ನೀರಿನ ಟಾಕಿಗೆ ಮುಚ್ಚಳವಿಲ್ಲ,: ವರುಷಗಳಿಂದ ವೈಫೈ ಇಲ್ಲ: ಸಹೋದ್ಯೋಗಿಗಳ ಜೊತೆ ಸಹಕಾರವಿಲ್ಲ
ವರ್ಗಾವಣೆಗೊಂಡು ರಿಲಿವ್ ಆದರೂ ಚಾರ್ಜ್ ಕೊಡದೆ ಬೆಂಗಳೂರಲ್ಲಿ ಠಿಕಾಣಿ ಹೊಡಿರುವ ದಾಂಡೇಲಿಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ ಹುಲಸದಾರ ಅವರ ಸರ್ವಾಧಿಕಾರ ಧೋರಣೆಗಳು ಇದೀಗ ಬೇಡವೆಂದರೂ ಬಿಚ್ಚಿಕೊಳ್ಳುತ್ತಿವೆ.
ಇದು ಸರಕಾರದ ಮಹತ್ವಕಾಂಕ್ಷಿ ಯೋಜನೆಯಡಿಯಲ್ಲಿ ಸ್ಥಾಪಿತವಾಗಿರುವ ಸಿ.ಬಿ.ಎಸ್.ಸಿ. ಶಿಕ್ಷಣದ ವಸತಿ ಶಾಲೆ. ದಾಂಡೇಲಿಯಲ್ಲಿ 2006ರಿಂದ ಪ್ರಾರಂಭವಾಗಿದ್ದು , 2013 ರಿಂದ ಈ ಶಾಲೆಗೆ ಕಾಯಂ ಶಿಕ್ಷಕರನ್ನು ನೀಡಲಾಯಿತು. 2021 ರಲ್ಲಿ ವಿಶಾಲವಾದ ಜಾಗದಲ್ಲಿ ಹೊಸ ಕಟ್ಟಡವೂ ನಿರ್ಮಾಣವಾಯಿತು. ಅಲ್ಪಸಂಖ್ಯಾತ ಇಲಾಖೆ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣದ ರಾಜ್ಯದ ವಿವಿಧಡೆಯ ವಿದ್ಯಾರ್ಥಿಗಳು ಇಲ್ಲಿ 6 ನೇ ತರಗತಿಯಿಂದ ಪಿ.ಯು.ಸಿ. ದ್ವಿತಿಯ ವರ್ಷದವರೆಗೆ ಉಚಿತ ವಸತಿ ಶಿಕ್ಷಣವನ್ನು ಪಡೆಯುತ್ತಾರೆ. ಹಾಗೆಂದು ಈ ವಸತಿ ಶಾಲೆಯ ನಿರ್ವಹಣೆಗೂ ಅನುದಾನದ ಕೊರತೆ ಇಲ್ಲ. ಹೇರಳವಾಗಿ ಅನುದಾನ ಬರುತ್ತದೆ. ಆರ್. ವಿ. ದೇಶಪಾಂಡೆಯವರು ವಿಶೇಷ ಮುತುವರ್ಜಿ ವಹಿಸಿ ಈ ಶಾಲೆಗೆ ವಿಶಾಲವಾದ ಜಾಗವನ್ನು ಕೊಡಿಸಿ, ಸುಸಜ್ಜಿತ ಕಟ್ಟಡವನ್ನೂ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಸಿಗಬಾರದವರ ಕೈಯಲ್ಲಿ ಇಂಥ ಶಾಲೆಯ ಸಾರಥ್ಯ ಸಿಕ್ಕರೆ ಅದು ಎಷ್ಟರಮಟ್ಟಿಗೆ ಹೀನಾಯ ಸ್ಥಿತಿಗೆ ತಲುಪಬಹುದು ಎನ್ನುವುದಕ್ಕೆ ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆ ಒಂದು ನಿದರ್ಶನ ಎನ್ನಬಹುದಾಗಿದೆ. ಎಲ್ಲ ಸಮಸ್ಯೆ, ಗೊಂದಲಗಳ ನಡುವೆಯೂ ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲೆಯಾಗಿತ್ತು. ಅಂದರೆ ಇಲ್ಲಿ ಗುಣಮಟ್ಟದ ಶಿಕ್ಷಕರಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ದಾಂಡೇಲಿಗೆ ಪ್ರಾಚಾರ್ಯರಾಗಿ ಬಂದಿದ್ದ ವಿಶ್ವನಾಥ ಹುಲಸುದಾರ ಈ ಶಾಲೆಯನ್ನು ಸಂಪೂರ್ಣವಾಗಿ ಅಧೋಗತಿಗೆ ತಂದಿದ್ದಾರೆ. ತಮ್ಮ ಅವಧಿಯುದ್ಧಕ್ಕೂ ಸರ್ವಾಧಿಕಾರಿ ನಿಲುವಿನಲ್ಲಿಯೇ ಆಡಳಿತ ನಿರ್ವಹಿಸಿದ್ದ ಇವರು ಇದೀಗ ವರ್ಗಾವಣೆಗೊಂಡರೂ ಕೂಡ ಇಲ್ಲಿಯ ರುಚಿಯನ್ನ ಕಂಡು – ಉಂಡು ಮತ್ತೆ ಇಲ್ಲಿಯೇ ಉಳಿಯುವ ಪ್ರಯತ್ನ ರಾಜಧಾನಿಯಲ್ಲಿದ್ದು ಮಾಡುತ್ತಿದ್ದಾರೆ. ಆದರೆ ಸದ್ಯ ಇದೀಗ ಅಲ್ಪಸಂಖ್ಯಾತ ಇಲಾಖೆ ಇದರ ಪ್ರಭಾರವನ್ನು ಇಲ್ಲಿಯ ಹಿರಿಯ ಉಪನ್ಯಾಸಕಿ ಸುಖದೇವಿ ಗುರವ ಅವರಿಗೆ ನೀಡಿದೆ.
ವಿಶ್ವನಾಥ ವರ್ಗಾವಣೆಯ ನಂತರ ಬಿಚ್ಚಿ ಕೊಳ್ಳುತ್ತಿದೆ ನೋಡಿ ಎಲ್ಲಾ ಅಸಲಿಯತ್ತುಗಳು.
ಹಲವು ಇಲ್ಲಗಳ ಸಮಸ್ಯೆ
ವರುಷಗಳಿಂದ ವೈ ಫೈ ಇಲ್ಲ : ದು ಸಿ.ಬಿ.ಎಸ್.ಸ್ಸಿ. ಇಂಗ್ಲಿಷ್ ಮಾಧ್ಯಮದ ವಸತಿ ಶಾಲೆ. ಇಲ್ಲಿ ಗಣಿತ ವಿಜ್ಞಾನವನ್ನ ಮಕ್ಕಳಿಗೆ ಬೋಧಿಸಲು ಇಂಟರ್ನೆಟ್ ಅವಶ್ಯಕತೆಯಿದೆ. ಶಾಲೆಯ ಕಂಪ್ಯೂಟರ್ ಹಾಗೂ ಕಾರ್ಯಾಲಯ ಕೆಲಸಗಳಿಗೂ ಕೂಡ ಇಂಟರ್ನೆಟ್ ಬೇಕು. ಹಾಗಾಗಿ ಇಲ್ಲಿ ಹಿಂದೆ ವೈಫೈ ಅಳವಡಿಸಲಾಗಿತ್ತು ಪ್ರಾಚಾರ್ಯರಾಗಿ ಬಂದ ವಿಶ್ವನಾಥ ಅವರ ಅವಧಿಯಲ್ಲಿ ಕಳೆದ ಎರಡು ವರ್ಷಗಳಿಂದ ವೈಫೈ ಇಲ್ಲ. ಆಯಾ ವಿಷಯದ ಶಿಕ್ಷಕರೇ ತಮ್ಮ ಮೊಬೈಲ್ ಡಾಟಾ ಗಳನ್ನು ಬಳಸಿ ಮಕ್ಕಳಿಗೆ ವಿಷಯ ಬೋಧಿಸಿದ್ದರು. ಅದು ಶಿಕ್ಷಕರಿಗೆ ಹೆಚ್ಚಿನ ಹೊರೆಯಾಗುತ್ತಿತ್ತು. ಈ ಬಗ್ಗೆ ಕೇಳಿದರೂ ಪ್ರಾಚಾರ್ಯರು ವ್ಯವಸ್ಥೆ ಮಾಡಿರಲಿಲ್ಲ. ಈ ವರ್ಷ ಮಕ್ಕಳಿಗೆ ವೈಫೈ ವ್ಯವಸ್ಥೆ ಇಲ್ಲದೆ ಅನೇಕ ವಿಷಯಗಳೆ ಬೋಧನೆ ಆಗುತ್ತಿಲ್ಲ.
