ಹಳಿಯಾಳ ಕಸಾಪ ಹಾಗೂ ಬಸವ ಕೇಂದ್ರದಿಂದ ಅರ್ಥಪೂರ್ಣ ಕಾರ್ಯಕ್ರಮ
ಹಳಿಯಾಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಕೇಂದ್ರದ ಸಹಯೋಗದಲ್ಲಿ ಶಾಲೆಗಳತ್ತ ಸಾಹಿತ್ಯ ಪರಿಷತ್ತು ಮತ್ತು ಬಸವ ಪಂಚಮಿ ಹಾಲು ಕುಡಿಸುವ ಹಬ್ಬವನ್ನು ಸಾತ್ನಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯಾಧ್ಯಾಪಕಿ ವಿಮಲಾ ನಾಯಕ ಮಾತನಾಡಿ ಜಿಲ್ಲೆಯಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸೌಹಾರ್ಧಯುತ ಕಾರ್ಯಕ್ರಮಗಳು ನಡೆಯುತ್ತಿದೆ. ಜಿಲ್ಲಾ ಘಟಕದಿಂದ ಪ್ರಕೃತಿ ವಿಕೋಪಕ್ಕೆ ತುತ್ತಾದ ಅಂಕೋಲಾ ಹತ್ತಿರ ಶಿರೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಯ ಮಕ್ಕಳಿಗೆ ಪುಸ್ತಕ, ನೋಟಬುಕ್, ಪಾಟೀಚೀಲ, ಮಳೆಕೋಟ ಹೀಗೆ ಮಕ್ಕಳಿಗೆ ಅವಶ್ಯಕ ವಸ್ತುಗಳನ್ನು ನೀಡಿದ್ದು ಇಡೀ ಜಿಲ್ಲೆಯೇ ಮೆಚ್ಚುಗೆ ವ್ಯಕ್ತಪಡಿಸವಂತಹ ಕಾರ್ಯಕ್ರಮವಾಗಿತ್ತು. ಅದೇ ರೀತಿ ಹಳಿಯಾಳ ತಾಲೂಕಿನಲ್ಲಿಯೂ ಸಾಹಿತ್ಯ ಪರಿಷತ್ತು ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ನಮ್ಮ ಶಾಲೆಗೆ ಬಂದು ನಮ್ಮ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮತ್ತು ಹಾಲಿನ ಮಹತ್ವದ ಕುರಿತು ಉಪನ್ಯಾಸ ನೀಡುತ್ತಿರುವುದು ಅರ್ಥಪೂರ್ಣವಾದುದೆಂದರು.
ಓದು, ಬರಹ, ಮತ್ತು ಮಾತಿನ ಮಹತ್ವ ಕುರಿತು ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಸುರೇಶ ಕಡೆಮನಿಯವರು ಮನಸಿನಲ್ಲೇ ಓದುವುದು, ಜೋರಾಗಿ ಓದುವುದರ ವ್ಯತ್ಯಾಸ ಹಾಗೂ ಬರಹ ಹೇಗಿರಬೇಕು, ಎಲ್ಲಿ ಅಲ್ಪವಿರಾಮ ಕೊಡಬೇಕು, ಎಲ್ಲಿ ಪೂರ್ಣವಿರಾಮ ಕೊಡಬೇಕು, ಪ್ರಶ್ನಾರ್ಥಕ ಚಿನ್ಹೆ, ಉದ್ಗಾರ ವಾಚಕ ಚಿನ್ಹೆ ಬಳಸದಿದ್ದರೆ ಎಷ್ಟು ಅಪಾರ್ಥವಾಗುತ್ತದೆ ಎಂಬುದರ ಸೂಕ್ಷ್ಮತೆಯನ್ನು ವಿವರಿಸಿ ಮಕ್ಕಳಲ್ಲಿ ಸಾಹಿತ್ಯ ಓದುವ, ಬರೆಯುವ ಮತ್ತು ಮಾತನಾಡುವ ಅಭಿರುಚಿ ಹೆಚ್ಚಬೇಕೆಂದರು.
ಹಾವು-ಹಾಲು, ಬಸವ ಪಂಚಮಿಯ ಹಿನ್ನೆಲೆ ಕುರಿತು ಮಾತನಾಡಿದ ಬಸವಕೇಂದ್ರದ ಬಸಣ್ಣಾ ಗಾಣಿಗೇರವರು ಹಾವು ಸರಿಸೃಪ, ಅಂಡಜವಾದ್ದರಿಂದ ಅದು ಹಾಲನ್ನು ಕುಡಿಸುವುದೂ ಇಲ್ಲ, ಕುಡಿಯುವುದೂ ಇಲ್ಲ. ಹಾವು ರೈತನ ಮಿತ್ರ ಅವುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವೇ ಹೊರತು, ಮೌಢ್ಯತೆ ಹೆಸರಿನಲ್ಲಿ ಅಪ್ಯಾಯನ ಪ್ರಸಾದವಾದ ಪೌಷ್ಠಿಕಾಂಶವುಳ್ಳ ಹಾಲನ್ನು ಮಣ್ಣು ಪಾಲು ಮಾಡಬಾರದು. ಅದರ ಬದಲು ಬಡವರಿಗೆ, ಅನಾರೋಗ್ಯ ಪೀಡಿತರಿಗೆ, ಮಕ್ಕಳಿಗೆ, ಖೈದಿಗಳಿಗೆ ಹಾಲು ಕುಡಿಸಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಾಡಿನಾದ್ಯಂತ ಬಸವಕೇಂದ್ರಗಳು ೨೫-೩೦ ವರ್ಷದಿಂದ ಮಾಡಿಕೊಂಡು ಬರುತ್ತಿವೆಯೆಂದರು.
ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಸುಮಂಗಲಾ ಚಂದ್ರಕಾಂತ ಅಂಗಡಿ ಮಾತನಾಡಿ ಮಕ್ಕಳು ಸಾಹಿತ್ಯದತ್ತ ಆಸಕ್ತಿ ವಹಿಸಲೆಂಬ ಸದುದ್ದೇಶದಿಂದ ನಮ್ಮ ಜಿಲ್ಲಾಧ್ಯಕ್ಷರು ಜಿಲ್ಲೆಯಾದ್ಯಂತ ಶಾಲೆ-ಕಾಲೇಜುಗಳತ್ತು ಸಾಹಿತ್ಯ ಪರಿಷತ್ತು ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದು ಶಾಲೆ- ಕಾಲೇಜುಗಳಿಗೆ ಹೋಗಿ ಸಾಹಿತ್ಯದ, ಸಾಹಿತಿಯ ವಿವರವನ್ನು ನೀಡುವ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ, ಇಲ್ಲಿ ನೀವು ಪಡೆದ ಅರಿವನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿ, ಪಂಚಮಿ ಹಬ್ಬ ಉಂಡಿ ತಿನ್ನಿ, ಜೋಕಾಲಿ ಆಡಿ, ಬೋಲಬುಗುರಿ ಆಡಿ. ಆದರೆ ಹಾವಿನ ಹೆಸರಿನಲ್ಲಿ ಹಾಲನ್ನು ಮಣ್ಣುಪಾಲು ಮಾಡದೇ ನೀವೇ ಕುಡಿಯಿರೆಂದು ಕಿವಿಮಾತು ಹೇಳಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ನ್ಯಾಯವಾದಿ ಪ್ರಕಾಶ ಬಸಪ್ಪ ಅಂಗಡಿ ಮತ್ತು ಜಿಲ್ಲಾ ಕಸಾಪ ಪದಾಧಿಕಾರಿ ಗೊಂಬೆಯಾಟ ವಿಶ್ವಖ್ಯಾತಿ ಸಿದ್ದಪ್ಪ ಬಿರಾದಾರರವರು ಸಾಂದರ್ಭಿಕ ಮಾತನಾಡಿದರು. ವೇದಿಕೆಯ ಮೇಲೆ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಕಸಾಪ ಪದಾಧಿಕಾರಿಗಳೂ ಆದ ಝಾಕೀರ ಜಂಗೂಬಾಯಿ ಮತ್ತು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಜಿ. ಡಿ. ಗಂಗಾಧರ ಉಪಸ್ಥಿತರಿದ್ದರು. ಶಿಕ್ಷಕರೂ ಕಸಾಪ ಪದಾಧಿಕಾರಿಗಳೂ ಆದ ಶ್ರೀಶೈಲ ಹುಲ್ಲೆನ್ನವರ ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ವಿಜಯಕುಮಾರ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ವಿಠ್ಠಲ ಕೋರ್ವೆಕರ್, ಕಲ್ಪನಾ ಹುದ್ದಾರ, ಬಸವರಾಜ ಇಟಗಿ ಮತ್ತು ಬಸವಕೇಂದ್ರದ ಮಹಾದೇವಿ ನೇಗಿನಹಾಳ, ಸಿದ್ಧಲಿಂಗ ನೇಗಿನಹಾಳ, ನ್ಯಾಯವಾದಿ ಮಹಾದೇವಿ ಪ್ರಕಾಶ ಅಂಗಡಿ ಮತ್ತು ಶಾಲಾ ಶಿಕ್ಷಕ ವರ್ಗ ಉಪಸ್ಥಿತರಿದ್ದರು.
