ನಿನಗೂ ನನ್ನ ಕಣ್ಣಲ್ಲಿ ಹನಿಗಳಿವೆ
ಅರ್ಪಿಸುತ್ತಿರುವೆ;
ಕಾಯುತ್ತಿರುವ ಆ ನಿನ್ನ ಮರಿಗಳಿಗಾಗಿ
ತಪಿಸುತ್ತಿರುವೆ.
ಜೀವಲೋಕದ ನಿನ್ನ ಸಾಂಗತ್ಯ
ನನ್ನ ನೇವರಿಸಿದ ಸಾಂತ್ವನದಲ್ಲೊಂದಾಗಿತ್ತು.
ಹೇಗೆ ಹೇಳಲಿ ನಿನ್ನ ಆ ಕೊನೆಯ ಕ್ಷಣವ?
ಅಕ್ಷರಗಳ ಪರ್ವತವೂ ಸಾಲದು
ದುಃಖದ ಎರಡಕ್ಷರದ ವಿಸ್ತಾರಕ್ಕೆ!
ಮಾತ್ರವಲ್ಲ, ಬರಸಿಡಿಲ ಸುದ್ದಿಯೂ ಜೊತೆಗೇ ….
ನನ್ನ ಬೆಚ್ಚಗಿನ ಮಹಲಿನ ಪಕ್ಕ
ಮಳೆಯಲ್ಲಿ ತೊಪ್ಪೆಯಾಗಿ ಚಿಂವ್ ಗುಟ್ಟುವ
ಆ ಶಬ್ದ ಹಿಂಬಾಲಿಸಿದೆ: ಇಣುಕಿದೆ, ಛಿದ್ರವಾದ ಗೂಡಿನ ಅಸ್ತಿಪಂಜರದೊಳಗೆ.
ನೀನು ನೇಯ್ದ ಹುಲ್ಲುಕಡ್ಡಿಗಳೆಲ್ಲ ಒದ್ದೆಯಾಗಿ
ಟೊಂಗೆಯ ಒಣ ಟಿಸಿಲು ಚುಚ್ಚುತ್ತಿತ್ತು ಒಡಲಕುಡಿಗೆ….
ಸುತ್ತಲೂ ಕಾಯುತ್ತಿದ್ದವು ಕಟ್ಟಿರುವೆ, ಸೌಳಿ ಹುಳುಗಳು ಇನ್ನೇನು ಚುಚ್ಚಿ ಕಚ್ಚಿ ತಿನ್ನಲು!
ನಿನಗಾಗಿ ಕಾದು, ಸೋತು,
ಬಾಯಾರಿ, ಮತ್ತೆ ಸ್ವರ ಹೊರಡದೇ ಅದೂ
ನಿನ್ನ ದಾರಿಗೆ ಸರಿಯಿತು…. ಈ ಜಗದ ಬೆಳಕು ಕಾಣದೇ, ಚಿಲಿಪಿಲಿಯ ಶಬ್ದವನ್ನೂ ಕಲಿಯದೆ…
ನಿನ್ನ ಬಂಧುಗಳು ಧಾವಿಸಿ, ನಿನ್ನ ಮತ್ತು ಆ ಮರಿಯ ಕೊನೆಯ ಗಳಿಗೆಯ ಬಗ್ಗೆ ಕೇಳಿದರೆ ಏನು ಹೇಳಲಿ ನಾನು?
ಗುಟುಕು ನೀರು ಹಾಕಿದೆನೆಂದು ಹೇಳಲೇ?
ನಿಸ್ತೇಜ ನಿನ್ನ ಬೊಗಸೆಯೊಳಗಿಟ್ಟು ಮುದ್ದಿಸಿ ರೋದಿಸಿದೆನೆನ್ನಲೇ? ನೀನು ಭ್ರಮಿಸಿ ಬಂದು ಕುಕ್ಕಿದ ಕನ್ನಡಿಯ ಬಗ್ಗೆ ಹೇಳಲೇ? ಅಲ್ಲೆ ಮುರಿದುಬಿದ್ದ ಕೊಕ್ಕಿನ ಬಗ್ಗೆ ಅಥವಾ ಹರಿದ ಕೆಂಪಾನೆ ಕೆಂಪು ರಕ್ತದ ಬಗ್ಗೆ ಹೇಳಲೇ?
ಆಗದು,
ನನ್ನ ರೋದನೆಗೂ ನೀನೇ ಸಾಂತ್ವನವೀಗ;
ಆದರೂ ಹೇಳಲೇಬೇಕಲ್ಲ!
ಅದೇ ನಿನ್ನ ನುಣುಪಾದ ಮೈಯ ಹೊದಿಸಿಟ್ಟ ಬಗೆಬಗೆಯ ಬಣ್ಣದ ಗರಿಗಳ ಬಗ್ಗೆ ಮತ್ತು ಅಗಾಗ ನನ್ನೆದುರು ಇಣುಕಿ, ಕುಪ್ಪಳಿಸುತ್ತ, ಬಿಡಿಕಾಳುಗಳ ತಿಂದು ನೀರ್ಕುಡಿದು, ಬುರ್ರೆಂದು ಹಾರಿಹೋದ ಸಂಗತಿ ಮಾತ್ರ ಹೇಳುವೆ,
ನರಳಿಕೆಯ ಆ ನೋವು ನನ್ನೊಳಗೇ ಇರಲಿ
ನೋವಿನಿಂದ ನೋವಿನತ್ತ ಸೇತುವೆಯಾಕೆ?
ಯಮುನಾ ಗಾಂವ್ಕರ್
(ಕವಿ ಯಮುನಾ ಗಾಂವ್ಕರ್ ದುಡಿಯುವ ಕೈಗಳ ಹೋರಾಟಗಾರ್ತಿ, ಲೇಖಕಿ. ಮೂಲತಃ ಜೋಯಿಡಾದವರು.)