ಕ್ವಾಟ್ರಸ್ ಗೀಜರ್ ಮಾಯ : ಈ ವಸತಿ ಶಾಲೆಯ ಆವರಣದಲ್ಲಿಯೇ ಕ್ವಾಟ್ರಸ್ ನಿರ್ಮಿಸಲಾಗಿದೆ. ಆದರೆ ಇಲ್ಲಿಯ ಸಿಬ್ಬಂದಿಗಳಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ ಈ ಕ್ವಾಟ್ರಸ್ ನ್ನು ನೀಡಿಲ್ಲ. ಆದರೆ ಕ್ವಾಟರ್ಸ್ ಒಳಗಡೆ ನಾಲ್ಕು ಗೀಜರುಗಳು ಕಾಣೆಯಾಗಿವೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಕಿಟಕಿಯ ಗ್ಲಾಸುಗಳು ಒಡೆದು ಹೋಗಿವೆ .ಬಾಗಿಲುಳು ಭದ್ರತೆ ಇಲ್ಲ. ಕಾಣೆಯಾದ ಗೀಜರಗಳು ಎಲ್ಲಿ ಹೋದವು ಎನ್ನುವುದು ಯಾರಿಗೂ ತಿಳಿದಿಲ್ಲ.
ಹಾಸ್ಟೆಲ್ ವ್ಯವಸ್ಥೆ ಸರಿಯಾಗಿಲ್ಲ : ದೂರ ದೂರದಿಂದ ಬಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನೀಡಿದ ಹಾಸ್ಟೆಲ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಕ್ಕಳಿಗೆ ನೀಡಿದ ಕಾಟ್ ಗಳು ಮುರಿದು ಬಿದ್ದಿವೆ. ಸ್ವಚ್ಛತೆ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮಕ್ಕಳಿಗೆ ಭದ್ರತೆ ಇಲ್ಲ. ಮಕ್ಕಳು ಹಾಸ್ಟೆಲ್ ಆವರಣ ಗೋಡೆಯನ್ನು ಹಾರಿ ಹೊರಗಡೆ ಹೋಗಿರುವ ದೂರುಗಳಿವೆ.
ಡೈನಿಂಗ್ ಹಾಲ್ ನಲ್ಲಿ ಚಾರ್ಟ್ ಇಲ್ಲ : ವಸತಿ ಶಾಲೆಯ ಡೈನಿಂಗ್ ಹಾಲ್ ನಲ್ಲಿ ಮೆನ್ಯು ಚಾರ್ಟ್ ಬೋರ್ಡನ್ನು ಅಳವಡಿಸಬೇಕೆಂದಿದೆ. ಹೊಸ ಮೆನ್ಯು ಚಾರ್ಟ್ ಬಂದಿದ್ದರೂ ಕೂಡ ಅದನ್ನು ಅಳವಡಿಸದೆ ಹಳೆಯ ಬೋರ್ಡನ್ನೇ ನೇತು ಹಾಕಲಾಗಿದೆ. ಮಕ್ಕಳಿಗೆ ರವಿವಾರ ಮೀನು ಊಟ ನೀಡಬೇಕು. ಅದರ ಜೊತೆಗೆ ಚಿಕ್ಕನ್ ಹಾಗೂ ಮೊಟ್ಟೆ ಆಹಾರವನ್ನು ನೀಡುವುದಿದೆ. ಆದರೆ ಫಿಶ್ ಊಟ ಮಕ್ಕಳಿಗೆ ಸಿಗುತ್ತಿಲ್ಲ ಎಂಬ ಆಕ್ಷೇಪವಿದೆ. ಜೊತೆಗೆ ಮಕ್ಕಳ ಮನರಂಜನೆಗಿಡಬೇಕಿದ್ದ ಟಿವಿಯನ್ನು ಕೂಡ ಅಳವಡಿಸಿಲ್ಲ .ಅದು ಎಲ್ಲಿದೆ ಎಂಬುದು ಕೂಡ ಯಾರಿಗೂ ತಿಳಿದಿಲ್ಲ.
