ಉತ್ತರಾಖಂಡ್’ನ ನೈನಿತಾಲ್’ನಿಂದ ಕರ್ನಲ್ ತಂದೆಯ ಜೊತೆ ಬೆಂಗಳೂರಿಗೆ ಬಂದಿದ್ದ ಕ್ರಿಕೆಟಿಗ ಮನೀಶ್ ಪಾಂಡೆ, ನಂತರದ ದಿನಗಳಲ್ಲಿ ಕನ್ನಡಿಗನೇ ಆಗಿ ಹೋದ. ಇದೂ ಕೂಡ ಅಂಥದ್ದೇ ಒಂದು ಕಥೆ..!
ಉತ್ತರಾಖಂಡ್’ನ ಅಲ್ಮೋರಾ ಜಿಲ್ಲೆಯ ರಸ್ಯಾರ ಎಂಬ ಹಳ್ಳಿಯ ಒಬ್ಬ ಬ್ಯಾಡ್ಮಿಂಟನ್ ಕೋಚ್…, ಹೆಸರು ಡಿ.ಕೆ ಸೇನ್. 12 ವರ್ಷಗಳ ಹಿಂದೆ ತಮ್ಮ ಇಬ್ಬರು ಗಂಡು ಮಕ್ಕಳೊಂದಿಗೆ ಬೆಂಗಳೂರಿನ ವಸಂತನಗರದಲ್ಲಿರುವ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಬರುತ್ತಾರೆ.
ಇಬ್ಬರೂ ಮಕ್ಕಳನ್ನು ಬ್ಯಾಡ್ಮಿಂಟನ್ ಆಡಿಸಬೇಕೆಂಬ ಹಂಬಲ ಆ ತಂದೆಗೆ. ಮಕ್ಕಳಿಗೆ ಬ್ಯಾಡ್ಮಿಂಟನ್ basicಗಳನ್ನು ಹೇಳಿಕೊಟ್ಟಿದ್ದ ತಂದೆಗೆ ಪ್ರೊಫೆಶನಲ್ ಟ್ರೈನಿಂಗ್ ಕೊಡುವ ಅಕಾಡೆಮಿಯೊಂದು ಬೇಕಿತ್ತು. ಕರ್ನಾಟಕದ ಒಂದು ಪುಟ್ಟ ಜಿಲ್ಲೆಗಿಂತಲೂ ಸಣ್ಣ ರಾಜ್ಯವಾಗಿರುವ ಉತ್ತರಾಖಂಡ್’ನಲ್ಲೆಲ್ಲಿದೆ ಅಂಥಾ ಅಕಾಡೆಮಿ..?
ಹುಡುಕುತ್ತಾ ಬಂದವರಿಗೆ ಸಿಕ್ಕಿದ್ದು ಕರ್ನಾಟಕದ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆಯವರ ಅಕಾಡೆಮಿ. ಹಿರಿಮಗನನ್ನು ಅಕಾಡೆಮಿಗೆ ಸೇರಿಸಿ ಕಿರಿಮಗನೊಂದಿಗೆ ವಾಪಸ್ ಹೋಗುವ ಲೆಕ್ಕಾಚಾರದಲ್ಲಿ ಬಂದಿದ್ದರು ಡಿ.ಕೆ ಸೇನ್. ಪ್ರಕಾಶ್ ಪಡುಕೋಣೆಯವರು Father of Indian Badminton. ಅವರ ಗರಡಿಯಲ್ಲಿ ಪಳಗಿದರೆ ನನ್ನ ಮಗನೂ ದೊಡ್ಡ ಬ್ಯಾಡ್ಮಿಂಟನ್ ಆಟಗಾರನಾಗುತ್ತಾನೆ ಎಂಬ ಕನಸು. ಹಿರಿಮಗ ಚಿರಾಗ್ ಸೇನ್’ನಲ್ಲಿ ಆ ಕನಸು ಕಂಡವರು ಡಿ.ಕೆ ಸೇನ್.. ಆದರೆ ತಂದೆಯ ಕನಸನ್ನು ನನಸಾಗಿಸಿದವನು ಕಿರಿಮಗ ಲಕ್ಷ್ಯ ಸೇನ್.
ಚಿರಾಗ್ ಸೇನ್’ನನ್ನು ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿ ಇನ್ನೇನು ಲಕ್ಷ್ಯನ ಜೊತೆ ವಾಪಸ್ ಹೊರಡಬೇಕು.. ನಾನೂ ಅಣ್ಣನ ಜೊತೆ ಇಲ್ಲೇ ಇರುತ್ತೇನೆ, ಬ್ಯಾಡ್ಮಿಂಟನ್ ಆಡುತ್ತೇನೆ ಎಂದು ಹಠ ಹಿಡಿದು ಬಿಟ್ಟ 10 ವರ್ಷದ ಹುಡುಗ ಲಕ್ಷ್ಯ. ಜಪ್ಪಯ್ಯ ಅಂದರೂ ತಂದೆಯ ಜೊತೆ ಹೋಗಲು ಒಪ್ಪಲೇ ಇಲ್ಲ.
ಮಗನ ಹಠದ ಮುಂದೆ ತಂದೆ ಸೋಲ ಬೇಕಾಯಿತು. ಇಬ್ಬರು ಪುಟ್ಟ ಮಕ್ಕಳನ್ನು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ಮಡಿಲಿಗೆ ಹಾಕಿದ ತಂದೆ ವಾಪಸ್ ಉತ್ತರಾಖಂಡಗೆ ಹೊರಟು ಹೋದರು.
