶಾರದ ಶರ್ಮಾ ರವರು. ತನ್ನರಿವೇ ತನಗೆ ಗುರುವಾಗಿ, ಮಕ್ಕಳ ಪಾಲಿನ ಗುರುಮಾತೆಯಾಗಿ ಇಡೀ ಸಮಾಜಕ್ಕೆ ದಾರಿದೀಪದಂತಿರುವ ಶರ್ಮಾ ರವರ ಬದುಕು ತೆರೆದ ಪುಸ್ತಕದಂತೆ.

‘ಕಟ್ಟೆ ಕಟ್ಟುವೆ ನಾನು ತುಳಸಿ ಕಂಡಲೆಲ್ಲಾ
ನಿಷ್ಠೆ ಕಟ್ಟಿದ ಕಟ್ಟೆ ವ್ಯರ್ಥವಾಗಲಿಕ್ಕಿಲ್ಲ’
ಈ ಕಾವ್ಯದ ಸಾಲನ್ನು ತನ್ನ ಬದುಕಿಗಂಟಿಸಿಕೊಂಡ ಶ್ರೀಮತಿಯವರು ಮಕ್ಕಳ ಬದುಕನ್ನು ನಿಷ್ಠೆಯಿಂದ ಕಟ್ಟಿ ಬಾನೆತ್ತರಕ್ಕೆ ಬೆಳೆ ಎಂದು ಹರಸಿ ಹಾರೈಸಿದ ಮಾತೃ ಸ್ವರೂಪಿ, ಶಿಕ್ಷಕ ಬಳಗದಲ್ಲಿ ಸದಾ ಮಿನುಗುವ ನಕ್ಷತ್ರವಾಗಿ ತಮ್ಮ ಪಾಲಿನ ಕೆಲಸವನ್ನು ನಿರ್ವಹಿಸಿದವರು. ಹೇಳಬೇಕಾದುದನ್ನು ಯಾವ ಮೂಲಾಜಿಗೊಳಗಾಗದೇ ನೇರವಾಗಿ ಹೇಳುವ ಮತ್ತು ತಪ್ಪಿತಸ್ಥರಿಗೆ ಸಮ ಚಿತ್ತದಿಂದ ದಾರಿ ತೋರಿಸಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಚಾತಿವಂತಿಕೆಗೂ ಹೆಸರಾದ ಇವರು ಸುಮಾರು ಒಂದುವರೆ ದಶಕಗಳ ಕಾಲ ಕಡ್ನೀರು ಶಾಲೆಯಲ್ಲಿ ಸಲ್ಲಿಸಿರುವ ಸೇವೆ ಮಕ್ಕಳ ಪಾಲಿಗೆ ಮರೆಯಲಾಗದ ಮಾಣಿಕ್ಯದಂತೆ.

ಒಂದು ಕಾಲದಲ್ಲಿ ನೀರಿಲ್ಲದೆ ಕಂಗಾಲದ ಜನ ನೆಲದ ಆಳಕ್ಕೆ ಕಡಿದಾದ ಕಲ್ಲಿನ ಪ್ರದೇಶದಲ್ಲಿ ಕಲ್ಲನ್ನು ಕಡಿದು ನೀರನ್ನು ತರಿಸುವ ಸಾಹಸಕ್ಕೆ ಕೈ ಹಾಕಿ ನೀರನ್ನು ತಂದು ನಿಟ್ಟುಸಿರು ಬಿಟ್ಟ ಕಡ್ನೀರಿನ ಕಥೆ ಒಂದು ಕಡೆಯಾದರೆ, ಹಸಿದವರು ಊರಿನಲ್ಲಿ ಇರುವಾಗ ಉಣಲಾರೆ ಎಂಬ ಎದೆಯ ಬಯಕೆಯನ್ನು ತೆರೆದಿಟ್ಟು ಭವಿಷ್ಯತ್ತಿನ ಬದುಕಿನ ಕುಸುಮಗಳಿಗೆ ಅಕ್ಷರ ಜ್ಞಾನ ನೀಡಿದ ಶಾರದಾ ಶರ್ಮಾ ರವರ ವೃತ್ತಿ ಬದುಕಿನ ಸೇವೆ ಅವಿಸ್ಮರಣೀಯವಾದದ್ದು. ಪತಿ ಜಿ.ಡಿ.ಭಟ್ ನಿವೃತ್ತ ಶಿಕ್ಷಕರು. ಮಗ ಸುಬ್ರಹ್ಮಣ್ಯ,ಸೊಸೆ ಪಲ್ಲವಿ ಖ್ಯಾತ ಡಿಸೈನರ್ ಆದರೆ ಮಗಳು ಡಾಕ್ಟರ್ ಸೌಮ್ಯಶ್ರೀ ವೈದ್ಯೆ, ಅಳಿಯ ಪತಂಜಲಿ ಶರ್ಮಾ ರವರು ಗೋಕರ್ಣದ ಸಸ್ಯ ಸಂಜೀವಿನಿ ಪಂಚಕರ್ಮ ಆಸ್ಪತ್ರೆಯಲ್ಲಿ ವೈದ್ಯರು. ಮೊಮ್ಮಕ್ಕಳಾದ ದೈವಿಕ್ ಮತ್ತು ಮಧುಶ್ರವ ಅವರೊಂದಿಗೆ ತುಂಬು ಜೀವನ ನಡೆಸುತ್ತಿರುವ ಶಾರದಾ ಶರ್ಮಾ ರವರು ನೂರ್ಕಾಲ ಬದುಕಿ ಬಾಳಲೆಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

Exit mobile version