ಸಿಬ್ಬಂದಿಗಳಿಗೆ ವಿನಾಕಾರಣ ಕಿರಿಕಿರಿ : ವರ್ಗಾವಣೆಗೊಂಡ ಪ್ರಾಚಾರ್ಯರು ಸಿಬ್ಬಂದಿಗಳಿಗೆ ವಿನಾಕಾರಣ ಕಿರಿಕಿರಿ ನೀಡುತ್ತಿದ್ದರು. ಸಕಾರಣವಿಲ್ಲದೆ ಮೆಮೋ ಹಾಗೂ ನೋಟಿಸ್ ನೀಡುತ್ತಿದ್ದರು. ಶಾಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೂ ಕೂಡ ಅವರಿಗೊಂದು ಕಾರಣ ಕೇಳಿ ನೋಟಿಸಿರುತ್ತಿತ್ತು. ಒಮ್ಮೆ ಸರ್ಕಾರಿ ನೌಕರರ ಸಂಘಟನೆಯಲ್ಲಿ ಅರ್ಧಗಂಟೆ ಪ್ರತಿಭಟನೆ ಮಾಡಿದ್ದಕ್ಕೆ ಮಹಿಳಾ ಸಿಬ್ಬಂದಿಗಳಿಗೆ ನೀವೇನು ಶಾಲೆಯಲ್ಲಿ ‘ಹಾಸಿಗೆ’ ಹಾಕುತ್ತೀರಾ ಎಂದು ಈ ಪ್ರಾಚಾರ್ಯ ಪ್ರಶ್ನೆ ಮಾಡಿದ್ದ. ಈ ಬಗ್ಗೆ ಮಹಿಳಾ ಸಿಬ್ಬಂದಿಗಳು ಸಂಘಟನೆ ಹಾಗೂ ಇಲಾಖೆಯವರೆಗೂ ದೂರ ನೀಡಿದ್ದರು.
ರಜೆ ಹಾಕದೆ ತಿರುಗಾಟ : ತನ್ನ ಸಿಬ್ಬಂದಿಗಳ ಬಗ್ಗೆ ಅಷ್ಟು ಕಠೋರ ಕ್ರಮ ಕೈಗೊಳ್ಳುತ್ತಿದ್ದ ಪ್ರಾಚಾರ್ಯ ವಿಶ್ವನಾಥ ಹುಲಸುದಾರ ತಾನು ಮಾತ್ರ ರಜಾ ಹಾಕದೆ ನಾಲ್ಕೈದು ದಿನ ಹೊರಗಡೆ ಹೋಗುತ್ತಿದ್ದರು. ಹಾಜರಿ ಪುಸ್ತಕದಲ್ಲಿಯೂ ಸಹಿ ಹಾಕದೇ ಇರುವ ದಾಖಲೆ ಲಭ್ಯವಾಗಿದೆ.
ಗಣಿತ ಶಿಕ್ಷಕರಿಲ್ಲ : ಈ ಶಾಲೆಯಲ್ಲಿ ಒಟ್ಟು 334 ವಿದ್ಯಾರ್ಥಿಗಳಿದ್ದಾರೆ. 8 ಖಾಯಂ ಶಿಕ್ಷಕರು ಸೇರಿ ಮತ್ತೆ ಅತಿಥಿ ಶಿಕ್ಷಕರಿದ್ದಾರೆ. ಆದರೆ ಇಲ್ಲಿ ಗಣಿತ ಶಿಕ್ಷಕರೇ ಇಲ್ಲ. ಪ್ರಸಕ್ತ ಸಾಲಿನ ಗಣಿತ ವಿಷಯದಿಂದ ವಿದ್ಯಾರ್ಥಿಗಳು ವಂಚಿತರಾಗುವಂತಾಗಿದೆ.
