ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನೆ ಕಾರ್ಯಕ್ರಮ ಅಗಸ್ಟ್ 25 ರಂದು ಮುಂಜಾನೆ 11 ಗಂಟೆಗೆ ಹಳಿಯಾಳದ ಚಂದಾವನದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‘ವಾರ್ಷಿಕ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸುವ’ ಹೊಸ ಪರಂಪರೆಯನ್ನು ಆರಂಭಿಸಿದೆ. ಕಳೆದ ವರ್ಷ ಕೂಡಾ ದಾಂಡೇಲಿಯಲ್ಲಿ ಕಸಾಪ ಆಜೀವ ಸದಸ್ಯರ ಸಭೆ ಆಯೋಜಿಸಿ ೨೦೨೨-೨೩ ನೇ ಸಾಲಿನ ಲೆಕ್ಕಪತ್ರ ಮಂಡಿಸಲಾಗಿತ್ತು. ಈ ವಿಚಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ಕೂಡಾ ಪ್ರಶಂಸೆ ವ್ಯಕ್ತಪಡಿಸಿತ್ತು. ಸಾಹಿತ್ಯ ವಲಯ ಕೂಡಾ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಾರದರ್ಶಕ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿತ್ತು. ನಮಗೂ ಕೂಡಾ ಸಾಹಿತ್ಯ ಸಮ್ಮೇಳನ ಹಾಗೂ ನಿರಂತರ ಕಾರ್ಯಕ್ರಮಗಳ ಜೊತಗೆ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ನೀಡಿದ ಆತ್ಮತೃಪ್ತಿಯಿತ್ತು.
ಅಂತೆಯೇ ಈ ವರ್ಷ ಕೂಡಾ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಜಿಲ್ಲಾ ಮಟ್ಟದ ಸಭೆಯನ್ನು ರವಿವಾರ, ಅಗಸ್ಟ್ ೨೫ ರಂದು ಮುಂಜಾನೆ ೧೧ ಗಂಟೆಗೆ, ಹಳಿಯಾಳದ ಚಂದಾವನದಲ್ಲಿ ಆಯೋಜಿಸಲಾಗಿದೆ.
ಸಭೆಯಲ್ಲಿ ೨೦೨೩-೨೪ ನೇ ಸಾಲಿನ ಲೆಕ್ಕಪತ್ರ ಮಂಡಿಸಲಾಗುವುದು. ಜೊತೆಗೆ ಸಂಘಟನೆಗೆ ಸಂಬಂಧಿಸಿ ಆಜೀವ ಸದಸ್ಯರಿಂದ ಬರುವ
ಸಲಹೆ-ಸೂಚನೆ ಸ್ವೀಕರಿಸಲಾಗುವುದು. ಸಭೆಯಲ್ಲಿ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.