ಇಲ್ಲೇ ಅಕಾಡೆಮೆಯಲ್ಲೇ ಹುಡುಗರ ವಾಸಕ್ಕೆ ವ್ಯವಸ್ಥೆಯಾಯಿತು. ಅಣ್ಣ-ತಮ್ಮ ಅಭ್ಯಾಸ ಶುರು ಮಾಡಿದರು. ಮಹಾಗುರು ಪ್ರಕಾಶ್ ಪಡುಕೋಣೆ ಯವರ ಮಾರ್ಗದರ್ಶನದಲ್ಲಿ ಹುಡುಗರಿಗೆ ದ್ರೋಣಾಚಾರ್ಯನಂಥಾ ಗುರುವಾಗಿ ಸಿಕ್ಕವರು ರಾಜ್ಯದ ಮತ್ತೊಬ್ಬ ಬ್ಯಾಡ್ಮಿಂಟನ್ ದಿಗ್ಗಜ ಯು.ವಿಮಲ್ ಕುಮಾರ್.
ಶುರುವಾಯಿತು ಹುಡುಗರ ಬ್ಯಾಡ್ಮಿಂಟನ್ ತಪಸ್ಸು.. ಅಣ್ಣ ಚಿರಾಗ್ ಸೇನ್ ಒಳ್ಳೆಯ ಆಟಗಾರ. ಕಳೆದ ವರ್ಷ ಸೀನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್’ಷಿಪ್ ಗೆದ್ದಿದ್ದ ಪ್ರತಿಭಾವಂತ. ಆದರೆ ತಮ್ಮ ಲಕ್ಷ್ಯ ಅಣ್ಣನನ್ನೇ ಮೀರಿಸಿದ ಪ್ರತಿಭಾ ಸಂಪನ್ನ.
ವಿಶ್ವ ಚಾಂಪಿಯನ್’ಷಿಪ್-ಬೆಳ್ಳಿ, ಥಾಮಸ್ ಕಪ್-ಚಿನ್ನ, ಕಾಮನ್ವೆಲ್ತ್ ಗೇಮ್ಸ್- ಚಿನ್ನ ಮತ್ತು ಬೆಳ್ಳಿ, ಏಷ್ಯನ್ ಗೇಮ್ಸ್- ಬೆಳ್ಳಿ, ಏಷ್ಯಾ ಜ್ಯೂನಿಯರ್ ಚಾಂಪಿಯನ್’ಷಿಪ್-ಚಿನ್ನ, ಯೂತ್ ಒಲಿಂಪಿಕ್ಸ್ ಗೇಮ್ಸ್–ಚಿನ್ನ. ಕಳೆದ 12 ವರ್ಷಗಳಲ್ಲಿ ಲಕ್ಷ್ಯ ಸೇನ್ ಮೂಡಿಸಿದ ಹೆಜ್ಜೆ ಗುರುತುಗಳಿವು. ಈಗ ಒಲಿಂಪಿಕ್ಸ್ ಸೆಮಿಫೈನಲ್.
ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಲಕ್ಷ್ಯ ಸೇನ್ ಸೆಮಿಫೈನಲ್ ಪ್ರವೇಶಿಸಿದ ನಂತರ, ಪ್ರಕಾಶ್ ಪಡುಕೋಣೆಯವರ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ Manager- Admin ಆಗಿರುವ ನನ್ನ ದೀರ್ಘ ಕಾಲದ ಸ್ನೇಹಿತ Manjesh Rangaswami ಅವರಿಗೆ ಕಾಲ್ ಮಾಡಿದ್ದೆ. ಲಕ್ಷ್ಯ ಸೇನ್’ನ ಈ ಕಥೆಯನ್ನ ಹೇಳುತ್ತಾ ಹೆಮ್ಮೆ ಪಟ್ಟರು.
ಅಂದ ಹಾಗೆ, ಅಣ್ಣ-ತಮ್ಮ ಚಿಕ್ಕ ವಯಸ್ಸಲ್ಲೇ ತಂದೆ-ತಾಯಿಯನ್ನು ಬಿಟ್ಟು ಬೆಂಗಳೂರಿನಲ್ಲಿ ಉಳಿಯಲು ನಿರ್ಧರಿಸಿದಾಗ ಪಡುಕೋಣೆ ಅಕಾಡೆಮಿಯಲ್ಲಿ ಇಬ್ಬರನ್ನೂ ಸ್ವಂತ ಮಕ್ಕಳಂತೆ ನೋಡಿಕೊಂಡವರು ಮಂಜೇಶ್.
12 ವರ್ಷಗಳ ಹಿಂದೆ ದೂರದ ಉತ್ತರಾಖಂಡನಿಂದ ಬ್ಯಾಡ್ಮಿಂಟನ್ ಆಡಲೆಂದು ಅಣ್ಣನ ಜೊತೆ ಬೆಂಗಳೂರಿಗೆ ಬಂದಿದ್ದ ಲಕ್ಷ್ಯ ಸೇನ್, ಈಗ ಕನ್ನಡಿಗನೇ ಆಗಿ ಹೋಗಿದ್ದಾನೆ. ನಮ್ಮ ಹೆಮ್ಮೆಯ ಕನ್ನಡಿಗನಿಗೊಂದು ಅಭಿಮಾನದ ಸೆಲ್ಯುಟ್ .
–ಲೇಖನ ಕೃಪೆ : ಸೋಶಿಯಲ್ ಮೀಡಿಯಾ