ಮಹಿಳಾ ವಾರ್ಡನ್ ಇಲ್ಲ : ಈ ವಸತಿ ಶಾಲೆಯಲ್ಲಿ ಬಾಲಕರು ಹಾಗೂ ಬಾಲಕಿಯರಿದ್ದಾರೆ. ಕಡ್ಡಾಯವಾಗಿ ಮಹಿಳಾ ವಾರ್ಡನ್ ಇರಬೇಕೆಂದಿದೆ. ಆದರೆ ಖಾಯಂ ವಾರ್ಡನ್ ಇಲ್ಲ. ಇಲ್ಲಿಯ ಕ್ರಾಪ್ಟ್ ಶಿಕ್ಷಕರನ್ನೇ ವಾರ್ಡನ್ ಆಗಿ ನೇಮಿಸಲಾಗಿತ್ತು . ಆದರೆ ಅವರು ಜುಲೈ 15 ರಿಂದಲೇ ಅನಾರೋಗ್ಯದ ಕಾರಣ ನೀಡಿ ಖಾಸಗಿ ಆಸ್ಪತ್ರೆಯ ಮೆಡಿಕಲ್ ಇಟ್ಟು ರಜೆಯ ಮೇಲೆ ಹೋಗಿದ್ದಾರೆ. ಈವರೆಗೂ ವಾರ್ಡನ್ ನೇಮಿಸಲಿಲ್ಲ. ವಾರ್ಡನ್ ಇದ್ದ ಭವಾನಿ ಅವರನ್ನು ಕೇಳಿದರೆ ತಾನು ರಿಸೈನ್ ಮಾಡಿದ್ದೇನೆ ಎನ್ನುತ್ತಾರೆ. ಆದರೆ ಅದು ಇನ್ನೂ ಮೇಲಾಧಿಕಾರಿಗಳಿಗೆ ತಲುಪಿಲ್ಲ.
ಪ್ರಾಚಾರ್ಯರ ಸುತ್ತಲೂ ಅಥಣಿಯ ಸಿಬ್ಬಂದಿಗಳು: ಪ್ರಾಚಾರ್ಯ ತನ್ನ ಎಲ್ಲಾ ತಪ್ಪುಗಳನ್ನು ಮುಚ್ಚಿಕೊಳ್ಳಲು ತನ್ನೂರು ಅಥಣಿಯ ಸುತ್ತ ಮುತ್ತಲಿನ ನಾಲ್ವರನ್ನೇ ಗುತ್ತಿಗೆ ಆಧಾರದ ಸಿಬ್ಬಂದಿಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದರಂತೆ. ಗುತ್ತಿಗೆ ಆಧಾರದ ಸಿಬ್ಬಂದಿಗಳು ಇಲ್ಲಿಯ ಖಾಯಂ ಸಿಬ್ಬಂದಿಗಳಿಗೆ ಒಂದಿಷ್ಟು ಮಾನಸಿಕ ಹಿಂಸೆ ನೀಡುತ್ತಿದ್ದರು. ಶಿಕ್ಷಕರಿಗೆ ಹೆದರಿಸುವುದು, ಬೆದರಿಸುವುದು ಮಾಡುತ್ತಿದ್ದರು.
ಟ್ರ್ಯಾಕ್ ಶೂಟ್ ಗೆ ಹಣ ವಸೂಲಿ ಮಾಡಿದ್ದರು: ಇಲ್ಲಿ ವಿದ್ಯಾರ್ಥಿಗಳಿಗೆ ಯಾವ ಸಮವಸ್ತ್ರ ನೀಡುವಾಗಲೂ ಹಣವಸಲಿ ಮಾಡಬಾರದೆಂಬ ನಿಯಮವಿದೆ. ಆದರೆ 2023 ರಲ್ಲಿ ಇಲ್ಲಿಯ 300ರಷ್ಟು ವಿದ್ಯಾರ್ಥಿಗಳಿಂದ ಟ್ರ್ಯಾಕ್ ಶೂಟ್ ನೀಡುವುದಾಗಿ ಹೇಳಿ ತಲಾ 650 ರೂಪಾಯಿನಂತೆ ವಸೂಲಿ ಮಾಡಿ ಕೊನೆಗೆ ಟ್ರ್ಯಾಕ್ ಶೂಟ್ ನೀಡಿಲ್ಲ ಎಂಬ ಆಪಾದನೆಯಿದೆ.
ಟಿ.ಸಿ., ಮಾರ್ಕ್ಸಕಾರ್ಡ್ ನೀಡಲು ಹಣ : ಇಲ್ಲಿಂದ ಎಸ್.ಎಸ್.ಎಲ್. ಸಿ. ಉತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ಟಿ.ಸಿ. ಹಾಗೂ ಮಾರ್ಕ್ಸಕಾರ್ಡ ಗಳನ್ನು ನೀಡುವಾಗ ಆ ವಿದ್ಯಾರ್ಥಿಗಳಿಂದ ಎರಡರಿಂದ ನಾಲ್ಕು ಸಾವಿರ ರು.ಗಳವರೆಗೆ ಪ್ರಾಚಾರ್ಯರು ಲಂಚ ಪಡೆಯುತ್ತಿದ್ದರು. ಈ ಬಗ್ಗೆ ಹಲವು ಪಾಲಕರು ಮುಂಜಾವು ಜೊತೆ ಹೇಳಿಕೊಂಡಿದ್ದಾರೆ.
ಕುಡಿಯುವ ನೀರಿನ ತೊಟ್ಟಿ ತೆರೆದುಕೊಂಡಿದೆ: ವಸತಿ ಶಾಲೆಯ ಆವರಣದೊಳಗೆ ಮಕ್ಕಳ ಕುಡಿಯ ನೀರಿಗಾಗಿ ವಿಶಾಲವಾದ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಆದರೆ ಈ ಟ್ರ್ಯಾಕ್ ನ ಒಂದು ಭಾಗ ಸಂಪೂರ್ಣವಾಗಿ ತೆರೆದುಕೊಂಡಿದ್ದು, ಇಲ್ಲಿ ಮೇಲಿನಿಂದ ಬರುವ ಮಳೆ ನೀರು ನೇರವಾಗಿ ಟಾಕಿಗೆ ಹೋಗುತ್ತದೆ. ಅಷ್ಟೇ ಅಲ್ಲ. ಮೇಲಿನಿಂದ ಬರುವ ಹೊಲಸುಗಳು, ವಿಷ ಜಂತುಗಳು ಕೂಡ ಈ ನೀರಿನ ಟಾಕಿಯೊಳಗಡೆ ಸೇರಿಕೊಳ್ಳುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳಿಗೆ ಚರ್ಮರೋಗ: ಈ ವಸತಿ ಶಾಲೆಯಲ್ಲಿರುವ ಹಲವು ವಿದ್ಯಾರ್ಥಿಗಳು ಒಂದು ರೀತಿಯ ಚರ್ಮ ರೋಗದಿಂದ ಬಳಲುತ್ತಿದ್ದಾರೆ. ವಿದ್ಯಾರ್ಥಿಗಳ ಕೈ ಕಾಲುಗಳ ಮೇಲೆ ಕಜ್ಜಿಯಂತಹ ಗಾಯಗಳಾಗಿದ್ದು ತುರಿಕೆ ಕಾಣಿಸಿಕೊಳ್ಳುತ್ತಿದೆ. ಕೆಲವರು ಹೊಟ್ಟೆ ನೋವು ಹಾಗೂ ಜ್ವರದಿಂದಲೂ ಬಳಲುತ್ತಿದ್ದಾರೆ. ಬಹುತೇಕ ಕಲ್ಮಶ ನೀರು ಇದಕ್ಕೆ ಕಾರಣ ಎನ್ನಲಾಗಿದೆ. ಇವರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕಿದೆ.
ಕಾನೂನು ಕ್ರಮವಾಗಲಿ : ಹೀಗೆ ದಾಂಡೇಲಿಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಬಗೆ ಬಗೆಯ ಸಮಸ್ಯೆಗಳು ಬಿಚ್ಚಿಕೊಳ್ಳುತ್ತಿದ್ದು , ಈ ಬಗ್ಗೆ ಈ ಭಾಗದ ಶಾಸಕರು ಹಾಗೂ ಈ ಶಾಲೆಯನ್ನು ನಡೆಸುತ್ತಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯವರು ತಕ್ಷಣ ಭೇಟಿ ನೀಡಿ ಪರಿಶೀಲಿಸಿ ಹಲವು ತಪ್ಪುಗಳಿಗೆ ಕಾರಣರಾಗಿರುವ ವರ್ಗಾವಣೆಗೊಂಡ ಪ್ರಾಚಾರ್ಯರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಇರುವ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ವಿದ್ಯಾರ್ಥಿಗಳು ಹಾಗೂ ಇಲ್ಲಿಯ ಸಿಬ್ಬಂದಿಗಳಿಗೆ ಅನುಕೂಲಕರವಾಗುವಂತಹ ವಾತಾವರಣವನ್ನು ನಿರ್ಮಿಸಬೇಕಿದೆ.